Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ | ಕಾರ್ಮಿಕರ ಸುರಕ್ಷತೆಗಿಲ್ಲ ಒತ್ತು ಬಡಪಾಯಿಗಳ ಜೀವಕ್ಕೆ ಕುತ್ತು

ಸಂಪಾದಕೀಯ | ಕಾರ್ಮಿಕರ ಸುರಕ್ಷತೆಗಿಲ್ಲ ಒತ್ತು ಬಡಪಾಯಿಗಳ ಜೀವಕ್ಕೆ ಕುತ್ತು

ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಮಾದಾಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ 7 ಕಾರ್ಮಿಕರು ಮೃತಪಟ್ಟಿರುವ ದುರಂತ ಆಕಸ್ಮಿಕ ಘಟನೆಯಷ್ಟೇ ಆಗಿರದೆ, ಕ್ವಾರಿ ಮಾಲೀಕರ ನಿರ್ಲಕ್ಷ್ಯ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗೇಡಿತನದ ಫಲಿತವೂ ಆಗಿದೆ. ಕ್ವಾರಿಯಲ್ಲಿ ಕಾರ್ಯ ನಿರ್ವಹಿಸುವಾಗ ಬೃಹತ್ ಬಂಡೆಯೊಂದು ಬಿದ್ದು 7 ಕಾರ್ಮಿಕರು ಮೃತಪಟ್ಟಿದ್ದಾರೆ, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅನಧಿಕೃತ ಗಣಿಗಾರಿಕೆ, ಸುರಕ್ಷತಾ ನಿಯಮಗಳ ಉಲ್ಲಂಘನೆ, ಸ್ಫೋಟಕಗಳ ಅಸುರಕ್ಷಿತ ಬಳಕೆ ಮತ್ತು ಬಂಡೆ ಕುಸಿತಗಳಿಂದ ಕಾರ್ಮಿಕರು ಪ್ರಾಣ ಕಳೆದುಕೊಂಡ ಘಟನೆಗಳು ಕಳೆದ ಎರಡು ದಶಕಗಳಲ್ಲಿ ಆಗಾಗ್ಗೆ ವರದಿಯಾಗುತ್ತಲೇ ಇವೆ. ಕಲ್ಲು ಕುಸಿತ ಮತ್ತು ಸ್ಫೋಟ ಸಂಬಂಧಿತ ದುರಂತಗಳಲ್ಲಿ ಸಾವುನೋವು ಸಂಭವಿಸುವುದು ಸಾಮಾನ್ಯ ಎನ್ನುವಂತಾಗಿದೆ. 2009ರಲ್ಲಿ ಅಂಕೋಲಾದ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಬಂಡೆ ಕುಸಿತದಲ್ಲಿ 6 ಕಾರ್ಮಿಕರು ಸಾವಿಗೀಡಾಗಿದ್ದರು. ಆ ದುರಂತವನ್ನು ನೆನಪಿಸುವಂತಹ ದುರ್ಘಟನೆ ಈಗ ಮಾದಾಪಟ್ಟಣದಲ್ಲಿ ಸಂಭವಿಸಿದೆ. ಕ್ವಾರಿ ಮಾಲೀಕರು ಗಣಿಗಾರಿಕೆಯ ಮಾನದಂಡಗಳನ್ನು ಗಾಳಿಗೆ ತೂರಿರುವುದು ಹಾಗೂ ಗಣಿಗಾರಿಕೆ ನಡೆಸುವಾಗ ಕಡ್ಡಾಯವಾಗಿ ಬಿಡಬೇಕಾದ ಬಫರ್ ವಲಯ ಬಿಡದಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.

ಕಲ್ಲು ಕ್ವಾರಿ ಚಟುವಟಿಕೆಯು ಅಪಾಯಕಾರಿ ಉದ್ಯಮವಾಗಿ ರೂಪು ಗೊಂಡಿದೆ. ಕಾನೂನುಬಾಹಿರ ಗಣಿಗಾರಿಕೆ, ಸುರಕ್ಷತಾ ನಿಯಮಗಳ ಉಲ್ಲಂಘನೆ, ಅವೈಜ್ಞಾನಿಕ ಗಣಿಗಾರಿಕೆ ವಿಧಾನಗಳು ಹಾಗೂ ಸ್ಫೋಟಕಗಳ ಅನಿಯಂತ್ರಿತ ಬಳಕೆಯು ಕಾರ್ಮಿಕರ ಜೀವಗಳನ್ನು ಅಪಾಯಕ್ಕೆ ಸಿಲುಕಿಸಿದೆ. ಗಣಿಮಾಲೀಕರ ಲಾಭಕೋರತನವು ಕಾರ್ಮಿಕರ ಜೀವಗಳನ್ನು ಜೂಜಿನ ಪಣ
ದಂತೆ ಮಾರ್ಪಡಿಸಿದೆ. ಪ್ರತಿ ಬಾರಿ ದುರಂತ ಸಂಭವಿಸಿದಾಗ ಕ್ವಾರಿಗಳಲ್ಲಿನ ಕಾನೂನುಬಾಹಿರ ಚಟುವಟಿಕೆಗಳು ಹಾಗೂ ಸುರಕ್ಷತಾ ನಿಯಮಗಳು ಪಾಲನೆ ಆಗದಿರುವ ಬಗ್ಗೆ ಆತಂಕ ವ್ಯಕ್ತವಾಗುತ್ತದೆ. ಗಣಿ ಮತ್ತು ಭೂವಿಜ್ಞಾನ ಇಲಾಖೆ, ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಕಲ್ಲು ಕ್ವಾರಿ ಚಟುವಟಿಕೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆ ಹೊತ್ತಿವೆ. ಪರವಾನಗಿ ನೀಡುವುದರಿಂದ ಸುರಕ್ಷತಾ ಕ್ರಮಗಳ ಪರಿಶೀಲನೆಯವರೆಗೆ ಹಲವು ಹಂತಗಳಲ್ಲಿ ಸರ್ಕಾರಿ ಆಡಳಿತದ ಮೇಲ್ವಿಚಾರಣೆಯಿದೆ. ಹಾಗಿದ್ದರೂ ಅವಘಡಗಳು ಮರುಕಳಿಸುತ್ತಿರುವುದನ್ನು ನೋಡಿದರೆ, ಈ ದುರಂತಗಳಿಗೆ ಕ್ವಾರಿ ಮಾಲೀಕರ ನಿರ್ಲಕ್ಷ್ಯದೊಂದಿಗೆ ಆಡಳಿತ ಯಂತ್ರದ ವೈಫಲ್ಯವೂ ಕಾರಣವೆಂದು ಭಾವಿಸಬೇಕಾಗಿದೆ. ಕ್ವಾರಿಗಳಲ್ಲಿ ದುಡಿಯುವ ಕಾರ್ಮಿಕರು ದುರ್ಬಲ ವರ್ಗದವರು ಅಥವಾ ವಲಸೆ ಕಾರ್ಮಿಕರಾಗಿರುತ್ತಾರೆ. ಜೀವನೋಪಾಯಕ್ಕಾಗಿ ಅಪಾಯಕರ ಪರಿಸ್ಥಿತಿಯಲ್ಲಿಯೂ ದುಡಿಯುವ ಅನಿವಾರ್ಯತೆ ಅವರದಾಗಿರುತ್ತದೆ. ಸುರಕ್ಷತಾ ಸವಲತ್ತುಗಳಿಗಾಗಿ ಒತ್ತಾಯಿಸುವ ಧ್ವನಿಯೂ ಅವರಿಗಿರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ಸೂಕ್ತ ತರಬೇತಿ, ರಕ್ಷಣಾ ಸಾಧನಗಳು, ವಿಮೆ ಸೌಲಭ್ಯ, ತುರ್ತು ರಕ್ಷಣಾ ವ್ಯವಸ್ಥೆ ಇಲ್ಲದೆಯೇ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತದೆ.

