Dailyhunt Logo
  • Light mode
    Follow system
    Dark mode
    • Play Story
    • App Story
ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪ

ಸಮ್ಮೇಳನಾಧ್ಯಕ್ಷರು ಹೇಳಿದ್ದು: ಸಮ್ಮೇಳನ ಕೇವಲ ಸಾಹಿತಿಗಳ ಸಮಾವೇಶವಲ್ಲ; ಗುಂಡಪ್ಪ

ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಕವಿಗಳು, ಸಾಹಿತಿಗಳು, ವಿದ್ವಾಂಸರು ಒಂದೆಡೆ ಸೇರಿ ತಮ್ಮ ಸಾಹಿತ್ಯಕ ಸಾಧನೆಗಳನ್ನು ಹಂಚಿಕೊಳ್ಳುವ ವೇದಿಕೆಯಷ್ಟೇ ಅಲ್ಲ. ಕನ್ನಡ ಭಾಷೆಯ ಬೆಳವಣಿಗೆಗೆ ಬೇಕಾದ ಯೋಜನೆಗಳನ್ನು ರೂಪಿಸುವ, ಹೊಸ ಪೀಳಿಗೆಯಲ್ಲಿ ಓದುವ ಆಸಕ್ತಿ ಬೆಳೆಸುವ, ಕನ್ನಡದಲ್ಲಿ ಜ್ಞಾನಸಂಪತ್ತನ್ನು ಸೃಷ್ಟಿಸುವ ಮತ್ತು ಕನ್ನಡಿಗರ ನಡುವೆ ಒಗ್ಗಟ್ಟು ಮೂಡಿಸುವ ಸಂಸ್ಥೆಯಾಗಬೇಕು.

ಸುಮಾರು 94 ವರ್ಷಗಳ ಹಿಂದೆಯೇ ಇಂತಹ ದೂರದೃಷ್ಟಿಯ ಚಿಂತನೆಗಳನ್ನು ಮಂಡಿಸಿದವರು ಡಿ.ವಿ. ಗುಂಡಪ್ಪ.

ಇಂದು ಕನ್ನಡ ಸಾಹಿತ್ಯ ಪರಿಷತ್ತು ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಸಂದರ್ಭದಲ್ಲಿ, 1932ರಲ್ಲಿ ಡಿ.ವಿ.ಜಿ. ಅವರು ಮಂಡಿಸಿದ ಅಧ್ಯಕ್ಷೀಯ ಭಾಷಣವನ್ನು ಓದಿದರೆ ಅಚ್ಚರಿಯಾಗುತ್ತದೆ. ಕನ್ನಡದ ಬೆಳವಣಿಗೆಗೆ ಬೇಕಾದ ಅನೇಕ ಸಂಗತಿಗಳನ್ನು ಅವರು ಅಂದೇ ಗುರುತಿಸಿದ್ದರು. ಕನ್ನಡಕ್ಕೆ ಹೊಸ ವ್ಯಾಕರಣ ಬೇಕು, ಉತ್ತಮ ಪಠ್ಯಪುಸ್ತಕಗಳು ಬೇಕು, ಕನ್ನಡದಲ್ಲಿ ವಿಜ್ಞಾನ ಮತ್ತು ಶಾಸ್ತ್ರಗ್ರಂಥಗಳು ಬರಬೇಕು, ಸರ್ಕಾರಿ ಕಚೇರಿಗಳಲ್ಲಿ ಸರಳ ಕನ್ನಡ ಬಳಕೆಯಾಗಬೇಕು, ಕನ್ನಡ ಪುಸ್ತಕಗಳ ಗ್ರಂಥಭಂಡಾರ ಸಮೃದ್ಧವಾಗಬೇಕು, ಕನ್ನಡದ ವಿವಿಧ ಪ್ರದೇಶಗಳ ಸಾಹಿತ್ಯ ಸಂಸ್ಥೆಗಳು ಪರಸ್ಪರ ಕೈಜೋಡಿಸಬೇಕು ಎಂಬ ಅವರ ಸಲಹೆಗಳು ಇಂದಿಗೂ ಪ್ರಸ್ತುತವಾಗಿವೆ.

ಪತ್ರಕರ್ತ, ಸಾಹಿತಿ, ಚಿಂತಕ ಡಿ.ವಿ.ಜಿ.

ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ (ಡಿ.ವಿ.ಜಿ.) ಅವರು 1887ರ ಮಾರ್ಚ್ 17ರಂದು ಕೋಲಾರ ಜಿಲ್ಲೆಯ ಮುಳಬಾಗಲಿನಲ್ಲಿ ಜನಿಸಿದರು. ಔಪಚಾರಿಕ ಶಿಕ್ಷಣದಲ್ಲಿ ಮೆಟ್ರಿಕ್ಯುಲೇಷನ್ ಪೂರ್ಣಗೊಳಿಸದಿದ್ದರೂ ಸ್ವಂತ ಅಧ್ಯಯನದ ಮೂಲಕ ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದರು. ಪತ್ರಿಕೋದ್ಯಮದಿಂದ ಸಾರ್ವಜನಿಕ ಜೀವನದವರೆಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದವರು. 'ಭಾರತಿ' ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದರು. ಸಾರ್ವಜನಿಕ ಆಡಳಿತ, ರಾಜಕೀಯ, ಶಿಕ್ಷಣ, ಸಾಹಿತ್ಯ, ತತ್ವಶಾಸ್ತ್ರ ಮತ್ತು ಸಂಸ್ಕೃತಿಗಳ ಬಗ್ಗೆ ಆಳವಾದ ಆಸಕ್ತಿ ಹೊಂದಿದ್ದರು. ಅವರ 'ಮಂಕುತಿಮ್ಮನ ಕಗ್ಗ' ಕನ್ನಡಿಗರ ಮನೆಮಾತಾಗಿದೆ. 'ಜೀವನ ಸೌಂದರ್ಯ ಮತ್ತು ಸಾಹಿತ್ಯ', 'ಬಾಳಿಗೊಂದು ನಂಬಿಕೆ', 'ಸಂಸ್ಕೃತಿ', 'ಉಮರನ ಒಸಗೆ', 'ಜ್ಞಾಪಕಚಿತ್ರಶಾಲೆ' ಮೊದಲಾದ ಕೃತಿಗಳು ಅವರ ವಿಶಾಲ ಚಿಂತನೆಯ ಪರಿಚಯ ಮಾಡಿಸುತ್ತವೆ.

ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ವರ್ಗದಲ್ಲಿದ್ದ ಅವರು, 1933ರಿಂದ 1937ರವರೆಗೆ ಪರಿಷತ್ತಿನ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದರು. ಹೀಗಾಗಿ ಪರಿಷತ್ತಿನ ಸಂಘಟನಾತ್ಮಕ ಬೆಳವಣಿಗೆಯ ಬಗ್ಗೆ ಅವರಿಗೆ ಆಳವಾದ ಅರಿವಿತ್ತು.

1932ರ ಡಿಸೆಂಬರ್ 28ರಿಂದ 30ರವರೆಗೆ ಮಡಿಕೇರಿಯಲ್ಲಿ ನಡೆದ 18ನೇ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಹೊಸ ಸಾಹಿತ್ಯದ ವಸಂತಾರಂಭ!

ಡಿವಿಜಿ ಭಾಷಣದ ಮೊದಲ ಭಾಗವೇ ಕನ್ನಡ ಸಾಹಿತ್ಯದ ಬೆಳವಣಿಗೆಯ ಕುರಿತು ಆಶಾವಾದದಿಂದ ಕೂಡಿತ್ತು.

ಕನ್ನಡ ಸಾಹಿತ್ಯವು ಇತರ ಭಾಷೆಗಳ ಸಂಪರ್ಕದಿಂದ ಹೊಸ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂಬುದನ್ನವರು ಗುರುತಿಸಿದ್ದರು. ಹಿಂದಿನ ಐವತ್ತು ವರ್ಷಗಳಲ್ಲಿ ಕನ್ನಡ ಸಾಹಿತ್ಯ ಹೊಸ ಕಾಂತಿ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ತು, ಧಾರವಾಡದ ವಿದ್ಯಾವರ್ಧಕ ಸಂಘ, ಬೆಂಗಳೂರಿನ ಕರ್ನಾಟಕ ಸಂಘ, ಧಾರವಾಡದ ಗೆಳೆಯರ ಗುಂಪು, ಮಂಗಳೂರಿನ ಬಾಲಸಾಹಿತ್ಯ ಮಂಡಲ, ಮೈಸೂರು ಕರ್ನಾಟಕ ಸಂಘ ಮೊದಲಾದ ಸಂಸ್ಥೆಗಳು ಹೊಸ ಸಾಹಿತ್ಯ ವಾತಾವರಣವನ್ನು ನಿರ್ಮಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹೊಸ ವಿಷಯಗಳು, ಹೊಸ ಬರವಣಿಗೆಯ ಕ್ರಮಗಳು ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಯಾಗುತ್ತಿವೆ. ನೂರಾರು ಯುವಕರ ಕಣ್ಣುಗಳಲ್ಲಿ ಸಾಹಿತ್ಯದ ಬಗ್ಗೆ ಉತ್ಸಾಹ ಹೊಳೆಯುತ್ತಿದೆ ಎಂದು ಹೇಳಿದ್ದ ಅವರು, ಕನ್ನಡ ಸಾಹಿತ್ಯದ ಬೆಳವಣಿಗೆಯನ್ನು ಇನ್ನೂ ಆರಂಭವಾಗುತ್ತಿರುವ ವಸಂತಕ್ಕೆ ಹೋಲಿಸಿದ್ದರು.

