ಕಿರುತೆರೆಯಲ್ಲಿ, ಬೆಳ್ಳಿಪರದೆಯ ಮೇಲೆ 'ರಾಮಾಯಣ'ದ ಕಥೆಯನ್ನು ಈ ಹಿಂದೆ ಹಲವು ಮಾದರಿಯಲ್ಲಿ ಹತ್ತಾರು ಬಾರಿ ನೋಡಿದವರೂ ಅಚ್ಚರಿ ಪಡುವಂಥ ದೃಶ್ಯವೈಭವದ 'ರಾಮಾಯಣ'ವನ್ನು ತೆರೆಗೆ ತರಲು ನಮಿತ್ ಮಲ್ಹೋತ್ರಾ ಹಾಗೂ ಯಶ್ ಸಜ್ಜಾಗಿದ್ದಾರೆ.
ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದ ಮೊದಲ ಭಾಗದ ಟ್ರೇಲರ್ 'ನಮ್ಮ ಸತ್ಯ, ನಮ್ಮ ಇತಿಹಾಸ' ಎನ್ನುವ ಅಡಿಬರಹದೊಂದಿಗೆ ಬಿಡುಗಡೆಯಾಗಿದೆ.
ಇಲ್ಲಿ 'ರಾಮಾಯಣ' ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದ ಮುಖಾಂತರ ಜೀವಪಡೆದಿದೆ. ಈ 'ರಾಮಾಯಣ'ದಲ್ಲಿ 'ರಾವಣ'ನದ್ದೇ ಅಬ್ಬರ ಹೆಚ್ಚಾಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಮುನ್ಸೂಚನೆಯನ್ನೂ ಟ್ರೇಲರ್ ನೀಡಿದೆ. 'ರಾವಣ'ನ ಪ್ರವೇಶದಿಂದಲೇ ಟ್ರೇಲರ್ ಆರಂಭವಾಗಿ 'ರಾವಣ'ನ ಆರ್ಭಟದಿಂದಲೇ ಟ್ರೇಲರ್ ಅಂತ್ಯಗೊಳ್ಳುತ್ತದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾರತೀಯ ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. 2026ರ ದೀಪಾವಳಿಗೆ ಸಿನಿಮಾ ತೆರೆಕಾಣಲಿದೆ.
ನಮಿತ್ ಮಲ್ಹೋತ್ರಾ ಅವರ 'ಪ್ರೈಮ್ ಫೋಕಸ್ ಸ್ಟುಡಿಯೊಸ್' ಹಾಗೂ ಯಶ್ ಅವರ 'ಮಾನ್‌ಸ್ಟರ್‌ಮೈಂಡ್ ಕ್ರಿಯೇಷನ್ಸ್' ಜಂಟಿಯಾಗಿ ಈ ಸಿನಿಮಾ ನಿರ್ಮಿಸಿವೆ. 30 ವರ್ಷಗಳ ಅನುಭವ ಹೊಂದಿರುವ, ಎಂಟು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ವಿಎಫ್‌ಎಕ್ಸ್ ಸ್ಟುಡಿಯೊ 'ಡಿಎನ್‌ಇಜಿ' ಈ ಸಿನಿಮಾದ ವಿಎಫ್‌ಎಕ್ಸ್ ಮಾಡಿದೆ. ಸುಮಾರು ₹4 ಸಾವಿರ ಕೋಟಿ ವೆಚ್ಚದಲ್ಲಿ ಈ ದೃಶ್ಯವೈಭವ ನಿರ್ಮಾಣವಾಗಿದೆ ಎನ್ನಲಾಗಿದೆ. ಸಿನಿಮಾದ ಜಾಗತಿಕ ವಿತರಣೆಯನ್ನು 'ಸೋನಿ ಪಿಕ್ಚರ್ಸ್' ಹಾಗೂ ಉತ್ತರ ಭಾರತದ ವಿತರಣೆಯನ್ನು 'ಧರ್ಮ ಪ್ರೊಡಕ್ಷನ್ಸ್' ಪಡೆದುಕೊಂಡಿದೆ.
'ಅಹಂಕಾರದಿಂದ ಬ್ರಹ್ಮಾಂಡವನ್ನೇ ನಡುಗಿಸುವ ಅಸುರ ಚಕ್ರವರ್ತಿ ರಾವಣನ ವಿರುದ್ಧ ರಾಮನು ನಡೆಸುವ ಧರ್ಮಯುದ್ಧವೇ ಈ ಮಹಾಕಾವ್ಯದ ಜೀವಾಳವಾಗಿದೆ' ಎಂದಿದೆ ಚಿತ್ರತಂಡ.
'ತನಗೆ ಡಾರ್ಕ್ ಪಾತ್ರಗಳೆಂದರೆ ಇಷ್ಟ' ಎಂದು ಈ ಹಿಂದೆ ಯಶ್ ಹೇಳಿಕೊಂಡಿದ್ದರು. ಅದಕ್ಕೆ ಪೂರಕವಾಗಿ 'ರಾವಣ'ನ ಪಾತ್ರ ಕಂಡಿದೆ. ಯಶ್ ತನ್ನ ಇರುವಿಕೆ, ಸಂಭಾಷಣೆ ಹಾಗೂ ಹಾವಭಾವದಿಂದಲೇ 'ರಾವಣ'ನ ಪಾತ್ರಕ್ಕೆ ಜೀವತುಂಬಿದ್ದಾರೆ. ಆ ಗತ್ತು ಟ್ರೇಲರ್‌ನಲ್ಲೇ ಸ್ಪಷ್ಟವಾಗಿ ಕಾಣುತ್ತಿದೆ. ರಣಬೀರ್ ಕಪೂರ್ 'ಶ್ರೀರಾಮ'ನಾಗಿ, 'ಸೀತೆ'ಯಾಗಿ ಸಾಯಿ ಪಲ್ಲವಿ, 'ಲಕ್ಷ್ಮಣ'ನಾಗಿ ರವಿ ದುಬೆ, ಅರುಣ್ ಗೋವಿಲ್ 'ದಶರಥ'ನಾಗಿ, ಶೋಭನಾ 'ಕೈಕಸಿ'ಯಾಗಿ, ಅಜಿಂಕ್ಯ ದೇವ್ 'ವಿಶ್ವಾಮಿತ್ರ'ನಾಗಿ, ಕುನಾಲ್ ಕಪೂರ್ 'ಇಂದ್ರ'ನಾಗಿ ಮತ್ತು ರಾಕುಲ್ ಪ್ರೀತ್ ಸಿಂಗ್ 'ಶೂರ್ಪನಖಿ'ಯಾಗಿ ಕಾಣಿಸಿಕೊಂಡಿದ್ದಾರೆ.
'ಖಾಕಿ', 'ಅಪಹರಣ್', 'ವಾರ್', 'ಪಠಾಣ್' ಮುಂತಾದ ಹಿಟ್ ಸಿನಿಮಾಗಳಿಗೆ ಚಿತ್ರಕಥೆ ಬರೆದ ಶ್ರೀಧರ್ ರಾಘವನ್ 'ರಾಮಾಯಣ'ಕ್ಕೂ ಚಿತ್ರಕಥೆ ಬರೆದಿದ್ದಾರೆ. ಹಾಲಿವುಡ್‌ನ ಹನ್ಸ್ ಜಿಮ್ಮರ್ ಹಾಗೂ ಎ.ಆರ್.ರೆಹಮಾನ್ ಸಂಗೀತ 'ರಾಮಾಯಣ'ದ ಲೋಕಕ್ಕೆ ಹೊಸ ಸ್ಪರ್ಶವನ್ನೇ ನೀಡಿದೆ.
ಕಾಲಾತೀತ ಮೌಲ್ಯಗಳಿಂದಾಗಿ 'ರಾಮಾಯಣ' ಅತ್ಯಂತ ಶ್ರೇಷ್ಠ ಕಥೆಯಾಗಿದೆ. ದೃಶ್ಯವೈಭವದ ಜೊತೆಗೆ ಮಾನವೀಯ ಮೌಲ್ಯಗಳನ್ನು ದಾಟಿಸುವುದು ಸಿನಿಮಾದ ಉದ್ದೇಶ. ಎರಡನೇ ಭಾಗವನ್ನು ನೋಡಲೇಬೇಕು ಎನ್ನುವ ರೀತಿಯಲ್ಲಿ ಮೊದಲ ಭಾಗದ ಕ್ಲೈಮ್ಯಾಕ್ಸ್ ಸೃಷ್ಟಿಸಿದ್ದೇವೆ.
ನಿತೇಶ್ ತಿವಾರಿ, ನಿರ್ದೇಶಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260731-51-1278361638

