ಆರ್. ಜಿತೇಂದ್ರ
ಮೈಸೂರು: ಚಲನಚಿತ್ರ ನಟ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ 'ಗಂಧದ ಗುಡಿ' ಚಿತ್ರವು ಪುಸ್ತಕ ರೂಪದಲ್ಲಿಯೂ ಹೊರಬರುತ್ತಿದ್ದು, ಭಾನುವಾರ 'ಮೈಸೂರು ಸಾಹಿತ್ಯ ಸಂಭ್ರಮ'ದ ವೇದಿಕೆಯಲ್ಲಿ ಅದರ ಮುಖಪುಟ ಅನಾವರಣಗೊಂಡಿತು.
'ಸಿನಿಮಾವನ್ನು ಎಷ್ಟೇ ನೋಡಿದರೂ, ಪುಸ್ತಕ ಕೈಯಲ್ಲಿ ಹಿಡಿದು ಓದುವ ಅನುಭವವೇ ಬೇರೆ.
ಪುನೀತ್ ಅವರೊಂದಿಗೆ ಕಾಡಿನಲ್ಲಿ ಕಳೆದ ಅನುಭವ ಅನನ್ಯ. ಸಿನಿಮಾದಲ್ಲಿ ಒಂದು ಸೀಮಿತ ಚೌಕಟ್ಟಿನಲ್ಲಿ ಎಲ್ಲವನ್ನೂ ಕಟ್ಟಿಕೊಡಲು ಆಗಿರಲಿಲ್ಲ. ಅಲ್ಲಿ ಇರದಂತಹ ಸಂಗತಿಗಳು ಇಲ್ಲಿ ಓದಲು ಸಿಗಲಿವೆ. ಸಾಕಷ್ಟು ಸ್ವಾರಸ್ಯಕರ ಅನುಭವಗಳು ಇರಲಿವೆ' ಎಂದು ಕೃತಿಯ ಲೇಖಕರೂ ಆದ ಚಲನಚಿತ್ರ ನಿರ್ದೇಶಕ ಅಮೋಘವರ್ಷ ಮಾಹಿತಿ ಹಂಚಿಕೊಂಡರು.
'ಅಪ್ಪು ಮತ್ತು ನಾವು ಯಾವುದೇ ಕಾಡಿಗೆ ಹೋಗಬೇಕಾದರೂ ಮೈಸೂರಿಗೆ ಬಂದೇ ಹೋಗುತ್ತಿದ್ದೆವು. ಇಂತಹ ಊರಲ್ಲಿ ಪುಸ್ತಕದ ಮುಖಪುಟ ಬಿಡುಗಡೆ ಆಗಿರುವುದು ಖುಷಿಯ ವಿಚಾರ. ಮುಂಗಡ ಬುಕ್ ಸಹ ಆರಂಭ ಆಗಿದ್ದು, ಇನ್ನು ಕೆಲವೇ ತಿಂಗಳಲ್ಲಿ ಪುಸ್ತಕ ಅಪ್ಪು ಅಭಿಮಾನಿಗಳ ಕೈ ಸೇರಲಿದೆ' ಎಂಬ ಭರವಸೆ ನೀಡಿದರು.
ಮುಖಪುಟ ಬಿಡುಗಡೆ ಮಾಡಿದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, 'ಡಾ.ರಾಜಕುಮಾರ್ ಅಭಿನಯಿಸಿದ್ದ ಗಂಧದ ಗುಡಿ ಸಿನಿಮಾ ಅರಣ್ಯ ಅಧಿಕಾರಿಗಳು ಹೇಗಿರಬೇಕು ಎಂಬುದಕ್ಕೆ ಮಾದರಿಯಾಗಿತ್ತು. ಪುನೀತ್ ರಾಜಕುಮಾರ್ ಅವರ ಸಾಕ್ಷ್ಯಚಿತ್ರವು ಅರಣ್ಯ ಸೌಂದರ್ಯವನ್ನು ಸೆರೆ ಹಿಡಿದಿತ್ತು. ಈಗ ಆ ಅನುಭವಗಳು ಬರಹ ರೂಪದಲ್ಲಿ ಬರುತ್ತಿರುವುದು ಸಂತಸದ ಸಂಗತಿ' ಎಂದು ಹೇಳಿದರು.
'ಈಗ ಎಲ್ಲೆಡೆ ಜನಸಂಖ್ಯೆ ಜಾಸ್ತಿ ಆಗಿದ್ದು, ಅರಣ್ಯದ ಅತಿಕ್ರಮಣ ಹೆಚ್ಚಿದೆ. ಇದರಿಂದ ವನ್ಯಜೀವಿ- ಮಾನವ ಸಂಘರ್ಷ ಉಲ್ಬಣಗೊಂಡಿದೆ. ಪ್ರಕೃತಿಯ ಜೊತೆಗಿನ ಸಹಬಾಳ್ವೆಗೆ ಈ ಕೃತಿ ಪ್ರೇರಣೆ ಆಗಲಿ' ಎಂದು ಆಶಿಸಿದರು.
ಕೃತಿಯ ಸಹ ಲೇಖಕ ಪಂಕಜ್ ಸಿಂಗ್, ಶುಭಾ ಸಂಜಯ್ ಅರಸ್ ಜೊತೆಗಿದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260706-39-1948933484

