ಗೊಂಡಾ (ಉತ್ತರ ಪ್ರದೇಶ): ಮಹಿಳೆಯೊಬ್ಬಳು ಪ್ರಿಯಕರನ ಜತೆಗೆ ಬದುಕಲು ಅವಕಾಶ ಕೋರಿ ತನ್ನ ಮಕ್ಕಳಿಬ್ಬರ ಜತೆಗೆ ಸುಮಾರು 150 ಅಡಿ ಎತ್ತರದ ಮೊಬೈಲ್ ಟವರ್ ಏರಿ ಶುಕ್ರವಾರ ವಿಚಿತ್ರ ಹೈಡ್ರಾಮಾ ನಡೆಸಿದಳು.
ಪೊಲೀಸರು ಮತ್ತು ರೈಲ್ವೆ ಅಧಿಕಾರಿಗಳು ಸುಮಾರು 9 ಗಂಟೆ ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಮಕ್ಕಳನ್ನು ಸುರಕ್ಷಿತವಾಗಿ ಕೆಳಗಿಸಲಾಗಿದೆ.
ತಾರಾಬ್‌ಗಂಜ್ ಪ್ರದೇಶದ ನಿವಾಸಿ ಗೀತಾ ದೇವಿ ಎಂಬಾಕೆ ತನ್ನ ಮಕ್ಕಳೊಂದಿಗೆ ರೈಲ್ವೆ ನಿಲ್ದಾಣದ ಆವರಣದಲ್ಲಿದ್ದ ಮೊಬೈಲ್ ಟವರ್ ಹತ್ತಿ ಸುಮಾರು 100 ಅಡಿ ಎತ್ತರದಲ್ಲಿ ಕುಳಿತಿದ್ದಳು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳೀಯ ಪೊಲೀಸರು, ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ (RPF) ಸ್ಥಳಕ್ಕೆ ಧಾವಿಸಿ ಕೆಳಗಿಳಿಯುವಂತೆ ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಕೊನೆಗೆ 9 ಗಂಟೆಗಳ ಸತತ ಪ್ರಯತ್ನದ ಬಳಿಕ ಆಕೆಯನ್ನು ಮಕ್ಕಳ ಸಮೇತ ರಕ್ಷಿಸಲಾಯಿತು ಎಂದು ಕೊತ್ವಾಲಿ ಎಸ್‌ಎಚ್‌ಒ ಬಿಂದೇಶ್ವರಿ ಮಣಿ ತ್ರಿಪಾಠಿ ತಿಳಿಸಿದ್ದಾರೆ.
ಪತಿ ನನ್ನನ್ನು ತ್ಯಜಿಸಿದ್ದಾನೆ. ಇತ್ತ ಪ್ರಿಯಕರ ರಾಮ್ ಅಕಬಲ್ ಸಿಂಗ್ ಕೂಡ ಇತ್ತೀಚೆಗೆ ತನ್ನಿಂದ ದೂರ ಸರಿದಿದ್ದು, ಯಾವುದೇ ರೀತಿಯ ಆರ್ಥಿಕ ಸಹಾಯವನ್ನೂ ನೀಡುತ್ತಿರಲಿಲ್ಲ ಎಂಬುದು ಮಹಿಳೆ ಆರೋಪ.
ಪ್ರಿಯಕರನ ವಿರುದ್ಧ ದೂರು
ಇದೇ ವರ್ಷದ ಮಾರ್ಚ್ 26ರಂದು ಮಹಿಳೆ ತನ್ನ ಪ್ರಿಯಕರ ರಾಮ್ ಅಕಬಲ್ ಸಿಂಗ್ ತನ್ನನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಳು. ಆದರೆ ಈಗ ಆತನೊಂದಿಗೆ ಬದುಕಬೇಕೆಂದು ಪಟ್ಟು ಹಿಡಿದಿದ್ದಾಳೆ ಎಂದು ತ್ರಿಪಾಠಿ ತಿಳಿಸಿದ್ದಾರೆ.
ಟವರ್ ಏರಿದ್ದು ಇದೇ ಮೊದಲಲ್ಲ
ಈ ಮಹಿಳೆ ಈ ರೀತಿ ಹೈಡ್ರಾಮಾ ಆಡುತ್ತಿರುವುದು ಇದೇ ಮೊದಲಲ್ಲ. ಕಳೆದ ಜೂನ್ ತಿಂಗಳಿನಲ್ಲೂ ಗೊಂಡಾ ಜಿಲ್ಲೆಯ ಮತ್ತೊಂದು ಮೊಬೈಲ್ ಟವರ್ ಏರಿ ಆಕೆ ಇಂತಹುದೇ ಪ್ರತಿಭಟನೆ ನಡೆಸಿದ್ದಳು. ಆಗ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಆಕೆಯನ್ನು ಕೆಳಗಿಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ .

