ಬೆಂಗಳೂರು: 'ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ತಯಾರಿಕೆ (ಇ.ಎಸ್.ಡಿ.ಎಂ) ವಲಯದ ಬೆಳವಣಿಗೆಗೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ವಿವಿಧ ಸಾಮರ್ಥ್ಯದ ಎಐ ದತ್ತಾಂಶ ಕೇಂದ್ರ (ಡೇಟಾ ಸೆಂಟರ್) ವಲಯಗಳನ್ನು ಅಭಿವೃದ್ಧಿಪಡಿಸಲಾಗುವುದು.
ಈ ಸಂಬಂಧ ಇಂಧನ ಮತ್ತು ಐಟಿ ಸಚಿವರ ಜತೆ ಶೀಘ್ರದಲ್ಲಿ ಸಭೆ ನಡೆಸಲಾಗುವುದು' ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ತಿಳಿಸಿದರು.
ಭವಿಷ್ಯದ ಕೈಗಾರಿಕಾ ಬೆಳವಣಿಗೆ ಗಮನದಲ್ಲಿ ಇಟ್ಟುಕೊಂಡು ಖನಿಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಇ.ಎಸ್.ಡಿ.ಎಂ ಮತ್ತು ಕೋರ್ ಮ್ಯಾನುಫ್ಯಾಕ್ಚರಿಂಗ್ ವಿಷನ್ ಗ್ರೂಪ್‌ಗಳ ಸಭೆಯಲ್ಲಿ ಅವರು ಮಾತನಾಡಿದರು.
'ಮೂರು ರೀತಿಯ ದತ್ತಾಂಶ ಕೇಂದ್ರಗಳಿದ್ದು, 500 ಮೆಗಾವ್ಯಾಟ್ ಮತ್ತು ಅದಕ್ಕಿಂತ ದೊಡ್ಡ ಸಾಮರ್ಥ್ಯದ ದತ್ತಾಂಶ ಕೇಂದ್ರ ಸ್ಥಾಪಿಸಲು ಪೂರಕವಾದ ವಾತಾವರಣ ನಿರ್ಮಿಸಲಾಗುವುದು. ಉದ್ಯಮ ಮಟ್ಟದ ಮಧ್ಯಮ ಸಾಮರ್ಥ ಹಾಗೂ 25ರಿಂದ 200 ಮೆಗಾವ್ಯಾಟ್ ಸಾಮರ್ಥ್ಯದ ದತ್ತಾಂಶ ಕೇಂದ್ರಗಳನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮಾಡುವ ಉದ್ದೇಶವಿದ್ದು ಅದಕ್ಕೆ ಹೂಡಿಕೆ ಸೆಳೆಯುವ ಪ್ರಯತ್ನ ನಡೆದಿದೆ' ಎಂದು ಹೇಳಿದರು.
'ಕರಾವಳಿ ಭಾಗವನ್ನು 500 ಮೆಗಾವ್ಯಾಟ್ ಸಾಮರ್ಥ್ಯದ ಎಐ ಡೇಟಾ ಹಬ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಅಲ್ಲದೆ, ಮಂಗಳೂರಿನಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪನೆ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.
'ಮೂರು ಮತ್ತು ನಾಲ್ಕನೇ ಹಂತದ ನಗರಗಳಲ್ಲಿ ಉನ್ನತ ಮಟ್ಟದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಉದ್ಯಮಿಗಳು ಹೇಳಿದ್ದಾರೆ
ಜೊತೆಗೆ, ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಸೆಮಿಕಂಡಕ್ಟರ್ ಉದ್ಯಮ ಕೇಂದ್ರಿತ ನಗರಗಳಲ್ಲಿರುವ ಉತ್ಕೃಷ್ಟ ವಿಶ್ವವಿದ್ಯಾಲಯಗಳು ನಮ್ಮಲ್ಲೂ ಕ್ಯಾಂಪಸ್ ತೆರೆಯಲು ಅನುವು ಮಾಡಿಕೊಡುವ ಚಿಂತನೆ ನಡೆದಿದೆ' ಎಂದೂ ಪಾಟೀಲ ಅವರುಹೇಳಿದರು.
'ಆಟೊಮೊಟಿವ್ ಕೈಗಾರಿಕೆಗಳು ತಮಗೆ ಬೇಕಾದ ವಿಶೇಷ ದರ್ಜೆಯ ಉಕ್ಕನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಉಕ್ಕನ್ನು ಭಾರತದಲ್ಲೇ ಉತ್ಪಾದಿಸಲು ಬೆಂಬಲದ ಅಗತ್ಯವಿದೆ ಎನ್ನುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಇದನ್ನು ಸದ್ಯದಲ್ಲೇ ಪರಿಶೀಲಿಸಲಾಗುವುದು' ಎಂದು ಅವರು ಹೇಳಿದರು.
ಕೋರ್ ಮ್ಯಾನುಫ್ಯಾಕ್ಚರಿಂಗ್ ವಿಷನ್ ಗ್ರೂಪ್ ಸಭೆಯಲ್ಲಿ ಜಿಂದಾಲ್ ಸ್ಟೀಲ್ ಸಿಇಒ ಜಯಂತ್ ಆಚಾರ್ಯ, ಗುಲ್ಬರ್ಗ ಸಿಮೆಂಟ್‌ನ ಸಿಎಫ್‌ಒ ಅನಿಲ ಶರ್ಮ, ಬಲ್ದೋಟ ಸ್ಟೀಲ್ ಜಂಟಿ ವ್ಯವಸ್ಥಾಪಕ ನಿರ್ದೇಶಕ
ರಾಹುಲ್ ಬಲ್ದೋಟ, ಮುಕುಂದ್ ಸುಮಿ ಮತ್ತು ಕೊಪ್ಪಳದ ಕಲ್ಯಾಣಿ ಸ್ಟೀಲ್ಸ್ ಕಂಪನಿಯ ಪ್ರತಿನಿಧಿಗಳು ಸಭೆಯಲ್ಲಿದ್ದರು.

