ಹೊಳೆನರಸೀಪುರ: ಹೊಳೆನರಸೀಪುರ-ಸೂರನಹಳ್ಳಿ ಮಾರ್ಗದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಹಿನ್ನೆಲೆಯಲ್ಲಿ ನಿರ್ಮಿಸಿದ್ದ ಸರ್ವೀಸ್ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಹಾಸನಕ್ಕೆ ಹೋಗುವ ಮಾರ್ಗದಲ್ಲಿ ಚೆನ್ನಾಂಬಿಕ ವೃತ್ತದ ಸಮೀಪ ಇದ್ದ ರೈಲ್ವೆ ಗೇಟ್ ನಿಂದ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆ ಆಗಿತ್ತು.
ಶಾಸಕ ರೇವಣ್ಣ ಅವರ ಪ್ರಯತ್ನದಿಂದ ಇಲ್ಲೊಂದು ರೈಲ್ವೆ ಮೇಲ್ಸೇತುವೆ ನಿರ್ಮಾಣವಾಗಿ ಹಾಸನಕ್ಕೆ ಹೋಗುವ ವಾಹನಗಳು ಈಗ ಮೇಲ್ಸೇತುವೆ ಮೇಲೆಯೇ ಓಡಾಡುತ್ತಿದೆ. ಇದೇ ಸಂದರ್ಭದಲ್ಲಿ ಸೂರನಹಳ್ಳಿ ಮಾರ್ಗದಲ್ಲಿ ಇದ್ದ ರೈಲ್ವೆ ಗೇಟಿನಿಂದ ವಾಹನಗಳ ಸವಾರರಿಗೆ ತೀವ್ರ ತೊಂದರೆ ಆಗುತ್ತಿದ್ದು ಇಲ್ಲೂ ಒಂದು ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಒಂದು ಸರ್ವಿಸ್ ರಸ್ತೆ ನಿರ್ಮಿಸಿ ಸಾರ್ವಜನಿಕರ ವಾಹನಗಳ ಸಾರಿಗೆ ಸಂಸ್ಥೆ ಬಸ್‍ಗಳು ಓಡಾಟಕ್ಕೆ ಸರ್ವಿಸ್ ರಸ್ತೆ ನಿರ್ಮಿಸಿಕೊಟ್ಟಿದ್ದರು. ಕೆಲವು ತಿಂಗಳ ಹಿಂದೆ ಆರಂಭಿಸಲಾದ ಕಾಮಗಾರಿ ನೆನಗುದಿಗೆ ಬಿದ್ದಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ತಕ್ಷಣ ರಸ್ತೆಯನ್ನು ಸರಿಪಡಿಸದಿದ್ದರೆ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ವರ್ತಕ ಎಚ್.ಎಸ್. ಸತ್ಯನಾರಾಯಣ ತಿಳಿಸಿದ್ದಾರೆ. ರೈಲ್ವೆ ಮೇಲ್ಸೇತುವೆ ಕಾಮಗಾರಿ ನಿರ್ಮಿಸುವ ಮುನ್ನ ಸರ್ವೀಸ್ ರಸ್ತೆ ಸರಿಪಡಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಂಡಿ ಎಂದು ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಸಿ.ಆರ್. ಮಂಜುನಾಥ್ ಆಗ್ರಹಿಸಿದ್ದಾರೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260704-36-1165210446

