ನವದೆಹಲಿ: ಅಯೋಧ್ಯೆ ರಾಮಮಂದಿರ ದೇಣಿಗೆ-ಕಾಣಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿ ಪತ್ರ ಬರೆದು ಒತ್ತಾಯಿಸಿದ್ದಾರೆ.
ಲಕ್ಷಾಂತರ ಭಕ್ತರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೇಣಿಗೆಯಾಗಿ ನೀಡಿದ್ದು, ಕಳ್ಳತನದಿಂದ ಅವರು ನಂಬಿಕೆಗೆ ದ್ರೋಹ ಬಗೆಯಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಶ್ರೀರಾಮ ಜನ್ಮಭೂಮಿ ತೀರ್ಥ ಟ್ರಸ್ಟ್‌ನ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ವತಂತ್ರ ಹಾಗೂ ಸಮಗ್ರ ತನಿಖೆ ನಡೆಸುವಂತೆ ಕೋರಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ಆಗ್ರಹಿಸಲಾಗಿದೆ. ಲಕ್ಷಾಂತರ ಭಕ್ತರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ದೇವಾಲಯ ನಿರ್ಮಾಣಕ್ಕೆ ನೀಡಿದ್ದು, ಕಳ್ಳತನದಿಂದ ಅವರ ನಂಬಿಕೆಗೆ ಗಾಸಿ ಉಂಟಾಗಿದೆ' ಎಂದು ಖರ್ಗೆ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ತಿಳಿಸಿದ್ದಾರೆ.
'ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರವೇ ಟ್ರಸ್ಟ್‌ನ ಸದಸ್ಯರನ್ನು ನೇಮಕಾತಿ ಮಾಡಿದೆ ಎಂದು ಪ್ರಧಾನಿ ಅವರೇ ಸಂಸತ್ತಿಗೆ ತಿಳಿಸಿದ್ದರು. ಟ್ರಸ್ಟ್‌ನ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಪರಿವಾರ ಸಂಘಟನೆಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಸಾರ್ವಜನಿಕರಿಗೂ ತಿಳಿದಿದೆ. ಇಂತಹ ದೊಡ್ಡ ಅಪರಾಧ ನಡೆದಿದ್ದರೂ ಕೂಡ ನಿಮ್ಮ ಮೌನವನ್ನು ಸಹಿಸಲು ಸಾಧ್ಯವಿಲ್ಲ. ಹೊಣೆಗಾರಿಕೆ ಹಾಗೂ ಮರುಪಾವತಿಯಾಗುವಂತೆ ಖಚಿತಪಡಿಸಿಕೊಳ್ಳುವುದು ನಿಮ್ಮ ಕರ್ತವ್ಯವಾಗಿದೆ. ಹೀಗಾಗಿ, ಟ್ರಸ್ಟ್‌ನ ಎಲ್ಲ ಆರ್ಥಿಕ ವ್ಯವಹಾರ ಹಾಗೂ ದೇಣಿಗೆಯಾಗಿ ಸ್ವೀಕರಿಸಿದ ಚಿನ್ನ, ಬೆಳ್ಳಿ, ನಗದು ಕಳವು ಕುರಿತು ಸಮಗ್ರ ತನಿಖೆ ನಡೆಸಬೇಕು' ಎಂದು ಆಗ್ರಹಿಸಿದ್ದಾರೆ.
'ಜವಾಬ್ದಾರಿಯುತರು ಎಂದು ಕಂಡುಬಂದ ಎಲ್ಲರನ್ನೂ ಅವರ ಸ್ಥಾನಮಾನ, ಪ್ರಭಾವ ನೋಡದೆ ಹೊಣೆಗಾರರನ್ನಾಗಿ ಮಾಡಬೇಕು. ನಿಮ್ಮ ಸರ್ಕಾರ ಹಾಗೂ ಟ್ರಸ್ಟ್‌ನ ವಿಶ್ವಾಸರ್ಹತೆಯು ನೀವು ಎಷ್ಟು ಬೇಗ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತೀರಿ ಎಂಬುದರ ಮೇಲೆ ನಿಂತಿದೆ. ಇಡೀ ದೇಶದ ಜನರು ನಿಮ್ಮನ್ನು ಗಮನಿಸುತ್ತಿದ್ದಾರೆ. ಜೈ ಹಿಂದ್' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

