Dailyhunt Logo
  • Light mode
    Follow system
    Dark mode
    • Play Story
    • App Story
ರೈಲು ನಿಲುಗಡೆ ಪ್ರಸ್ತಾಪಿಸದ ಸಂಸದ|ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾದ ಆಲೂರು: ಆಕ್ರೋಶ

ರೈಲು ನಿಲುಗಡೆ ಪ್ರಸ್ತಾಪಿಸದ ಸಂಸದ|ಮತ್ತೆ ನಿರ್ಲಕ್ಷ್ಯಕ್ಕೆ ಒಳಗಾದ ಆಲೂರು: ಆಕ್ರೋಶ

ಲೂರು: ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲು ಸಿದ್ಧತೆಗಳು ಆರಂಭವಾಗಿವೆ. ಆದರೆ, ಇದೇ ಮಾರ್ಗದಲ್ಲಿ ಇರುವ, ತಾಲ್ಲೂಕು ಕೇಂದ್ರವಾಗಿರುವ ಆಲೂರಿನಲ್ಲಿ ಮಾತ್ರ ಒಂದೇ ಒಂದು ರೈಲು ನಿಲುಗಡೆ ಆಗುತ್ತಿಲ್ಲ. ಹಾಗಾಗಿ ವಂದೇ ಭಾರತ್‌ ಇರಲಿ, ಮತ್ತೊಂದು ರೈಲು ಇರಲಿ, ನಮಗೇನು ಪ್ರಯೋಜನ ಎಂದು ಇಲ್ಲಿನ ಜನರು ಪ್ರಶ್ನಿಸುತ್ತಿದ್ದಾರೆ.

ಆಗಸ್ಟ್‌ 11 ರಂದು ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿದ ಸಂಸದ ಶ್ರೇಯಸ್ ಎಸ್. ಪಟೇಲ್, ಹಾಸನದ ರೈಲ್ವೆ ಸೌಲಭ್ಯಕ್ಕೆ ಒತ್ತು ನೀಡಿ ಎಂದು ಮನವಿ ಮಾಡಿರುವುದಕ್ಕೆ ಜಿಲ್ಲೆಯ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಆಲೂರು ತಾಲ್ಲೂಕಿನ ಹಲವು ದಶಕಗಳ ಬೇಡಿಕೆಯನ್ನು ಸಚಿವರ ಗಮನಕ್ಕೆ ತಾರದಿರುವುದಕ್ಕೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಸನದಿಂದ ರೈಲಿನಲ್ಲಿ ಸಂಚರಿಸುವ ಪ್ರಯಾಣಿಕರ ಹಿತದೃಷ್ಟಿಯನ್ನು ಮಾತ್ರ ಗಮನದಲ್ಲಿ ಇಟ್ಟುಕೊಂಡಿದ್ದು, ಮೊಸಳೆ ಹೊಸಹಳ್ಳಿಯಲ್ಲಿ ರೈಲು ನಿಲುಗಡೆಗೆ ಮನವಿ ಮಾಡಿದ್ದಾರೆ. ಇದು ಸಂತಸದ ವಿಷಯವಾಗಿದೆ. ಆದರೆ ಆಲೂರು ತಾಲ್ಲೂಕು ಕೇಂದ್ರದಲ್ಲಿ ರೈಲು ಮಾರ್ಗ ಪ್ರಾರಂಭ ಆದಂದಿನಿಂದ (1979 ರಿಂದಲೂ) ಹಾಸನ-ಮಂಗಳೂರು ಮಾರ್ಗವಾಗಿ ಸಂಚರಿಸುತ್ತಿದ್ದ ಎಲ್ಲ ರೈಲುಗಳು ನಿಲುಗಡೆ ಆಗುತ್ತಿದ್ದವು. ಬ್ರಾಡ್‍ಗೇಜ್‍ಗೆ ಪರಿವರ್ತನೆಯಾದ ನಂತರ ರೈಲುಗಳ ನಿಲುಗಡೆಗೆ ಗ್ರಹಣ ಹಿಡಿಯಿತು.

ಈ ಬಗ್ಗೆ ‍ಆಗ ಪ್ರತಿಕ್ರಿಯಿಸಿದ್ದ ಸಂಸದ ಶ್ರೇಯಸ್ ಪಟೇಲ್, 'ಬೆಂಗಳೂರಿನಿಂದ ಹಾಸನಕ್ಕೆ ಹೊರಡುವ ಡೆಮೋ ರೈಲು ಸಂಚಾರವನ್ನು ಸಕಲೇಶಪುರದವರೆಗೆ ವಿಸ್ತರಿಸಲು ಮುಂಬರುವ ಲೋಕಸಭೆ ಅಧಿವೇಶನದಲ್ಲಿ ಮನವಿ ಮಾಡುತ್ತೇನೆ. ರೈಲು ನಿಲುಗಡೆಗೆ ಶ್ರಮಿಸುತ್ತೇನೆ' ಎಂದು ಭರವಸೆ ನೀಡಿದ್ದರು.

ಆದರೆ ಇದೀಗ ರೈಲ್ವೆ ಸಚಿವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಆಲೂರು ತಾಲ್ಲೂಕನ್ನು ಸಂಪೂರ್ಣ ಕಡೆಗಣಿಸಿರುವುದು ಇಲ್ಲಿನ ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಾಲ್ಲೂಕಿನ ಜನರು ಸಂವಿಧಾನಾತ್ಮಕವಾಗಿ ಯಾವುದೆ ಮೂಲಸೌಲಭ್ಯ ಪಡೆದುಕೊಳ್ಳದೇ ಕೇವಲ ಮತದಾರರಾಗಿರಬೇಕೆ ಎಂಬುದು ಜನರ ಪ್ರಶ್ನೆಯಾಗಿದೆ.

