ಸಾಗರ: 'ಎರಡು ವರ್ಷಗಳಿಂದ ತಾಲ್ಲೂಕಿನ ಅಡಿಕೆ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರದ ವಿಷಯದಲ್ಲಿ ತೀರಾ ಅನ್ಯಾಯವಾಗುತ್ತಿದೆ. ಇದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರ ನಿಷ್ಕ್ರಿಯತೆಯೇ ಕಾರಣ' ಎಂದು ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದರು.
'2023-24, 2024-25ರಲ್ಲಿ ತಾಲ್ಲೂಕಿನಲ್ಲಿ 3,500 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗಿದ್ದು, ಲಿಂಗನಮಕ್ಕಿ ಅಣೆಕಟ್ಟು ಭರ್ತಿಯಾಗಿ 25 ಟಿಎಂಸಿ ಅಡಿಗಿಂತ ಹೆಚ್ಚಿನ ಪ್ರಮಾಣದ ನೀರು ಸಮುದ್ರ ಸೇರಿದೆ.
ಆದರೆ, ಬೆಳೆ ವಿಮೆ ಪರಿಹಾರದ ವಿಷಯದಲ್ಲಿ ಬೆಳೆಗಾರರಿಗೆ ದೊರಕಬೇಕಾದ ಪರಿಹಾರ ಸಿಕ್ಕಿಲ್ಲ' ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
'ಪ್ರಸಕ್ತ ವರ್ಷ ತಾಲ್ಲೂಕಿನ ಬೆಳೆಗಾರರಿಗೆ ₹10.98 ಕೋಟಿ ಪರಿಹಾರ ದೊರಕಿದೆ. ಸೊರಬ, ತೀರ್ಥಹಳ್ಳಿ, ಶಿಕಾರಿಪುರ, ಹೊಸನಗರ ತಾಲ್ಲೂಕಿನ ಬೆಳೆಗಾರರಿಗೆ ಕ್ರಮವಾಗಿ ₹39 ಕೋಟಿ, ₹29 ಕೋಟಿ, ₹34 ಕೋಟಿ, ₹11.65 ಕೋಟಿ ಪರಿಹಾರ ದೊರಕಿದೆ. ಸಾಗರಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕಾಗಿರುವ ಶಾಸಕ ಬೇಳೂರು ಮೌನವಾಗಿರುವುದನ್ನು ನೋಡಿದರೆ ವಿಮಾ ಕಂಪೆನಿಗಳ ಜೊತೆಗೆ ಅವರು ಒಳ ಒಪ್ಪಂದ ಮಾಡಿಕೊಂಡಂತೆ ಕಾಣುತ್ತಿದೆ' ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ಬಿ.ಸಿ.ಲಕ್ಷ್ಮಿನಾರಾಯಣ ಭಟ್, ಬಿಜೆಪಿಯ ಪ್ರಮುಖರಾದ ಕೆ.ಎಸ್.ಪ್ರಶಾಂತ್, ರಮೇಶ್ ಕೆಳದಿ, ಲಕ್ಷ್ಮಣ್ ಡಿ.ಸಿ, ನಾಗರಾಜ್, ಗಿರೀಶ್ ಗುಳ್ಳಳ್ಳಿ, ರವೀಂದ್ರ ಬಿ.ಟಿ, ಅರುಣ್ ಕುಗ್ವೆ, ಕೃಷ್ಣಮೂರ್ತಿ ಹೊಸಂತೆ, ಬಂಗಾರಪ್ಪ, ಮಂಜಪ್ಪ, ಶಿವಮೂರ್ತಿ ಗೌಡ, ನಾಗರಾಜ್ ಬೊಬ್ಬಿಗೆ, ಶ್ರೀಧರ್ ಸಂಪಳ್ಳಿ, ಕೊಟ್ರಪ್ಪ ನೇದರವಳ್ಳಿ ಇದ್ದರು.
ಆಣೆ, ಪ್ರಮಾಣದ ವಿಷಯಕ್ಕೆ ಬಿಜೆಪಿಯ ಬೆಂಬಲವಿಲ್ಲ: 'ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ವಿಚಾರದಲ್ಲಿ ನನ್ನ ಪಾತ್ರವಿಲ್ಲ' ಎಂದು ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು ಅವರು ಸಿಗಂದೂರು ದೇವಸ್ಥಾನದಲ್ಲಿ ಪ್ರಮಾಣ ಮಾಡಲು ಸಿದ್ಧ ಎಂದು ಈಚೆಗೆ ನೀಡಿರುವ ಹೇಳಿಕೆ ವೈಯುಕ್ತಿಕವಾದದ್ದು. ಆಣೆ, ಪ್ರಮಾಣದ ವಿಷಯಕ್ಕೆ ಬಿಜೆಪಿಯ ಬೆಂಬಲವಿಲ್ಲ' ಎಂದು ಬಿಜೆಪಿ ನಗರ ಘಟಕದ ಅಧ್ಯಕ್ಷ ಕೆ.ಆರ್.ಗಣೇಶ್ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
261103-42-1616271765

