Dailyhunt Logo
  • Light mode
    Follow system
    Dark mode
    • Play Story
    • App Story
ರಾಯಚೂರು: ಮಳೆಯ ಅಬ್ಬರಕ್ಕೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ

ರಾಯಚೂರು: ಮಳೆಯ ಅಬ್ಬರಕ್ಕೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ

ರಾಯಚೂರು: ಜಿಲ್ಲೆಯಲ್ಲಿ ಭಾನುವಾರ ಬೆಳಗಿನ ಜಾವ ಸಾಧಾರಣದಿಂದ ಭಾರಿ ಮಳೆಯಾಗಿದೆ. ಸಿಂಧನೂರು ತಾಲ್ಲೂಕಿನಲ್ಲಿ ತಾತ್ಕಾಲಿಕ ಸೇತುವೆ ಕೊಚ್ಚಿಕೊಂಡು ಹೋಗಿದೆ. ಲಿಂಗಸುಗೂರು ತಾಲ್ಲೂಕಿನಲ್ಲಿ ಹಳ್ಳ ಉಕ್ಕಿ ಹರಿದು ನೆಲಮಟ್ಟದ ಸೇತುವೆಗಳು ಮುಳುಗಿವೆ.

ರಾಯಚೂರು ನಗರದಲ್ಲೂ ಮಳೆಯಾಗಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ 17.4 ಮಿ.ಮೀ ಮಳೆ ದಾಖಲಾಗಿದೆ.

ದೇವದುರ್ಗ, ಮಾನ್ವಿ, ಸಿರವಾರದಲ್ಲೂ ಸಾಧಾರಣ ಮಳೆಯಾಗಿದೆ.

ಸಿಂಧನೂರು ತಾಲ್ಲೂಕಿನ ಚಿರತ್ನಾಳ ಮತ್ತು ಬೊಮ್ಮನಾಳ ಅವಳಿ ‌ಗ್ರಾಮಗಳ ನಡುವೆ ಐದು ವರ್ಷಗಳಿಂದ ಸೇತುವೆ ನಿರ್ಮಾಣ ಕಾಮಗಾರಿ ನಡೆದಿದೆ. ಇದಕ್ಕಾಗಿ ನಿರ್ಮಿಸಿದ ತಾತ್ಕಾಲಿಕ ಸೇತುವೆ ಮಳೆಯ ಅಬ್ಬರಕ್ಕೆ ಕಿತ್ತುಕೊಂಡು ಹೋಗಿದೆ.

ಮಾರುಕಟ್ಟೆ, ಕಚೇರಿಗೆ ಹೋಗುವ ಜನ ಹಾಗೂ ಕಾಲೇಜು ವಿದ್ಯಾರ್ಥಿಗಳು 8 ಕಿ.ಮೀ ದೂರ ಸುತ್ತುವರಿದ ಸಿಂಧನೂರಿಗೆ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮದ ಮುಖಂಡ ಶರಣೇಗೌಡ ತಿಳಿಸಿದ್ದಾರೆ.

ಮಸ್ಕಿ ಪಟ್ಟಣದಲ್ಲಿ ಶನಿವಾರ ರಾತ್ರಿಯಿಡೀ ಸುರಿದ ಮಳೆಗೆ ಬಸವೇಶ್ವರ ನಗರದ ಪ್ರದೇಶದಲ್ಲಿ ನೀರು ಸಂಗ್ರಹವಾಗಿ ಜನ ಹೊರ ಬರಲು ಪರದಾಡಿದರು. ಚರಂಡಿಗಳು ತುಂಬಿ ನೀರು ರಸ್ತೆ ಮೇಲೆ ಹರಿದಿದೆ.ಅನೇಕ ಬಡಾವಣೆಗಳ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನ‌ ಜೀವನ ಅಸ್ತವ್ಯಸ್ತ ಗೊಂಡಿದೆ. ಅಲ್ಲಲ್ಲಿ ವಿದ್ಯುತ್‌ ತಂತಿಗಳು ತಂಡಾಗಿ ಬಿದ್ದಿದ್ದರಿಂದ ಇಡೀ ರಾತ್ರಿ ಪಟ್ಟಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.‌ ಜೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಲ್ಪಿಸಲು ಪ್ರಯತ್ನ ನಡೆಸಿದ್ದಾರೆ.

ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪ ಗುಡದನಾಳ ಹೀರೆಹಳ್ಳ ಉಕ್ಕಿ ಹರಿದು

ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಾಗಿರನಂದಿಹಾಳ ಗ್ರಾಮದ ಬಳಿ ಭರ್ತಿಯಾಗಿ ರಸ್ತೆ ಸಂಪರ್ಕ ಕಡಿದುಕೊಂಡಿದೆ.

ಮುದಗಲ್‌ ಭಾಗದಲ್ಲಿ ಜೋರಾಗಿ ಬಿಸಿದ ಗಾಳಿಗೆ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಹೊಲದಲ್ಲಿನ ಪಪ್ಪಾಯಿ ಗಿಡಗಳು ಉರುಳಿ ಬಿದ್ದಿವೆ.

ಮಂತ್ರಾಲಯದಲ್ಲಿ ಪರದಾಡಿದ ಭಕ್ತರು:

ಮಂತ್ರಾಲಯದಲ್ಲಿ ಶನಿವಾರ ದಿನವಿಡೀ ಬಿಸಿಲು ಹಾಗೂ ಸೆಖೆ ಇತ್ತು. ಹೀಗಾಗಿ ನೂರಾರು ಭಕ್ತರು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪ್ರಾಂಗಣದಲ್ಲಿ ಮಲಗಿದ್ದರು. ಬೆಳಗಿನ ಜಾವ ಮಳೆ ಅಬ್ಬರಿಸಿದರಿಂದ ಭಕ್ತರು ತೊಯ್ದು ತೊಪ್ಪೆಯಾಗಿ ತೊಂದರೆ ಅನುಭವಿಸಿದರು.

ಮಠದ ಶ್ರೀಗಳು ತಕ್ಷಣ ಸ್ಳಳಕ್ಕೆ ಬಂದು ಪಕ್ಕದ ಕಲ್ಯಾಣ ಮಂಟಪದ ಬೀಗ ತೆಗೆಯಿಸಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದರು.

Dailyhunt
Disclaimer: This content has not been generated, created or edited by Dailyhunt. Publisher: Prajavani