ಅವರ ಅಧ್ಯಕ್ಷೀಯ ಭಾಷಣದಲ್ಲಿ ಆಶಾವಾದದ ಜೊತೆಗೆ ಒಂದು ಎಚ್ಚರಿಕೆಯೂ ಇತ್ತು. ಸಾಹಿತ್ಯದ ಬೆಳವಣಿಗೆ ಕೇವಲ ಉತ್ತಮ ಕೃತಿಗಳು ಪ್ರಕಟವಾಗುವುದರಿಂದ ಮಾತ್ರ ಸಾಧ್ಯವಿಲ್ಲ. ಅದಕ್ಕೆ ಪೂರಕವಾದ ಸಂಸ್ಥೆಗಳು, ಓದುಗರು, ಶಿಕ್ಷಕರು, ಗ್ರಂಥಾಲಯಗಳು ಮತ್ತು ಸಂಘಟಿತ ಪ್ರಯತ್ನಗಳೂ ಬೇಕು ಎಂಬುದು ಅವರ ಸ್ಪಷ್ಟ ಆಶಯವಾಗಿತ್ತು.

ಪರಿಷತ್ತು ಬೆಂಗಳೂರಿ(ಮೈಸೂರು)ನವರಿಗೆ ಮಾತ್ರ ಸೇರಿದ್ದಲ್ಲ!

ಅವರ ಭಾಷಣದ ಅತ್ಯಂತ ಮಹತ್ವದ ಭಾಗವೆಂದರೆ ಕನ್ನಡ ಸಾಹಿತ್ಯ ಪರಿಷತ್ತಿನ ಭವಿಷ್ಯದ ಕುರಿತ ಚಿಂತನೆ.

ಆಗ ಪರಿಷತ್ತು ಸುಮಾರು 18 ವರ್ಷಗಳಿಂದ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಮೈಸೂರು ಮಹಾರಾಜರು, ಸರ್ಕಾರ ಮತ್ತು ಪರಿಷತ್ತಿನ ಅಭಿಮಾನಿಗಳ ನೆರವಿನಿಂದ ಬೆಂಗಳೂರಿನಲ್ಲಿ 'ಶ್ರೀಕೃಷ್ಣರಾಜೇಂದ್ರ ಕರ್ನಾಟಕ ಸಾಹಿತ್ಯ ಪರಿಷನ್ಮಂದಿರ' ನಿರ್ಮಾಣವಾಗಿತ್ತು. ಈ ಕಟ್ಟಡದಲ್ಲಿ ಗ್ರಂಥಭಂಡಾರ, ಪತ್ರಿಕೆಗಳ ಓದು, ಉಪನ್ಯಾಸ, ಚರ್ಚೆ ಮತ್ತು ಸಂಶೋಧನೆಗಳಿಗೆ ಅಗತ್ಯವಾದ ವ್ಯವಸ್ಥೆಗಳಾಗಿದ್ದವು.