ಈ ಕುರಿತು ಸಂಸದರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಆಲೂರು ತಾಲ್ಲೂಕು ಕೇಂದ್ರದ ಮೂಲಕ ಸಂಚರಿಸುವ ಎಲ್ಲ ರೈಲು ನಿಲುಗಡೆ ಆಗಲೇಬೇಕು. ರೈಲುಗಳು ನಿಲುಗಡೆಯಾದರೆ ಆರ್ಥಿಕವಾಗಿ ಹಿಂದುಳಿದಿರುವ ತಾಲ್ಲೂಕು ಮುಂದುವರಿಯುತ್ತದೆ. ರೈತರು, ಜನಸಾಮಾನ್ಯರು, ವಿದ್ಯಾರ್ಥಿಗಳು ಮತ್ತು ವೃದ್ದರು ಹೊರ ಜಿಲ್ಲೆ, ರಾಜ್ಯದಲ್ಲಿ ಉತ್ತಮ ಆರೋಗ್ಯ ಪಡೆಯಲು ಅನುಕೂಲವಾಗುತ್ತದೆ.

ಆರು ತಿಂಗಳು ಏಕೈಕ ರೈಲು ನಿಲುಗಡೆ

2023ರಲ್ಲಿ ಸ್ಥಳೀಯ ರಾಧಮ್ಮ ಜನಸ್ಪಂದನ ವೇದಿಕೆ ಅಧ್ಯಕ್ಷ ಹೇಮಂತಕುಮಾರ್ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಖುದ್ದಾಗಿ ಭೇಟಿ ಮಾಡಿ, ಆಲೂರಿನಲ್ಲಿ ರೈಲು ನಿಲುಗಡೆಗೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾದರು.

ಆಗಿನ ಸಂಸದ ಪ್ರಜ್ವಲ್‌ ರೇವಣ್ಣ ಕೂಡ ಒತ್ತಡ ಹೇರಿದ್ದರಿಂದ ನಾಲ್ಕಾರು ತಿಂಗಳು ಏಕೈಕ ರೈಲಿಗೆ ಇಲ್ಲಿನ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿತ್ತು. ನಂತರ, ಟಿಕೆಟ್ ಹಣ ಸಂಗ್ರಹ ಕಡಿಮೆ ಎಂಬ ಅಧಿಕಾರಿಗಳ ವರದಿಯಿಂದಾಗಿ ಮತ್ತೆ ಸ್ಥಗಿತಗೊಂಡಿದೆ. ಹೇಮಂತಕುಮಾರ್ ಅವರು 15 ಸಾವಿರ ಜನರ ಸಹಿ ಸಂಗ್ರಹ ಮಾಡಿ ಮನವಿ ಅರ್ಪಿಸಿದರೂ ಪ್ರಯೋಜನವಾಗಿಲ್ಲ.

ಟಿಕೆಟ್ ಹಣ ಸಂಗ್ರಹಣದ ಬಗ್ಗೆ ಹೇಮಂತಕುಮಾರ್ ಮಾಹಿತಿ ಹಕ್ಕು ಅಡಿಯಲ್ಲಿ ಉತ್ತರ ಪಡೆದಿದ್ದು, ಯಶವಂತಪುರ-ಕಾರವಾರ ರೈಲು ಆಲೂರು ಮೂಲಕ ಸಂಚರಿಸುವ ಸಂದರ್ಭದಲ್ಲಿ, ಜಿಲ್ಲೆಯ ಇತರೆ ರೈಲು ನಿಲ್ದಾಣಗಳಿಗಿಂತ ಆಲೂರು ರೈಲು ನಿಲ್ದಾಣದಲ್ಲಿ ಟಿಕೆಟ್‌ ಹಣ ಇಮ್ಮಡಿಯಾಗಿ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ.

ಅನುಕೂಲ ಕಲ್ಪಿಸಿ

ರೈಲು ನಿಲುಗಡೆ ಕಲ್ಪಿಸಿದಲ್ಲಿ ನನ್ನಂಥ ಕ್ರೀಡಾಪಟುಗಳ ಬೆಳವ ಣಿಗೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರಾಜ್ಯದಲ್ಲಿರುವ ತಾಲ್ಲೂಕುಗಳಲ್ಲಿ ಆಲೂರು ನತದೃಷ್ಟ ತಾಲ್ಲೂಕಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ. ಸಂಸದರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು.

ಸಿ.ಜೆ. ಭವ್ಯಾ, ಕ್ರೀಡಾಪಟು

ರೈಲು ನಿಲುಗಡೆ ಕಲ್ಪಿಸಿದಲ್ಲಿ ನನ್ನಂಥ ಕ್ರೀಡಾಪಟುಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರಾಜ್ಯದಲ್ಲಿರುವ ತಾಲ್ಲೂಕುಗಳಲ್ಲಿ ಆಲೂರು ನತದೃಷ್ಟ ತಾಲ್ಲೂಕಾಗಿ ಉಳಿಯುವುದರಲ್ಲಿ ಅನುಮಾನವಿಲ್ಲ. ಸಂಸದರು ಕೂಡಲೇ ಕಾರ್ಯ ಪ್ರವೃತ್ತರಾಗಬೇಕು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260814-36-2133939435

Dailyhunt
Disclaimer: This content has not been generated, created or edited by Dailyhunt. Publisher: Prajavani