ಬೆಳಗಾವಿ: ಈ ವರ್ಷ ಜೂನ್ ತಿಂಗಳು ಮುಗಿದರೂ, ಹಿಡಕಲ್ ಜಲಾಶಯಕ್ಕೆ ಒಳಹರಿವು ಆರಂಭವಾಗಿರಲಿಲ್ಲ. 51 ಟಿಎಂಸಿ ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯದ ಏಳು ಟಿಎಂಸಿ ಅಡಿ ನೀರು ಮಾತ್ರ ಉಳಿದಿತ್ತು.
ಒಂದೆಡೆ ಮಳೆ ಸುರಿಯುತ್ತಿಲ್ಲ. ಇನ್ನೊಂದೆಡೆ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ ಕುಸಿಯುತ್ತ ಸಾಗಿತು.
ಇದರಿಂದಾಗಿ ಮಳೆಗಾಲದಲ್ಲೇ ಜಲಬವಣೆ ತಲೆದೋರುವ ಆತಂಕ ಎದುರಾಯಿತು. ಪರಿಸ್ಥಿತಿ ಹೀಗೆ ಮುಂದುವರಿದರೆ ಜಲಾಶಯವನ್ನೇ ನೆಚ್ಚಿಕೊಂಡವರ ಗತಿ ಏನೆಂದು ಜನ ಚಿಂತಿತರಾಗಿದ್ದರು.
ಈ ಮಧ್ಯೆ, ಮಹಾರಾಷ್ಟ್ರದಲ್ಲಿ ಸುರಿದ ಮಳೆಯಿಂದಾಗಿ ಜುಲೈ 3ರಂದು ಅಣೆಕಟ್ಟೆಗೆ ಒಳಹರಿವು ಆರಂಭವಾಯಿತು. ಅದು 558 ಕ್ಯುಸೆಕ್ ಮಾತ್ರ. ಈ ಮುಂಗಾರು ಹಂಗಾಮಿನಲ್ಲಿ ದಾಖಲಾದ ಮೊದಲ ಒಳಹರಿವು ಇದು.
ಅಂದು ಆರಂಭವಾದ ಒಳಹರಿವಿನ ಪ್ರಮಾಣ ಹೆಚ್ಚುತ್ತಲೇ ಸಾಗಿ, ಇಂದು(ಆಗಸ್ಟ್ 3) 20,782 ಕ್ಯುಸೆಕ್ ನೀರು ಹರಿದುಬರುತ್ತಿದೆ. ಈಗ ಜಲಾಶಯದಲ್ಲಿ 38.42 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಗರಿಷ್ಠ ಸಂಗ್ರಹ ಸಾಮರ್ಥ್ಯಕ್ಕೆ ಹೋಲಿಸಿದರೆ, ಶೇ 75ರಷ್ಟು ಡ್ಯಾಂ ಭರ್ತಿಯಾಗಿದೆ.
ಒಂದೇ ತಿಂಗಳ ಅವಧಿಯಲ್ಲಿ 31 ಟಿಎಂಸಿ ಅಡಿ ನೀರು ಹರಿದುಬಂದು, ಜಲಾಶಯ ಮತ್ತೆ ಜೀವಕಳೆ ಪಡೆದುಕೊಂಡಿದೆ.
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಾಗುತ್ತಿದ್ದು, ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಜಲಾಶಯಕ್ಕೆ 20 ಸಾವಿರ ಕ್ಯುಸೆಕ್‌ಗಿಂತ ಅಧಿಕ ಒಳಹರಿವು ಇದೆ. ಪ್ರತಿದಿನ ಜಲಾಶಯಕ್ಕೆ ಒಂದೂವರೆ ಟಿಎಂಸಿ ಅಡಿಗಿಂತ ಅಧಿಕ ನೀರು ಹರಿದುಬರುತ್ತಿದೆ.
ಅಣೆಕಟ್ಟೆ ಭರ್ತಿಗೆ 12.58 ಟಿಎಂಸಿ ಅಡಿ ಮಾತ್ರ ಬಾಕಿ ಇದೆ. ಇದೇ ರೀತಿ ಒಳಹರಿವು ಮುಂದುವರಿದರೆ, ಶೀಘ್ರ ಡ್ಯಾಂ ಭರ್ತಿಯಾಗುವ ನಿರೀಕ್ಷೆ ಇದೆ.
ಕುಡಿಯುವ ಉದ್ದೇಶಕ್ಕಷ್ಟೇ ಬಳಕೆ
ಹಿಡಕಲ್ ಜಲಾಶಯವು 8.20 ಲಕ್ಷ ಎಕರೆಗಿಂತ ಅಧಿಕ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುತ್ತದೆ. ಈಗ ಜಲಾಶಯ ಮುಕ್ಕಾಲು ಭಾಗ ತುಂಬಿದ್ದರೂ, ಕುಡಿಯುವ ಉದ್ದೇಶಕ್ಕಷ್ಟೇ ನೀರು ಬಳಸಲು ಅಣೆಕಟ್ಟೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
'ಈಗ ಜಲಾಶಯದಿಂದ 1,765 ಕ್ಯುಸೆಕ್ ಒಳಹರಿವು ಇದೆ. ಜನರು-ಜಾನುವಾರುಗಳ ದಾಹ ನೀಗಿಸಲು ಸದ್ಯ ಅಣೆಕಟ್ಟೆಯಿಂದ ಬಲದಂಡೆ ಹಾಗೂ ಚಿಕ್ಕೋಡಿ ಶಾಖೆ ಕಾಲುವೆಗೆ ನೀರು ಬಿಡಲಾಗುತ್ತಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಕೃಷಿಗಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಬೇಕು' ಎಂದು ರೈತರು ಬೆಳಗಾವಿ ಪ್ರಾದೇಶಿಕ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳು ಈಗಲೇ ಯಾವ ನಿರ್ಧಾರಕ್ಕೂ ಬಂದಿಲ್ಲ.
24 ಟಿಎಂಸಿ ಅಡಿ ಬೇಕು
'ಹಿಡಕಲ್ ಜಲಾಶಯದಿಂದ ಬೆಳಗಾವಿ ಮಹಾನಗರ, ಹುಕ್ಕೇರಿ ತಾಲ್ಲೂಕು ಹಾಗೂ ಬಾಗಲಕೋಟೆ ಜಿಲ್ಲೆಯ ಆಯ್ದ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ. ನೀರಿನ ಕೊರತೆಯಿಂದ ಈ ವರ್ಷ ಮಳೆಗಾಲದ ಆರಂಭದಲ್ಲಿ ಸಮಸ್ಯೆಯಾಗಿತ್ತು. ಈಗ ಕುಡಿಯುವ ಉದ್ದೇಶಕ್ಕಾಗಿ ಮುಂದಿನ ಎರಡು ವರ್ಷಗಳಿಗೆ ಸಾಕಾಗುವಷ್ಟು(24 ಟಿಎಂಸಿ ಅಡಿ) ನೀರು ಕಾಯ್ದಿರಿಸಿಕೊಳ್ಳಲು ಯೋಜಿಸಿದ್ದೇವೆ' ಎಂದು ಹಿಡಕಲ್ ಅಣೆಕಟ್ಟೆಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಕೆ.ಜಗದೀಶ 'ಪ್ರಜಾವಾಣಿ'ಗೆ ತಿಳಿಸಿದರು.
'ಕೃಷಿಗೆ ನೀರು ಬಿಡಬೇಕೆಂಬ ಮನವಿ ರೈತರಿಂದ ಬರುತ್ತಿವೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ನಡೆಯುವ ಜಲಾಶಯದ ನೀರು ಬಳಕೆದಾರರ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಣಯಿಸಲಾಗುತ್ತದೆ' ಎಂದರು.
62 ಮೀಟರ್ ಎತ್ತರವಿದೆ: ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಈ ಜಲಾಶಯ 62.48 ಮೀಟರ್ ಎತ್ತರ ಹೊಂದಿದೆ. 10 ಕ್ರಸ್ಟ್‌ಗೇಟ್‌ಗಳಿವೆ. ಉತ್ತರ ಕರ್ನಾಟಕದ ಪ್ರಮುಖ ಜಲಾಶಯಗಳಲ್ಲಿ ಇದೂ ಒಂದಾಗಿದೆ.

