Dailyhunt Logo
  • Light mode
    Follow system
    Dark mode
    • Play Story
    • App Story
Retail inflation: ಚಿಲ್ಲರೆ ಹಣದುಬ್ಬರ ಏರಿಕೆ

Retail inflation: ಚಿಲ್ಲರೆ ಹಣದುಬ್ಬರ ಏರಿಕೆ

ವದೆಹಲಿ: ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಚಿಲ್ಲರೆ ಹಣದುಬ್ಬರವು ಫೆಬ್ರುವರಿ ತಿಂಗಳಿನಲ್ಲಿ ಶೇ 3.21ಕ್ಕೆ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯ (ಎನ್‌ಎಸ್‌ಒ) ಗುರುವಾರ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು ಹೇಳಿವೆ.

ಜನವರಿಯಲ್ಲಿ ಚಿಲ್ಲರೆ ಹಣದುಬ್ಬರವು ಶೇ 2.74ರಷ್ಟಿತ್ತು. ಆಹಾರ ಪದಾರ್ಥಗಳ ಬೆಲೆ ಏರಿಕೆಯು ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರದ ಪ್ರಮಾಣವು ಶೇ 4ರ ಹಂತದಲ್ಲಿ ಇರಬೇಕು ಎಂಬುದು ಕೇಂದ್ರ ಸರ್ಕಾರವು ಆರ್‌ಬಿಐಗೆ ನಿಗದಿ ಮಾಡಿರುವ ಗುರಿ.

ಜನವರಿಯಿಂದ ಚಿಲ್ಲರೆ ಹಣದುಬ್ಬರ ಅಳೆಯಲು 2024ನೇ ಇಸವಿಯನ್ನು ಮೂಲ ವರ್ಷವನ್ನಾಗಿ ಇರಿಸಿಕೊಳ್ಳಲಾಗಿದೆ.

ಜನವರಿಯಲ್ಲಿ ಆಹಾರ ಪದಾರ್ಥಗಳ ಬೆಲೆ ಏರಿಕೆ ಪ್ರಮಾಣ ಶೇ 2.13ರಷ್ಟಿತ್ತು. ಅದು ಫೆಬ್ರುವರಿಯಲ್ಲಿ ಶೇ 3.47ಕ್ಕೆ ಹೆಚ್ಚಳವಾಗಿದೆ.

ಚಿನ್ನ, ಬೆಳ್ಳಿ, ವಜ್ರ, ಪ್ಲಾಟಿನಂ ಆಭರಣಗಳು, ಕೊಬ್ಬರಿ, ಟೊಮೆಟೊ ಮತ್ತು ಹೂಕೋಸು ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳುಳ್ಳಿ, ಈರುಳ್ಳಿ, ಆಲೂಗೆಡ್ಡೆ, ಲಿಚಿ ಹಣ್ಣು ಬೆಲೆಯಲ್ಲಿ ಇಳಿಕೆಯಾಗಿದೆ.

ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಚಿಲ್ಲರೆ ಹಣದುಬ್ಬರವು ಕ್ರಮವಾಗಿ ಶೇ 3.37ರಷ್ಟು ಮತ್ತು ಶೇ 3.02ರಷ್ಟಿದೆ. ತೆಲಂಗಾಣದಲ್ಲಿ ಹಣದುಬ್ಬರ ಅತಿ ಹೆಚ್ಚು (ಶೇ 5.02ರಷ್ಟು) ಆಗಿದೆ, ಮಿಜೋರಾಂನಲ್ಲಿ ಅತಿ ಕಡಿಮೆ (ಶೇ 0.1ರಷ್ಟು) ಇದೆ ಎಂದು ತಿಳಿಸಿದೆ.‌

'ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟು ದೀರ್ಘಾವಧಿಗೆ ಮುಂದುವರಿದರೆ ಹಣದುಬ್ಬರದ ಮೇಲೆ ಪರಿಣಾಮ ಉಂಟಾಗಬಹುದು' ಎಂದು ಐಸಿಆರ್‌ಎನ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಅನಿಶ್ಚಿತತೆಯಿಂದ ಮುಂದಿನ ಬಾರಿ ರೆಪೊ ದರ ವಿಚಾರದಲ್ಲಿ ಆರ್‌ಬಿಐನ ಹಣಕಾಸು ನೀತಿ ಸಮಿತಿಯು ತಟಸ್ಥ ನಿಲುವು ಅನುಸರಿಸಬಹುದು ಎಂದು ಹೇಳಿದ್ದಾರೆ. ಏಪ್ರಿಲ್‌ 6ರಿಂದ 8ರವರೆಗೆ ಆರ್‌ಬಿಐನ ಹಣಕಾಸು ನೀತಿ ಸಮಿತಿಯ ಸಭೆ ನಡೆಯಲಿದೆ.

'ಆಹಾರೇತರ ಪದಾರ್ಥಗಳು, ಇಂಧನ, ಲೋಹದ ಬೆಲೆ ಹೆಚ್ಚಳ ಸಹ ಹಣದುಬ್ಬರ ಏರಿಕೆಗೆ ಕಾರಣವಾಗಿವೆ' ಎಂದು ನೈಟ್‌ ಫ್ರಾಂಕ್‌ ಇಂಡಿಯಾದ ಸಂಶೋಧನಾ ವಿಭಾಗದ ರಾಷ್ಟ್ರೀಯ ನಿರ್ದೇಶಕ ವಿವೇಕ್ ರಥಿ ಹೇಳಿದ್ದಾರೆ.

- ಐಸಿಆರ್‌ಎಕಚ್ಚಾ ತೈಲದ ಬೆಲೆಯಲ್ಲಿನ ಶೇ 10ರಷ್ಟು ಹೆಚ್ಚಳದಿಂದ ಚಿಲ್ಲರೆ ಹಣದುಬ್ಬರವು ಶೇ 0.40ರಿಂದ ಶೇ 0.60ರಷ್ಟು ಏರಿಕೆ ಆಗಲಿದೆ.
Dailyhunt
Disclaimer: This content has not been generated, created or edited by Dailyhunt. Publisher: Prajavani