Dailyhunt Logo
  • Light mode
    Follow system
    Dark mode
    • Play Story
    • App Story
ಸಚಿವರಿಂದ ಸಂವಿಧಾನದ ಹೋಮ!: ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ

ಸಚಿವರಿಂದ ಸಂವಿಧಾನದ ಹೋಮ!: ಚಂದ್ರಕಾಂತ ವಡ್ಡು ಅವರ ವಿಶ್ಲೇಷಣೆ

ಹೊಸ ಸರ್ಕಾರ ಬಂದಾಗಲೆಲ್ಲ ಸಚಿವರ ಕಚೇರಿ ಮತ್ತು ನಿವಾಸಗಳ ನವೀಕರಣ ನಡೆಯುತ್ತದೆ. ಸಾರ್ವಜನಿಕರ ಹಣದಿಂದ ನಡೆಯುವ ಆ ಪ್ರಕ್ರಿಯೆ ಕಾನೂನುಬದ್ಧವಾಗಿ ಇದ್ದರೂ, ನೈತಿಕವಾಗಿ ಅದು ಸರಿ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಸರ್ಕಾರಿ ಕಟ್ಟಡಗಳಲ್ಲಿ ನಡೆಸುವ ಧಾರ್ಮಿಕ ಆಚರಣೆಗಳು ಸಂವಿಧಾನದ ಆಶಯಕ್ಕೆ ಚ್ಯುತಿ ಉಂಟು ಮಾಡುತ್ತವೆ.

ಸರ್ಕಾರಗಳು ಕಾಲಕಾಲಕ್ಕೆ ಬದಲಾಗುತ್ತವೆ. ಆದರೆ, ಅಧಿಕಾರ ಮೂಲದ ಕೆಲವು ಸಂಸ್ಕೃತಿಗಳು ಮಾತ್ರ ಬದಲಾಗುವುದಿಲ್ಲ. ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೂಡ ಅನೇಕ ವಿಷಯಗಳಲ್ಲಿ ಹಳೆಯ ಜಾಡು ಹಿಡಿದಿದೆ. ಗುತ್ತಿಗೆದಾರರ ಹಳೆಯ ಬಾಕಿ ತೀರಿಸಲಾಗದೆ, ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗದೆ, ಸರ್ಕಾರ ಸರ್ಕಸ್ ಮಾಡುತ್ತಿರುವ ಹೊತ್ತಿನಲ್ಲಿಯೇ ಬೊಕ್ಕಸಕ್ಕೆ ತೂತು ಕೊರೆಯುವ ಕಾರ್ಯಗಳು ಮಾತ್ರ ಯಾಂತ್ರಿಕವಾಗಿ ಚಾಲನೆಯಲ್ಲಿವೆ.

ಸಚಿವರ ಅಧಿಕೃತ ನಿವಾಸ ಮತ್ತು ಕಚೇರಿಗಳ ನವೀಕರಣಕ್ಕೆ ಅನಗತ್ಯವಾಗಿ ಸಾರ್ವಜನಿಕ ಹಣ ಖರ್ಚು ಮಾಡುವುದು ಒಂದು ಕಡೆ ಮುಂದುವರಿ ದಿದೆ. ಮತ್ತೊಂದೆಡೆ, ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು ಸರ್ಕಾರಿ ಕಟ್ಟಡಗಳಲ್ಲಿ ಹೋಮ, ಹವನ, ಪೂಜೆ, ವಾಸ್ತುಶಾಂತಿ ಮುಂತಾದ ನಿರ್ದಿಷ್ಟ ಧಾರ್ಮಿಕ ಆಚರಣೆ ನಡೆಸುತ್ತಿದ್ದಾರೆ. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಅಧಿಕೃತ ನಿವಾಸ ಮತ್ತು ಕಚೇರಿಗಳನ್ನು ವೈಯಕ್ತಿಕ ನಂಬಿಕೆ, ರಾಜಕೀಯ ಪ್ರತಿಷ್ಠೆ ಮತ್ತು ವೈಭವ ಪ್ರದರ್ಶನದ ಸ್ಥಳಗಳನ್ನಾಗಿ ಪರಿವರ್ತಿಸುವ ಪ್ರವೃತ್ತಿ ಸಾಮಾನ್ಯವಾಗಿದೆ. ಹಾಗಾಗಿ, ಇದು ವಿಶಾಲಾರ್ಥದಲ್ಲಿ ಅಧಿಕಾರ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಬಗ್ಗೆ ಪ್ರಚಲಿತ ರಾಜಕೀಯ ಸಂಸ್ಕೃತಿ ಹೊಂದಿರುವ ದೃಷ್ಟಿಕೋನವನ್ನು ಬಿಂಬಿಸುತ್ತದೆ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ್ ಅವರು ಸರ್ಕಾರಿ ಕಟ್ಟಡ ನವೀಕರಣ ಮತ್ತು ಪೂಜಾವಿಧಿಗಳಿಗೆ ಸಂಬಂಧಿಸಿದಂತೆ ತಮ್ಮ ಸಚಿವ ಸಂಪುಟ ಸಹೋದ್ಯೋಗಿಗಳಿಗಿಂತ ಹತ್ತು ಹೆಜ್ಜೆ ಮುಂದೆಯೇ ಇದ್ದಾರೆ. ಸಾಂಪ್ರದಾಯಿಕವಾಗಿ ಮುಖ್ಯಮಂತ್ರಿಗೆ ಮೀಸಲಾದ 'ಕಾವೇರಿ' ನಿವಾಸವನ್ನು ಸಿದ್ದರಾಮಯ್ಯ ಖಾಲಿ ಮಾಡದಿರುವುದರಿಂದ ಅದು ಶಿವಕುಮಾರ್ ಅವರಿಗೆ ಲಭ್ಯವಿಲ್ಲ. ಇನ್ನು 'ಅನುಗ್ರಹ' ನಿವಾಸದ ವಾಸ್ತು ಬಗ್ಗೆ ಬಹುತೇಕರಿಗೆ ಅನುಮಾನವಿದೆ. ಹಾಗಾಗಿ, ಶಿವಕುಮಾರ್ ಅವರು ತಮ್ಮ ಅಧಿಕೃತ ಗೃಹ ಕಚೇರಿಯಾಗಿ ಐತಿಹಾಸಿಕ ಕುಮಾರಕೃಪಾ ಬಂಗಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಕೆಯಿಂದ ಹಿಡಿದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ವರೆಗೆ ಎಲ್ಲವನ್ನೂ ಜ್ಯೋತಿಷ ಪ್ರಕಾರವೇ ಮಾಡಿದ ಶಿವಕುಮಾರ್ ಅವರು ಇದೀಗ ವಾಸ್ತುಪ್ರಕಾರ ಕುಮಾರಕೃಪಾ ಗೆಸ್ಟ್ ಹೌಸ್ ನವೀಕರಣಕ್ಕೆ ಸೂಚಿಸಿದ್ದಾರೆ. ನವೀಕರಣದ ಅಂದಾಜು ವೆಚ್ಚದ ನಿಖರ ಮಾಹಿತಿಯಿನ್ನೂ ಸಾರ್ವಜನಿಕವಾಗಿ ಲಭ್ಯ ವಿಲ್ಲ. 160 ವರ್ಷ ಹಳೆಯದಾದ ಈ ಪಾರಂಪರಿಕ ಕಟ್ಟಡವು 12 ವಿಶಾಲವಾದ ಕೊಠಡಿಗಳು, ದೊಡ್ಡ ಸಭಾಂಗಣಗಳು, ಅಡುಗೆಮನೆ ಮತ್ತು ಇತರ ಸೌಲಭ್ಯಗಳನ್ನು ಹೊಂದಿದೆ. ಈ ಬಂಗಲೆಯು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದ ಶೇಷಾದ್ರಿ ಅಯ್ಯರ್ ಅವರ ನಿವಾಸವಾಗಿತ್ತು. 1927ರಲ್ಲಿ ಮಹಾತ್ಮ ಗಾಂಧಿ ಬೆಂಗಳೂರಿಗೆ ಭೇಟಿ ನೀಡಿದಾಗ ಇಲ್ಲಿ ತಂಗಿದ್ದರಿಂದ, ಈ ಬಂಗಲೆಗೆ ಐತಿಹಾಸಿಕ ಮೌಲ್ಯವೂ ಇದೆ. ಇಂತಹ ಮಹತ್ವದ ಕಟ್ಟಡದ ಮೂಲ ಸ್ವರೂಪದ ಬದಲಾವಣೆ ಬಗ್ಗೆ ಸಾಕಷ್ಟು ಆಕ್ಷೇಪಗಳು ಕೇಳಿಬಂದರೂ ಸಿಎಂ ಮಾತ್ರ ಎಂದಿನಂತೆ ಕಿವಿಗೆ ಹಾಕಿಕೊಳ್ಳುವ ಗೊಡವೆಗೆ ಹೋಗಿಲ್ಲ.

2025ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ 'ಕಾವೇರಿ'ಯ ನವೀಕರಣಕ್ಕೆ ₹2.6 ಕೋಟಿ ಖರ್ಚು ಮಾಡಲಾಗಿತ್ತು. ಆಗ ವಿದ್ಯುತ್, ಏರ್‌ ಕಂಡಿಷನಿಂಗ್, ಅಡುಗೆಮನೆ, ಸ್ಟೋರ್ ರೂಮ್, ಸಹಾಯಕರ ಕೊಠಡಿ ಸೇರಿದಂತೆ ಹಲವು ಕಾಮಗಾರಿಗಳು ನಡೆದವು. ಅಂದಿನ ಉಪಮುಖ್ಯಮಂತ್ರಿ ಶಿವಕುಮಾರ್ ಅವರ ಅಧಿಕೃತ ನಿವಾಸದ ವಿದ್ಯುತ್, ಪೀಠೋಪಕರಣ ಮತ್ತು ಇತರ ನವೀಕರಣಗಳಿಗೆ ಸುಮಾರು ₹61 ಲಕ್ಷದ ಪ್ರತ್ಯೇಕ ವೆಚ್ಚವೂ ವರದಿಯಾಗಿತ್ತು. ಕೆಲವು ಕಾಮಗಾರಿಗಳಿಗೆ ಸಾರ್ವಜನಿಕ ಖರೀದಿ ಪಾರದರ್ಶಕತೆ ಕಾಯ್ದೆ-1999ರ ಪರಿಚ್ಛೇದ 4(ಜಿ) ಪ್ರಕಾರ ಟೆಂಡರ್ ಪ್ರಕ್ರಿಯೆಯಿಲ್ಲದೆ ನೇರವಾಗಿ ಕಾಮಗಾರಿ ನಡೆಸಲು ಅವಕಾಶ ನೀಡಲಾಗಿತ್ತು.

2026ರ ವರದಿಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಹಲವು ಸಚಿವರ ಅಧಿಕೃತ ನಿವಾಸಗಳ ದುರಸ್ತಿ, ನವೀಕರಣ, ಪೀಠೋಪಕರಣ, ವಿದ್ಯುತ್ ಮತ್ತು ಭದ್ರತಾ ವ್ಯವಸ್ಥೆಗಳಿಗೆ ₹19 ಕೋಟಿಗೂ ಹೆಚ್ಚು ವೆಚ್ಚವಾಗಿದೆ. ಈ ಬಾಬತ್ತಿನ ವೆಚ್ಚಗಳ ಕುರಿತು ಸರ್ಕಾರ ವಿವರವಾದ ಸ್ಪಷ್ಟೀಕರಣ ನೀಡಲು ಮುಂದಾಗಿಲ್ಲ ಹಾಗೂ ಪ್ರತಿ ಕಾಮಗಾರಿಯ ಅಗತ್ಯದ ಬಗ್ಗೆ ಸಾರ್ವಜನಿಕವಾಗಿ ಯಾವ ಮಾಹಿತಿಯೂ ಲಭ್ಯವಿಲ್ಲ. ಸಚಿವರ ಮನೆ-ಕಚೇರಿಗೂ ನಿರ್ವಹಣೆ ಮತ್ತು ದುರಸ್ತಿ ಕಾರ್ಯದ ಅಗತ್ಯ ಇದ್ದೇ ಇರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಖಾಸಗಿ ಆಸ್ತಿಯಂತೆ ಸರ್ಕಾರಿ ಕಟ್ಟಡವನ್ನು ಕೂಡ ನಿರ್ವಹಿಸಲೇಬೇಕು. ಸಚಿವರು ಕೆಲಸ ಮಾಡುವ, ವಾಸಿಸುವ ಸ್ಥಳದಲ್ಲಿ ಅಗತ್ಯವಾದ ಭದ್ರತೆ, ಕಚೇರಿ ವ್ಯವಸ್ಥೆ, ವಿದ್ಯುತ್, ನೀರು, ಸಿಬ್ಬಂದಿಗೆ ಬೇಕಾದ ಸೌಲಭ್ಯಗಳು ಇರಲೇಬೇಕು. ಆದರೆ, 'ದೈನಂದಿನ ಅಗತ್ಯ' ಮತ್ತು 'ಅಧಿಕಾರದ ವೈಭವ'ಗಳ ನಡುವೆ ಒಂದು ಸ್ಪಷ್ಟ ಗೆರೆ ಇರಬೇಕಲ್ಲವೆ?

ಸಾರ್ವಜನಿಕ ಹಣದಿಂದ ಸಚಿವರಿಗೆ ಒದಗಿಸುವ ನಿವಾಸವು ಖಾಸಗಿ ಬಂಗಲೆಯಲ್ಲ. ಅದು ರಾಜ್ಯದ ಆಸ್ತಿ. ಸಚಿವರು ಅದರ ಮಾಲೀಕರಲ್ಲ; ತಾತ್ಕಾಲಿಕ ವಾಗಿ ಬಳಸುವ ಜನಪ್ರತಿನಿಧಿ ಆಗಿರುತ್ತಾರೆ. ಕರ್ನಾಟಕದ ಸಚಿವರ ವೇತನ ಮತ್ತು ಭತ್ಯೆಗಳಿಗೆ ಸಂಬಂಧಿಸಿದ ಕಾನೂನು ಪ್ರಕಾರ ಸಚಿವರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತದೆ ಮತ್ತು ಅದರ ನಿರ್ವಹಣಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಆದರೆ, ಈ ಸೌಲಭ್ಯಕ್ಕೆ ಮಿತಿಗಳೂ ಇವೆ. ಹೀಗಿರುವಾಗ ಪ್ರತೀಬಾರಿ ಹೊಸ ಸಚಿವರು ಅಧಿಕಾರಕ್ಕೆ ಬಂದಾಗ 'ಹೊಸ ಕಚೇರಿ', 'ಹೊಸ ಪೀಠೋಪಕರಣ', 'ಹೊಸ ಅಲಂಕಾರ', 'ಹೊಸ ವಾಸ್ತು', 'ಹೊಸ ನವೀಕರಣ' ಎಂಬ ಸರಪಳಿ ಆರಂಭವಾದರೆ, ಅದು ಅಧಿಕಾರದ ದುರುಪಯೋಗ ಎನ್ನಿಸಿಕೊಳ್ಳುತ್ತದೆ.

ಜನರ ತೆರಿಗೆಯಿಂದ ನಡೆಯುವ ಸರ್ಕಾರದಲ್ಲಿ ಸಚಿವರ ವೈಭವವೂ ಪ್ರಶ್ನೆಗೆ ಒಳಪಡಬೇಕು. ಒಂದು ಕಡೆ ಸರ್ಕಾರಿ ಶಾಲೆಗಳ ದುರಸ್ತಿ, ಸಿಬ್ಬಂದಿ ವಸತಿ, ಆಸ್ಪತ್ರೆಗಳ ಮೂಲಸೌಕರ್ಯ, ಗ್ರಾಮೀಣ ರಸ್ತೆ, ಕುಡಿಯುವ ನೀರು ಮುಂತಾದ ಕ್ಷೇತ್ರಗಳಲ್ಲಿ ಹಣದ ಕೊರತೆಯ ದೂರುಗಳು ಕೇಳಿಬರುತ್ತಿರುವಾಗ, ಸಚಿವರ, ಅಧಿಕಾರಿಗಳ ಬಂಗಲೆಗಳ ನವೀಕರಣಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿದರೆ ಹೇಗೆ? ಆಡಳಿತದಲ್ಲಿ ಮಿತವ್ಯಯವೂ ಒಂದು ನೈತಿಕ ಮೌಲ್ಯ. ಸಾರ್ವಜನಿಕ ಹಣವನ್ನು ಕಾನೂನುಬದ್ಧವಾಗಿ ಖರ್ಚು ಮಾಡಿದರೆ ಮಾತ್ರ ಸಾಕಾಗುವುದಿಲ್ಲ; ಅದು ಸಮರ್ಥನೀಯವೂ ಆಗಿರಬೇಕು. 'ನಿಯಮದಂತೆ ಇದೆ' ಎಂದರೆ 'ನೈತಿಕವಾಗಿದೆ' ಎಂದು ಅರ್ಥವಲ್ಲ.

ಹೊಸ ಸರ್ಕಾರ ಅಥವಾ ಹೊಸ ಸಂಪುಟ ರಚನೆಯಾದಾಗ ಕಾಣಿಸಿಕೊಳ್ಳುವ ಮತ್ತೊಂದು ಕೆಟ್ಟ ಚಾಳಿಯೆಂದರೆ ಸಚಿವರು ತಮ್ಮ ಧಾರ್ಮಿಕ ನಂಬಿಕೆಗಳಿಗೆ, ಮೂಢ ಆಚರಣೆಗಳಿಗೆ ಸರ್ಕಾರಿ ನಿವಾಸ-ಕಚೇರಿಗಳನ್ನು ಬಳಸಿಕೊಳ್ಳುವುದು. ಭಾರತದ ಸಂವಿಧಾನವು ಭಾರತವನ್ನು 'ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯ' ಎಂದು ಘೋಷಿಸುತ್ತದೆ. ಸುಪ್ರೀಂ ಕೋರ್ಟ್ ಕೂಡ ಜಾತ್ಯತೀತತೆಯನ್ನು ಬರೀ ಎಲ್ಲ ಧರ್ಮಗಳನ್ನೂ ಸಹಿಸುವ ಮನೋಭಾವವಲ್ಲ; ಎಲ್ಲ ಧರ್ಮಗಳಿಗೂ ಸಮಾನ ಗೌರವ ಮತ್ತು ರಾಜ್ಯದ ಧರ್ಮನಿರಪೇಕ್ಷ ಸ್ವಭಾವವನ್ನು ಕಾಪಾಡುವ ಸಾಂವಿಧಾನಾತ್ಮಕ ಮೌಲ್ಯವೆಂದು ವಿವರಿಸಿದೆ.

ಹಾಗೆಂದು ಎಲ್ಲಾ ಸಚಿವರು ನಾಸ್ತಿಕರೇ ಆಗಿರಬೇಕು ಎಂದೇನಿಲ್ಲ. ಸಂವಿಧಾನದ 25ನೇ ವಿಧಿ ಪ್ರತಿಯೊಬ್ಬ ನಾಗರಿಕನಿಗೂ ತನ್ನ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯ ನೀಡಿದೆ. ಸಚಿವರು, ಅಧಿಕಾರಿಗಳು ತಮ್ಮ ಮನೆಯಲ್ಲಿ ಹೋಮ ಇತ್ಯಾದಿ ಮಾಡಿಕೊಳ್ಳುವುದು ಅವರ ಖಾಸಗಿ ವಿಚಾರ. ಆದರೆ, ಸರ್ಕಾರದ ಅಧಿಕೃತ ನಿವಾಸದಲ್ಲಿ, ಸರ್ಕಾರಿ ವ್ಯವಸ್ಥೆಯ ನೆರವಿನಿಂದ, ಹೋಮ-ಹವನ ನಡೆಸಿದಾಗ ಅದರ ಅರ್ಥ ಮತ್ತು ಪರಿಣಾಮ ಬದಲಾಗುತ್ತದೆ. ಇಂಥ ವರ್ತನೆಯು ಸಂವಿಧಾನದ ಸೆಕ್ಯುಲರ್ ತತ್ತ್ವ ಮತ್ತು ಆಶಯಕ್ಕೆ ಧಕ್ಕೆ ತರುವುದರ ಜೊತೆಗೆ, ಸಮಾಜದಲ್ಲಿ ತಪ್ಪು ಸಂದೇಶ ಹರಡುವಿಕೆಗೂ ಕಾರಣವಾಗುತ್ತದೆ.

ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದಂತೆ, ಸರ್ಕಾರದ ಜಾತ್ಯತೀತ ಚಟುವಟಿಕೆಗಳೊಂದಿಗೆ ಧರ್ಮವನ್ನು ಬೆರೆಸಬಾರದು; ಜಾತ್ಯತೀತ ಸ್ವಭಾವ ಎಂದರೆ, ಸರ್ಕಾರಿ ಕಾರ್ಯ ಚಟುವಟಿಕೆಗಳ ಮೇಲೆ ಧರ್ಮದ ಪ್ರಭಾವ ಬೀರದಂತೆ ನೋಡಿಕೊಳ್ಳುವುದು. ಆದ್ದರಿಂದ ಸರ್ಕಾರಿ ಕಚೇರಿಗಳಲ್ಲಿ ನಿರ್ದಿಷ್ಟ ಧರ್ಮ-ಜಾತಿಯ ಆಚರಣೆ ಮಾಡುವುದನ್ನು 'ವ್ಯಕ್ತಿಗತ ನಂಬಿಕೆ' ಎಂದು ಸರಳವಾಗಿ ತಳ್ಳಿಹಾಕಲು ಸಾಧ್ಯವಿಲ್ಲ. ಅದೇ ಸ್ಥಳದಲ್ಲಿ ಮುಸ್ಲಿಂ ಸಚಿವರು ನಮಾಜ್, ಕ್ರೈಸ್ತ ಸಚಿವರು ಪ್ರಾರ್ಥನೆ, ಬೌದ್ಧ ಸಚಿವರು ತಮ್ಮ ಧಾರ್ಮಿಕ ಆಚರಣೆ ನಡೆಸಿದರೆ ಫಲಿತಾಂಶ ಏನಾಗಬಹುದು?

ಇಂಥ ಹದಗೆಟ್ಟ ವ್ಯವಸ್ಥೆಯಲ್ಲಿ ಹೊಸ ಭರವಸೆಯಂತೆ ಮೂಡಿದ್ದಾರೆ ಮುಜರಾಯಿ, ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ. ಅವರು ಹೋಮ, ಪೂಜೆಗಳ ಆಡಂಬರವಿಲ್ಲದೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ವಿಧಾನಸೌಧದ ಮೂರನೇ ಮಹಡಿಯಲ್ಲಿನ ತಮ್ಮ ಕಚೇರಿಗೆ ಸರಳವಾಗಿ ಪ್ರವೇಶ ಮಾಡಿದ್ದಾರೆ. ದಾವಣಗೆರೆಯ ಪೌರಕಾರ್ಮಿಕ ಕುಟುಂಬದ ಅವರು ಕೊಠಡಿ ನವೀಕರಣಕ್ಕೆ ಹಣ ಖರ್ಚು ಮಾಡದೆ, ಗೋಡೆ ಕೆಡವದೆ ಹಿಂದೆ ಇದ್ದಂತೆ ಉಳಿಸಿಕೊಂಡಿದ್ದಾರೆ. ಅವರ ಕಚೇರಿಯ ಗೋಡೆಗಳ ಮೇಲೆ ಯಾವುದೇ ಧಾರ್ಮಿಕ ಸಂಕೇತಗಳು ಇಲ್ಲದಿರುವುದು ಮತ್ತೊಂದು ಪ್ರಬಲ ಸಂದೇಶ.

 MS_Chandrakantaha vaddu
Dailyhunt
Disclaimer: This content has not been generated, created or edited by Dailyhunt. Publisher: Prajavani