Dailyhunt Logo
  • Light mode
    Follow system
    Dark mode
    • Play Story
    • App Story
ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಫಲವತ್ತತೆ ನಾಶ - ಕೃಷಿ ಇಲಾಖೆ ಎಚ್ಚರಿಕೆ

ರಾಸಾಯನಿಕ ಗೊಬ್ಬರದಿಂದ ಮಣ್ಣಿನ ಫಲವತ್ತತೆ ನಾಶ - ಕೃಷಿ ಇಲಾಖೆ ಎಚ್ಚರಿಕೆ

ಮುಂಡರಗಿ: 'ರಾಸಾಯನಿಕ ಗೊಬ್ಬರಗಳು ಭೂಮಿಯ ಫಲವತ್ತತೆಯನ್ನು ನಿಧಾನವಾಗಿ ನಾಶ ಮಾಡುತ್ತವೆ. ಹೀಗಾಗಿ ರೈತರು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಬೇಕು. ಈ ಕುರಿತು ರೈತ ಉತ್ಪಾದಕ ಕಂಪನಿಗಳು ರೈತರಿಗೆ ತಿಳಿವಳಿಕೆ ಹಾಗೂ ಅಗತ್ಯ ಮಾಹಿತಿ ನೀಡಬೇಕು' ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಶೇಖ್ (ಸಾವಯವ ಕೃಷಿ) ಸಲಹೆ ನೀಡಿದರು.

ತಾಲ್ಲೂಕಿನ ಡಂಬಳ ಗ್ರಾಮದ ಚಂದನವನ ರೈತ ಉತ್ಪಾದಕ ಕಂಪನಿಯ ಕಾರ್ಯಾಲಯಕ್ಕೆ ಈಚೆಗೆ ಭೇಟಿ ನೀಡಿ ಅವರು ಮಾತನಾಡಿದರು.

ಅಧಿಕ ಇಳುವರಿ ಪಡೆದುಕೊಳ್ಳುವ ಉದ್ದೇಶದಿಂದ ಬಹುತೇಕ ರೈತರು ತಮ್ಮ ಬೆಳೆಗಳಿಗೆ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳುಸುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ಕಡೆಮೆಯಾಗುವುದರ ಜೊತೆಗೆ ಬೆಳೆ ಹಾಗೂ ಜೀವ ಸಂಕುಲಕ್ಕೆ ನೆರವು ನೀಡುವ ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಎಂದು ತಿಳಿಸಿದರು.

ಚಂದನವನ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಬಸವರಾಜ ಬೇವಿನಮರದ ಮಾತನಾಡಿ, ಇತ್ತೀಚಿಗೆ ಬೆಂಗಳೂರಿನ ಪ್ರೋ ನೇಚರ್ ಎನ್ನುವ ಪ್ರತಿಷ್ಠಿತ ಸಾವಯವ ಸಂಸ್ಥೆಯು ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಇಲ್ಲಿಯ ರೈತರಿಗೆ ಅನುಕೂಲವಾಗಲಿದೆ. ಸಾವಯವ ಕೃಷಿ ಮಾಡಲು ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಜೀವಾಮೃತ ತಯಾರಿಕೆ, ಹಾಗೂ ವಿವಿಧ ಬಗೆಯ ಸಸ್ಯ ಜನ್ಯ ಕೀಟನಾಶಕಗಳನ್ನು ತಯಾರಿಸಿ ಬಳಸುವ ವಿಧಾನ ಕುರಿತು ರೈತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ನಂತರ ಅಧಿಕಾರಿಗಳು ಗ್ರಾಮದ ಸಿದ್ದಪ್ಪ ಹಾದಿಮನಿ ಇವರ ಜಮೀನಿಗೆ ಭೇಟಿ ನೀಡಿ, ಅಲ್ಲಿ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳನ್ನು ವೀಕ್ಷಿಸಿದರು.

ಹುಬ್ಬಳ್ಳಿಯ ಉಪ ನಿರ್ದೇಶಕ (ಕೆ.ಎಸ್.ಒ.ಸಿ.ಎ), ಜಿಲ್ಲಾ ಕೃಷಿ ಇಲಾಖೆಯ ಜಗದೀಶ ರೆಡ್ಡಿ, ಅನೀಲಕುಮಾರ ಜಾಧವ, ಡಂಬಳ ರೈತ ಸಂಪರ್ಕ ಕೇಂದ್ರದ ನೂತನ ಅಧಿಕಾರಿ ರಮೇಶ ಜತ್ತಿ, ಅಕ್ಕಮಹಾದೇವಿ ಶೆಲವಡಿ, ರಾಕೇಶಗೌಡ ಕದಾಂಪೂರ, ಬಸವರಾಜ ಹಮ್ಮಿಗಿ, ತಿಮ್ಮಣ್ಣ ರಾಟಿ, ಬಸವರಾಜ ಪ್ಯಾಟಿ, ಸಿಇಓ ಬೀರಪ್ಪ ಬಚೇನಳ್ಳಿ, ಗೌರಮ್ಮ ಹಡಗಲಿ, ಮಹಾಂತೇಶ ಬೈಯಮ್ಮನವರ, ದೇವರಾಜ ಕುರಿ, ನವೀನ ಬೇವಿನಮರದ, ಲಕ್ಷ್ಮೀ ರಾಘಣ್ಣವರ, ನಾಗರಾಜ, ದಾವಲಸಾಬ ಸೊರಟೂರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-23-836562804

Dailyhunt
Disclaimer: This content has not been generated, created or edited by Dailyhunt. Publisher: Prajavani