Dailyhunt Logo
  • Light mode
    Follow system
    Dark mode
    • Play Story
    • App Story
ಸಮಯಕ್ಕೆ ಬಾರದ ಅಧಿಕಾರಿಗಳು; ಸುಳ್ಳಳ್ಳಿ ನಾಡ ಕಚೇರಿಯಲ್ಲಿ ಜನರ ಗೋಳು

ಸಮಯಕ್ಕೆ ಬಾರದ ಅಧಿಕಾರಿಗಳು; ಸುಳ್ಳಳ್ಳಿ ನಾಡ ಕಚೇರಿಯಲ್ಲಿ ಜನರ ಗೋಳು

ತುಮರಿ: ಇಲ್ಲಿನ ಸುಳ್ಳಳ್ಳಿ ನಾಡ ಕಚೇರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಸಾರ್ವಜನಿಕರು ಪರದಾಡುವಂತಾಗಿದೆ.

ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿದಿನ ಬೆಳಿಗ್ಗೆ 10 ಗಂಟೆ ಒಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕು ಎಂದು ಈಚೆಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸೂಚಿಸಿದ್ದರು.

ಇದಕ್ಕೆ ಅಧಿಕಾರಿಗಳು ಯಾವುದೇ ಬೆಲೆ ನೀಡುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.

ಎರಡು ದಿನಗಳ ಹಿಂದೆ ನಾಡ ಕಚೇರಿಗೆ ಭೇಟಿ ನೀಡಿದ್ದ ಸಾಗರ ತಹಶೀಲ್ದಾರ್ ಪ್ರತಿಭಾ ಎಂ., ಸಮಯ ಪಾಲನೆ ಮಾಡುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದರು. ಆದರೆ, ಸೋಮವಾರ ಬೆಳಿಗ್ಗೆ 11 ಗಂಟೆಯಾದರೂ ಕಂಪ್ಯೂಟರ್‌ ಆಪರೇಟರ್‌ ಬಿಟ್ಟು ಬೇರೆ ಯಾವ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗೆ ಬಂದಿರಲಿಲ್ಲ. ಆದ್ದರಿಂದ ಕೆಲಸ ಕಾರ್ಯಗಳಿಗಾಗಿ ಬಂದಿದ್ದ ಸಾರ್ವಜನಿಕರು ಪರದಾಡಬೇಕಾಯಿತು.

ಉಪ ತಹಶೀಲ್ದಾರ್ ಆಸನವೂ ಖಾಲಿ ಇತ್ತು. ಅವರು ಬರುತ್ತಾರೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಸಿಗದೇ ಇರುವುದರಿಂದ ನಾಗರಿಕರು ಪರಿತಪಿಸಿದರು.

'ಕಟ್ಟಿನಕಾರು, ಮಾರಲಗೋಡು, ಬರುವೆ ಮತ್ತು ಕರೂರು ಸೇರಿದಂತೆ ಒಟ್ಟು ನಾಲ್ಕು ಗ್ರಾಮ ಪಂಚಾಯಿತಿಯ ನೂರಾರು ಹಳ್ಳಿಗಳು ಈ ಕಚೇರಿ ವ್ಯಾಪ್ತಿಗೆ ಒಳಪಡುತ್ತವೆ. ಮಾಸಾಶನದ ಅರ್ಜಿ ಹಾಕಲು ವೃದ್ದರು, ಜಾತಿ-ಆದಾಯ ಪ್ರಮಾಣ ಪತ್ರ ಪಡೆಯಲು ವಿದ್ಯಾರ್ಥಿಗಳು, ಪಹಣಿ ಪಡೆಯಲು ರೈತರು, ಅಂಗವಿಕಲರು ಸೇರಿ ನಿತ್ಯ ಸಾಕಷ್ಟು ಜನ ವಿವಿಧ ಕೆಲಸಗಳಿಗಾಗಿ ಕಚೇರಿಗೆ ಬರುತ್ತಾರೆ. ಆದರೆ, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದರಿಂದ ಜನ ಮಧ್ಯಾಹ್ನದವರೆಗೂ ಕಾದು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ' ಎಂದು ಸಾರ್ವಜನಿಕರು ದೂರಿದರು.

'ಮೂವರು ಗ್ರಾಮ ಆಡಳಿತಾಧಿಕಾರಿಗಳು, ಒಬ್ಬರು ಕಂದಾಯ ನಿರೀಕ್ಷಕ ಮತ್ತು ಒಬ್ಬರು ಕೇಸ್‌ ವರ್ಕರ್‌ ನಿತ್ಯ ಕಚೇರಿಗೆ ತಡವಾಗಿ ಬರುತ್ತಾರೆ. ಮೂರು ತಿಂಗಳಿಂದ ಗಮನಿಸುತ್ತಿದ್ದೇವೆ. ಬೆಳಿಗ್ಗೆ ಕೆಲಸ ಬಿಟ್ಟು ಕಚೇರಿಗೆ ಬರುವ ಸಾರ್ವಜನಿಕರು ಕಾದು ಬೇಸತ್ತು ವಾಪಸ್‌ ಆಗುತ್ತಾರೆ' ಎಂದು ಗ್ರಾಮಸ್ಥರೊಬ್ಬರು ಬೇಸರ ವ್ಯಕ್ತಪಡಿಸಿದರು.

'ಬೆಳಿಗ್ಗೆ 10 ಗಂಟೆಯಿಂದ ಕಾಯುತ್ತಿದ್ದೇವೆ. 12 ಗಂಟೆಯಾದರೂ ಅಧಿಕಾರಿಗಳು ಬರುವುದಿಲ್ಲ. ಕರೆ ಮಾಡಿದರೆ ಸಾಗರ, ತುಮರಿಗೆ ಬರುವಂತೆ ಹೇಳುತ್ತಾರೆ. ತುರ್ತು ಕೆಲಸಗಳಿದ್ದಲ್ಲಿ ಕೆಲವರು ಅಲ್ಲಿಗೆ ಹೋಗಿ ಸಹಿ ಪಡೆಯುತ್ತಾರೆ. ಮಹಿಳೆಯರು, ವೃದ್ಧರು, ಅಂಗವಿಕಲರು ಸಾಗರಕ್ಕೆ ಹೋಗಲು ಸಾಧ್ಯವೆ' ಎಂದು ವಿಮಲಾ, ಶಾಂತರಾಜ್ ಸೇರಿ ಹಲವರು ಪ್ರಶ್ನಿಸಿದರು.

'ನಾಡ ಕಚೇರಿ ಸಿಬ್ಬಂದಿ ಸರ್ಕಾರದ ನಿಯಮಗಳನ್ನು ಪಾಲನೆ ಮಾಡದೆ, ಮನ ಬಂದಂತೆ ಕಚೇರಿಗೆ ಬಂದು ಹೋಗುತ್ತಾರೆ. ಬೇಜವಾಬ್ದಾರಿತನದಿಂದ ವರ್ತಿಸುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು' ಎಂದು ಗ್ರಾಮಸ್ಥರು ಆಗ್ರಹಿಸಿದರು.

ಪ್ರತಿಭಾ ಆರ್., ತಹಶೀಲ್ದಾರ್, ಸಾಗರಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗಿ ಜಿಪಿಎಸ್‌ ಫೋಟೊ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ಸಮಯ ಪಾಲನೆ ಮಾಡದೆ ಇದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು
Dailyhunt
Disclaimer: This content has not been generated, created or edited by Dailyhunt. Publisher: Prajavani