ಲಕ್ನೋ: ಪ್ರತಿಭಟನಾನಿರತ ರೈತರ ಮೇಲೆ ಹರಿಯಾಣ ಮತ್ತು ದೆಹಲಿ ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿ ಬಳಸಿರುವುದಕ್ಕೆ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಶನಿವಾರ ಮಾತನಾಡಿರುವ ಅವರು, 'ಬಿಜೆಪಿಯನ್ನು ಹೊರತುಪಡಿಸಿ ಬೇರೆ ಯಾವ ಪಕ್ಷವೂ ರೈತರ ಜೊತೆ ಈ ರೀತಿಯಾಗಿ ನಡೆದುಕೊಂಡಿಲ್ಲ. ಸಾಲ ಮನ್ನಾ ಮಾಡುವುದು ಮಾತ್ರವಲ್ಲದೆ ರೈತರ ಆದಾಯವನ್ನು ದ್ವಿಗುಣಗೊಳಿಸುವಂತಹ ನೀತಿಗಳನ್ನು ತರುತ್ತೇವೆ ಎಂಬುದಾಗಿ ಈ ಹಿಂದೆ ಬಿಜೆಪಿಯವರೇ ಹೇಳಿದ್ದರು. ಇಂದು ಅವರೇ ರೈತರ ಜೊತೆ ಈ ರೀತಿಯಾಗಿ ವರ್ತಿಸುತ್ತಿದ್ದಾರೆ' ಎಂದು ಹರಿಹಾಯ್ದಿದ್ದಾರೆ.
ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘು ಗೇಟ್‌ನಲ್ಲೂ ಶುಕ್ರವಾರ ಸಂಘರ್ಷ ಉಂಟಾಗಿತ್ತು. ಎರಡೂ ಕಡೆ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿ ಬಳಸಿದ್ದರು. ಪೊಲೀಸರು ನಡೆಸಿದ್ದ ಲಾಠಿ ಪ್ರಹಾರದಲ್ಲಿ ಹಲವು ರೈತರು ಗಾಯಗೊಂಡಿದ್ದರು.

