ಅಯೋಧ್ಯೆಯ ರಾಮಮಂದಿರಕ್ಕೆ ನಗದು ಮತ್ತು ವಸ್ತು ರೂಪದಲ್ಲಿ ಬಂದಿರುವ ದೇಣಿಗೆಗಳ ವ್ಯಾಪಕ ದುರುಪಯೋಗ ನಡೆದಿದೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಆರೋಪಗಳ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರ 'ವಿಶೇಷ ಕಾರ್ಯಪಡೆ' (ಎಸ್‌ಐಟಿ) ರಚಿಸಿದ್ದು, ತನಿಖೆ ಮುಂದುವರಿದಿದೆ. ಎಸ್‌ಐಟಿ ಸಲ್ಲಿಸಿರುವ ಪ್ರಾಥಮಿಕ ವರದಿಯು, ದೇಣಿಗೆ ಸಂಗ್ರಹ, ಎಣಿಕೆ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಅಕ್ರಮಗಳು ನಡೆದಿರುವುದನ್ನು ದೃಢಪಡಿಸಿದೆ ಎಂದು ವರದಿಯಾಗಿದೆ. ಮಂದಿರದಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತಾದ ಆರೋಪವು ಗಂಭೀರವಾಗಿದ್ದು, ದೇವಾಲಯದ ನಿರ್ವಹಣೆಯ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಅನ್ನು ಅನುಮಾನದಿಂದ ನೋಡುವಂತಾಗಿದೆ. ಕೋಟ್ಯಂತರ ರೂಪಾಯಿ ದೇಣಿಗೆ ಹಣದ ವಂಚನೆ ನಡೆದಿದೆ ಹಾಗೂ ಅಮೂಲ್ಯ ಆಭರಣಗಳ ಜಾಗದಲ್ಲಿ ನಕಲಿ ಒಡವೆಗಳನ್ನು ಇರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಬೆಲೆಬಾಳುವ ಅನೇಕ ವಸ್ತುಗಳು ಕಣ್ಮರೆಯಾಗಿವೆ; ಅಕ್ರಮದ ಆರೋಪಗಳು ಬಹಿರಂಗವಾದ ನಂತರ ಸುಮಾರು ₹2 ಕೋಟಿ ಮೌಲ್ಯದ ನಗದು ಮತ್ತು ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದೂ ಹೇಳಲಾಗುತ್ತಿದೆ.
ಅಯೋಧ್ಯೆಯ ರಾಮಮಂದಿರದಲ್ಲಿನ ವಿದ್ಯಮಾನಗಳಿಗೆ ರಾಜಕೀಯ ಮಹತ್ವವಿದೆ. ಏಕೆಂದರೆ, ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷದೊಂದಿಗೆ ಅಯೋಧ್ಯೆಯ ರಾಮಮಂದಿರ ರಾಜಕೀಯವಾಗಿ ತಳಕು ಹಾಕಿಕೊಂಡಿದೆ. ದಶಕಗಳಿಂದ ಬಿಜೆಪಿಯ ರಾಜಕೀಯ ಕೇಂದ್ರಬಿಂದುವಾಗಿ ಮಂದಿರವನ್ನು ಗುರ್ತಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ನಾಯಕರು ದೇವಾಲಯದ ನಿರ್ಮಾಣವನ್ನು ರಾಷ್ಟ್ರ ನಿರ್ಮಾಣದೊಂದಿಗೆ ಸಮೀಕರಿಸಿದ್ದರು. ರಾಷ್ಟ್ರೀಯ ಸಂಕೇತದ ರೂಪದಲ್ಲಿ ಮಂದಿರವನ್ನು ಬಿಂಬಿಸಲಾ
ಗಿದೆ. ಹಾಗಾಗಿಯೇ, ಮಂದಿರದಲ್ಲಿ ನಡೆದಿದೆ ಎನ್ನಲಾದ ನಿಧಿಗಳ ದುರುಪ
ಯೋಗ ಮತ್ತು ದೇವಾಲಯದ ಆಡಳಿತ ಮಂಡಳಿಯ ವೈಫಲ್ಯವನ್ನು ಮಂದಿರದೊಂದಿಗೆ ಗುರ್ತಿಸಿಕೊಂಡ ಎಲ್ಲರ ವಿಶ್ವಾಸಾರ್ಹತೆಗೆ ಸಂಬಂಧಿಸಿದ ಪ್ರಶ್ನೆಯ ರೂಪದಲ್ಲಿ ನೋಡಬೇಕಾಗಿದೆ. ಈ ಬೆಳವಣಿಗೆ ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನನುಕೂಲವಾಗಿ ಪರಿಣಮಿಸ
ಲೂಬಹುದು. ಆಡಳಿತಾರೂಢ ಪಕ್ಷವು ತಪ್ಪಿತಸ್ಥರನ್ನು ರಕ್ಷಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಆಪಾದಿಸಿದ್ದಾರೆ. ಈ ಆರೋಪಗಳು, ರಾಮಮಂದಿರದ ವರ್ಚಸ್ಸನ್ನು ಹಾಳು ಮಾಡುವ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಪ್ರಯತ್ನಗಳಾಗಿವೆ ಎಂದು ಬಿಜೆಪಿ ಪ್ರತಿಕ್ರಿಯಿಸಿದೆ. ಎಸ್‌ಐಟಿ ತನಿಖೆ ಪೂರ್ಣಗೊಳ್ಳುವವರೆಗೂ ಭಕ್ತರು ಸಂಯಮದಿಂದ ಇರಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಎಫ್‌ಐಆರ್ ದಾಖಲಾಗದಿರುವುದರಿಂದ, ಎಸ್‌ಐಟಿ ತನಿಖೆ ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅಭಿಪ್ರಾಯಪಟ್ಟಿದ್ದಾರೆ. ಅಪರಾಧ ಘಟಿಸಿರುವ ಸೂಚನೆಗಳಿದ್ದರೂ, ಎಸ್‌ಐಟಿ ವಿಚಾರಣೆಯನ್ನು ಪೊಲೀಸ್ ತನಿಖೆ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಮೂವರು ಸದಸ್ಯರ ಎಸ್‌ಐಟಿ ನೇತೃತ್ವವನ್ನು ಲಖನೌ ವಲಯ ಆಯುಕ್ತ ವಿಜಯ್ ವಿಶ್ವಾಸ್ ವಹಿಸಿಕೊಂಡಿದ್ದು, ತನಿಖೆಯ ಪ್ರಾಥಮಿಕ ವರದಿಯನ್ನು ರಾಜ್ಯ ಸರ್ಕಾರದ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರಿಗೆ ಸಲ್ಲಿಸಿದ್ದಾರೆ. ಸಂಜಯ್ ಪ್ರಸಾದ್ ಅವರು ಈ ಮೊದಲು ಸರ್ಕಾರದ ಪ್ರತಿನಿಧಿಯಾಗಿ ಟ್ರಸ್ಟ್‌ನೊಂದಿಗೆ ಗುರ್ತಿಸಿಕೊಂಡವರು. ಹಳೆಯ ಸಂಬಂಧವು ಹಿತಾಸಕ್ತಿ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಹುದೆಂದು ಭಾವಿಸಲಿಕ್ಕೆ ಸಾಧ್ಯವಿದೆ. ಆರೋಪಗಳ ಕುರಿತು ವಿಶ್ವಾಸಾರ್ಹ ಹಾಗೂ ಸ್ವತಂತ್ರ ತನಿಖೆ ನಡೆಯುವುದು ಅಗತ್ಯ. ಭಕ್ತರ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ, ಸಾರ್ವಜನಿಕರ ಕೊಡುಗೆಗಳಿಂದ ನಿರ್ಮಾಣಗೊಂಡ ಮಂದಿರದ ಎಲ್ಲ ಲೆಕ್ಕಪತ್ರಗಳನ್ನು ಬಹಿರಂಗಪಡಿಸುವುದೂ ಅಗತ್ಯ. ಈ ಪ್ರಕರಣವು ಹಣ ಮತ್ತು ವಸ್ತುಗಳ ಕಳವು ಹಾಗೂ ಆಡಳಿತ ಲೋಪಕ್ಕೆ ಸೀಮಿತವಾದ ವಿಷಯವಲ್ಲ. ಇದು ದೇಶದ ಅತ್ಯಂತ ಮುಖ್ಯವಾದ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯವನ್ನು ಸಂರಕ್ಷಿಸುವ ವಿಷಯವೂ ಆಗಿದೆ.

