Dailyhunt Logo
  • Light mode
    Follow system
    Dark mode
    • Play Story
    • App Story
ರಾಜಸ್ಥಾನಕ್ಕೆ ಗೆಲುವಿನ 'ವೈಭವ': ಪ್ಲೇ ಆಫ್ ಕನಸು ಜೀವಂತವಾಗಿ ಉಳಿಸಿಕೊಂಡ ಆರ್‌ಆರ್

ರಾಜಸ್ಥಾನಕ್ಕೆ ಗೆಲುವಿನ 'ವೈಭವ': ಪ್ಲೇ ಆಫ್ ಕನಸು ಜೀವಂತವಾಗಿ ಉಳಿಸಿಕೊಂಡ ಆರ್‌ಆರ್

ಜೈಪುರ : ಎಡಗೈ ಬ್ಯಾಟರ್‌ ವೈಭವ್‌ ಸೂರ್ಯವಂಶಿ (93;38ಎ) ಅಲ್ಪ ಅಂತರದಲ್ಲಿ ಶತಕವನ್ನು ತಪ್ಪಿಸಿಕೊಂಡರು. ಆದರೆ, ಅವರ ಸ್ಫೋಟಕ ಬ್ಯಾಟಿಂಗ್‌ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡವು ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಮಣಿಸಿತು.

ಇದರೊಂದಿಗೆ ಪ್ಲೇ ಆಫ್‌ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತು.

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ವೈಭವ್‌ ಆಟಕ್ಕೆ ಒಲಿದ ಗೆಲುವು: ಪ್ಲೇ ಆಫ್‌ ಕನಸು ಜೀವಂತವಾಗಿ ಉಳಿಸಿಕೊಂಡ ರಾಜಸ್ಥಾನ

ಒಂದು ಸಾಲಿನಲ್ಲಿವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್, ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.ಪ್ರಮುಖ ಸಂಗತಿಗಳು• ವೈಭವ್ ಸೂರ್ಯವಂಶಿ ಅವರ ಅಬ್ಬರ15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ 38 ಎಸೆತಗಳಲ್ಲಿ 93 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.• ಪ್ಲೇ ಆಫ್ ಹಾದಿ ಜೀವಂತಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್ 14 ಅಂಕಗಳನ್ನು ಗಳಿಸಿದ್ದು, ಮೇ 24ರಂದು ನಡೆಯಲಿರುವ ಮುಂಬೈ ವಿರುದ್ಧದ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಖಚಿತವಾಗಲಿದೆ.• ಲಖನೌ ತಂಡದ ಸವಾಲುಮಿಚೆಲ್ ಮಾರ್ಷ್ (96) ಮತ್ತು ಜೋಶ್ ಇಂಗ್ಲಿಸ್ (60) ಅವರ ಉತ್ತಮ ಬ್ಯಾಟಿಂಗ್‌ನಿಂದ ಲಖನೌ ತಂಡ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.• ನಿರ್ಣಾಯಕ ಜೊತೆಯಾಟಗಳುವೈಭವ್ ಸೂರ್ಯವಂಶಿ ಮತ್ತು ಧ್ರುವ ಜುರೇಲ್ ಜೋಡಿಯು ಎರಡನೇ ವಿಕೆಟ್‌ಗೆ ಕೇವಲ 45 ಎಸೆತಗಳಲ್ಲಿ 105 ರನ್ ಸೇರಿಸಿ ಪಂದ್ಯವನ್ನು ರಾಜಸ್ಥಾನದ ಪರ ವಾಲುವಂತೆ ಮಾಡಿದರು.• ಬೌಲಿಂಗ್ ಪ್ರದರ್ಶನಯಶ್ ರಾಜ್ ಪೂಂಜಾ ಲಖನೌ ತಂಡದ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾದರು.ಪ್ರಮುಖ ಅಂಕಿಅಂಶಗಳು93ವೈಭವ್ ಸೂರ್ಯವಂಶಿ ಗಳಿಸಿದ ರನ್220ಲಖನೌ ತಂಡ ಗಳಿಸಿದ ರನ್14ರಾಜಸ್ಥಾನಕ್ಕೆ ಸೇರಿದ್ದ ಅಂಕಗಳುಮೇ 24ರಾಜಸ್ಥಾನ ತಂಡದ ಅಂತಿಮ ಪಂದ್ಯಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ 'ಹ್ಯಾಟ್ರಿಕ್‌' ಸೋಲು ಅನುಭವಿಸಿದ್ದ ಆತಿಥೇಯ ತಂಡವು ಕೊನೆಗೂ ಜಯ ದಾಖಲಿಸಿತು. 14 ಅಂಕ ಗಳಿಸಿರುವ ರಾಜಸ್ಥಾನ ತಂಡಕ್ಕೆ ಲೀಗ್‌ ಹಂತದಲ್ಲಿ ಕೊನೆಯ ಪಂದ್ಯ (ಮೇ 24ರಂದು ಮುಂಬೈ ವಿರುದ್ಧ) ಬಾಕಿ ಉಳಿದಿದ್ದು, ಅದನ್ನು ಗೆದ್ದರೆ ಪ್ಲೇ ಆಫ್‌ ಹಾದಿ ಸುಗಮವಾಗಲಿದೆ. ಲಖನೌ ತಂಡವು ಈ ಮೊದಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದೆ.‌

