ನಟಿ ರಶ್ಮಿಕಾ ಮಂದಣ್ಣ ಅವರನ್ನು ಬೆಂಬಲಿಸಿ, ಅವರ ಹಿಂದಿ ಉಚ್ಚಾರಣೆಯ ಬಗ್ಗೆ ವ್ಯಕ್ತವಾದ ಟೀಕೆಗಳ ವಿರುದ್ಧ ಪೋಸ್ಟ್ ಹಂಚಿಕೊಂಡಿದ್ದ ಬಾಲಿವುಡ್ ಹಿರಿಯ ಗೀತ ರಚನೆಕಾರ ಜಾವೇದ್ ಅಖ್ತರ್ ಅವರು, ರಶ್ಮಿಕಾ ಅವರನ್ನು 'ತಮಿಳು ನಟಿ' ಎಂದಿದ್ದರು.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ರಶ್ಮಿಕಾ ಅವರನ್ನು 'ತಮಿಳು ನಟಿ' ಎಂದು ತಪ್ಪಾಗಿ ಹೇಳಿದ್ದಕ್ಕೆ ಈಗ ಕ್ಷಮೆ ಕೇಳಿರುವ ಜಾವೇದ್ ಅವರು, 'ಕ್ಷಮಿಸಿ ನನಗೆ ಅವರ ಬಗ್ಗೆ ವೈಯಕ್ತಿಕವಾಗಿ ತಿಳಿದಿಲ್ಲ. ಅವರನ್ನು ತಮಿಳು ಸಿನಿಮಾದಲ್ಲಿ ನೋಡಿದ್ದೆ' ಎಂದು ವಿವರಣೆ ನೀಡಿದ್ದಾರೆ.
ಏನಿದು ಚರ್ಚೆ?
ನಟಿ ರಶ್ಮಿಕಾ ಮಂದಣ್ಣ ಅವರು, ಇತ್ತೀಚಿಗೆ ಬಾಲಿವುಡ್ ನಟ ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಭಾಗಿಯಾಗಿದ್ದರು. ಈ ವೇಳೆ ಅವರ ಹಿಂದಿ ಉಚ್ಚಾರಣೆಯ ಬಗ್ಗೆ ನೆಟ್ಟಿಗರಿಂದ ಟೀಕೆಗಳು ವ್ಯಕ್ತವಾಗಿದ್ದವು.
ಈ ಟೀಕೆಗಳ ವಿರುದ್ಧವಾಗಿ, ರಶ್ಮಿಕಾ ಪರವಾಗಿ ಜಾವೇದ್ ಅಖ್ತರ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದರು.
ಅದರಲ್ಲಿ, 'ತಮಿಳು ನಟಿ ರಶ್ಮಿಕಾ ಅವರ ಉಚ್ಚಾರಣೆಯ ಬಗ್ಗೆ ಯಾರಿಗೆ ಸಮಸ್ಯೆ ಇದೆಯೋ, ಅವರಿಗೆ ಜಗತ್ತಿನ ಅತ್ಯಂತ ಹಳೆಯ ಆಡುಭಾಷೆಯಾದ ತಮಿಳಿನ ಕೆಲವು ಸಾಲುಗಳನ್ನು ಓದಲು ನೀಡೋಣ; ಆಗ ಅವರು ತಮಿಳನ್ನು ಎಷ್ಟು ಚೆನ್ನಾಗಿ ಉಚ್ಚರಿಸುತ್ತಾರೆ ಎಂದು ನೋಡೋಣ. ಇಂತಹ ನಕಲಿ ಭಾಷಾ ಶ್ರೇಷ್ಠತೆಯ ಭಾವನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ' ಎಂದಿದ್ದರು.
ಸದ್ಯ ತಮಿಳು, ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರಶ್ಮಿಕಾ, ಮೂಲತಃ ಕೊಡವ ಸಮುದಾಯದವರು ಮತ್ತು ಕನ್ನಡದಲ್ಲಿ ನಟಿಸಿದ್ದವರು. ಹೀಗಾಗಿ ಜಾವೇದ್ ಅವರ ಈ ಪೋಸ್ಟ್ ಕಂಡು ನೆಟ್ಟಿಗರು ಗರಂ ಆಗಿ, ಜಾವೇದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಕೆಲವರಂತೂ ಕಮೆಂಟ್ ಬಾಕ್ಸ್‌ನಲ್ಲಿ ಜಾವೇದ್ ಅವರಿಗೆ ನೇರವಾಗಿ ಟಾಂಗ್ ನೀಡಿದ್ದರು.
ಬಳಕೆದಾರರೊಬ್ಬರು, 'ದಕ್ಷಿಣ ಭಾರತದಲ್ಲಿರುವವರೆಲ್ಲರೂ 'ಮದ್ರಾಸಿ'ಗಳು, ಅವರೆಲ್ಲರೂ ತಮಿಳು ಮಾತನಾಡುತ್ತಾರೆ ಎಂದು ನೀವು ಭಾವಿಸುವುದನ್ನು ನೋಡಿದರೆ, ನೀವೂ ಆ ಜನರಷ್ಟೇ ಮೂರ್ಖರು ಎಂದು ಹೇಳಬಹುದು. ರಶ್ಮಿಕಾ ಅವರು ಕರ್ನಾಟಕದ ಕೊಡವ ಜನಾಂಗಕ್ಕೆ ಸೇರಿದವರು; ಅವರು ಕೊಡವ ಮತ್ತು ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ' ಎಂದು ತಿವಿದಿದ್ದರು.
ಕ್ಷಮೆಯಾಚನೆ
ನೆಟ್ಟಿಗರ ಈ ಕಮೆಂಟ್‌ಗಳಿಂದ ಎಚ್ಚೆತ್ತ ಜಾವೇದ್ ಅಖ್ತರ್, ಕೂಡಲೇ ಕ್ಷಮೆಯಾಚಿಸಿದ್ದಾರೆ.
'ಕ್ಷಮಿಸಿ, ನನ್ನಿಂದ ತಪ್ಪಾಗಿದೆ. ನನಗೆ ವೈಯಕ್ತಿಕವಾಗಿ ಆಕೆಯ ಪರಿಚಯವಿಲ್ಲ. ಆಕೆ ನಟಿಸಿದ್ದ ಸಿನಿಮಾಗಳಲ್ಲಿ ನಾನು ನೋಡಿರುವ ಏಕೈಕ ಸಿನಿಮಾ ತಮಿಳು ಭಾಷೆಯದ್ದು. ಆದರೆ ಇಲ್ಲಿ ತಮಿಳು, ತೆಲುಗು, ಮಲಯಾಳಂ ಅಥವಾ ಕನ್ನಡ ಎಂಬುದು ಮುಖ್ಯವಲ್ಲ. ಯಾರಾದರೂ ನಮ್ಮ ಭಾಷೆಯನ್ನು ಮಾತನಾಡಿದಾಗ, ಅದು ಒಂದು ನಿರ್ದಿಷ್ಟ ಉಚ್ಚಾರಣಾ ಶೈಲಿಯಲ್ಲಿ ಇದ್ದರೂ, ನಾವು ಅದನ್ನು ಮೆಚ್ಚಿಕೊಳ್ಳಬೇಕು. ಹಾಗೆ ನೋಡಿದರೆ, ನಮ್ಮಲ್ಲಿ ಎಷ್ಟು ಜನ ಇಂಗ್ಲಿಷ್ ಅನ್ನು ಸರಿಯಾಗಿ ಉಚ್ಚರಿಸುತ್ತಾರೆ? ಒಂದು ವೇಳೆ ಇಂಗ್ಲಿಷ್ ವ್ಯಕ್ತಿಯೊಬ್ಬರು ನಮ್ಮನ್ನು ನೋಡಿ ಅಪಹಾಸ್ಯ ಮಾಡಿದರೆ ನಮಗೆ ಹೇಗೆ ಅನಿಸುತ್ತದೆ' ಎಂದು ಪ್ರಶ್ನಿಸಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಟನೆಯ 'ರಣಬಾಲಿ' ಚಿತ್ರ ಇತ್ತೀಚೆಗೆ ತೆರೆಕಂಡಿದ್ದು, ಈವರೆಗೆ, ₹73 ಕೋಟಿ ಗಳಿಸಿದೆ.

