ಹರಿಹರ: 'ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಅಡಿಯಲ್ಲಿ ರಾಜ್ಯದಾದ್ಯಂತ 1,000 ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ' ಎಂದು ಮಾಜಿ ಸಚಿವ ಹಾಗೂ ಮುಧೋಳ ವಿಜಯ (ಎಂ.ಆರ್.ಎನ್) ಸೌಹಾರ್ದ ಕ್ರೆಡಿಟ್ ಸಹಕಾರ ಸಂಘದ ಸಂಸ್ಥಾಪಕ ಮುರುಗೇಶ್ ನಿರಾಣಿ ತಿಳಿಸಿದರು.
ನಗರದ ಶಿವಮೊಗ್ಗ ರಸ್ತೆಯ ಗಿರಿಯಮ್ಮ ಕಾಲೇಜು ಬಳಿ ನೂತನವಾಗಿ ಆರಂಭವಾದ ಸಂಘದ 72ನೇ ಶಾಖೆ ಉದ್ಘಾಟಿಸಿದ ಅವರು, 'ರಾಜ್ಯದಾದ್ಯಂತ ಆಯಕಟ್ಟಿನ ಪ್ರದೇಶಗಳಲ್ಲಿ ಸಿಎನ್‌ಜಿ, ಎಥೆನಾಲ್ ಹಾಗೂ ಸಿಬಿಜಿ ಸೌಲಭ್ಯಗಳನ್ನೊಳಗೊಂಡ ಪೆಟ್ರೋಲ್ ಬಂಕ್ ಆರಂ ಭಿಸಲು ಸಿದ್ಧತೆ ನಡೆಸಲಾಗಿದೆ' ಎಂದರು.
'ಬ್ಯಾಂಕಿಂಗ್ ಮೂಲಕ ಹಣಕಾಸು ವ್ಯವಹಾರವನ್ನು ಕಲಿಸಿಕೊಟ್ಟ ದೇಶದ ಪ್ರಥಮ ರಾಜ್ಯ ಕರ್ನಾಟಕ. ಅದೇ ಹಾದಿಯಲ್ಲಿ 2007ರ ನ. 18ರಂದು ಮುಧೋಳದಲ್ಲಿ ಕೇವಲ 400 ಸದಸ್ಯರು ಹಾಗೂ ₹ 10 ಬಂಡವಾಳದೊಂದಿಗೆ ಆರಂಭವಾದ ನಮ್ಮ ಸಂಘವು, ಪ್ರಸ್ತುತ 2 ಲಕ್ಷಕ್ಕೂ ಅಧಿಕ ಸದಸ್ಯರು ಹಾಗೂ ₹ 21.60 ಕೋಟಿ ಷೇರು ಬಂಡವಾಳ ಹೊಂದಿದೆ' ಎಂದು ಹೇಳಿದರು.
'ಸಿಬ್ಬಂದಿ ಹಾಗೂ ಗ್ರಾಹಕರ ಸಹಕಾರದಿಂದ 2025-26ನೇ ಹಣಕಾಸು ಸಾಲಿನಲ್ಲಿ ₹ 65 ಸಾವಿರ ಕೋಟಿ ವಹಿವಾಟು ನಡೆಸುವ ಗುರಿಯೊಂದಿಗೆ ಠೇವಣಿದಾರರ ವಿಶ್ವಾಸ ಗಳಿಸಿದೆ. ನಿಯಮದಂತೆ ಸದಸ್ಯರಿಗೆ ₹ 2,600 ಕೋಟಿ ಸಾಲ ವಿತರಿಸಲಾಗಿದ್ದು, ವಿವಿಧ ಸಂಸ್ಥೆಗಳಲ್ಲಿ ₹ 600 ಕೋಟಿ ಠೇವಣಿ ಇರಿಸಲಾಗಿದೆ' ಎಂದು ಸಂಘದ ಸಾಧನೆಯನ್ನು ವಿವರಿಸಿದರು.
ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಶಾಸಕ ಬಿ.ಪಿ.ಹರೀಶ್, ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮುಖಂಡರಾದ ಎನ್.ಜಿ. ನಾಗನಗೌಡ, ಹೇಮಂತರಾಜ್, ಹನಗವಾಡಿ ವೀರೇಶ್, ಚಂದ್ರಶೇಖರ ಪೂಜಾರ ಮತ್ತಿತರರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260713-43-1554522299

