ಶಿವಮೊಗ್ಗ: ಎರಡನೇ ಬಾರಿಗೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ ಸ್ವಕ್ಷೇತ್ರ ಸೊರಬಕ್ಕೆ ಬಂದ ಮಧು ಬಂಗಾರಪ್ಪ ಅವರಿಗೆ ಬೆಂಬಲಿಗರು ಭರ್ಜರಿ ಸ್ವಾಗತ ಕೋರಿದರು.
ಶಿರಾಳಕೊಪ್ಪ ಹೊರವಲಯದಿಂದ ಸೊರಬ ಪಟ್ಟಣದವರೆಗೂ ಅಲ್ಲಲ್ಲಿ ರಸ್ತೆಗಳ ಪಕ್ಕ ನಿಂತ ಬೆಂಬಲಿಗರು, ನೂತನ ಸಚಿವರಿಗೆ ಹಾರ ಹಾಕಿ, ಶಾಲು ಹೊದಿಸಿ ಸ್ವಾಗತ ಕೋರಿದರು.
ಶಿರಾಳಕೊಪ್ಪದಿಂದ ಸೊರಬದವರೆಗೆ ಬೆಂಬಲಿಗರ ವಾಹನಗಳು ಹಿಂಬಾಲಿಸಿದವು.
ಸೊರಬ ಪಟ್ಟಣದ ಬಂಗಾರಧಾಮದ ಎದುರಿನ ವೃತ್ತದಲ್ಲಿ ಪಟಾಕಿ ಸಿಡಿಸಿ, ಹೂ ಎರಚಿ, ಡೊಳ್ಳು ವಾದನದೊಂದಿಗೆ ಮಧು ಬಂಗಾರಪ್ಪ ಅವರನ್ನು ಸ್ವಾಗತಿಸಲಾಯಿತು.
ಬಂಗಾರಧಾಮದಲ್ಲಿ ಅಪ್ಪ ಎಸ್. ಬಂಗಾರಪ್ಪ ಹಾಗೂ ಅಮ್ಮ ಶಕುಂತಲಾ ಅವರ ಸಮಾಧಿ ಸ್ಥಳಕ್ಕೆ ಹೂ ಹಾಕಿ ನಮಿಸಿದರು. ಅಲ್ಲಿಂದ ಬೆಂಬಲಿಗರು ರಂಗಮಂದಿರಕ್ಕೆ ಕರೆದೊಯ್ದರು. ಅಲ್ಲಿ ಬೆಂಬಲಿಗರಿಂದ ಅಭಿನಂದನೆ ಕಾರ್ಯಕ್ರಮ ನಡೆಯಲಿದೆ.

