Dailyhunt Logo
  • Light mode
    Follow system
    Dark mode
    • Play Story
    • App Story
PV Web Exclusive: ಹಸಿರು ಹೊದಿಕೆ ಹೊದ್ದ ಬಿಸ್ಲೆ ಘಾಟ್

PV Web Exclusive: ಹಸಿರು ಹೊದಿಕೆ ಹೊದ್ದ ಬಿಸ್ಲೆ ಘಾಟ್

ಹಾಸನ: ಮಲೆನಾಡಿನ ಮಳೆಗಾಲಕ್ಕೆ ತನ್ನದೇ ಆದ ಮೋಹಕತೆ ಇದೆ. ಆಗಾಗ ಸುರಿಯುತ್ತಿರುವ ತುಂತುರು ಮಳೆಯ ಸ್ಪರ್ಶದಿಂದ ಸಕಲೇಶಪುರ ತಾಲ್ಲೂಕಿನ ಬಿಸ್ಲೆ ಘಾಟ್‌ನ ಬೆಟ್ಟ-ಗುಡ್ಡಗಳು ಈಗ ಹಸಿರು ಹೊದಿಕೆ ಹೊದ್ದು ನಳನಳಿಸುತ್ತಿವೆ.

ಬೆಟ್ಟಗಳ ಮೇಲೆ ತೇಲಾಡುವ ಬಿಳಿ ಮೋಡಗಳು, ಶೋಲಾ ಕಾಡುಗಳ ನಡುವೆ ಕಣ್ಮನ ಸೆಳೆಯುವ ಕಂದರಗಳು ಹಾಗೂ ತಂಪಾದ ಗಾಳಿ ಸೇರಿ ಪಶ್ಚಿಮ ಘಟ್ಟದ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸಿವೆ.

ಈ ವರ್ಷ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಜುಲೈ ಆರಂಭದಲ್ಲಿ ಸುರಿದ ಮಳೆಯು ಪ್ರಕೃತಿಗೆ ಹೊಸ ಚೈತನ್ಯ ತುಂಬಿದೆ. ಬೇಸಿಗೆಯ ಉರಿ ತಾಪಕ್ಕೆ ಸುಟ್ಟು ಕರಕಲಾಗಿದ್ದ ಬೆಟ್ಟಗಳು ಮತ್ತು ಹುಲ್ಲುಗಾವಲುಗಳು ಮತ್ತೆ ಹಸಿರಿನ ಹೊದಿಕೆ ಹೊದ್ದು ಜೀವಂತಗೊಂಡಿವೆ. ಕೆಲವೇ ವಾರಗಳ ಹಿಂದೆ ಕಾಳ್ಗಿಚ್ಚಿನಿಂದ ಬೂದಿಯಾಗಿದ್ದ ಪ್ರದೇಶಗಳು ಈಗ ಹೊಸ ಚಿಗುರುಗಳಿಂದ ಕಂಗೊಳಿಸುತ್ತಿವೆ.

ಬಿಸ್ಲೆ ಘಾಟ್ ಸುತ್ತಮುತ್ತಲಿನ ಗವಿಬೆಟ್ಟ, ಯಡಕುಮೇರಿ, ಹೊಸಳ್ಳಿಗುಡ್ಡ, ಕಾಗಿನಹರೆ ಕೋಟೆ, ಪಟ್ಲ ಬೆಟ್ಟ, ಕಿರ್ಕಳ್ಳಿ ಗುಡ್ಡ ಹಾಗೂ ಹೆತ್ತೂರು ಒಂಟಿ ಮರ ದಿಣ್ಣೆ ಸೇರಿದಂತೆ ಅನೇಕ ಗಿರಿಶ್ರೇಣಿಗಳು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿವೆ. ಮಳೆಯ ನಡುವೆ ಬೆಟ್ಟಗಳನ್ನು ಆವರಿಸುವ ಮೋಡಗಳು ಕ್ಷಣಕಾಲದಲ್ಲೇ ಸರಿದು ಹಸಿರು ಕಾಡು ಮತ್ತು ಕಣಿವೆಗಳ ಅದ್ಭುತ ದೃಶ್ಯವನ್ನು ಅನಾವರಣಗೊಳಿಸುವುದು ನೋಡುಗರಿಗೆ ಅಪರೂಪದ ಅನುಭವ ನೀಡುತ್ತಿದೆ.

ಬಿಸ್ಲೆ ಘಾಟ್‌ನ ವೀಕ್ಷಣಾ ಸ್ಥಳದಿಂದ ಕಾಣುವ ಶೋಲಾ ಕಾಡುಗಳು, ಆಳವಾದ ಕಂದರಗಳು ಹಾಗೂ ಅನಂತವಾಗಿ ಹರಡಿರುವ ಪಶ್ಚಿಮ ಘಟ್ಟದ ಸಾಲುಗಳು ಪ್ರಕೃತಿ ಪ್ರಿಯರನ್ನು ಮಂತ್ರಮುಗ್ಧರನ್ನಾಗಿಸುತ್ತಿವೆ. ಮೋಡಗಳು ಬೆಟ್ಟವನ್ನು ಸಂಪೂರ್ಣ ಮುಚ್ಚಿದಾಗ ಪ್ರವಾಸಿಗರು ತಾಳ್ಮೆಯಿಂದ ಕಾದು ಕುಳಿತು, ಮೋಡಗಳು ಸರಿದ ಕ್ಷಣವೇ ಕಣ್ಮನ ತಣಿಸುವ ದೃಶ್ಯವನ್ನು ಕಂಡು ಸಂಭ್ರಮಿಸುತ್ತಿದ್ದಾರೆ. ಆ ಕ್ಷಣಗಳು ಕ್ಯಾಮೆರಾಗಳಲ್ಲಿ ಮಾತ್ರವಲ್ಲ, ನೆನಪುಗಳಲ್ಲಿಯೂ ಶಾಶ್ವತವಾಗಿ ಉಳಿಯುತ್ತಿವೆ.

ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟ್‌ನಲ್ಲಿ ಹಸಿರು ಹೊದ್ದು ನಿಂತಿರುವ ಬೆಟ್ಟ-ಗುಡ್ಡಗಳು.

ಈ ಪ್ರವಾಸಿ ತಾಣದತ್ತ ಸಾಗುವ ರಸ್ತೆ ಪ್ರಯಾಣವೂ ಒಂದು ವಿಶಿಷ್ಟ ಅನುಭವ. ತಿರುವು-ಮುರುವುಗಳ ರಸ್ತೆಯ ಎರಡೂ ಬದಿಯಲ್ಲಿ ಹಸಿರಿನಿಂದ ಕಂಗೊಳಿಸುವ ಕಾಡು, ಮಂಜಿನ ಹೊದಿಕೆಯಲ್ಲಿರುವ ಬೆಟ್ಟಗಳು ಹಾಗೂ ತಂಪಾದ ಗಾಳಿ ಪ್ರವಾಸದ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಬೇಸಿಗೆಯಲ್ಲಿ ರಸ್ತೆ ದುರಸ್ತಿ ನಡೆಸಿರುವುದರಿಂದ ಈಗ ಪ್ರವಾಸಿಗರು ತಮ್ಮ ವಾಹನಗಳಲ್ಲೇ ವೀಕ್ಷಣಾ ಸ್ಥಳದ ಸಮೀಪದವರೆಗೆ ಸುಲಭವಾಗಿ ತಲುಪುತ್ತಿದ್ದಾರೆ.

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಕಲೇಶಪುರ ತಾಲ್ಲೂಕಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುವುದು ವಾಡಿಕೆ. ಈ ವರ್ಷವೂ ಆಹ್ಲಾದಕರ ವಾತಾವರಣ ಮತ್ತು ಪ್ರಕೃತಿಯ ನವಚೈತನ್ಯವನ್ನು ಸವಿಯಲು ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ವಾರಾಂತ್ಯಗಳಲ್ಲಿ ಕುಟುಂಬ ಸಮೇತ ಬರುವವರ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ.

ಥಾರ್‌ ಜೀಪ್‌ ಚಲಾಯಿಸಿ ಗವಿಬೆಟ್ಟದ ಹುಲ್ಲುಗಾವಲು ಹಾಳು ಮಾಡಿರುವುದು.

ಇತ್ತೀಚೆಗೆ ಇಲ್ಲಿ ವೀಕ್ಷಣಾ ಗೋಪುರ ನಿರ್ಮಾಣಗೊಂಡಿರುವುದು ಪ್ರವಾಸಿಗರಿಗೆ ಅನುಕೂಲವಾಗಿದೆ. ಆದರೆ ಪ್ರವಾಸೋದ್ಯಮವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಸ್ವಾಗತ ಕಮಾನು, ಶೌಚಾಲಯ, ಕುಡಿಯುವ ನೀರು, ವಾಹನ ನಿಲುಗಡೆ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸುವ ಅಗತ್ಯವಿದೆ ಎಂಬುದು ಸ್ಥಳೀಯರು ಹಾಗೂ ಪ್ರವಾಸಿಗರ ಒತ್ತಾಯವಾಗಿದೆ.

ಹಸಿರು ಬೆಟ್ಟಗಳು, ಮಂಜಿನ ಮೋಡಗಳು, ತಂಪಾದ ಗಾಳಿ ಮತ್ತು ಪ್ರಕೃತಿಯ ನಿಶ್ಶಬ್ದ ಸೊಬಗನ್ನು ಒಂದೇ ಸ್ಥಳದಲ್ಲಿ ಅನುಭವಿಸಲು ಬಯಸುವವರಿಗೆ ಈ ಮಳೆಗಾಲದಲ್ಲಿ ಬಿಸ್ಲೆ ಘಾಟ್ ಅತ್ಯುತ್ತಮ ತಾಣವಾಗಿ ಹೊರಹೊಮ್ಮಿದೆ.

ರೀಲ್ಸ್ ಹುಚ್ಚಿಗೆ ಪ್ರಕೃತಿಗೆ ಹಾನಿ: ಸಾರ್ವಜನಿಕರ ಆಕ್ರೋಶ

ಬಿಸ್ಲೆ ಘಾಟ್ ಸೇರಿದಂತೆ ಮಲೆನಾಡಿನ ಪ್ರವಾಸಿ ತಾಣಗಳಿಗೆ ಮಳೆಗಾಲದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿರುವ ನಡುವೆಯೇ, ಕೆಲವರ ಬೇಜವಾಬ್ದಾರಿಯ ವರ್ತನೆ ಪರಿಸರಕ್ಕೆ ಗಂಭೀರ ಹಾನಿ ಉಂಟು ಮಾಡುತ್ತಿದೆ.

ಯಸಳೂರು ಹೋಬಳಿಯ ಪ್ರಸಿದ್ಧ ಗವಿಬೆಟ್ಟದಲ್ಲಿ ರೀಲ್ಸ್‌ ಚಿತ್ರೀಕರಣದ ಹುಚ್ಚಿಗೆ ಕಿಡಿಗೇಡಿ ಪ್ರವಾಸಿಗನೊಬ್ಬ ವಾಹನಗಳ ಪ್ರವೇಶ ನಿಷೇಧವಿದ್ದ ಪ್ರದೇಶಕ್ಕೆ ತನ್ನ ಥಾರ್ ಕಾರನ್ನು ನುಗ್ಗಿಸಿ, ಹಸಿರು ಹುಲ್ಲುಗಾವಲಿನ ಮೇಲೆ ಮನಬಂದಂತೆ ಚಲಾಯಿಸಿದ್ದಾನೆ. ಪರಿಣಾಮ, ಜಾನುವಾರುಗಳು ಮೇಯುವ ಮೇವು ನಾಶವಾಗಿದ್ದು, ಬೆಟ್ಟದ ನೈಸರ್ಗಿಕ ಪರಿಸರವೂ ಹಾನಿಗೊಳಗಾಗಿದೆ. ಪ್ರವಾಸಿಗರು ಕಾಲ್ನಡಿಗೆಯಲ್ಲಿ ಸಂಚರಿಸುವ ದಾರಿಯೂ ಹಾಳಾಗಿದೆ.

ಗವಿಬೆಟ್ಟವು ಕೇವಲ ಪ್ರವಾಸಿ ತಾಣವಲ್ಲ. ಕಾಡೆಮ್ಮೆ, ಮುಳ್ಳುಹಂದಿ, ಕಾಡುಬೆಕ್ಕು, ಕೋತಿ, ನವಿಲು ಸೇರಿದಂತೆ ಅನೇಕ ಅಪರೂಪದ ವನ್ಯಜೀವಿಗಳ ಆಶ್ರಯ ತಾಣ ಹಾಗೂ ನೀರು ಕುಡಿಯುವ ಸೂಕ್ಷ್ಮ ಪರಿಸರ ವಲಯವಾಗಿದೆ. ಇಂತಹ ಪ್ರದೇಶಗಳಲ್ಲಿ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು ಜೀವವೈವಿಧ್ಯಕ್ಕೆ ಅಪಾಯ ಉಂಟುಮಾಡುತ್ತದೆ ಎಂದು ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani