ಅಯೋಧ್ಯೆ (ಪಿಟಿಐ): ರಾಮ ಮಂದಿರಕ್ಕೆ ನೀಡಲಾದ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) 'ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್'ನ ಕಳೆದ ಐದು ವರ್ಷಗಳ ಲೆಕ್ಕಪತ್ರಗಳ ಮರು ಪರಿಶೀಲನೆಯನ್ನೂ ನಡೆಸಲಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ತನಿಖೆ ವೇಳೆ ವ್ಯಾಪಕ ಅಕ್ರಮಗಳು ಪತ್ತೆಯಾಗಿರುವ ಕಾರಣ ಟ್ರಸ್ಟ್‌ನಲೆಕ್ಕಪತ್ರಗಳ ಮರು ಪರಿಶೀಲನೆಗೆ ಎಸ್‌ಐಟಿ ಮುಂದಾಗಿದೆ ಎಂದು ಅವು ಹೇಳಿವೆ.
ದೇವಾಲಯ ನಿರ್ಮಾಣಕ್ಕೆ ತಗುಲಿದ ಖರ್ಚು ವೆಚ್ಚಗಳು, ದೇಣಿಗೆಯಾಗಿ ಸ್ವೀಕರಿಸಿದ ಚಿನ್ನ, ಬೆಳ್ಳಿ ವಸ್ತುಗಳು ಮತ್ತು ಆಭರಣಗಳ ಮರುಪರಿಶೀಲನೆ ನಡೆಯಲಿದೆ. ಜತೆಗೆ ಟ್ರಸ್ಟ್‌ನ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಐದು ವರ್ಷಗಳ ದಾಖಲೆಗಳನ್ನು ಪರೀಲಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಅವಿನಾಶ್ ಶುಕ್ಲಾ ವಿಚಾರಣೆ: ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಆರೋಪಿ ಅವಿನಾಶ್ ಶುಕ್ಲಾ ಅವರನ್ನು ನ್ಯಾಯಾಲಯದ ಅನುಮತಿ ಪಡೆದು ಅಯೋಧ್ಯಾ ಪೊಲೀಸರು ಶುಕ್ರವಾರ ವಿಚಾರಣೆ ನಡೆಸಿದರು. ದೇಣಿಗೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಅವಿನಾಶ್ ಶುಕ್ಲಾ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರು.
ಪ್ರಕರಣದಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ನಗದನ್ನು ಶುಕ್ಲಾ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಎಸ್‌ಐಟಿ ಇಲ್ಲಿಯವರೆಗೆ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ಟ್ರಸ್ಟಿ ಅನಿಲ್ ಮಿಶ್ರಾ, ಗೋಪಾಲ್ ರಾವ್ ಅವರ ವಿಚಾರಣೆ ನಡೆಸಿದೆ. ಈ ಪೈಕಿ ರಾಯ್ ಮತ್ತು ಮಿಶ್ರಾ ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಇದೇ 6ರಂದು ನಡೆಯಲಿರುವ ಟ್ರಸ್ಟ್‌ನ ಸಭೆಯಲ್ಲಿ ಈ ಕುರಿತು ನಿರ್ಧಾರ ಆಗುತ್ತದೆ ಎನ್ನಲಾಗಿದೆ.
ಎಷ್ಟೆಷ್ಟು ವಶ?: ಬಂಧಿತ ಆರೋಪಿಗಳಾದ ಶುಕ್ಲಾ ಅವರಿಂದ ₹20.39 ಲಕ್ಷ, ಕರುಣೇಶ್ ಪಾಂಡೆ ಯಿಂದ ₹18.07, ಅನುಕಲ್ಪ್ ಮಿಶ್ರಾ ಅವರಿಂದ ₹16,82 ಲಕ್ಷ, ಲವಕುಶ್ ಮಿಶ್ರಾ ಇಂದ ₹14.25 ಲಕ್ಷ, ರಾಮಾಶಂಕರ್ ಮಿಶ್ರಾ ಅವರಿಂದ ₹7.32 ಲಕ್ಷ ಹಾಗೂ ರಾಮಾಶಂಕರ್ ಯಾದವ್ ಅಲಿಯಾಸ್ ಟಿನ್ನು ಅವರಿಂದ ₹ 1 ಲಕ್ಷ ವಶಕ್ಕೆ ಪಡೆದಿರುವು ದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಅದರ ಜತೆಗೆ 11 ಗ್ರಾಂ ಚಿನ್ನ, 375 ಗ್ರಾಂ ಬೆಳ್ಳಿ, 1,121 ಅಮೆರಿಕನ್ ಡಾಲರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಯೋಧ್ಯೆ ಯೋಗ ಕೇಂದ್ರವೊಂದರಿಂದ 'ರಾಮರಾಜ್ಯ ಕೋಶ' ಎಂದು ನಮೂದಿಸ ಲಾಗಿದ್ದ, 'ಪೇಟಿಎಂ ಕ್ಯೂಆರ್ ಕೋಡ್' ಹೊಂದಿದ್ದ ದೇಣಿಗೆ ಪಟ್ಟಿಯನ್ನೂ ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇಂದ್ರದಲ್ಲಿ ಶುಕ್ಲಾ ಅವರು ದಶಕದಿಂದ ನೆಲೆಸಿ ದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-51-193354868