ಬಂಡೆಗಳ ಸ್ಥಿರತೆಯನ್ನು ವೈಜ್ಞಾನಿಕವಾಗಿ ಪರಿಶೀಲಿಸದಿರುವುದು, ಅಪಾಯದ ಮುನ್ಸೂಚನೆಗಳನ್ನು ನಿರ್ಲಕ್ಷಿಸುವುದು ಹಾಗೂ ಅಗತ್ಯ ಸುರಕ್ಷತಾ ಉಪಕರಣಗಳನ್ನು ಒದಗಿಸದಿರುವ ಬಗ್ಗೆ ದುರಂತಗಳು ಘಟಿಸಿದಾಗ ಕಾಳಜಿ ವ್ಯಕ್ತವಾಗುತ್ತದೆ. ಈ ಕಾಳಜಿಯ ಆಯುಸ್ಸು ಕಡಿಮೆ ಅವಧಿಯದಾಗಿದ್ದು, ಕ್ವಾರಿಗಳ ಕಾರ್ಯ ನಿರ್ವಹಣೆಯಲ್ಲಿ ಯಾವುದೇ ಸುಧಾರಣೆ ಆಗದೆ ಯಥಾಸ್ಥಿತಿ ಮುಂದುವರಿಯುತ್ತದೆ. ಕ್ವಾರಿಗಳಲ್ಲಿ ಭೂವಿಜ್ಞಾನ ತಜ್ಞರಿಂದ ನಿಯಮಿತ ಪರಿಶೀಲನೆ, ಅಪಾಯದ ಸಾಧ್ಯತೆಗಳ ಅಂದಾಜು, ಆಧುನಿಕ ತಂತ್ರಜ್ಞಾನದ ಮೂಲಕ ಮೇಲ್ವಿಚಾರಣೆ, ಸ್ಫೋಟ ಕಾರ್ಯಾಚರಣೆಗೆ ಕಟ್ಟುನಿಟ್ಟಿನ ಮಾನದಂಡಗಳು ಹಾಗೂ ಕಾರ್ಮಿಕರಿಗೆ ಕಡ್ಡಾಯ ಸುರಕ್ಷತಾ ತರಬೇತಿಯನ್ನು ಜಾರಿಗೊಳಿಸಬೇಕಾಗಿದೆ. ನಿಯಮ ಉಲ್ಲಂಘಿಸುವ ಕ್ವಾರಿಗಳನ್ನು ಕಪ್ಪುಪಟ್ಟಿಯಲ್ಲಿಡುವುದರ ಜೊತೆಗೆ, ಅವುಗಳ ಮಾಲೀಕರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ನಿಗದಿಪಡಿಸುವ ವ್ಯವಸ್ಥೆ ಆಗಬೇಕಾಗಿದೆ. ಕಲ್ಲು ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆ ಅದೃಷ್ಟವನ್ನಷ್ಟೇ ಅವಲಂಬಿಸುವುದು, ನಮ್ಮ ಅಭಿವೃದ್ಧಿ ಯೋಜನೆಗಳ ಪೊಳ್ಳುತನದ ಸಂಕೇತವಾಗಿದೆ. ಪ್ರಸ್ತುತ ಸಂಭವಿಸಿರುವ ಸಾವುಗಳು ನಾಗರಿಕ ಸಮಾಜಕ್ಕೆ ಎಚ್ಚರಿಕೆಯ ಸಂಕೇತಗಳಾಗಿವೆ. ಮುಂದೆ ಇಂತಹ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. ಅವರ ಮಾತು ಬರೀ ಆಶ್ವಾಸನೆಯಾಗದೆ ಕಾರ್ಯರೂಪಕ್ಕೆ ಬರಲಿ. ಮಾದಾಪಟ್ಟಣದ ದುರಂತದ ಬಗ್ಗೆ ವಿಳಂಬವಿಲ್ಲದೆ ತನಿಖೆ ನಡೆದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ; ಸಂತ್ರಸ್ತರ ಕುಟುಂಬಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವ ಬದ್ಧತೆಯನ್ನು ಸರ್ಕಾರ ತೋರಲಿ.

Dailyhunt
Disclaimer: This content has not been generated, created or edited by Dailyhunt. Publisher: Prajavani