Wednesday, 16 Sep, 8.55 am ಪ್ರಜಾವಾಣಿ

ಜಿಲ್ಲೆ
PV WEB Exclusive: ಮನೆ ಮುಳುಗಲು ಮಳೆಯೊಂದೇ ಕಾರಣವಲ್ಲ!

ಕಾರವಾರ: 'ಈಗ ಬರೋದಕ್ಕಿಂತ ಮೂರು ಪಟ್ಟು ಹೆಚ್ಚು ಮಳೆ ಕಂಡಿದೇವೆ ಸಾರ್. ಆದ್ರೆ, ಯಾವತ್ತೂ ಪ್ರವಾಹ ಬಂದದ್ದಿಲ್ಲ. ಅಣೆಕಟ್ಟೆ ಭರ್ತಿಯಾಗಿ ಕಾಳಿಗೆ ನೀರು ಬಿಟ್ರೂ ಮನೆಯ ಬುಡಕ್ಕೆ ಬಂದಿತ್ತಷ್ಟೇ. ಮನೆಯೇ ಮುಳುಗಿ ಹೋದದ್ದಿಲ್ಲ...'

ತಾಲ್ಲೂಕಿನ ಕದ್ರಾ ನಿವಾಸಿ ದಿನೇಶ, ತಾವು ಬಾಲ್ಯದಲ್ಲಿ ಕಳೆದ ಮಳೆಗಾಲದ ದಿನಗಳಿಗೂ ಈಗಿನ ಮುಂಗಾರಿನ ಅವಧಿಗೂ ಹೋಲಿಸಿಕೊಂಡು ಮಾತಿಗಿಳಿದರು. ಗ್ರಾಮದ ಬಸ್ ನಿಲ್ದಾಣದ ಬಳಿ ಗೂಡಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುವ ಅವರಿಗೆ ಕಾಳಿ ನದಿ ನಿತ್ಯ ದರ್ಶನ ನೀಡುತ್ತದೆ.

'ಹೊಳೆಯಲ್ಲಿ (ನದಿ) ದೊಡ್ಡ ಪ್ರಮಾಣದಲ್ಲಿ ನೀರು ಬರೋದು ಹೊಸತಲ್ಲ. ಅಣೆಕಟ್ಟೆ ಕಟ್ಟುವ ಮೊದಲೂ ನೀರು ಮೇಲೆ ಬರ್ತಿತ್ತು. ಆಗ ಹೊಳೆ ದಂಡೆಯಲ್ಲಿ ಇಷ್ಟೊಂದು ಮನೆಗಳಿರಲಿಲ್ಲ. ಹಾಗಾಗಿ ಪ್ರವಾಹದ ಪರಿಣಾಮ ಅಷ್ಟಾಗಿ ಗೊತ್ತಾಗ್ತಿರ್ಲಿಲ್ಲ. ಈಗ ಹೊಳೆಯುದ್ದಕ್ಕೂ ನೂರಾರು ಮನೆಗಳಾಗಿವೆ. ಅಣೆಕಟ್ಟೆಯಿಂದ ನೀರು ಬಿಟ್ಟ ಕೂಡಲೇ ಎಲ್ರಿಗೂ ಹೆದ್ರಿಕೆ ಶುರುವಾಗ್ತದೆ' ಎಂದು ಹೇಳುತ್ತ ಹೋದರು.

ಕದ್ರಾ ಜಲಾಶಯವು ಕಾಳಿ ನದಿಯ ಐದು ಜಲಾಶಯಗಳಲ್ಲಿ ಕೊನೆಯದ್ದು. 1997ರಲ್ಲಿ ಉದ್ಘಾಟನೆಯಾಗಿ ವಿದ್ಯುತ್ ಉತ್ಪಾದನೆಯೂ ಶುರುವಾಯಿತು. ಗರಿಷ್ಠ 34.50 ಮೀಟರ್ ಎತ್ತರದ ಈ ಜಲಾಶಯವು ಪ್ರತಿ ಮಳೆಗಾಲದಲ್ಲೂ ಭರ್ತಿಯಾಗುತ್ತದೆ. ಒಂದಷ್ಟು ಲಕ್ಷ ಕ್ಯುಸೆಕ್ ನೀರು ಅರಬ್ಬಿ ಸಮುದ್ರಕ್ಕೆ ಸೇರುತ್ತದೆ. ಆದರೆ, ಕಳೆದ ವರ್ಷ ಸುರಿದ ಭಾರಿ ಮಳೆಯು ಜಲಾಶಯದ ಕೆಳಭಾಗದವರ ಜೀವನವನ್ನೇ ಮುಳುಗಿಸಿತ್ತು.