ಈ ಹೊಸ ಕಟ್ಟಡದ ಮಹತ್ವವನ್ನು ವಿವರಿಸುತ್ತಾ ಡಿ.ವಿ.ಜಿ. ಒಂದು ವಿಶಿಷ್ಟ ಆಶಯ ವ್ಯಕ್ತಪಡಿಸುತ್ತಾರೆ. ಈ ಕಟ್ಟಡ ಮೈಸೂರಿನವರಿಗಷ್ಟೇ (ಆಗ ಇನ್ನೂ ಕರ್ನಾಟಕ ಎಂಿದಾಗಿರಲಿಲ್ಲ, ಬೆಂಗಳೂರು ರಾಜಧಾನಿಯೂ ಆಗರಲಿಲ್ಲ) ಸೇರಿದ್ದಲ್ಲ; ಎಲ್ಲ ಕನ್ನಡಿಗರಿಗೂ ಸೇರಿದ್ದು. ಅದು ಇಡೀ ಕನ್ನಡ ಸಾರಸ್ವತ ಪ್ರಪಂಚದ ಕೇಂದ್ರವಾಗಬೇಕು. ಎಲ್ಲ ಸಾಹಿತ್ಯ ಸೇವಕರೂ ಅದನ್ನು ತಮ್ಮದೇ ಮನೆಯಂತೆ, ತಮ್ಮ ಕುಲದೈವ ಕ್ಷೇತ್ರದಂತೆ ಭಾವಿಸಬೇಕು ಎಂಬುದು ಅವರ ಆಶಯವಾಗಿತ್ತು.

ಇದೊಂದು ಕೇವಲ ಕಟ್ಟಡದ ಬಗ್ಗೆ ಮಾಡಿದ ಮಾತಲ್ಲ. ಕನ್ನಡದ ಎಲ್ಲ ಪ್ರದೇಶಗಳ ಸಾಹಿತಿಗಳು, ವಿದ್ವಾಂಸರು ಮತ್ತು ಸಾಹಿತ್ಯ ಸಂಸ್ಥೆಗಳನ್ನು ಒಗ್ಗೂಡಿಸುವ ಸಾಂಸ್ಥಿಕ ಕೇಂದ್ರದ ಕನಸಾಗಿತ್ತು.

ಕನ್ನಡ ಪಠ್ಯಪುಸ್ತಕಗಳು ಹೇಗಿರಬೇಕು?

ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಆಸಕ್ತಿ ಮೂಡಿಸುವಲ್ಲಿ ಪಠ್ಯಪುಸ್ತಕಗಳ ಪಾತ್ರ ಬಹಳ ಮುಖ್ಯ ಎಂಬುದನ್ನು ಡಿ.ವಿ.ಜಿ. ಗುರುತಿಸಿದ್ದರು. ಕನ್ನಡ ಪಠ್ಯಪುಸ್ತಕಗಳನ್ನು ಆಯ್ಕೆ ಮಾಡುವಾಗ ಮೂರು ಅಂಶಗಳನ್ನು ಗಮನಿಸಬೇಕು ಎಂದು ಅವರು ಸಲಹೆ ನೀಡಿದ್ದರು;

ವಿಷಯದ ಘನತೆ ಇರಬೇಕು.
ಭಾವಪೂರ್ಣತೆ ಇರಬೇಕು.
ಭಾಷಾಶೈಲಿಯ ಶುದ್ಧತೆ ಇರಬೇಕು.

ನೀರಸವಾದ ಪುಸ್ತಕಗಳನ್ನು ಓದುವುದರಿಂದ ವಿದ್ಯಾರ್ಥಿಗಳಿಗೆ ಕನ್ನಡದ ಬಗ್ಗೆ ಬೇಸರ ಉಂಟಾಗುತ್ತದೆ. ಕ್ರಮೇಣ ಕನ್ನಡ ಭಾಷೆಯೇ ಬೇಡವೆನಿಸುವ ಪರಿಸ್ಥಿತಿ ಬರಬಹುದು ಎಂಬ ಅವರ ಎಚ್ಚರಿಕೆ ಗಮನಾರ್ಹ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿಯೂ ಕನ್ನಡ ಪಠ್ಯಪುಸ್ತಕಗಳ ಗುಣಮಟ್ಟ, ಮಕ್ಕಳಿಗೆ ಅರ್ಥವಾಗುವ ಭಾಷೆ ಮತ್ತು ಓದುವ ಆಸಕ್ತಿ ಬೆಳೆಸುವ ವಿಷಯಗಳ ಕುರಿತು ಚರ್ಚೆ ನಡೆಯುತ್ತಿರುವುದನ್ನು ಗಮನಿಸಿದರೆ, ಅವರ ಕಾಳಜಿಯ ಮಹತ್ವ ಅರ್ಥವಾಗುತ್ತದೆ.