ರಿಯಾನ್ ಪರಾಗ್ ಗೈರುಹಾಜರಿಯಲ್ಲಿ ಯಶಸ್ವಿ ಜೈಸ್ವಾಲ್ ಅವರು ರಾಜಸ್ಥಾನ ತಂಡವನ್ನು ಮುನ್ನಡೆಸಿದರು. ಟಾಸ್‌ ಗೆದ್ದ ಜೈಸ್ವಾಲ್‌ ಫೀಲ್ಡಿಂಗ್‌ ಆಯ್ದುಕೊಂಡರು. ಮೊದಲು ಬ್ಯಾಟ್‌ ಮಾಡಿದ ಮಿಚೆಲ್‌ ಮಾರ್ಷ್‌ (96; 57ಎ) ಅವರೂ ಶತಕದ ಹೊಸ್ತಿಲಲ್ಲಿ ಎಡವಿದರು. ಮಾರ್ಷ್‌ ಮತ್ತು ಜೋಶ್‌ ಇಂಗ್ಲಿಸ್ (60; 29ಎ) ಅವರ ಬ್ಯಾಟಿಂಗ್‌ ಬಲದಿಂದ ಲಖನೌ ತಂಡವು 5 ವಿಕೆಟ್‌ಗಳಿಗೆ 220 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ರಾಜಸ್ಥಾನ ತಂಡವು 15ರ ಪೋರ ಸೂರ್ಯವಂಶಿ ಮತ್ತು ಧ್ರುವ ಜುರೇಲ್‌ (ಔಟಾಗದೇ 53;28ಎ) ಅವರ ಉಪಯುಕ್ತ ಆಟದಿಂದಾಗಿ ಐದು ಎಸೆತಗಳು ಬಾಕಿ ಇರುವಂತೆ 3 ವಿಕೆಟ್‌ಗೆ 225 ರನ್‌ ಗಳಿಸಿ ಸಂಭ್ರಮಿಸಿತು.

ಎಡಗೈ ಜೋಡಿ ಯಶಸ್ವಿ ಜೈಸ್ವಾಲ್‌ (43;23ಎ) ಮತ್ತು ಸೂರ್ಯವಂಶಿ ಅವರು ಮೊದಲ ವಿಕೆಟ್‌ಗೆ 75 (39ಎ) ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಮೊದಲ ಓವರ್‌ನಲ್ಲಿ 23 ರನ್‌ ನೀಡಿದ್ದ ಆಕಾಶ್‌ ಸಿಂಗ್‌ ಅವರು ಈ ಜೊತೆಯಾಟವನ್ನು ಮುರಿದರು. ಅರ್ಧಶತಕದತ್ತ ಸಾಗುತ್ತಿದ್ದ ಜೈಸ್ವಾಲ್ ಅವರ ವಿಕೆಟ್‌ ಪಡೆದರು.

ಆರಂಭದಲ್ಲಿ ತಾಳ್ಮೆಯಿಂದ ಆಡಿದ್ದ ಸೂರ್ಯವಂಶಿ ನಂತರ ಅಬ್ಬರಿಸಿದರು. ಧ್ರುವ್‌ ಜುರೇಲ್‌ ಅವರೊಂದಿಗೆ ಎರಡನೇ ವಿಕೆಟ್‌ಗೆ ಬಿರುಸಿನ 105 (45ಎ) ರನ್‌ ಸೇರಿಸಿದರು. ಈ ಆಟಗಾರರು ಮಯಂಕ್‌ ಯಾದವ್‌ ಹಾಕಿದ 12ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ ಸೇರಿದಂತೆ 29 ರನ್‌ ಬಾಚಿದರು. ಸೂರ್ಯವಂಶಿ ಇನಿಂಗ್ಸ್‌ನಲ್ಲಿ 10 ಭರ್ಜರಿ ಸಿಕ್ಸರ್‌ ಮತ್ತು ಏಳು ಬೌಂಡರಿಗಳಿದ್ದವು. ಹಾಲಿ ಆವೃತ್ತಿಯಲ್ಲಿ ಎರಡನೇ ಶತಕದತ್ತ ಮುನ್ನುಗ್ಗುತ್ತಿದ್ದ ಅವರು ಮೊಹ್ಸಿನ್ ಖಾನ್ ಅವರಿಗೆ ವಿಕೆಟ್‌ ಒಪ್ಪಿಸಿದರು.

ನಂತರ ಬಂದ ಲ್ಹುವಾನ್-ಡ್ರೆ ಪ್ರಿಟೋರಿಯಸ್ (7) ಬೇಗನೇ ರನೌಟ್‌ಗೆ ಬಲಿಯಾದರು. ಜುರೇಲ್‌ ಮತ್ತು ಡೊನೊವನ್ ಫೆರೀರಾ (ಔಟಾಗದೇ 16) ತಂಡವನ್ನು ಗೆಲುವಿನ ದಡ ಸೇರಿಸಿದರು.

ಮಾರ್ಚ್‌ ಅಬ್ಬರ: ಇದಕ್ಕೂ ಲಖನೌ ತಂಡವು ಮೊದಲು ಮಾರ್ಷ್ ಮತ್ತು ಇಂಗ್ಲಿಸ್ ಅವರ ಬೀಸಾಟದಿಂದಾಗಿ ಪವರ್‌ಪ್ಲೇ ಓವರ್‌ಗಳಲ್ಲಿ 83 ರನ್‌ ಗಳಿಸಿತು. ಆಸ್ಟ್ರೇಲಿಯಾದ ಈ ಜೋಡಿ ಮೊದಲ ವಿಕೆಟ್ ಜೊತೆಯಾಟದಲ್ಲಿ 109 ರನ್ ಸೇರಿಸಿತು. 9ನೇ ಓವರ್‌ನಲ್ಲಿ ಕರ್ನಾಟಕದ ಯಶ್‌ ರಾಜ್ ಪೂಂಜ ಈ ಜೊತೆಯಾಟವನ್ನು ಮುರಿದರು. ಇಂಗ್ಲಿಸ್ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದರು.

ಈ ಹಂತದಲ್ಲಿ ಮಾರ್ಷ್ ತಮ್ಮ ಆಟದ ವೇಗ ಹೆಚ್ಚಿಸಿದರು. ಪ್ರಸಕ್ತ ಟೂರ್ನಿಯಲ್ಲಿ ಅವರು 90ಕ್ಕಿಂತ ಹೆಚ್ಚು ರನ್ ಗಳಿಸಿದ್ದು ಮೂರನೇ ಬಾರಿ. ಇನ್ನೊಂದು ಬದಿಯಲ್ಲಿ ನಿಕೊಲಸ್ ಪೂರನ್ (16; 11ಎ) ಮತ್ತು ನಾಯಕ ರಿಷಭ್ ಪಂತ್ (35; 23ಎ) ಅವರು ತಮ್ಮ ಕಾಣಿಕೆ ನೀಡಿದರು. ಮಾರ್ಷ್ ಮತ್ತು ಪಂತ್ ಮೂರನೇ ವಿಕೆಟ್ ಜೊತೆಯಾಟದಲ್ಲಿ 64 ರನ್ ಸೇರಿದವು.

ವೇಗಿ ಜೋಫ್ರಾ ಆರ್ಚರ್ (39ಕ್ಕೆ1) ಹಾಗೂ ಯಶ್ ರಾಜ್ ಪೂಂಜ (35ಕ್ಕೆ2) ಯಶಸ್ವಿ ಬೌಲರ್‌ ಎನಿಸಿದರು. ಅದರಲ್ಲೂ ಆರ್ಚರ್ ಅವರು ಜೋಫ್ರಾ ಕೊನೆಯ ಓವರ್‌ನಲ್ಲಿ ನಾಲ್ಕು ಡಾಟ್ ಬಾಲ್‌ ಪ್ರಯೋಗಿಸಿದರು. ಅದೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್ ಅವರ ಚುರುಕಾದ ಫೀಲ್ಡಿಂಗ್‌ನಿಂದಾಗಿ ಮಾರ್ಷ್ ರನೌಟ್ ಆದರು.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್‌ಜೈಂಟ್ಸ್: 20 ಓವರ್‌ಗಳಲ್ಲಿ 5ಕ್ಕೆ220 (ಮಿಚೆಲ್ ಮಾರ್ಷ್ 96, ಜೋಶ್‌ ಇಂಗ್ಲಿಸ್ 60, ರಿಷಭ್ ಪಂತ್ 35; ಯಶ್ ರಾಜ್ ಪೂಂಜ 35ಕ್ಕೆ2). ರಾಜಸ್ಥಾನ ರಾಯಲ್ಸ್‌: 19.1 ಓವರ್‌ಗಳಲ್ಲಿ 3 ವಿಕೆಟ್‌ಗೆ 225 (ಯಶಸ್ವಿ ಜೈಸ್ವಾಲ್‌ 43, ವೈಭವ್‌ ಸೂರ್ಯವಂಶಿ 93, ಧ್ರುವ್‌ ಜುರೇಲ್‌ ಔಟಾಗದೇ 53; ಮೊಹಸಿನ್‌ ಖಾನ್‌ 31ಕ್ಕೆ1, ಆಕಾಶ್‌ ಸಿಂಗ್‌ 54ಕ್ಕೆ1).

ಪಂದ್ಯದ ಆಟಗಾರ: ವೈಭವ್‌ ಸೂರ್ಯವಂಶಿ.

Dailyhunt
Disclaimer: This content has not been generated, created or edited by Dailyhunt. Publisher: Prajavani