ಬಿತ್ತನೆ ಬೀಜಗಳಿಗಾಗಿ ರೈತರು ಪರದಾಡುವ ಸ್ಥಿತಿ ಹಾವೇರಿ ಜಿಲ್ಲೆಯಲ್ಲಿ ಉಂಟಾಗಿದೆ. ಇದು, ಹಳೆಯ ತಪ್ಪುಗಳಿಂದ ಪಾಠ ಕಲಿಯದ ಸರ್ಕಾರಿ ವ್ಯವಸ್ಥೆಯ ಸಂವೇದನಾಶೂನ್ಯ ಮನಃಸ್ಥಿತಿಯ ಹಾಗೂ ಕೃಷಿಯನ್ನು ಆದ್ಯತೆಯ ವಿಷಯವನ್ನಾಗಿ ಸರ್ಕಾರ ಪರಿಗಣಿಸದೆ ಇರುವುದರ ಸಂಕೇತದಂತಿದೆ.
ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಉತ್ತಮವಾಗಿ ಆಗಿರುವುದರಿಂದ ಬಿತ್ತನೆ ಬೀಜ ಖರೀದಿಗೆ ಬೇಡಿಕೆ ಉಂಟಾಗಿದೆ. ಅದು ಸಹಜವಾದ ಬೆಳವಣಿಗೆಯೇ. ಆದರೆ, ಮುಂಗಾರು ಆಸುಪಾಸಿನಲ್ಲಿ ಬಿತ್ತನೆ ಬೀಜಕ್ಕೆ ಬೇಡಿಕೆ ಎದುರಾಗುವ ನಿರೀಕ್ಷೆಯಿದ್ದರೂ, ಆ ಬೇಡಿಕೆಯನ್ನು ನಿರ್ವಹಿಸಲು ಕೃಷಿ ಇಲಾಖೆ ತಕ್ಕ ಸಿದ್ಧತೆ ನಡೆಸ ದಿರುವುದಕ್ಕೆ ಯಾವುದೇ ಸಮರ್ಥನೆಯಿಲ್ಲ. ಕಳೆದ ಮೂರು ವರ್ಷಗಳಿಂದಲೂ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಯ ಕೊರತೆ ಬಗ್ಗೆ ರಾಜ್ಯದ ವಿವಿಧ ಭಾಗಗಳಲ್ಲಿ ದೂರುಗಳು ವ್ಯಕ್ತವಾಗಿದ್ದವು. ಆ ಸಮಸ್ಯೆ ಈ ವರ್ಷವೂ ಮುಂದುವರಿದಿರುವುದನ್ನು ಹಾವೇರಿಯಲ್ಲಿನ ರೈತರ ಸಂಕಷ್ಟ ಸೂಚಿಸುವಂತಿದೆ. ಬೀಜ ಖರೀದಿಗಾಗಿ 'ರೈತ ಸಂಪರ್ಕ ಕೇಂದ್ರ'ದ (ಆರ್‌ಎಸ್‌ಕೆ) ಎದುರು ರೈತರು ಹಗಲು-ಇರುಳು ಸರದಿಯಲ್ಲಿ ನಿಲ್ಲಬೇಕಾದ ಸ್ಥಿತಿ ರೂಪುಗೊಂಡಿರುವುದು ಇಲಾಖೆಯ ಅದಕ್ಷತೆಗೆ ನಿದರ್ಶನದಂತಿದೆ. ಮಹಿಳೆಯರು, ಹಿರಿಯ ನಾಗರಿಕರು ಕೂಡ ಸರದಿಯಲ್ಲಿ ನಿಂತು ತೊಂದರೆ ಅನುಭವಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಬೀಜ ವಿತರಣೆ ನಡೆದಿರುವ ಘಟನೆಗಳೂ ವರದಿಯಾಗಿವೆ. ಬೀಜ ವಿತರಣಾ ಕೇಂದ್ರಗಳ ಎದುರೇ ರೈತರು ಮಲಗುವ ಸ್ಥಿತಿ ಕೆಲವೆಡೆ ತಲೆದೋರಿದೆ. ನಿತ್ಯಕರ್ಮಗಳನ್ನು ಬಯಲಿನಲ್ಲಿ ಮುಗಿಸಿ, ಆರ್‌ಎಸ್‌ಕೆ ಎದುರು ರೈತರು ಬಿಸಿಲಿನಲ್ಲಿ ನಿಲ್ಲುವಂತಾಗಿರುವುದು ಶೋಚನೀಯ. ರೈತರನ್ನು ಅನ್ನದಾತರೆಂದು ಹೇಳುತ್ತಲೇ, ಅವರ ಶ್ರಮ, ಸಮಯ ಹಾಗೂಆತ್ಮಗೌರವವನ್ನು ಲಘುವಾಗಿ ಕಾಣುವ ಘಟನೆಗಳು ಮತ್ತೆ ಮತ್ತೆ ನಡೆಯುವುದು ದುರದೃಷ್ಟಕರ.
