ಮೂಡಿಗೆರೆ: ಪಟ್ಟಣ ಹೊರವಲಯದ ಬೀಜುವಳ್ಳಿಯ ಸನಾವುಲ್ಲಾ ಎಂಬುವವರ ಕಾಫಿ ತೋಟದ ಕೂಲಿ ಲೈನ್‌ನಲ್ಲಿ ಮೃತಪಟ್ಟ 80 ವರ್ಷದ ವೃದ್ಧೆಯ ಮೃತದೇಹದ ಅಂತ್ಯ ಸಂಸ್ಕಾರವನ್ನು ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಪದಾಧಿಕಾರಿಗಳು, ಬಿಜುವಳ್ಳಿಯ ಚಿತಾಗಾರದಲ್ಲಿ ನೆರವೇರಿಸಿದರು.
ವೃದ್ಧೆಗೆ ಸಂಬಂಧಿಕರು ಯಾರೂ ಇಲ್ಲದ್ದರಿಂದ ತೋಟದ ಸಿಬ್ಬಂದಿ ಸಾಮಾಜಿಕ ಸಕ್ರಿಯ ಸೇವಾ ಸಂಸ್ಥೆ ಪದಾಧಿಕಾರಿಗಳಿಗೆ ಕರೆಮಾಡಿ ಅಂತ್ಯಸಂಸ್ಕಾರ ನೆರವೇರಿಸಲು ಕೇಳಿಕೊಂಡಿದ್ದರು.
ಅದರಂತೆ ಸಮಾಜ ಸೇವಕರಾದ ಫಿಶ್ ಮೋಣು, ಅಬ್ದುಲ್ ರಹಿಮಾನ್, ಮೂರ್ತಿ ಅವರು ಮೃತದೇಹವನ್ನು ತಮ್ಮ ಸಂಸ್ಥೆಯ ಆಂಬುಲೆನ್ಸ್‌ನಲ್ಲಿ ಸಾಗಿಸಿ ಅಂತ್ಯಸಂಸ್ಕಾರ ನಡೆಸಿದರು.
ಅಂತ್ಯಸಂಸ್ಕಾರದ ಬಳಿಕ ಇದೇ ತಂಡ ಹಳೆಮೂಡಿಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಿ, ಶಾಲೆಯ ಕುಡಿಯುವ ನೀರಿನ ಟ್ಯಾಂಕ್ ಅನ್ನು ತೊಳೆದು ಸ್ವಚ್ಛಗೊಳಿಸಿದರು. ಶಾಲೆ ಆವರಣದಲ್ಲಿ ಪೊದೆ ಬೆಳೆದಿತ್ತು. ಅದನ್ನು ಸಂಸ್ಥೆ ಪದಾಧಿಕಾರಿಗಳು ಶ್ರಮದಾನದ ಮೂಲಕ ಕತ್ತರಿಸಿ ತೆರವುಗೊಳಿಸಿದರು.
261104-126-1084190087

