Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ |ಕೃಷ್ಣಾ ತಿರುವಿನ ಮಹಾರಾಷ್ಟ್ರ ಪ್ರಸ್ತಾವ;ಕರ್ನಾಟಕ ಕಾನೂನು ಮೊರೆ ಹೋಗಲಿ

ಸಂಪಾದಕೀಯ |ಕೃಷ್ಣಾ ತಿರುವಿನ ಮಹಾರಾಷ್ಟ್ರ ಪ್ರಸ್ತಾವ;ಕರ್ನಾಟಕ ಕಾನೂನು ಮೊರೆ ಹೋಗಲಿ

ಕೃಷ್ಣಾ ನದಿಯಿಂದ 40 ಟಿಎಂಸಿ ಅಡಿ ನೀರನ್ನು ಭೀಮಾ ನದಿಯ ಉಜನಿ ಜಲಾಶಯಕ್ಕೆ ಹರಿಸುವುದಕ್ಕೆ ಸಂಬಂಧಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರ ಪ್ರಸ್ತಾವ, ನದಿ ಕಣಿವೆಯ ಕೆಳಹಂತದ ರಾಜ್ಯಗಳ ನೀರಿನ ಹಕ್ಕುಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪ್ರವಾಹದ ನೀರನ್ನು ಸಮರ್ಪಕವಾಗಿ ನಿರ್ವಹಿಸುವ ಕ್ರಮ ಎಂದು ಬಿಂಬಿಸಲಾಗಿರುವ ಈ ಯೋಜನೆಯು, ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿನ ನೀರಿನ ಕೊರತೆಯನ್ನು ನೀಗಿಸುವ ಉದ್ದೇಶ ಹೊಂದಿದೆ. ಆದರೆ, 'ಪ್ರವಾಹದ ನೀರು' ಎಂದು ಹೆಸರಿಸುವುದರಿಂದ ಅದು ಹೆಚ್ಚುವರಿ ನೀರಾಗುವುದಿಲ್ಲ; ಆ ನೀರನ್ನು ಏಕ
ಪಕ್ಷೀಯವಾಗಿ ಬಳಸಿಕೊಳ್ಳುವ ಹಕ್ಕು ನದಿಯ ಮೇಲ್ಭಾಗದ ರಾಜ್ಯಕ್ಕೆ ದೊರೆಯುವುದೂ ಇಲ್ಲ. ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ಹರಿಯುವ ಕೃಷ್ಣಾ ನದಿಯು ಬಂಗಾಳ ಕೊಲ್ಲಿಯನ್ನು ಸೇರುತ್ತದೆ. ನದಿಯ ಜಲಾನಯನ ಪ್ರದೇಶದುದ್ದಕ್ಕೂ ಕೃಷಿ ನೀರಾವರಿ ಹಾಗೂ ಕುಡಿಯುವ ನೀರಿನ ಯೋಜನೆಗಳು ರೂಪುಗೊಂಡಿದ್ದು, ಜನರ ಜೀವನೋಪಾಯಕ್ಕೆ ಆಧಾರವಾಗಿವೆ.

ನ್ಯಾಯಮೂರ್ತಿ ಆರ್‌.ಎಸ್‌. ಬಚಾವತ್‌ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಮೊದಲನೆಯ 'ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ'ಯು (ಕೆಡಬ್ಲ್ಯುಡಿಟಿ-I) ಮಹಾರಾಷ್ಟ್ರಕ್ಕೆ 560 ಟಿಎಂಸಿ ಅಡಿ, ಕರ್ನಾಟಕಕ್ಕೆ 700 ಟಿಎಂಸಿ ಅಡಿ ಹಾಗೂ ಅವಿಭಜಿತ ಆಂಧ್ರಪ್ರದೇಶಕ್ಕೆ 800 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿತ್ತು. ಎರಡನೇ ನ್ಯಾಯಮಂಡಳಿಯು (ಕೆಡಬ್ಲ್ಯುಡಿಟಿ-II) ನೀರಿನ ಹಂಚಿಕೆ
ಯನ್ನು ಪರಿಷ್ಕರಿಸಿದ್ದು, 2013ರ ತನ್ನ ವರದಿಯಲ್ಲಿ ಕರ್ನಾಟಕದ ಪಾಲನ್ನು 907 ಟಿಎಂಸಿ ಅಡಿಗೆ ಹೆಚ್ಚಿಸಿತ್ತು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ವಿವಾದ ಬಾಕಿ ಇರುವುದರಿಂದ, ಪರಿಷ್ಕೃತ ಹಂಚಿಕೆಯ ತೀರ್ಪಿಗೆ ಸಂಬಂಧಿಸಿ ಕೇಂದ್ರ ಸರ್ಕಾರ
ದಿಂದ ಅಧಿಸೂಚನೆ ಹೊರಬಿದ್ದಿಲ್ಲ. ಸದ್ಯಕ್ಕೆ ಬಚಾವತ್‌ ನ್ಯಾಯಮಂಡಳಿಯ ತೀರ್ಪಿನ ಅನ್ವಯವೇ ಕೃಷ್ಣಾ ನೀರಿನ ಹಂಚಿಕೆ ನಡೆಯುತ್ತಿದೆ. ಫಡಣವೀಸ್‌
ಅವರ ಪ್ರಸ್ತಾವವನ್ನು ವಿರೋಧಿಸುವುದಕ್ಕೆ ಮತ್ತೊಂದು ಪ್ರಮುಖ ಕಾರಣವೂ ಇದೆ.
ಕೃಷ್ಣಾ ನದಿಯ ನೀರನ್ನು ಮಹಾರಾಷ್ಟ್ರ ಪಶ್ಚಿಮಾಭಿಮುಖವಾಗಿ ತಿರುಗಿಸಲು ನೀರಿನ ಮಿತಿಯನ್ನು 'ಕೆಡಬ್ಲ್ಯುಡಿಟಿ-I' ಗರಿಷ್ಠ 67.5 ಟಿಎಂಸಿ ಅಡಿಗೆ ಗೊತ್ತು
ಪಡಿಸಿತ್ತು. ನದಿ ಕಣಿವೆಯ ಮೇಲ್ಭಾಗದ ರಾಜ್ಯದ ನೀರಿನ ಬಳಕೆ ಮತ್ತು ಕೆಳ ಭಾಗದ ರಾಜ್ಯಗಳ ಅಗತ್ಯಗಳ ನಡುವೆ ಸಮತೋಲನ ಸಾಧಿಸುವುದು ಅದರ
ಉದ್ದೇಶವಾಗಿತ್ತು. ಪ್ರಸ್ತುತ, ಪ್ರವಾಹದ ನೀರಿನ ಹೆಸರಿನಲ್ಲಿ 40 ಟಿಎಂಸಿ ಅಡಿ ನೀರನ್ನು ತಿರುಗಿಸುವುದರಿಂದ ನ್ಯಾಯಮಂಡಳಿ ರೂಪಿಸಿದ ತತ್ತ್ವಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಒಟ್ಟಾರೆ ನೀರಿನ ಹಂಚಿಕೆಗೆ ಆಧಾರವಾಗಿರುವ ಜಲವೈಜ್ಞಾನಿಕ ಲೆಕ್ಕಾಚಾರಗಳ ಮೇಲೂ ಇದು ಪರಿಣಾಮ ಬೀರಬಹುದು.

ಮಹಾರಾಷ್ಟ್ರದ ಯೋಜನೆಯಿಂದ ಆಲಮಟ್ಟಿ ಜಲಾಶಯಕ್ಕೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾದರೆ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿನ ಪೂರೈಕೆಗೆ ತೊಂದರೆಯಾಗಬಹುದು. ಕೃಷ್ಣಾ ಮೇಲ್ದಂಡೆ ಯೋಜನೆಯ ವಿಸ್ತರಣೆ ಸೇರಿದಂತೆ ಕೆಡಬ್ಲ್ಯುಡಿಟಿ-IIರ ತೀರ್ಪಿನಲ್ಲಿ ನಿರೀಕ್ಷಿಸಲಾಗಿರುವ ಹಲವು ಪ್ರಯೋಜನಗಳನ್ನೂ ಮಹಾರಾಷ್ಟ್ರದ ನಡೆ ಗಾಸಿಗೊಳಿಸುವ ಸಾಧ್ಯತೆಯಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಹೆಚ್ಚಿಸಿ, 130 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಸಂಗ್ರಹಿಸುವ ಕರ್ನಾಟಕದ ಯೋಚನೆಯೂ ಕೆಡಬ್ಲ್ಯುಡಿಟಿ-II ತೀರ್ಪಿಗೆ ಅಧಿಸೂಚನೆ ಹೊರಡದ ಕಾರಣ ಸ್ಥಗಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಪ್ರಸ್ತಾವಿತ ಯೋಜನೆಯು ಕರ್ನಾಟಕದ ಯೋಜನೆಗಳನ್ನು ಅಸ್ತವ್ಯಸ್ತಗೊಳಿಸುವ ಜೊತೆಗೆ, ಹಂಚಿಕೆಯಾಗಿರುವ ಹೆಚ್ಚಿನ ನೀರನ್ನು ಬಳಸಿಕೊಳ್ಳುವುದಕ್ಕೂ ಅಡ್ಡಿಯಾಗಬಹುದು. ಮಹಾ
ರಾಷ್ಟ್ರದ ದೊಡ್ಡ ಪ್ರಮಾಣದ ಯೋಜನೆಗೆ ಕೇಂದ್ರ ಜಲ ಆಯೋಗದ ಪರಿಶೀಲನೆ ಮತ್ತು ಪರಿಸರ ಇಲಾಖೆ ಅನುಮತಿ ಅಗತ್ಯ. ಪಶ್ಚಿಮಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಿಂದ ಯೋಜನೆ ಆರಂಭವಾಗುವುದರಿಂದ, ಹೆಚ್ಚಿನ ಪರಿಶೀಲನೆಯೂ ಅತ್ಯಗತ್ಯ. ಮಹಾರಾಷ್ಟ್ರದ ಪ್ರಸ್ತಾಪವನ್ನು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ಪ‍್ರಶ್ನಿಸಬೇಕಾಗಿದೆ. ಯೋಜನೆಯ ಕಾನೂನು
ಬದ್ಧತೆ ಮತ್ತು ಅದು ಕೃಷ್ಣಾ ನದಿ ಕಣಿವೆಯ ರಾಜ್ಯಗಳ ಮೇಲೆ ಉಂಟುಮಾಡುವ ಪರಿಣಾಮ
ಗಳ ಸಮಗ್ರ ಪರಿಶೀಲನೆ ಪೂರ್ಣಗೊಳ್ಳುವವರೆಗೂ ಯೋಜನೆಗೆ ತಡೆಯಾಜ್ಞೆ ಪಡೆಯಲು ಪ್ರಯತ್ನಿಸಬೇಕು. ಕೇಂದ್ರ ಸರ್ಕಾರ ಮತ್ತು ನ್ಯಾಯಮಂಡಳಿಗಳ ಎದುರು ಆಕ್ಷೇಪಗಳನ್ನು ಸಲ್ಲಿಸುವುದರ ಜೊತೆಗೆ, ಯೋಜನೆಯ ವಿಸ್ತೃತ ವರದಿ, ವೈಜ್ಞಾನಿಕ ಅಧ್ಯಯನಗಳು ಹಾಗೂ ಅಗತ್ಯ ಅನುಮತಿಗಳ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸಬೇಕಾಗಿದೆ. ಹೆಚ್ಚುವರಿ ನೀರು ಲಭ್ಯವಿದೆ ಎನ್ನುವ ಮಹಾರಾಷ್ಟ್ರದ ವಾದದ ಬಗ್ಗೆ ಸ್ವತಂತ್ರ ಮೌಲ್ಯಮಾಪನ ನಡೆಸಲು ಒತ್ತಾಯಿಸುವುದರ ಜೊತೆಗೆ, ಕೆಡಬ್ಲ್ಯುಡಿಟಿ-II ತೀರ್ಪಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಬೇಕಾಗಿದೆ. ಮಹಾರಾಷ್ಟ್ರದ ಏಕಪಕ್ಷೀಯ ನಿರ್ಧಾರಕ್ಕೆ ಕರ್ನಾಟಕದ ಪ್ರತಿಕ್ರಿಯೆ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೆ, ಕಾನೂನು ಮತ್ತು ಸಾಂವಿಧಾನಿಕ ಮಾರ್ಗಗಳ ಮೂಲಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani