Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ: ಆಹಾರ ಸುರಕ್ಷತೆಯ ನಿರ್ಲಕ್ಷ್ಯ ಸಲ್ಲ, ನಿಯಮಪಾಲನೆ ಕಟ್ಟುನಿಟ್ಟಾಗಿರಲಿ

ಸಂಪಾದಕೀಯ: ಆಹಾರ ಸುರಕ್ಷತೆಯ ನಿರ್ಲಕ್ಷ್ಯ ಸಲ್ಲ, ನಿಯಮಪಾಲನೆ ಕಟ್ಟುನಿಟ್ಟಾಗಿರಲಿ

ಹಾರ ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಸಂಬಂಧಿಸಿದ ಪರಿಶೀಲನೆಗಳು ನಿರಂತರವಾಗಿರಬೇಕು. ಆಹಾರೋದ್ಯಮದ ಕಾರ್ಯನಿರ್ವಹಣೆಯಲ್ಲಿ ಸ್ವಯಂಪ್ರೇರಣೆಯ ನಿಯಮಪಾಲನೆಯೂ ಅಗತ್ಯ.

ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಡೆದಿರುವ ದಾಳಿಗಳು ಆತಂಕಕಾರಿ ವಾಸ್ತವವನ್ನು ಬಹಿರಂಗಪಡಿಸಿವೆ.

ಅಸುರಕ್ಷಿತ ಆಹಾರವು ಅಪರಿಚಿತ ಹೋಟೆಲ್‌ಗಳು ಅಥವಾ ರಸ್ತೆ ಬದಿಯ ತಳ್ಳುಗಾಡಿಗಳಲ್ಲಿನ ಆಹಾರಪದಾರ್ಥಗಳಿಗೆ ಸೀಮಿತವಾಗಿಲ್ಲ. ಪ್ರತಿಷ್ಠಿತ ಹಾಗೂ ಐಷಾರಾಮಿ ಹೋಟೆಲ್‌ಗಳಲ್ಲಿಯೂ ಕೊಳೆತ ಮಾಂಸ, ಬೂಸ್ಟ್‌ಪೀಡಿತ ತರಕಾರಿಗಳು, ಅವಧಿ ಮುಗಿದ ಉತ್ಪನ್ನಗಳು, ಕಳಪೆ ಸಂಗ್ರಹಣಾ ವ್ಯವಸ್ಥೆ ಹಾಗೂ ನೈರ್ಮಲ್ಯ ಮಾರ್ಗಸೂಚಿಯ ಉಲ್ಲಂಘನೆಗಳು ಕಂಡುಬಂದಿವೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಗಳಲ್ಲಿ ಈ ಸಂಗತಿಗಳು ಬೆಳಕಿಗೆ ಬಂದಿವೆ. ಇಲಿ ಮತ್ತು ಜಿರಲೆಗಳ ತ್ಯಾಜ್ಯಗಳನ್ನು ಒಳಗೊಂಡಿರುವ ಆಹಾರ ಪದಾರ್ಥಗಳ ಚೀಲಗಳು ಇಂದಿರಾ ಕ್ಯಾಂಟೀನ್‌ಗಳಿಗೆ ಸರಬರಾಜಾಗುತ್ತಿರುವುದು ಆತಂಕ ಮೂಡಿಸುವಂತಿದೆ.

ಇಂಥ ಉಲ್ಲಂಘನೆಗಳು ಕ್ವಿಕ್ ಕಾಮರ್ಸ್ ಕಂಪನಿಗಳ ಗೋದಾಮುಗಳು ಹಾಗೂ ಬಹುರಾಷ್ಟ್ರೀಯ ಸಂಸ್ಥೆಗಳ ಆಹಾರ ಸರಪಳಿ ವ್ಯವಸ್ಥೆಯಲ್ಲೂ ಕಂಡುಬಂದಿವೆ. ಎಲ್ಲ ವರ್ಗದವರನ್ನೂ ಕಳವಳಕ್ಕೆ ದೂಡುವ ಬೆಳವಣಿಗೆ ಇದು. ಬಡವರು, ಜನಸಾಮಾನ್ಯರು, ಶ್ರೀಮಂತರು ಸೇರಿದಂತೆ ಎಲ್ಲರೂ ಒಂದೇ ಬಗೆಯ ಅಪಾಯಕ್ಕೆ ಒಳಗಾಗುತ್ತಾರೆ. ಹೆಚ್ಚಿನ ಮೊತ್ತ ತೆತ್ತ ಮಾತ್ರಕ್ಕೆ ಸುರಕ್ಷಿತ ಆಹಾರ ದೊರೆಯುತ್ತದೆ ಎನ್ನುವ ಖಾತರಿ ಇಲ್ಲದಂತಾಗಿದೆ. ಈ ದಾಳಿಗಳನ್ನು, ಸಾರ್ವಜನಿಕರ ನಿಗಾ ಕಡಿಮೆ ಇರುವ ಕ್ಲೌಡ್‌ ಕಿಚನ್‌ಗಳಿಗೂ ಕಾಲೇಜ್‌ ಹಾಸ್ಟೆಲ್‌ ಗಳಿಗೂ ವಿಸ್ತರಿಸಬೇಕು. ನಿರ್ಲಕ್ಷ್ಯದ ಪರಿಣಾಮವು ಅಜೀರ್ಣದಂತಹ ಸಾಮಾನ್ಯ ಸಮಸ್ಯೆಗೆ ಸೀಮಿತವಾಗಿರದೆ, ಜಠರ ಮತ್ತು ಕರುಳಿನ ಅ‍ಪಾಯಕರ ಸೋಂಕಿಗೂ ಕಾರಣವಾಗಬಹುದು.

ಬೆಂಗಳೂರಿನಲ್ಲಿ ನಡೆದಿರುವ ಈ ಪ್ರಕ್ರಿಯೆಯು ಮಹಾರಾಷ್ಟ್ರದ 'ಆಹಾರ ಮತ್ತು ಔಷಧ ಆಡಳಿತ' (ಎಫ್‌ಡಿಎ) ಇಲಾಖೆಯ ಆಯುಕ್ತ ತುಕಾರಾಂ ಮುಂಡೆ ಅವರ ಅವಧಿಯಲ್ಲಿ ನಡೆದ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ನೆನಪಿಸುವಂತಿದೆ. ಮಹಾರಾಷ್ಟ್ರದಲ್ಲಿನ ಕಾರ್ಯಾಚರಣೆ ಖಾಸಗಿ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ಸರ್ಕಾರಿ ಕ್ಯಾಂಟೀನ್‌ಗಳು ಹಾಗೂ ಕ್ಲಬ್‌ಗಳಲ್ಲೂ ನಡೆದಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ನಡೆದಿರುವ ಪರಿಶೀಲನೆ ಗಳು ಸ್ವಾಗತಾರ್ಹವಾದರೂ, ಅತ್ಯಂತ ಮೂಲಭೂತ ಉಲ್ಲಂಘನೆಗಳನ್ನು ಪತ್ತೆಹಚ್ಚಲು ಉನ್ನತ ಮಟ್ಟದ ದಾಳಿ ನಡೆಯುವ ಅನಿವಾರ್ಯತೆ ಉಂಟಾಗುವು ದಾದರೂ ಏಕೆ ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕಾಗಿದೆ. ಆಹಾರ ಸುರಕ್ಷತಾ ತಪಾಸಣೆಗಳು ಆಗೊಮ್ಮೆ ಈಗೊಮ್ಮೆ ನಡೆಯುವ ಪ್ರಕ್ರಿಯೆಗಳಾಗಿರದೆ, ನಿರಂತರ ಚಟುವಟಿಕೆ ಆಗಬೇಕಿದೆ. ಈ ವಿಷಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಆರೋಗ್ಯ ಅಧಿಕಾರಿಗಳ ಹೊಣೆಗಾರಿಕೆಯ ಕುರಿತೂ ಪ್ರಶ್ನೆಗಳಿವೆ. ಅಡುಗೆಮನೆಗಳಲ್ಲಿನ ಸ್ವಚ್ಛತೆ, ತ್ಯಾಜ್ಯ ವಿಲೇವಾರಿ ಮತ್ತು ಚರಂಡಿ ವ್ಯವಸ್ಥೆಯನ್ನು ‍ಪರಿಶೀಲಿಸುವುದು ಅವರ ಹೊಣೆಗಾರಿಕೆ ವ್ಯಾಪ್ತಿಯಲ್ಲಿ ಸೇರಿದೆ.

ಆಹಾರದ ಸುರಕ್ಷತೆಯನ್ನು ಖಾತರಿಪಡಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂ ನಿಯಮಪಾಲನೆಯ ವೈಫಲ್ಯವನ್ನೂ ಗಮನಿಸಬೇಕು. ರೆಸ್ಟೋರೆಂಟ್‌ಗಳು, ಹೋಟೆಲ್‌, ಕ್ಯಾಟರಿಂಗ್‌ ಸಂಸ್ಥೆಗಳು, ಆಹಾರ ಸರಬರಾಜು ವ್ಯವಸ್ಥೆ ಹಾಗೂ ವಿವಿಧ ಸಂಸ್ಥೆಗಳ ಅಡುಗೆಮನೆಗಳು ಆಹಾರ ಸುರಕ್ಷತೆಯ ಮಾರ್ಗಸೂಚಿಯನ್ನು ನಿರ್ಲಕ್ಷಿಸುವುದು ಅಪಾಯಕರ. ಸುರಕ್ಷಿತ ಸಂಗ್ರಹದ ವ್ಯವಸ್ಥೆ, ಶೈತ್ಯೀಕರಣ, ಕೀಟ ನಿಯಂತ್ರಣ, ಹಸಿ ಮತ್ತು ಬೇಯಿಸಿದ ಆಹಾರಗಳನ್ನು ಪ್ರತ್ಯೇಕವಾಗಿ ಇರಿಸುವುದು, ಸ್ವಚ್ಛತೆಯಂತಹ ಪ್ರಾಥಮಿಕ ಅಗತ್ಯಗಳನ್ನು ನಿರ್ಲಕ್ಷಿಸುವುದು ಗ್ರಾಹಕರ ಜೀವ ಮತ್ತು ಆರೋಗ್ಯವನ್ನು ಅಪಾಯಕ್ಕೆ ದೂಡುವ ಹೊಣೆಗೇಡಿತನದ ವರ್ತನೆಯಾಗುತ್ತದೆ. ಪ್ರತಿಯೊಂದು ಅಡುಗೆಮನೆಯ ತಪಾಸಣೆಯನ್ನು ಪ್ರತಿದಿನವೂ ನಡೆಸುವುದು ಯಾವುದೇ ನಿಯಂತ್ರಣಾ ಸಂಸ್ಥೆಯಿಂದಲೂ ಸಾಧ್ಯವಿಲ್ಲ. ಆಹಾರೋದ್ಯಮಿಗಳು ತಮ್ಮ ದೈನಂದಿನ ಕಾರ್ಯನಿರ್ವಹಣೆಯ ಭಾಗವಾಗಿ ಸ್ವಚ್ಛತೆಯನ್ನು ರೂಢಿಸಿಕೊಳ್ಳಬೇಕಾಗಿದೆ. ಆಂತರಿಕ ಪರಿಶೀಲನೆ, ದಾಖಲೆಗಳ ಸಮರ್ಪಕ ನಿರ್ವಹಣೆ, ತರಬೇತಾದ ಸಿಬ್ಬಂದಿ ಹಾಗೂ ಅಸುರಕ್ಷಿತ ಪದಾರ್ಥಗಳನ್ನು ತಿರಸ್ಕರಿಸುವ ಮನೋಭಾವವು ಜವಾಬ್ದಾರಿಯುತ ಕಾರ್ಯನಿರ್ವಹಣೆಯ ಭಾಗವಾಗಬೇಕಿದೆ.

ಪ್ರಸ್ತುತ ನಡೆದಿರುವ ತಪಾಸಣೆಯನ್ನು ಸರ್ಕಾರ ಮುಂದುವರಿಸಬೇಕು. ಗಂಭೀರ ಅಪಾಯವನ್ನು ಉಂಟುಮಾಡುವ ಉದ್ಯಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಣ್ಣಪುಟ್ಟ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ನ್ಯಾಯಸಮ್ಮತ ಅವಕಾಶವನ್ನೂ ನೀಡಬೇಕು. ನಿಯಂತ್ರಣ ಸಂಸ್ಥೆಗಳು ಅತಿರೇಕದ ಕ್ರಮಗಳನ್ನು ಕೈಗೊಳ್ಳದಂತೆ ಎಚ್ಚರಿಸಿರುವ ಬಾಂಬೆ ಹೈಕೋರ್ಟ್‌, ನೊಣವನ್ನು ಓಡಿಸಲು ಕತ್ತಿ ಬಳಸುವಂತಾಗಬಾರದು ಎಂದು ಹೇಳಿದೆ. ಬೆಂಗಳೂರು ಮಹಾನಗರಕ್ಕೀಗ ಆಹಾರ ಸುರಕ್ಷತೆಯ ಸಂಸ್ಕೃತಿಯೊಂದು ಅತ್ಯಗತ್ಯವಾಗಿದೆ. ನಿಯಂತ್ರಣ ಸಂಸ್ಥೆಗಳು ನಿಯಮಿತವಾಗಿ ತಪಾಸಣೆ ನಡೆಸುವ ಮೂಲಕ ಹಾಗೂ ಆಹಾರೋದ್ಯಮಿಗಳು ತಮ್ಮ ಸುರಕ್ಷತಾ ನಿಯಮಗಳ ಪಾಲನೆಗೆ ಬದ್ಧರಾಗುವ ಮೂಲಕ 'ಆಹಾರ ಸುರಕ್ಷತೆ'ಯನ್ನು ಖಾತರಿಪಡಿಸಬೇಕಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani