ಆಡಿಷನ್ ನೀಡುವ ಕ್ರಮ ಹೇಗಿರುತ್ತೆ?
ಯಾವುದಾದರೂ ಒಂದೆರಡು ಪಾತ್ರಕ್ಕೆ ಸಿದ್ಧವಾಗಿ ಹೋಗಿರುತ್ತೇವೆ. ಕೆಲವೊಮ್ಮೆ ಅವರೇ ಸ್ಕ್ರಿಪ್ಟ್ ಕೊಡುತ್ತಾರೆ. ನಮ್ಮ ಮುಖಭಾವ, ದೈಹಿಕ ಸ್ವರೂಪಕ್ಕೆ ಹೊಂದಿಕೆಯಾಗುವ ಪಾತ್ರವನ್ನು ಸೂಚಿಸುತ್ತಾರೆ. ಅದು ಸರಿ ಬರದಿದ್ದರೆ ಮತ್ತೊಂದನ್ನು ಮಾಡಲು ಹೇಳುತ್ತಾರೆ.
ಈಚೆಗೆ ಹೋದ ಆಡಿಷನ್‌ನಲ್ಲಿ ಎರಡು ಪಾತ್ರಗಳನ್ನು ಮಾಡಲು ಹೇಳಿದ್ದರು. ಸಿನಿಮಾ-ಸೀರಿಯಲ್‌ನಲ್ಲಿ ಇದೇ ರೀತಿಯ ಪದ್ಧತಿ ಇದೆ. ಕೆಲವರು ರಂಗಭೂಮಿ ಅನುಭವ ಇದ್ದಿದ್ದರಿಂದ ಯಾವುದಾದರು ನಾಟಕದ ಡೈಲಾಗ್ ಹೇಳಲು ಸೂಚಿಸುತ್ತಾರೆ.
ಸಿನಿಮಾದಿಂದ ಕಿರುತೆರೆಗೆ ಬಂದಾಗ ಹೇಗೆನಿಸಿತ್ತು?
ಆರಂಭದಲ್ಲಿ ಸಿನಿಮಾದಲ್ಲಿ ಮಾಡಿದೆ. ಆಮೇಲೆ ರಂಗಭೂಮಿಯಲ್ಲಿ ತರಬೇತಿ ಪಡೆದೆ. ನಂತರ ಚಿಕ್ಕಪುಟ್ಟ ಪಾತ್ರಗಳಿಗೂ ಆಡಿಷನ್ ಕೊಡುತ್ತಿದ್ದೆ. ನಟನೆಗೆ ಅವಕಾಶ ಸಿಕ್ಕರೆ ಸಾಕು ಎಂದು ಅನ್ನಿಸಿತ್ತು. ಅತಿಥಿ ಪಾತ್ರವೋ ಒಂದು ದಿನದ ಪಾತ್ರವೋ ಯಾವುದಾದರೇನಂತೆ ಎನ್ನುವ ಭಾವ ನನ್ನದು. 'ಶಾಂತಂ ಪಾಪಂ'ನಲ್ಲಿ ಆಗ ಅವಕಾಶ ಸಿಗುತ್ತಿದ್ದವು. 'ಗೌರಿಶಂಕರ'ದಲ್ಲಿ ಒಂದು ದಿನದ ಪಾತ್ರ ಮಾಡಿದೆ. ಆಡಿಷನ್ ನೀಡುವುದು ನಿರಂತರವಾಗಿತ್ತು. ಒಂದು ಗ್ರೂಪಿನಲ್ಲಿ ಬಂದ ಸಂದೇಶಕ್ಕೆ ಹೋಗಿ ಆಡಿಷನ್ ನೀಡಿದೆ. ಗ್ರೂಪಿನಲ್ಲಿ ಸಿಕ್ಕ ಮಾಹಿತಿಯನ್ನು ಪಡೆದು ಆಡಿಷನ್ ನೀಡಲು ಸಿದ್ಧನಾದೆ. ವಾಹಿನಿಯ ಬೇಡಿಕೆಗೆ ಪಾತ್ರಗಳ ವಿನ್ಯಾಸ ಆಗುತ್ತವೆ. ಈ ಪಾತ್ರಕ್ಕೆ ಆರು ತಿಂಗಳ ನಂತರ ಮತ್ತೆ ಕರೆದು ಟೆಸ್ಟ್ ಮಾಡಿದರು. ಮೊದಲ ಎಪಿಸೋಡ್ ಚಿತ್ರೀಕರಣ ಮಾಡಿದರೂ ಪಾತ್ರ ಸಿಗುವ ಬಗ್ಗೆ ಅನುಮಾನ ಇತ್ತು.
ಮೈಸೂರು ರಂಗಾಯಣಕ್ಕೆ ಬಂದಿದ್ದು ಹೇಗೆ?
ಹೊಸ ನಿರ್ಮಾಣ ಸಂಸ್ಥೆಯ ಒಂದು ಸಿನಿಮಾಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಆರಂಭಿಸಿದೆ. ತಾಂತ್ರಿಕವಾಗಿ ಕೆಲಸ ಮಾಡಿದರೆ ನಟನೆಗೆ ಅವಕಾಶ ಎನ್ನುವ ಆಫರ್ ಅವರು ನೀಡಿದ್ದರು. ಅನಿವಾರ್ಯಕ್ಕೆ ಆ ಕೆಲಸವನ್ನು ಒಪ್ಪಿದೆ. ಸ್ಕ್ರಿಪ್ಟ್ ಕೂಡ ಬರೆದೆ. ಹೊಸ ತಂಡ. ಸಮಯ ಸಿಕ್ಕಾಪಟ್ಟೆ ತೆಗೆದುಕೊಂಡಿತು. ಒಂದೂವರೆ ವರ್ಷ ಕಳೆಯಿತು. ಅಷ್ಟರಲ್ಲಿ ಆಡಿಷನ್ ನೀಡಲು ಆರಂಭಿಸಿದೆ. ಒಮ್ಮೆ ರವೀಂದ್ರ ಕಲಾಕ್ಷೇತ್ರದಲ್ಲಿ ಸೀತಾರ (ನೀನಾಸಂ) ಎನ್ನುವವರು ಸಿಕ್ಕರು. ಬೆಂಗಳೂರು ಏಷ್ಯನ್ ಟೀಮ್ ಎಂಬ ತಂಡವನ್ನು ಪರಿಚಯಿಸಿದರು. ಅಲ್ಲಿ ಕೊಪ್ಪರ್ ಗುರುಗಳು ಸಿಕ್ಕರು.
ನೀನಾಸಂ, ರಂಗಾಯಣದ ಬಗ್ಗೆ ಪರಿಚಯ ಆಯಿತು. ನೀನಾಸಂನಲ್ಲಿ ಒಂದು ತಿಂಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದೆ. ಒಂದು ವರ್ಷದ ಡಿಪ್ಲೊಮಾಗೆ ಅರ್ಜಿ ಹಾಕಿದೆ. ಅವಕಾಶ ಸಿಗಲಿಲ್ಲ. ಬೆಂಗಳೂರಿನಲ್ಲಿ ಪಾರ್ಟ್‌ಟೈಮ್ ಕೆಲಸಕ್ಕೆ ಸೇರಿದೆ. ನನ್ನಪಾಲಿಗೆ ನೀನಾಸಂ ಬಾಗಿಲು ಮುಚ್ಚಿದ್ದರಿಂದ ಅವಕಾಶ ಅರಸಿ ಮೈಸೂರು ರಂಗಾಯಣದತ್ತ ಹೊರಟೆ. ಅವಕಾಶ ಸಿಕ್ಕಿತು, ತರಬೇತಿಗೆ ಹೋಗಬೇಕಿತ್ತು. ದೊಡ್ಡ ಅಪಘಾತದಲ್ಲಿ ನನ್ನ ಕೆಳದವಡೆ ಮುರಿಯಿತು. ಆಪರೇಷನ್ ಆಯಿತು. ಒಂದು ತಿಂಗಳಾದ ಮೇಲೆ ತರಬೇತಿ ಪೂರ್ಣಮಾಡಿ. ಆರು ತಿಂಗಳು ಸುತ್ತಾಟ ಮಾಡಿದೆ. ನಂತರವೂ ಅಲ್ಲೇ ರಂಗ ತಿರುಗಾಟ ಮಾಡ್ತಿದ್ದೆ. ಸಿನಿಮಾ-ಧಾರಾವಾಹಿಯಲ್ಲಿ ಬರಬೇಕು ಎಂದು ಮತ್ತೆ ಬೆಂಗಳೂರಿಗೆ ಬಂದೆ.
ಸೋಮೇಗೌಡನ ಪಾತ್ರ ಹೇಗೆನಿಸುತ್ತದೆ?
ಆರಂಭದಲ್ಲಿ ಭಾಷೆ ಸವಾಲಾಗಿತ್ತು. ನಿರ್ದೇಶಕರು ಮಾರ್ಗದರ್ಶನ ನೀಡಿ ಭಾಷೆಯನ್ನು ಸುಧಾರಿಸಿದರು. ತಂಡದಲ್ಲಿ ಹೊಂದಾಣಿಕೆ ಬಂತು. ಪಾತ್ರ ಆರಂಭದಲ್ಲಿ ನೆಗೆಟಿವ್ ಅನ್ನಿಸಿತ್ತು. ಆಗ ಜನ ಬೈದುಕೊಳ್ಳುತ್ತಿದ್ದರು. ಅಂತಹ ಪಾತ್ರಕ್ಕೆ ಕಾಮಿಕ್ ತಿರುವು ನೀಡಿದರು. ಈಗ ವೀಕ್ಷರಿಗೆ ಮೆಚ್ಚುಗೆ ಆಗುತ್ತಿದೆ. ಜನಕ್ಕೆ ಹತ್ತಿರ ಆಗಿದೆ. ಯಾವುದಾದರು ಹಳ್ಳಿಗೆ ಹೋದರೆ ಗುರುತಿಸಿ ಮಾತನಾಡುತ್ತಾರೆ. ತಮಾಷೆಯ ಸನ್ನಿವೇಶಗಳನ್ನು ನೆನಪಿಸುತ್ತಾರೆ. ಪಾತ್ರಕ್ಕೆ ಬೇರೆ ಬೇರೆ ಗೆಟಪ್ ಹಾಕಿದೆ. ಇಲ್ಲಿ ಬೆಸ್ಟ್ ನಟ ಎನ್ನುವ ಪುರಸ್ಕಾರವೂ ಸಿಕ್ಕಿದೆ.
ನಟನೆಯ ಒಲವು ಮೂಡಿದ್ದು ಹೇಗೆ?
ರಾಯಚೂರು ಜಿಲ್ಲೆ ಮಾನ್ವಿ ಬಳಿಯ ಹಳ್ಳಿ ನಮ್ಮೂರು. ಭತ್ತ-ಹತ್ತಿ ಬೆಳೆಯುವ ಕೃಷಿ ಕುಟುಂಬ ನಮ್ಮದು. ಊರಲ್ಲಿ ಪ್ರತಿವರ್ಷ ಮಾರಿಹಬ್ಬ ಮಾಡುತ್ತಾರೆ. ಊರಲ್ಲಿ ಮೊದಲೆಲ್ಲ ಬಯಲಾಟ-ದೊಡ್ಡಾಟ ಮಾಡುತ್ತಿದ್ದರಂತೆ. ಊರಿನವರೂ ಸಾಮಾಜಿಕ ನಾಟಕಗಳನ್ನು ಮಾಡುತ್ತಿದ್ದರು. ಅದೆಲ್ಲ ನೋಡುತ್ತಿದ್ದ ಹಾಗೆ ಕುತೂಹಲ ಬೆಳೆಯಿತು. ಆದರೆ ಇದನ್ನೇ ವೃತ್ತಿಯಾಗಿ ತೆಗೆದುಕೊಳ್ಳುತ್ತೇನೆ ಎನ್ನುವುದು ಗೊತ್ತಿರಲಿಲ್ಲ. ನಮ್ಮ ಮನೆಯಲ್ಲಿ ಅಪ್ಪ ತುಂಬ ಶಿಸ್ತಿನಿಂದ ಬೆಳೆಸಿದರು. ಒಂದು ನಾಟಕದಲ್ಲಿ ನನ್ನ ಸಹೋದರ ಸಂಬಂಧಿ ಕೆಲಸ ನಟಿಸಿದ. ಅದರಲ್ಲಿ ತೆರೆಯ ಹಿಂದೆ ಕೆಲಸ ಮಾಡಿದೆ. ಡಿಪ್ಲೊಮಾ ಮುಗಿಸಿ ಬಿಇಗೆ ಸೇರಿದೆ. ಬ್ಯಾಕ್‌ಲಾಗ್ ಉಳಿದವು. ನಟನೆಯನ್ನೇ ಮಾಡಬೇಕು ಎಂದು ಯೋಚಿಸಿ, ಶ್ರಮಪಟ್ಟು ಕಲಿತು ಅದೇ ಮಾರ್ಗದಲ್ಲಿ ಸಾಗುತ್ತಿದ್ದೇನೆ.
(ಇನ್ನಷ್ಟು ಆಸಕ್ತಿಕರ ನುಡಿಚಿತ್ರಗಳಿಗಾಗಿ, ಕುತೂಹಲಕರ ಕತೆ-ಕಾದಂಬರಿಗಾಗಿ ಮಾರುಕಟ್ಟೆಯಲ್ಲಿರುವ ಸುಧಾ ಓದಿ)

