ಚಳ್ಳಕೆರೆ: ತಾಲ್ಲೂಕಿನ ಮೀರಾಸಾಬಿಹಳ್ಳಿಯ ರಾಣಿಕೆರೆಯಿಂದ ಕೆಳ ಭಾಗದಲ್ಲಿರುವ 3 ಚೆಕ್ ಡ್ಯಾಂಗಳಿಗೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅಚ್ಚುಕಟ್ಟು ಪ್ರದೇಶದ ರೈತರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಶಾಸಕ ಟಿ.ರಘುಮೂರ್ತಿ ಅವರು ಸಭೆ ನಡೆಸಿ ಪರಿಹರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಶಾಸಕ ಟಿ.ರಘುಮೂರ್ತಿ ಮಾತನಾಡಿ, 'ಆಗಿನ ಮೈಸೂರಿನ ಮಹಾರಾಜರು ಈ ಭಾಗದ ಜನರ ಮೇಲಿನ ಕಾಳಜಿಯಿಂದ ರಾಣಿಕೆರೆ ನಿರ್ಮಾಣ ಮಾಡಿದ್ದಾರೆ. ಇಲ್ಲಿನ ನೀರನ್ನು ಈ ಭಾಗದ ಅಚ್ಚುಕಟ್ಟುದಾರರು ಉಪಯೋಗಿಸುವ ಹಕ್ಕಿದೆ. ಈಗಾಗಲೇ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಈಗಿರುವ ನೀರಿನ ಪ್ರಮಾಣದಲ್ಲಿ ಒಂದುಕಾಲು ಅಡಿಯಷ್ಟನ್ನು ರಂಗವ್ವನಹಳ್ಳಿ, ವಿಡುಪನಕುಂಟೆ, ವಿಶ್ವೇಶ್ವರಪುರ, ಕರೀಕೆರೆ ಭಾಗದ ಚೆಕ್ ಡ್ಯಾಂಗೆ ಹರಿಸಿದರೆ, ಆ ಭಾಗದ ಜನರಿಗೆ ಅನುಕೂಲವಾಗಲಿದೆ. ಹಂಚಿಕೊಂಡು ಬದುಕಬೇಕಾದ ನಾವೇ ಹೀಗೆ ವಿರೋಧಿಸಿದರೆ ಹೇಗೆ. ಇರುವ ನೀರಿನ ಪ್ರಮಾಣ ಆಧರಿಸಿ ಅವರಿಗೂ ಬಿಡುವುದರಿಂದ ಯಾರಿಗೂ ತೊಂದರೆ ಆಗುವುದಿಲ್ಲ' ಎಂದು ಹೇಳಿ ಅಚ್ಚುಕಟ್ಟು ಪ್ರದೇಶದ ರೈತರ ಮನವೊಲಿಸಿದರು.
'ಜಲಸಂಪನ್ಮೂಲ ಸಚಿವರು ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ವೀಕ್ಷಿಸಲು ಬರಲಿದ್ದು, ಇನ್ನೇನು ಕೆಲವೇ ತಿಂಗಳುಗಳಲ್ಲಿ ಭದ್ರಾ ನೀರು ಬರುತ್ತದೆ' ಎಂದರು.
'ಕೆಲವೇ ತಿಂಗಳಲ್ಲಿ ಜಿಲ್ಲೆಯ ಗೋನೂರಿನ ಕೆರೆಗೆ ಭದ್ರಾ ನೀರು ಹರಿಯಲಿದ್ದು, ಇದರಿಂದ ರಾಣಿಕೆರೆಗೂ ಅನುಕೂಲವಾಗಲಿದೆ. ಅಲ್ಪಸ್ವಲ್ಪ ಕಾಮಗಾರಿ ಬಾಕಿ ಇದ್ದು, ಅದನ್ನು ಪೂರೈಸಿದರೆ ಈ ಭಾಗದ ಜನರಿಗೆ ನೀರಿನ ಸೌಲಭ್ಯ ದೊರಕಿಸಿದಂತಾಗು ತ್ತದೆ. ಆದ್ದರಿಂದ, ರಾಣಿಕೆರೆ ಕೆಳಭಾಗದ ಜನರಿಗೆ ನೀರು ಹರಿಸಿದರೆ, 3 ಚೆಕ್ ಡ್ಯಾಂಗಳು ಭರ್ತಿಯಾದರೆ ಆ ಭಾಗದ ರೈತರು ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ನೀಡಿದ ಪುಣ್ಯ ಸಿಗುತ್ತದೆ' ಎಂದು ಹೇಳಿದರು.
ತೂಬು ಎತ್ತಿ ಹಲವು ವರ್ಷಗಳು ಕಳೆದಿರುವುದರಿಂದ ನೀರು ಹರಿಸುವ ಸಮಯದಲ್ಲಿ ವಿನಾಕಾರಣ ಪೋಲಾಗುವ ಆತಂಕವನ್ನು ಕೆಲ ರೈತರು ವ್ಯಕ್ತಪಡಿಸಿದರು. ಆಗ, ನೀರು ಹರಿಸುವ ಮೊದಲು ಸ್ಥಳಕ್ಕೆ ಭೇಟಿ ನೀಡಿ ನೀರು ವ್ಯರ್ಥ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಕಾಂತರಾಜ್, ತಹಶೀಲ್ದಾರ್ ರೇಹಾನ್ ಪಾಷ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ರವಿಕುಮಾರ್, ಗ್ರಾಮದ ಮುಖಂಡರಾದ ಕೃಷ್ಣಪ್ಪ, ಶೇಖರ್, ಶಿವಲಿಂಗಪ್ಪ, ಕರಿಯಪ್ಪ ಸೇರಿ ಅಚ್ಚುಕಟ್ಟು ಪ್ರದೇಶದ ರೈತರು ಇದ್ದರು.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260705-44-1292266828

