ರೈತ ಮುಖಂಡರು- ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ಬಳಿಕ ಸಚಿವ ಸತೀಶ ಜಾರಕಿಹೊಳಿ ಹೇಳಿಕೆ
ಪ್ರಜಾವಾಣಿ ವಾರ್ತೆ
ಬೆಳಗಾವಿ: 'ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ರೈತ ಮುಖಂಡರ ನಡುವೆ ಮಂಗಳವಾರ ನಡೆಸಿದ ಸಂಧಾನ ಸಭೆಯಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಆಗಿಲ್ಲ.
ಆದರೆ, ಇಬ್ಬರಿಗೂ ಅನುಕೂಲ ಆಗುವಂಥ ಸಲಹೆಗಳನ್ನು ನೀಡಿದ್ದೇನೆ. ಬುಧವಾರ ಮಧ್ಯಾಹ್ನ 1 ಗಂಟೆಯವರೆಗೂ ಕಾರ್ಖಾನೆಗಳು ಸಮಯ ಕೇಳಿವೆ. ಸುಖಾಂತ ಆಗುವ ಆಶಯ ಇದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ತಡರಾತ್ರಿವರೆಗೂ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರಿಗೆ ಅವರು ಮಾಹಿತಿ ನೀಡಿದರು.
'ದರ ಹೊಂದಾಣಿಕೆ ಆಗುತ್ತಿಲ್ಲ. ಇಡೀ ದಿನ ಸಭೆ ನಡೆಸಿದ್ದೇನೆ. ರೈತರೂ ಸಂಕಷ್ಟಲ್ಲಿದ್ದಾರೆ. ಕಾರ್ಖಾನೆಗಳಿಗೂ ಸಹಕಾರ ಆಗಬೇಕು. ಇಬ್ಬರ ನಡುವೆ ಒಂದು ಸಾವಿರ ರೂಪಾಯಿಯ ವ್ಯತ್ಯಾಸ ಬಂದಿದೆ. ಎಲ್ಲದಕ್ಕೂ ನಾಳೆ ಮಧ್ಯಾಹ್ನದವರೆಗೆ ಕಾಯಬೇಕಿದೆ' ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, 'ಟನ್ ಕಬ್ಬಿಗೆ ಮೊದಲ ಕಂತಿನಲ್ಲಿ ₹3,500 ದರ ಕೊಡುತ್ತೇವೆ, ಸಕ್ಕರೆ ದರ ₹50ಕ್ಕೆ ಏರಿದರೆ ಎರಡನೇ ಕಂತಿನಲ್ಲಿ ₹350ರಿಂದ ₹500 ಕೊಡುತ್ತೇವೆ. ಒಟ್ಟು ₹4,000 ದರ ನೀಡಲು ನಮ್ಮಿಂದ ಸಾಧ್ಯ ಎಂದು ಸಕ್ಕರೆ ಕಾರ್ಖಾನೆಗಳು ಭರವಸೆ ನೀಡಿವೆ. ಆದರೆ, ಇದನ್ನು ನಾವು ಒಪ್ಪುವುದಿಲ್ಲ' ಎಂದರು.
'ಈಗಾಗಲೇ ಸಕ್ಕರೆ ದರ ಮಾರುಕಟ್ಟೆಯಲ್ಲಿ ₹50ಕ್ಕೂ ಹೆಚ್ಚಿದೆ. ₹31 ಇದ್ದಾಗ ಕಬ್ಬಿಗೆ ₹3,500 ಕೊಡಲಾಗಿದೆ. ಹಾಗಿದ್ದ ಮೇಲೆ ಈಗ ₹4,000 ಮೊದಲ ಕಂತಿನಲ್ಲಿ ಕೊಡಬೇಕು. ಎರಡನೇ ಕಂತಿನಲ್ಲಿ ಸಕ್ಕರೆ ದರ ಆಧರಿಸಿ ಹೆಚ್ಚುವರಿ ದರ ಕೊಡಬೇಕು' ಎಂದೂ ಹೇಳಿದರು.
'ಕೇಂದ್ರ ಸರ್ಕಾರದ ವಿರುದ್ಧ ಹೆದ್ದಾರಿ ತಡೆದಾಗ ಇಲ್ಲದ ನಿಷೇಧಾಜ್ಞೆ, ರಾಜ್ಯ ಸರ್ಕಾರವನ್ನು ಪ್ರಶ್ನಿಸಿದಾಗ ಜಾರಿಯಾಗುವುದೇಕೆ? ಕಬ್ಬಿಗೆ ಬೆಲೆ ಕೇಳುವ ರೈತರ ವಿಚಾರದಲ್ಲಿ ರಾಜಕಾರಣ ಮಾಡಬೇಡಿ. ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ, ಸರ್ಕಾರದ ಪಾಲನ್ನೂ ಘೋಷಿಸಿ' ಎಂದು ಶಶಿಕಾಂತ ಪಡಸಲಗಿ ಒತ್ತಾಯಿಸಿದರು.
'ಕಾರ್ಖಾನೆಗಳು ಪ್ರತಿ ಟನ್‌ಗೆ ₹4,500 ಹಾಗೂ ರಾಜ್ಯ ಸರ್ಕಾರ ₹1,000 ಸೇರಿಸಿ ಒಟ್ಟು ₹5,500 ನೀಡಬೇಕು' ಎಂಬ ಬೇಡಿಕೆಯನ್ನು ಪುನರುಚ್ಚರಿಸಿದರು.
'ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು' ಎಂದೂ ಆಗ್ರಹಿಸಿದರು.
'ಕೇಂದ್ರದ ವಿರುದ್ಧದ ಹೋರಾಟದಲ್ಲಿ 48 ಗಂಟೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿದಾಗ ನಿಷೇಧಾಜ್ಞೆ ಇರಲಿಲ್ಲ. ರಾಜ್ಯ ಸರ್ಕಾರದಿಂದ ಹೆಚ್ಚುವರಿ ಹಣ ಕೇಳಿದಾಗ ಮಾತ್ರ ಸೆಕ್ಷನ್‌ಗಳ ಪ್ರಸ್ತಾಪ ಬರುತ್ತದೆ. ಈ ತಾರತಮ್ಯ ಏಕೆ?' ಎಂದು ಪ್ರಶ್ನಿಸಿದ ಅವರು, ಹೋರಾಟವನ್ನು ನಿಯಂತ್ರಿಸಲು ನಿಷೇಧಾಜ್ಞೆ ಬಳಸಲಾಗುತ್ತಿದೆ' ಎಂದು ಆರೋಪಿಸಿದರು.

