ಮಾದಕ ವಸ್ತುಗಳ ಜಾಲದಿಂದ ರಾಜ್ಯವನ್ನು ಮುಕ್ತಗೊಳಿಸಲು ಸರ್ಕಾರ ಹಮ್ಮಿಕೊಂಡಿರುವ 'ಆಪರೇಷನ್ ರೈಸ್' ಕಾರ್ಯಕ್ರಮ ಮತ್ತು 'ಬೇಡ ಬ್ರೋ' ಹೆಸರಿನ ಅಭಿಯಾನ, ಸಕಾಲಿಕವಾದ ಹಾಗೂ ಸದಾಶಯದಿಂದ ಕೂಡಿದ ನಡೆಗಳಾಗಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಭಾರೀ ಬೆಳವಣಿಗೆಯಿಂದಾಗಿ ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ವಿಶ್ವಕ್ಕೆ ವ್ಯಾಪಕವಾಗಿ ತೆರೆದುಕೊಂಡಿರುವುದು, ನಗರೀಕರಣದ ತೀವ್ರತೆ ಹಾಗೂ ವೇಗವಾಗಿ ಬದಲಾಗುತ್ತಿರುವ ಜೀವನಶೈಲಿಯು ಅಭಿವೃದ್ಧಿ ರೂಪದ ಬೆಳವಣಿಗೆಗಳು ಮಾತ್ರವಾಗಿರದೆ, ಮಾದಕ ವಸ್ತುಗಳ ದಂಧೆಯಂತಹ ಅಪರಾಧ ಕೃತ್ಯಗಳಿಗೆ ಹೊಸ ಅವಕಾಶಗಳನ್ನೂ ಒದಗಿಸುತ್ತಿವೆ.
ಕಳೆದ ಆರು ತಿಂಗಳ ಅವಧಿಯಲ್ಲಿ ₹130 ಕೋಟಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ಮಹಾನಗರದ 9 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ₹25.23 ಕೋಟಿ ಮೌಲ್ಯದ ವಿವಿಧ ರೀತಿಯ ಮಾದಕ ವಸ್ತುಗಳು ಹಾಗೂ ಇ-ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕಗಳು ಪತ್ತೆಯಾಗಿರುವುದು, ಡ್ರಗ್ಸ್‌ಗಳ ಅಕ್ರಮ ಉತ್ಪಾದನಾ ಕೇಂದ್ರವಾಗಿಯೂ ರಾಜ್ಯ ರೂಪುಗೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆಯನ್ನು ಸೂಚಿಸುವಂತಿದೆ. ಮಾದಕ ವಸ್ತುಗಳ ಜಾಲ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದು, ಆ ದಂಧೆಗೆ ಕಡಿವಾಣ ಹಾಕುವ ರೂಪದಲ್ಲಿ ಸರ್ಕಾರದ ಹೊಸ ಕಾರ್ಯಕ್ರಮ ಮತ್ತು ಅಭಿಯಾನಕ್ಕೆ ವಿಶೇಷ ಮಹತ್ವವಿದೆ.
ನಿರಾಕರಣೆ (ರೆಫ್ಯೂಸ್), ಮಾಹಿತಿ ನೀಡುವಿಕೆ (ಇನ್‌ಫಾರ್ಮ್), ಬೆಂಬಲ ನೀಡುವುದು (ಸಪೋರ್ಟ್) ಹಾಗೂ ಸಬಲೀಕರಣ (ಎಂಪವರ್) ಎನ್ನುವ ನಾಲ್ಕು ತತ್ತ್ವಗಳ ಮೇಲೆ ರೂಪುಗೊಂಡಿ ರುವ 'ಆಪರೇಷನ್ ರೈಸ್', ಮಾದಕ ವಸ್ತುಗಳ ಮಾರಾಟವನ್ನು ಸಂಘಟಿತ ಕಾರ್ಯತಂತ್ರದ ಮೂಲಕ ನಿಯಂತ್ರಿಸುವ ಉದ್ದೇಶ ಹೊಂದಿದೆ. ಶಿಕ್ಷಣ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಮಾದಕ ವ್ಯಸನವನ್ನು ತಡೆಗಟ್ಟುವ ಉದ್ದೇಶವನ್ನು 'ಬೇಡ ಬ್ರೋ' ಅಭಿಯಾನ ಹೊಂದಿದೆ. 2028ರ ವೇಳೆಗೆ 'ಡ್ರಗ್ಸ್ ಮುಕ್ತ ಕರ್ನಾಟಕ' ಸಾಕಾರಗೊಳ್ಳುವ ಆಶಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದಾಗಿದೆ. ಮಾದಕ ವಸ್ತುಗಳ ಜಾಲವು ಪ್ರಸ್ತುತ ಕಾನೂನು ಸುವ್ಯವಸ್ಥೆಯ ಸಮಸ್ಯೆ ಮಾತ್ರವಾಗಿರದೆ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟೂ ಆಗಿದೆ. ಮುಖ್ಯವಾಗಿ, ಯುವಜನರ ಆರೋಗ್ಯಕ್ಕೆ ಕಂಟಕವಾಗಿರುವ ಈ ದಂಧೆ, ಕೌಟುಂಬಿಕ ವ್ಯವಸ್ಥೆ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸುವ ಸಂಕೀರ್ಣ ಬಿಕ್ಕಟ್ಟಾಗಿದೆ. ಇಂತಹ ಸಮಸ್ಯೆಯ ವಿರುದ್ಧದ ಹೋರಾಟ ಸಂಘಟಿತ ನೆಲೆಯಲ್ಲಿ ನಡೆದಾಗಷ್ಟೇ ನಿರೀಕ್ಷಿತ ಪರಿಣಾಮವನ್ನು ಅಪೇಕ್ಷಿಸಬಹುದು. ಮಾದಕ ವಸ್ತುಗಳ ಜಾಲ ವಿಶ್ವವ್ಯಾಪಿಯಾದುದು. ಹಾಗಾಗಿ, ಈ ಹೋರಾಟದ ಯಶಸ್ಸು ವಿವಿಧ ರಾಜ್ಯಗಳ ಪೊಲೀಸರು, ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ಕರ್ನಾಟಕ ಪೊಲೀಸ್ ಇಲಾಖೆಯು ಸಾಧಿಸಬೇಕಾದ ನಿರಂತರ ಸಮನ್ವಯವನ್ನು ಅವಲಂಬಿಸಿದೆ.
ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಘೋಷಣೆಗಳಲ್ಲಿ, ಜಾಹೀರಾತುಗಳಲ್ಲಿ ಪ್ರಖರವಾಗಿ ಕಾಣಿಸಿಕೊಂಡು, ಅನುಷ್ಠಾನದಲ್ಲಿ ಸೊರಗುತ್ತವೆ. ಮಾದಕ ವಸ್ತು ಜಾಲವನ್ನು ನಿಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಕಾರ್ಯಕ್ರಮಗಳು ನಡೆದಿವೆ; ಪೊಲೀಸರ ದಿಢೀರ್ ದಾಳಿ, ಬಂಧನಗಳು, ಅಪಾರ ಪ್ರಮಾಣದ ಮಾದಕ ವಸ್ತುಗಳ ವಶಪಡಿಸಿಕೊಳ್ಳುವಿಕೆಯಂತಹ ವಿದ್ಯಮಾನಗಳು ಆಗಾಗ ನಡೆಯುತ್ತಲೇ ಇವೆ. ಆದರೆ, ಈ ಚಟುವಟಿಕೆಗಳಲ್ಲಿ ನಿರಂತರತೆ ಇಲ್ಲದ ಕಾರಣದಿಂದಾಗಿ, ಮಾದಕ ವಸ್ತುಗಳ ದಂಧೆಯ ಕಬಂಧ ಬಾಹುಗಳ ಚಾಚುವಿಕೆಯ ವ್ಯಾಪ್ತಿ ದೊಡ್ಡದಾಗುತ್ತಲೇ ಇದೆ. ಸ್ಥಳೀಯ ಪೊಲೀಸರ ನೆರವಿಲ್ಲದೆ ಇಂಥ ದಂಧೆ ನಡೆಯುವುದು ಸಾಧ್ಯವಿಲ್ಲ. ಹಾಗಾಗಿ, ಮಾದಕ ವಸ್ತು ವಿರೋಧಿ ಜಾಗೃತಿ ಆಂದೋಲನ ಪೊಲೀಸ್ ಇಲಾಖೆಯಿಂದಲೇ ಆರಂಭವಾಗಬೇಕಿದೆ. 'ಆಪರೇಷನ್ ರೈಸ್' ಹಾಗೂ 'ಬೇಡ ಬ್ರೋ' ಚಟುವಟಿಕೆಗಳು ಶಾಶ್ವತ ಆದ್ಯತೆಯಾಗುವಂತೆ ಸರ್ಕಾರ ಕ್ರಮ ವಹಿಸಬೇಕಾಗಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿದರೆ ಸಾಲದು; ಈ ಕಾರ್ಯಕ್ರಮಗಳು ಶೈಕ್ಷಣಿಕ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಸನದಿಂದ ಹೊರಬರಲಿಕ್ಕೆ ಚಿಕಿತ್ಸೆ ಮತ್ತು ಸಮಾಲೋಚನೆ ದೊರೆಯುವಂತಾಗಬೇಕು. ಗುಣಮಟ್ಟದ ಪುನರ್ವಸತಿ ಕೇಂದ್ರಗಳನ್ನು ಬಲಪಡಿಸುವುದು ಮತ್ತು ಸಂತ್ರಸ್ತರಿಗೆ ಹಾಗೂ ಅವರ ಕುಟುಂಬಗಳಿಗೆ ಸಮಾಲೋಚನಾ ಸೇವೆಗಳನ್ನು ಒದಗಿಸುವುದು ಅಭಿಯಾನದ ಭಾಗವಾಗಬೇಕು. ಈ ಹೋರಾಟ ಸರ್ಕಾರಕ್ಕೆ ಸೀಮಿತವಾಗದೆ, ಸಮಾಜವೂ ನಿರ್ಣಾಯಕ ಪಾತ್ರ ವಹಿಸಬೇಕಾಗಿದೆ.