ಸರ್ಕಾರಿ ಕಚೇರಿಗಳಲ್ಲಿ ಕನ್ನಡ!

ಡಿವಿಜಿ ಭಾಷಣದಲ್ಲಿದ್ದ ಅತ್ಯಂತ ಕುತೂಹಲಕಾರಿ ಭಾಗಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಬಳಕೆಯಾಗುತ್ತಿದ್ದ ಕನ್ನಡದ ಕುರಿತ ಟೀಕೆಯೂ ಒಂದು. ಸರ್ಕಾರದ ವಿವಿಧ ಇಲಾಖೆಗಳು ಕನ್ನಡ ಭಾಷೆಯ ಬೆಳವಣಿಗೆಗೆ ನೆರವಾಗಬಹುದು. ಮುಖ್ಯವಾಗಿ ಕಚೇರಿಗಳ ಲೆಕ್ಕಪತ್ರಗಳು, ವರದಿಗಳು, ಪಟ್ಟಿಗಳು ಮತ್ತು ಸಾರ್ವಜನಿಕರಿಗೆ ತಲುಪುವ ದಾಖಲೆಗಳನ್ನು ಸಾಧ್ಯವಾದಷ್ಟು ಕನ್ನಡದಲ್ಲಿಯೇ ಬರೆಯಬೇಕು ಎಂದು ಅವರು ಆಗಲೇ ಒತ್ತಾಯಿಸಿದ್ದರು.

ಅಂದಿನ ಸರ್ಕಾರಿ ಭಾಷೆಯ ವಿಚಿತ್ರ ಬಳಕೆಯನ್ನು ತೋರಿಸಲು ಎರಡು ಉದಾಹರಣೆಗಳನ್ನೂ ನೀಡುತ್ತಾರೆ.

"ಈ ಹುಕುಂಮಿಗೆ ಲಗತ್ತಿರುವ ತಃಖ್ತೆಯ ಕಲಂಗಳಲ್ಲಿ ಸವಾಲಿಗೆ ಜವಾಬನ್ನು ಹುಷ್ಯಾರೀಯಿಂದ ನಮೂದಿಸತಕ್ಕದ್ದಿದೆ."

"ಈ ಕೊಳದಲ್ಲಿ ಗಲೀಜುವಗೈರೆ ಮಾಡುವವರನ್ನು ಪ್ರಾಸಿಕ್ಯೂಷನ್ ಮಾಡಲ್ಪಡುತ್ತದೆ."

ಇಂತಹ ಭಾಷೆಯನ್ನು ಪ್ರಶ್ನಿಸುತ್ತಾ, 'ಇದು ಯಾವ ಸೀಮೆಯ ಕನ್ನಡ?' ಎಂದು ಕೇಳುತ್ತಾರೆ.

ಇದು ಕೇವಲ ಭಾಷಾ ಶುದ್ಧತೆಯ ಪ್ರಶ್ನೆಯಾಗಿರಲಿಲ್ಲ. ಸಾಮಾನ್ಯ ಜನರಿಗೆ ಅರ್ಥವಾಗುವ ಭಾಷೆಯಲ್ಲಿ ಆಡಳಿತ ನಡೆಯಬೇಕು ಎಂಬ ಪ್ರಜಾಪ್ರಭುತ್ವದ ಆಶಯವೂ ಅದರಲ್ಲಿತ್ತು. ಇಂದು ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಬಳಕೆಯ ಬಗ್ಗೆ ಮಾತನಾಡುವಾಗಲೂ ಈ ಪ್ರಶ್ನೆ ಪ್ರಸ್ತುತವಾಗುತ್ತದೆ. ಕನ್ನಡದಲ್ಲಿ ದಾಖಲೆ ಸಿದ್ಧಪಡಿಸುವುದಷ್ಟೇ ಸಾಲದು; ಅದು ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿರಬೇಕು.

ಕನ್ನಡಕ್ಕೆ ಹೊಸ ವ್ಯಾಕರಣ ಬೇಕು!

ಡಿ.ವಿ.ಜಿ. ಅವರ ಮತ್ತೊಂದು ಪ್ರಮುಖ ಬೇಡಿಕೆ ಕನ್ನಡ ಭಾಷೆಗೆ ಹೊಸ ವ್ಯಾಕರಣ ರಚಿಸಬೇಕು ಎಂಬುದಾಗಿತ್ತು.

ಶಬ್ದಮಣಿದರ್ಪಣ ಮತ್ತು ಶಬ್ದಾನುಶಾಸನಗಳ ಕಾಲದಿಂದ ಕನ್ನಡ ಭಾಷೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಪದಗಳು, ಹೊಸ ಪ್ರಯೋಗಗಳು, ಹೊಸ ಅಭಿವ್ಯಕ್ತಿಗಳು ಭಾಷೆಗೆ ಸೇರ್ಪಡೆಯಾಗಿವೆ. ಇವುಗಳಲ್ಲಿ ಯಾವುದು ಸಹಜವಾದ ಬದಲಾವಣೆ, ಯಾವುದನ್ನು ಒಪ್ಪಿಕೊಳ್ಳಬಹುದು, ಯಾವುದನ್ನು ತಿದ್ದಿಕೊಳ್ಳಬೇಕು ಎಂಬುದನ್ನು ಗುರುತಿಸುವ ಹೊಸ ವ್ಯಾಕರಣ ಬೇಕು ಎಂದು ಅವರು ಪ್ರತಿಪಾದಿಸಿದ್ದರು. ಭಾಷೆಯ ಬೆಳವಣಿಗೆಗೆ ಅಡ್ಡಿಯಾಗುವ ಅನಗತ್ಯ ಕಟ್ಟಳೆಗಳನ್ನು ಸಡಿಲಗೊಳಿಸಿ, ಭಾಷೆಯ ಸಹಜ ಬೆಳವಣಿಗೆಗೆ ಅವಕಾಶ ನೀಡಬೇಕು ಎಂಬುದು ಅವರ ನಿಲುವಾಗಿತ್ತು.

ಗ್ರಂಥಾಲಯ, ಸಂಶೋಧನೆ ಮತ್ತು ಕನ್ನಡದ ಸಂಸ್ಥೆಗಳ ಒಗ್ಗಟ್ಟು

ಕನ್ನಡದಲ್ಲಿ ಪ್ರಕಟವಾಗಿರುವ ಪ್ರತಿಯೊಂದು ಪುಸ್ತಕದ ಒಂದು ಪ್ರತಿಯಾದರೂ ಸಾಹಿತ್ಯ ಪರಿಷತ್ತಿನ ಗ್ರಂಥಭಂಡಾರದಲ್ಲಿ ಇರಬೇಕು ಎಂದು ಅವರು ಬಯಸಿದ್ದರು. ಪ್ರಕಟವಾಗದ ಹಳೆಯ ಕೃತಿಗಳು, ತಾಳೆಗರಿ ಗ್ರಂಥಗಳು ಕೂಡ ಸಂಗ್ರಹವಾಗಬೇಕು. ಇಂತಹ ಸಂಪತ್ತು ಒಂದೆಡೆ ಲಭ್ಯವಿಲ್ಲದಿದ್ದರೆ ಸಂಶೋಧನೆ ಸಾಧ್ಯವಿಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದರು.

ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ವಿವಿಧ ಪ್ರದೇಶಗಳ ಸಂಸ್ಥೆಗಳ ವಿವರಗಳನ್ನು ಸಂಗ್ರಹಿಸಿ, ಅವುಗಳ ಕಾರ್ಯಕ್ರಮಗಳನ್ನು ಸಮನ್ವಯಗೊಳಿಸಬೇಕು ಎಂದೂ ಸಲಹೆ ನೀಡಿದ್ದರು.

ಇನ್ನೊಂದು ಕುತೂಹಲಕಾರಿ ಸಂಗತಿಯೆಂದರೆ, ಆಗ ಪರಿಷತ್ತಿನ ಸದಸ್ಯರ ಸಂಖ್ಯೆ ಕೇವಲ 125 ಆಗಿತ್ತು. ವಾರ್ಷಿಕ ಆದಾಯ ಸುಮಾರು 2,200 ರೂಪಾಯಿಗಳು; ವೆಚ್ಚ ಅದಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. ಇಷ್ಟೊಂದು ಕಡಿಮೆ ಸಂಪನ್ಮೂಲಗಳ ನಡುವೆ ದೊಡ್ಡ ಕೆಲಸಗಳನ್ನು ನಿರೀಕ್ಷಿಸುವುದು ಕಷ್ಟ ಎಂಬುದನ್ನು ಅವರು ಮುಚ್ಚಿಡಲಿಲ್ಲ.

