Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ | ಕೆಪಿಎಸ್‌ಸಿ: 'ಸುಪ್ರೀಂ' ತೀರ್ಪು; ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ

ಸಂಪಾದಕೀಯ | ಕೆಪಿಎಸ್‌ಸಿ: 'ಸುಪ್ರೀಂ' ತೀರ್ಪು; ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ

2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪರೀಕ್ಷೆಯಲ್ಲಿ ಆಯ್ಕೆಯಾದ 362 ಅಭ್ಯರ್ಥಿಗಳ ನೇಮಕಕ್ಕೆ ಕರ್ನಾಟಕ ಸರ್ಕಾರ ಅನುಷ್ಠಾನಕ್ಕೆ ತಂದಿದ್ದ ಕಾಯ್ದೆಯನ್ನು ರದ್ದು ಮಾಡುವ ಮೂಲಕ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದೆ.

ಏನೇ ತಪ್ಪಾಗಿದ್ದರೂ, ಎಷ್ಟೇ ಅಕ್ರಮಗಳು ನಡೆದಿದ್ದರೂ, ನ್ಯಾಯಾಲಯಗಳು ಯಾವುದೇ ತೀರ್ಪು ನೀಡಿದ್ದರೂ ಹೊಸ ಕಾಯ್ದೆಯನ್ನು ರೂಪಿಸಿ ಎಲ್ಲ ಅಕ್ರಮಗಳನ್ನು ಸಕ್ರಮ ಮಾಡಿಕೊಳ್ಳಬಹುದು ಎಂಬ ಶಾಸಕಾಂಗದ ಅಹಂಕಾರಕ್ಕೆ ಸರಿಯಾದ ಪೆಟ್ಟು ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ 'ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ನಲ್ಲಿ ರದ್ದುಪಡಿಸಲಾದ ನೇಮಕಾತಿಗೆ ಸಂಬಂಧಿಸಿ ಕಾನೂನು ತರುವ ಮೂಲಕ ನ್ಯಾಯಾಲಯದ ತೀರ್ಪನ್ನು ಅಮಾನ್ಯಗೊಳಿಸಲು ಸಾಧ್ಯವಿಲ್ಲ ಹಾಗೂ ಸಾಂವಿಧಾನಿಕ ನ್ಯಾಯಾಲಯದ ತೀರ್ಪುಗಳನ್ನು ಅಮಾನ್ಯಗೊಳಿಸುವ ಅಧಿಕಾರ ಶಾಸಕಾಂಗಕ್ಕೆ ಇಲ್ಲ' ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಕರ್ನಾಟಕ ಸಿವಿಲ್ ಸೇವೆಗಳ (2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್‌ಗಳ ಆಯ್ಕೆ ಮತ್ತು ನೇಮಕಾತಿ ಸಿಂಧುಗೊಳಿಸುವಿಕೆ) ಕಾಯ್ದೆ-2022 ಅನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ, 'ಕೆಪಿಎಸ್‌ಸಿ'ಯಿಂದ ಅನ್ಯಾಯಕ್ಕೆ ಒಳಗಾಗಿದ್ದ ಶ್ರೀನಿವಾಸ ಟಿ., ಲೋಕೇಶ್ ಮತ್ತು ಇತರರು ಸಲ್ಲಿಸಿದ್ದ ವಿಶೇಷ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಶಾಸಕಾಂಗಕ್ಕೆ ಸರಿಯಾದ
ತಪರಾಕಿಯನ್ನೇ ನೀಡಿದೆ. 2011ರ ನೇಮಕಾತಿ ಪ್ರಕ್ರಿಯೆಯನ್ನು ಮಾನ್ಯಗೊಳಿಸಲು ಯಾವುದೇ ಕಾರಣಗಳಿಲ್ಲ. ಇಡೀ ಪ್ರಕ್ರಿಯೆ ದೋಷಗಳಿಂದ ಮತ್ತು ಅಕ್ರಮಗಳಿಂದ ಕೂಡಿತ್ತು. ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಇಡೀ ಪ್ರಕ್ರಿಯೆಯನ್ನು ಕಲುಷಿತಗೊಳಿಸಿತ್ತು. ಈ ಕಾರಣದಿಂದಾಗಿಯೇ ನೇಮಕಾತಿಯನ್ನು ರದ್ದುಗೊಳಿಸಲಾಗಿತ್ತು ಎಂದು ನ್ಯಾಯಪೀಠ ಸರಿಯಾಗಿಯೇ ಅಭಿಪ್ರಾಯಪಟ್ಟಿದೆ. ಸುಪ್ರೀಂ ಕೋರ್ಟ್ ಶಾಸಕಾಂಗವನ್ನು ಮಾತ್ರ ತರಾಟೆಗೆ ತೆಗೆದುಕೊಳ್ಳದೆ, ಹೈಕೋರ್ಟ್ ಕಾರ್ಯವೈಖರಿಯನ್ನೂ ಟೀಕಿಸಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕಾನೂನು ಎತ್ತಿ ಹಿಡಿದ ಹೈಕೋರ್ಟ್ ತೀರ್ಪಿನ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, 'ಇದು ಅಚ್ಚರಿ ಮತ್ತು ಎಚ್ಚರಿಕೆಯ ಗಂಟೆ. ಕಾನೂನಿನ ಪ್ರತಿ ಅಂಶಗಳನ್ನೂ ಗಾಳಿಗೆ ತೂರಿ ಶಾಸಕಾಂಗವು ತನ್ನ ವ್ಯಾಪ್ತಿಯನ್ನು ಮೀರಿ ಜಾರಿಗೆ ತಂದಿರುವ ಕಾಯ್ದೆಯನ್ನು ಎತ್ತಿ ಹಿಡಿದಿರುವುದು ಅಸಂಬದ್ಧವಾಗಿದೆ' ಎಂದು ಹೇಳಿರುವುದೂ ಸರಿಯಾಗಿದೆ.

ಕರ್ನಾಟಕ ಲೋಕಸೇವಾ ಆಯೋಗದಲ್ಲಿ ನಡೆಯುವ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಲಾಗಾಯ್ತಿನಿಂದ ಸಮರ್ಥಿಸಿಕೊಳ್ಳುತ್ತಲೇ ಬಂದಿವೆ. 2011ರ ಸಾಲಿನ ನೇಮಕಾತಿ ಅಕ್ರಮದಲ್ಲಿಯೂ ಎಲ್ಲ ಪಕ್ಷಗಳ ಪಾಲೂ ಇದೆ. 2011ನೇ ಸಾಲಿನ ನೇಮಕಾತಿ ಫಲಿತಾಂಶ 2013ರಲ್ಲಿ ಪ್ರಕಟವಾದಾಗ ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರ ನೇಮಕಾತಿ ಅಧಿಸೂಚನೆಯನ್ನೇ ರದ್ದು ಮಾಡಿತ್ತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ರಮಗಳ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿಯನ್ನು ಸಿಐಡಿಗೆ ವಹಿಸಿದ್ದರು. ಸಿಐಡಿ ತನಿಖೆ ಅಕ್ರಮಗಳನ್ನು ಸಾಬೀತುಪಡಿಸಿತ್ತು. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗಳು ನೇಮಕಾತಿಯನ್ನು ರದ್ದುಪಡಿಸಿದ್ದವು. ಆದರೂ 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಕ್ರಮ ಸಕ್ರಮಕ್ಕೆ ಕಾಯ್ದೆ ರೂಪಿಸಿತ್ತು. ಅಚ್ಚರಿಯ ಅಂಶ ಎಂದರೆ ಈ ಕಾಯ್ದೆಯನ್ನು ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರೂ ಬೆಂಬಲಿಸಿದ್ದರು. ಅಕ್ರಮ ಸಕ್ರಮ ಮಾಡುವುದಕ್ಕೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಒಂದಾಗುತ್ತಾರೆ ಎನ್ನುವುದನ್ನು ಇದು ನಿರೂಪಿಸಿತ್ತು. ಆದರೆ, ಇಂತಹ ಹೊಂದಾಣಿಕೆಗೆ ಅವಕಾಶ ಇಲ್ಲ ಎನ್ನುವುದನ್ನು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಕ್ರಮವಾಗಿ ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಹುದ್ದೆಯಲ್ಲಿ ಇರಲು ಸಾಧ್ಯವಿಲ್ಲ ಎಂದು ನಿಖರವಾಗಿ ಹೇಳಿರುವುದು ಅಕ್ರಮ ಸಕ್ರಮ ಮಾಡುವ ರಾಜಕಾರ
ಣಿಗಳಿಗೆ ಚಾಟಿ ಏಟಿನಂತೆ ಇದೆ. ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಮತ್ತು ಅಕ್ರಮದಲ್ಲಿ ಭಾಗಿಯಾಗದೇ ನೇಮಕಗೊಂಡಿರುವ ಅಭ್ಯರ್ಥಿಗಳು, ಮೇಲ್ಮನವಿದಾರರು, ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಮುಂದೆ ಬಾಕಿ ಇರುವ ಅರ್ಜಿದಾರರಿಗೆ ಇತರ ಅಭ್ಯರ್ಥಿಗಳ ಜೊತೆ ಪರೀಕ್ಷೆಗೆ ಹಾಜರಾಗಲು ವಯೋಮಿತಿ ಸಡಿಲಿಸುವಂತೆ ಸೂಚಿಸಿರುವುದೂ ಸ್ವಾಗತಾರ್ಹ. ಹೊಸ ನೇಮಕಾತಿಯನ್ನು ಸರಿಯಾಗಿ ನಡೆಸುವ ಜವಾಬ್ದಾರಿ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಲೋಕಸೇವಾ ಆಯೋಗದ ಮುಂದೆ ಇದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani