ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯ ಪರವಾನಗಿ ನೀಡುವಂತೆ ಕೋರಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿದ್ದ ಅರ್ಜಿಯನ್ನು ದಿ ಟಾಟಾ ಪವರ್ ಕಂಪನಿ ಲಿಮಿಟೆಡ್ ವಾಪಸ್ ಪಡೆದಿದೆ.
ಟಾಟಾ ಕಂಪನಿಯ ಅರ್ಜಿಯ ವಿಚಾರಣೆಯನ್ನು ಆಯೋಗವು ಶುಕ್ರವಾರಕ್ಕೆ ನಿಗದಿ ಮಾಡಿತ್ತು.
ಆದರೆ, ವಿಚಾರಣೆ ಆರಂಭವಾಗುವ ಮೊದಲೇ ಅರ್ಜಿಯನ್ನು ವಾಪಸ್ ಪಡೆಯುವುದಾಗಿ ಕಂಪನಿಯ ಪ್ರತಿನಿಧಿಗಳು ತಿಳಿಸಿದರು. ಆಯೋಗವು ಇದಕ್ಕೆ ಸಮ್ಮತಿ ಸೂಚಿಸಿ, ಪ್ರಕರಣವನ್ನು ಇತ್ಯರ್ಥಪಡಿಸಿತು.
ವಿದ್ಯುತ್ ವಿತರಣೆಯ ಖಾಸಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ, ಎಸ್ಕಾಂಗಳು, ರೈತ ಸಂಘಟನೆಗಳು, ವಿವಿಧ ಸಂಘನೆಗಳು ಆಯೋಗಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದವು. ಮೂಲಗಳ ಪ್ರಕಾರ 22 ಲಕ್ಷಕ್ಕೂ ಅಧಿಕ ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿದ್ಯುತ್ ವಿತರಣೆಯನ್ನು ಖಾಸಗೀಕರಣಗೊಳಿಸದೆ ಇರಲು ತೀರ್ಮಾನಿಸಲಾಗಿತ್ತು. ಇದರ ಬೆನ್ನಲ್ಲೇ ಟಾಟಾ ಕಂಪನಿ ಅರ್ಜಿಯನ್ನು ವಾಪಸ್ ಪಡೆದಿದೆ.
ಕ.ವಿ.ಮಂ. ನೌಕರರ ಸಂಘಗಳ ಒಕ್ಕೂಟದ ಅಧ್ಯಕ್ಷ ಕೆ.ಬಲರಾಮ್, ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ರಮೇಶ್ ಅವರು ಅರ್ಜಿ ವಾಪಸ್ ಪಡೆದಿರುವುದನ್ನು ಸ್ವಾಗತಿಸಿದ್ದು, ಹೋರಾಟಕ್ಕೆ ಸಂದ ಜಯ ಎಂದು ಹೇಳಿದ್ದಾರೆ.

