ಜೈಪುರ: ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಜೈಪುರ, ಕೋಟಾ ಸೇರಿದಂತೆ 5 ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ, ಮೂರರಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ.
ಆಮ್ ಆದ್ಮಿ ಪಕ್ಷವು (ಎಎಪಿ) ಬಾರಾನ್ ನಗರ ಪಾಲಿಕೆಯಲ್ಲಿ 31 ಸ್ಥಾನಗಳನ್ನು ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಆಡಳಿತ ಹಿಡಿಯಲು ಸಜ್ಜಾಗಿದೆ.
ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹಿನ್ನಡೆ ಅನುಭವಿಸಿವೆ.
ರಾಜಸ್ಥಾನದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದುವರೆಗೆ ಪ್ರಕಟಗೊಂಡ ಫಲಿತಾಂಶಗಳ ಪ್ರಕಾರ, ರಾಜ್ಯದ ಒಟ್ಟು 8,068 ವಾರ್ಡ್‌ಗಳ ಪೈಕಿ ಬಿಜೆಪಿ 3,323 ವಾರ್ಡ್‌ಗಳಲ್ಲಿ ಜಯಗಳಿಸಿದೆ. , ಕಾಂಗ್ರೆಸ್ 2,962 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದರೆ, ಪಕ್ಷೇತರ ಅಭ್ಯರ್ಥಿಗಳು 1,783 ವಾರ್ಡ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐದು ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಮುನ್ನಡೆ...
10 ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶದ ಟ್ರೆಂಡ್ ಹೊರಬಿದ್ದಿದ್ದು, 5 ಮಹಾನಗರ ಪಾಲಿಕೆಗಳಲ್ಲಿ ಆಡಳಿತಾರೂಢ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, 3 ಪಾಲಿಕೆಗಳಲ್ಲಿ ಕಾಂಗ್ರೆಸ್ ಮುನ್ನಡೆಯಲ್ಲಿದೆ. ಒಂದರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸಮಬಲ ಸಾಧಿಸಿವೆ. ಮತ್ತೊಂದು ಮಹಾನಗರ ಪಾಲಿಕೆ ಪಕ್ಷೇತರರ ಪಾಲಾಗಿದೆ.
ಅಲ್ವಾರ್, ಉದಯಪುರ, ಕೋಟಾ, ಜೈಪುರ, ಭಿಲ್ವಾರಾ ಮಹಾನಗರ ಪಾಲಿಕೆಗಳಲ್ಲಿ ಬಿಜೆಪಿ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಅಜ್ಮೇರ್, ಪಾಲಿ, ಬಿಕಾನೇರ್ ಮಹಾನಗರ ಪಾಲಿಕೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸುವುದು ನಿಶ್ಚಿತವಾಗಿದೆ.
ಭರತ್‌ಪುರ ಮಹಾನಗರ ಪಾಲಿಕೆಯಲ್ಲಿ ಪಕ್ಷೇತರರು ಹಾಗೂ ಇತರ ಪಕ್ಷ ಅಭ್ಯರ್ಥಿಗಳು 38 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿವೆ. ಜೋಧ್‌ಪುರ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಎರಡೂ ಪಕ್ಷಗಳು ತಲಾ 44 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿವೆ.
ಇನ್ನೂ ಫಲಿತಾಂಶ ಅಧಿಕೃತವಾಗಿ ಹೊರ ಬರಬೇಕಿದೆ. ಇಂದು ರಾತ್ರಿ ಪೂರ್ಣ ಫಲಿತಾಂಶ ಹೊರ ಬರಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