ಪರಿಷತ್ತಿನ ಸದಸ್ಯತ್ವವನ್ನು ಹೆಚ್ಚಿಸಬೇಕು, ಜನರಲ್ಲಿ ಓದುವ ಅಭಿರುಚಿ ಬೆಳೆಸಬೇಕು, ಜನರ ಮತ್ತು ದಾನಿಗಳ ನೆರವಿನಿಂದ ಸಂಸ್ಥೆಯನ್ನು ಬಲಪಡಿಸಬೇಕು ಎಂದು ಕರೆ ನೀಡಿದ್ದರು.

ಅಧ್ಯಕ್ಷೀಯ ಭಾಷಣದ ಸಾರ: ಡಿವಿಜಿ ಮಾತಿನಲ್ಲೇ...

ಕನ್ನಡ ಸಾಹಿತ್ಯವು ಕಳೆದ ಐವತ್ತು ವರ್ಷಗಳಲ್ಲಿ ಹೊಸ ಕಾಂತಿ ಮತ್ತು ಶಕ್ತಿಯನ್ನು ಪಡೆದುಕೊಂಡಿದೆ. ಅನೇಕ ಸಾಹಿತ್ಯ ಸಂಸ್ಥೆಗಳು ಹುಟ್ಟಿಕೊಂಡಿವೆ. ಹೊಸ ವಿಷಯಗಳನ್ನೊಳಗೊಂಡ, ಹೊಸ ರೀತಿಯ ಗ್ರಂಥಗಳು ಪ್ರಕಟವಾಗುತ್ತಿವೆ. ನೂರಾರು ಯುವಕರಲ್ಲಿ ಸಾಹಿತ್ಯದ ಆಸಕ್ತಿ ಮೂಡುತ್ತಿದೆ. ಇದು ಸಂತೋಷದ ಸಂಗತಿ. ಆದರೆ ಈ ಬೆಳವಣಿಗೆಯನ್ನು ಇನ್ನಷ್ಟು ವಿಸ್ತರಿಸಬೇಕಾದರೆ ಸಾಹಿತ್ಯ ಪರಿಷತ್ತನ್ನು ಬಲಪಡಿಸಬೇಕು. ಅದು ಮೈಸೂರಿನವರಿಗಾಗಲಿ ಬೆಂಗಳೂರಿನವರಿಗಾಗಲಿ ಮಾತ್ರ ಸೀಮಿತವಾಗಬಾರದು. ಎಲ್ಲ ಕನ್ನಡಿಗರಿಗೂ ಸೇರಿದ್ದು, ಇಡೀ ಕನ್ನಡ ಸಾರಸ್ವತ ಪ್ರಪಂಚದ ಕೇಂದ್ರವಾಗಬೇಕು.

ಕನ್ನಡದ ಬೆಳವಣಿಗೆಗೆ ಉತ್ತಮ ಪಠ್ಯಪುಸ್ತಕಗಳು, ಹೊಸ ವ್ಯಾಕರಣ, ನಿಘಂಟು, ಸಂಶೋಧನಾ ಗ್ರಂಥಗಳು, ಸಮೃದ್ಧ ಗ್ರಂಥಭಂಡಾರ ಮತ್ತು ತರಬೇತಿ ಪಡೆದ ಕನ್ನಡ ಶಿಕ್ಷಕರು ಬೇಕು. ಸರ್ಕಾರಿ ಕಚೇರಿಗಳಲ್ಲಿಯೂ ಜನರಿಗೆ ಅರ್ಥವಾಗುವ ಸರಳ ಕನ್ನಡ ಬಳಕೆಯಾಗಬೇಕು. ಕನ್ನಡಕ್ಕಾಗಿ ದುಡಿಯುವ ವಿವಿಧ ಸಂಸ್ಥೆಗಳು ಪರಸ್ಪರ ಸಹಕರಿಸಬೇಕು. ಪರಿಷತ್ತಿಗೆ ಜನರ ಬೆಂಬಲ ಮತ್ತು ಆರ್ಥಿಕ ನೆರವು ದೊರೆಯಬೇಕು. ನಾವೆಲ್ಲರೂ ಒಗ್ಗಟ್ಟಿನಿಂದ ಭಾಷಾಸೇವೆ ಮಾಡಿದಾಗ ಅದರ ಮೂಲಕ ನಾಡಿನ ಸೇವೆಯೂ ಸಾಧ್ಯವಾಗುತ್ತದೆ.