ಕೆಸರು ತೆಗೆದದ್ದೇ ಇಲ್ಲ!: ಶತಮಾನದಲ್ಲೇ ಕಂಡು ಕೇಳರಿಯದ ರೀತಿಯ ಪ್ರವಾಹವು ಕಳೆದ ವರ್ಷ ಸಾವಿರಾರು ಜನರ ಜೀವನವನ್ನು ನೀರು ಪಾಲು ಮಾಡಿತ್ತು. ಇಷ್ಟು ವರ್ಷಗಳಲ್ಲಿ ಆಗದ ಪ್ರವಾಹವು ಎರಡು ವರ್ಷಗಳಿಂದ ಯಾಕೆ ದುಃಸ್ವಪ್ನವಾಗಿ ಕಾಡುತ್ತಿದೆ? ಕೇವಲ ಮಳೆಯೊಂದೇ ಇದಕ್ಕೆ ಕಾರಣವೇ ಎಂಬುದು ಕದ್ರಾ ಜಲಾಶಯದ ಕೆಳಭಾಗದಲ್ಲಿ ವಾಸವಿರುವ ಎಲ್ಲರ ಪ್ರಶ್ನೆಯಾಗಿದೆ.

ಕಳೆದ ವರ್ಷ ಆಗಸ್ಟ್ ಮೊದಲ ವಾರದಲ್ಲಿ ಮೂರು ನಾಲ್ಕು ದಿನಗಳ ಕಾಲ ನಿರಂತರವಾಗಿ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಆಗ ನದಿ ಉಕ್ಕಿ ಹರಿದು ಮನೆ, ಕೃಷಿ ಭೂಮಿ, ರಸ್ತೆ ಎಲ್ಲವೂ ಆಪೋಷನವಾಗಿದ್ದವು. ಆದರೆ, ಈ ವರ್ಷ ಕಳೆದ ವರ್ಷದ ಅರ್ಧದಷ್ಟು ಪ್ರಮಾಣದಲ್ಲಿ ಜಲಾಶಯದಿಂದ ನದಿಗೆ ನೀರು ಹರಿಸಲಾಗಿತ್ತು. ಆದರೂ ಹಲವು ಮನೆಗಳು ಜಲಾವೃತವಾದವು. ಮಳೆಯ ಪ್ರಮಾಣ ಕಡಿಮೆಯಾದರೂ ಯಾಕೆ ಪ್ರವಾಹ ಪರಿಸ್ಥಿತಿ ಎದುರಾಯಿತು ಎಂಬುದು ಹಲವರಿಗೆ ಪ್ರಶ್ನೆಯಾಗಿತ್ತು.

ಇದಕ್ಕೆ ಮಳೆ ನೀರು ಹರಿಯುವ ಕಾಲುವೆಗಳಲ್ಲಿ ತುಂಬಿರುವ ಹೂಳಿನ 'ಕೊಡುಗೆ'ಯೂ ಮುಖ್ಯವಾದುದು ಎನ್ನುವುದು ಸಮೀಪದ ಮಲ್ಲಾಪುರ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ ಚಂದ್ರಶೇಖರ ಬಾಂದೇಕರ ಅವರ ಅಭಿಪ್ರಾಯ.

'ಜಲಾಶಯದ ಕೆಳಭಾಗದ ನದಿಪಾತ್ರದಲ್ಲಿ ಮಳೆ ನೀರು ಹರಿಯುವ ಹಲವು ಚರಂಡಿಗಳಿವೆ. ಆದರೆ, ಮಳೆಗಾಲಕ್ಕೂ ಮೊದಲು ಅವುಗಳಿಂದ ಹೂಳೆತ್ತಲು ಗ್ರಾಮ ಪಂಚಾಯ್ತಿಯಲ್ಲಿ ಹಣದ ಕೊರತೆಯಾಯಿತು. ಹಾಗಾಗಿ ಆ ಕೆಲಸ ಬಾಕಿಯಾಯಿತು. ಅದರ ಪರಿಣಾಮ ಈ ವರ್ಷವೂ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಿದಾಗ ಹಿಂದೂವಾಡದ ಕೆಲವು ಮನೆಗಳು ಜಲಾವೃತವಾದವು. ಕದ್ರಾ ಗ್ರಾಮದಲ್ಲಿ ಕೂಡ ಅಂಗಡಿ, ಮುಂಗಟ್ಟುಗಳ ಸುತ್ತ ನೀರು ನಿಲ್ಲುವಂತಾಯಿತು' ಎಂದು ವಿವರಿಸುತ್ತಾರೆ.

'ಈ ಹಿಂದಿನ ವರ್ಷಗಳಲ್ಲೂ ಮಳೆ ಜೋರಾಗಿ ಸುರಿದಿದೆ. ಆದರೆ, ಆಗ ಚರಂಡಿಗಳು, ಕಾಲುವೆಗಳಲ್ಲಿ ಹೂಳಿನ ಪ್ರಮಾಣ ಇಷ್ಟೊಂದು ಇರಲಿಲ್ಲ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿತ್ತು. ಭೂಮಿಗೂ ಇಂಗಿ ಹೋಗುತ್ತಿತ್ತು. ಈ ರೀತಿಯ ಸಮಸ್ಯೆ ಬಹುತೇಕ ಎಲ್ಲ ಜಲಾಶಯಗಳು, ನದಿಗಳ ಪಾತ್ರದಲ್ಲಿ ಕೂಡ ಇದೆ' ಎಂದು ಅವರು ಹೇಳುತ್ತಾರೆ.

ಅನುದಾನ ಬೇಕು: '‌ಜಲಾಶಯಗಳ ಕೆಳಭಾಗದ ಚರಂಡಿಗಳ ಹೂಳೆತ್ತಲು ವಿಶೇಷ ಅನುದಾನದ ಅಗತ್ಯವಿದೆ. ಲಕ್ಷಾಂತರ ರೂಪಾಯಿಗಳನ್ನು ಗ್ರಾಮ ಪಂಚಾಯ್ತಿಗಳೇ ಹೊಂದಿಸುವುದು ಸಾಧ್ಯವಾಗದು' ಎನ್ನುತ್ತಾರೆ ಮಲ್ಲಾಪುರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎನ್.ಅರುಣಾ.

'ಚರಂಡಿಗಳನ್ನು ನಿರ್ಮಿಸಿದ ಬಳಿಕ ಒಂದು ಬಾರಿಯೂ ಹೂಳನ್ನು ತೆಗೆದ ಹಾಗಿಲ್ಲ. ಇದು ಕೇವಲ ಇಲ್ಲಿನ ಸಮಸ್ಯೆಯಲ್ಲ. ಹಾಗಾಗಿ ಸರ್ಕಾರವೇ ಈ ಬಗ್ಗೆ ಗಮನ ಹರಿಸುವುದು ಸೂಕ್ತ. ಈ ಬಾರಿಯಾದರೂ ಇಂತಹ ಕ್ರಮ ಕೈಗೊಂಡರೆ, ಮುಂದಿನ ಮಳೆಗಾಲದಿಂದ ಪ್ರವಾಹದ ಪ್ರಮಾಣವನ್ನು ತಗ್ಗಿಸಲು ಸಾಧ್ಯವಿದೆ' ಎನ್ನುವುದು ಅವರ ವಿಶ್ವಾಸವಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Prajavani
Top