ಜಿಲ್ಲೆಯಲ್ಲಿ ಅಗತ್ಯವಿದ್ದಷ್ಟು ಬೀಜ ದಾಸ್ತಾನು ಇರುವುದರಿಂದ ರೈತರು ಆತಂಕ ಪಡಬೇಕಿಲ್ಲ; ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಕರು ಬರುತ್ತಿರುವುದರಿಂದ ಆನ್‌ಲೈನ್ ನೋಂದಣಿ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಸಂದರ್ಭದಲ್ಲಿ 'ಆರ್‌ಎಸ್‌ಕೆ'ಗಳ ಸಂಖ್ಯೆಯನ್ನು ಹೆಚ್ಚಿಸುವುದು ಹಾಗೂ ಕೇಂದ್ರಗಳಿಗೆ ಬರುವ ರೈತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವುದು ಕೃಷಿ ಇಲಾಖೆಯ ಕರ್ತವ್ಯ. ಆನ್‌ಲೈನ್‌ನಲ್ಲಿ ರೈತರ 'ಆರ್‌ಟಿಸಿ' ಪರಿಶೀಲಿಸಿ, ರಶೀದಿಯೊಂದಿಗೆ ಬೀಜ ನೀಡಬೇಕಾದುದರಿಂದ ವಿತರಣೆಯ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದೂ ಹೇಳಲಾಗುತ್ತಿದೆ. ತಂತ್ರಜ್ಞಾನ ಎಷ್ಟೇ ಆಧುನಿಕವಾದರೂ ಅದು ಸರ್ಕಾರಿ ವ್ಯವಸ್ಥೆಯಲ್ಲಿ ತನ್ನ ವೇಗ ಮತ್ತು ದಕ್ಷತೆಯನ್ನು ಕಳೆದುಕೊಳ್ಳುತ್ತದೆ ಎನ್ನುವುದಕ್ಕೆ ಇದು ಇನ್ನೊಂದು ಉದಾಹರಣೆಯಷ್ಟೇ. ಮಳೆ-ಬೆಳೆಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯ ಮುನ್ನೋಟ ಕೃಷಿ ಇಲಾಖೆಯ ಬಳಿಯಿರುತ್ತದೆ, ಇರಬೇಕು. ಎಲ್ಲ ಮಾಹಿತಿಯನ್ನು ಹೊಂದಿದ್ದೂ, ರೈತರ ಅಗತ್ಯಗಳನ್ನು ಪೂರೈಸುವುದಕ್ಕೆ ಸಂಬಂಧಿಸಿದಂತೆ ನೆಪಗಳನ್ನು ಹೇಳುವುದು ಯೋಜನಾಶೂನ್ಯತೆಯ ಸ್ಪಷ್ಟ ಸೂಚನೆಯಾಗಿದೆ. ಕೃಷಿಚಕ್ರದ ಆರಂಭದ ಬಿಂದುವಾದ ಬಿತ್ತನೆ ಬೀಜಗಳ ವಿತರಣೆಯಲ್ಲೇ ಸಮಸ್ಯೆಯಾದರೆ, ಅದರ ಪರಿಣಾಮ ಇಡೀ ಕೃಷಿಋತುವಿನ ಮೇಲಾಗುತ್ತದೆ. ಕೃಷಿ ಇಲಾಖೆಯ ವೈಫಲ್ಯವೇ ರೈತರು ಖಾಸಗಿ ಸಂಸ್ಥೆಗಳ ಬಳಿಗೆ ಹೋಗುವ, ಕಳಪೆ ಗುಣಮಟ್ಟದ ಬೀಜಗಳನ್ನು ಕೊಂಡು ಸಂಕಷ್ಟ ಎದುರಿಸುವ ಸ್ಥಿತಿ ಉಂಟುಮಾಡುತ್ತದೆ.
ಪಶ್ಚಿಮ ಏಷ್ಯಾದಲ್ಲಿನ ಬಿಕ್ಕಟ್ಟಿನ ಪರಿಣಾಮದಿಂದಾಗಿ ಕೇಂದ್ರ ಸರ್ಕಾರದಿಂದ ರಾಜ್ಯದ ಬೇಡಿಕೆಗೆ ಅನುಗುಣವಾಗಿ ರಸಗೊಬ್ಬರ ಪೂರೈಕೆಯಾಗುತ್ತಿಲ್ಲ; ಹಾಗಾಗಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ರಸಗೊಬ್ಬರ ಪೂರೈಕೆಯಲ್ಲಿ ವ್ಯತ್ಯಯ ಎದುರಾಗಬಹುದು ಎಂದು ಕೃಷಿ ಸಚಿವರು ಇತ್ತೀಚೆಗಷ್ಟೇ ಹೇಳಿದ್ದಾರೆ. ಜನಸಾಮಾನ್ಯರಿಗೆ ಮಿತವ್ಯಯದ ಪಾಠ ಹೇಳಿರುವ ಪ್ರಧಾನಿ, ಸಾವಯವ ಕೃಷಿ ಅನುಸರಿಸುವಂತೆ ರೈತರಿಗೆ ಕಿವಿಮಾತು ಹೇಳಿದ್ದಾರೆ. ಈ ಮೂಲಕ, ರಸಗೊಬ್ಬರ ಪೂರೈಕೆಯಲ್ಲಿ ಎದುರಾಗಬಹುದಾದ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸೂಚನೆ ನೀಡಿವೆ. ಎಲ್ ನಿನೊ ಪರಿಣಾಮದಿಂದಾಗಿ ಮುಂಗಾರು ದುರ್ಬಲವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಎಲ್ಲ ಕಡೆಗಳಿಂದಲೂ ರೈತರು ಸಂಕಷ್ಟ ಎದುರಿಸಬೇಕಾಗಿದೆ. ಸರ್ಕಾರದ ಕಾಳಜಿ ಮಾತುಗಳಿಗಷ್ಟೇ ಸೀಮಿತವಾಗದೆ, ಕ್ರಿಯೆಯಲ್ಲಿ ಕಾಣಿಸಿಕೊಳ್ಳಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆ ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆಗಾರಿಕೆ ಹಾಗೂ ನೈತಿಕತೆ.