ಮೇಲಿನದ್ದು ಡಿ.ವಿ.ಜಿ. ಅವರ ಮೂಲ ಅಧ್ಯಕ್ಷೀಯ ಭಾಷಣದ ವಿಚಾರಗಳನ್ನು ಮೊದಲ ವ್ಯಕ್ತಿಯ ನಿರೂಪಣೆಯಲ್ಲಿ ಸಂಕ್ಷಿಪ್ತವಾಗಿ ಮರುರೂಪಿಸಿರುವ ಸಂಪಾದಕೀಯ ಸಾರಾಂಶ. ನೇರ ಉಲ್ಲೇಖವಲ್ಲ.

ಇಂದಿಗೂ ಕಾಡುವ ಪ್ರಶ್ನೆಗಳು!

1932ರಲ್ಲಿ ಡಿ.ವಿ.ಜಿ. ಅವರು ಮುಂದಿಟ್ಟಿದ್ದ ಹಲವು ಪ್ರಶ್ನೆಗಳಿಗೆ ಇಂದಿಗೂ ಸಂಪೂರ್ಣ ಉತ್ತರ ದೊರೆತಿಲ್ಲ.

ಕನ್ನಡದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಹೊಸ ಜ್ಞಾನಶಾಖೆಗಳ ಉತ್ತಮ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಪ್ರಕಟವಾಗುತ್ತಿವೆಯೇ?

ಶಾಲಾ ಮಕ್ಕಳಲ್ಲಿ ಕನ್ನಡ ಓದುವ ಆಸಕ್ತಿ ಬೆಳೆಸುವಂತಹ ಪಠ್ಯಪುಸ್ತಕಗಳು ನಮ್ಮಲ್ಲಿವೆಯೇ? ಸರ್ಕಾರಿ ಕಚೇರಿಗಳಲ್ಲಿ ಬಳಕೆಯಾಗುವ ಕನ್ನಡ ಸಾಮಾನ್ಯ ಜನರಿಗೆ ಸುಲಭವಾಗಿ ಅರ್ಥವಾಗುತ್ತಿದೆಯೇ? ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಪುಸ್ತಕಗಳನ್ನೂ ಸಂಗ್ರಹಿಸುವ ಸಮಗ್ರ ಗ್ರಂಥಭಂಡಾರ ನಮ್ಮಲ್ಲಿದೆಯೇ?

ಕನ್ನಡಕ್ಕಾಗಿ ಕೆಲಸ ಮಾಡುವ ವಿವಿಧ ಸಂಸ್ಥೆಗಳ ನಡುವೆ ಸಾಕಷ್ಟು ಸಮನ್ವಯವಿದೆಯೇ? ಸುಮಾರು ಒಂದು ಶತಮಾನದ ಹಿಂದೆ ಈ ಪ್ರಶ್ನೆಗಳನ್ನು ಮುಂದಿಟ್ಟಿದ್ದ ಡಿ.ವಿ.ಜಿ. ಅವರ ದೂರದೃಷ್ಟಿ ನಿಜಕ್ಕೂ ಗಮನಾರ್ಹ.

ಅವರ ಅಧ್ಯಕ್ಷೀಯ ಭಾಷಣದ ಅತ್ಯಂತ ಮಹತ್ವದ ಸಂದೇಶವೆಂದರೆ, ಭಾಷೆಯ ಏಳಿಗೆ ಕೇವಲ ಸಾಹಿತಿಗಳ ಜವಾಬ್ದಾರಿಯಲ್ಲ; ಅದು ಸಮಾಜದ ಎಲ್ಲರ ಹೊಣೆಗಾರಿಕೆ. ಭಾಷಾಸೇವೆಯ ಮೂಲಕ ದೇಶಸೇವೆಯೂ ಸಾಧ್ಯ ಎಂಬ ಅವರ ನಂಬಿಕೆ ಇಡೀ ಭಾಷಣದ ಜೀವಾಳವಾಗಿದೆ.

ನಿರೂಪಣೆ: ರಾಧಾಕೃಷ್ಣ ಎಸ್‌. ಭಡ್ತಿ

Dailyhunt
Disclaimer: This content has not been generated, created or edited by Dailyhunt. Publisher: Prajavani