Dailyhunt Logo
  • Light mode
    Follow system
    Dark mode
    • Play Story
    • App Story
ಸಂಪಾದಕೀಯ | ಸಾವಿನ ಪ್ರವಾಹ; ಕಂಗೆಟ್ಟ ನೇಪಾಳ ಹಿಮಾಲಯದ ನಿಗಾ ತುರ್ತು ಅಗತ್ಯ

ಸಂಪಾದಕೀಯ | ಸಾವಿನ ಪ್ರವಾಹ; ಕಂಗೆಟ್ಟ ನೇಪಾಳ ಹಿಮಾಲಯದ ನಿಗಾ ತುರ್ತು ಅಗತ್ಯ

ನೇಪಾಳದಲ್ಲಿ ಪ್ರವಾಹದಿಂದ ಉಂಟಾಗಿರುವ ಭೀಕರ ದುರಂತ, ಹಿಮಾಲಯ ಪರ್ವತಶ್ರೇಣಿಯ ಮೇಲೆ ಹವಾಮಾನ ವೈಪರೀತ್ಯ ಉಂಟುಮಾಡಿರುವ ಅತೀವ ಒತ್ತಡದ ಪರಿಣಾಮದಂತಿದೆ..

ನೇಪಾಳದಲ್ಲಿ ಸಂಭವಿಸಿರುವ ಹಠಾತ್‌ ಪ್ರವಾಹ ಸೃಷ್ಟಿಸಿರುವ ಮಾನವೀಯ ದುರಂತದ ಪ್ರಮಾಣ ಊಹಾತೀತವಾದುದು. ನೀರ್ಗಲ್ಲುಗಳು ಹಾಗೂ ಬಂಡೆಗಳು ಪರ್ವತಗಳಿಂದ ಕುಸಿದು, ಪ್ರವಾಹವನ್ನು ಸೃಷ್ಟಿಸಿ ಮೈಲಿಗಟ್ಟಲೆ ರಭಸವಾಗಿ ಹರಿದು, ದಾರಿಯುದ್ದಕ್ಕೂ ಎದುರಾದುದೆಲ್ಲವನ್ನೂ ನಾಶಗೊಳಿಸಿರುವ ಪರಿಣಾಮ, ನೂರಾರು ಜನ ಸಾವಿಗೀಡಾಗಿದ್ದಾರೆ; ಸಾವಿರಾರು ಜನ ನಾಪತ್ತೆಯಾಗಿದ್ದಾರೆ.

ನೇಪಾಳ-ಚೀನಾ ಗಡಿಯಲ್ಲಿನ ಪರ್ವತದ ಇಳಿಜಾರಿನಿಂದ ಮಂಜುಗಡ್ಡೆ-ಹೆಬ್ಬಂಡೆಗಳ ರಾಶಿ ಕಳಚಿಕೊಂಡಿರುವುದು, ಮೂರು ನದಿಗಳ ಹರಿವು ಮೃತ್ಯುಸ್ವರೂಪ ಪಡೆದುಕೊಳ್ಳಲು ಕಾರಣವಾಗಿದೆ. ಆರು ಪ್ರಮುಖ ಜಲವಿದ್ಯುತ್‌ ಸ್ಥಾವರಗಳು ನಾಶವಾಗಿವೆ. ನೇಪಾಳ-ಚೀನಾ ಗಡಿಭಾಗದಲ್ಲಿನ, ಗಡಿ ದಾಟುವ ಸ್ಥಳವೂ ಕೊಚ್ಚಿಹೋಗಿದೆ. ಭೋರ್ಗರೆವ ನದಿ‍ಗಳ ಪ್ರವಾಹದಲ್ಲಿ ಕಟ್ಟಡಗಳು, ಸೇತುವೆಗಳು ಮತ್ತು ವಾಹನಗಳು ಬೆಂಕಿಪೊಟ್ಟಣಗಳಂತೆ, ಆಟಿಕೆಗಳಂತೆ ತೇಲಿಹೋಗಿವೆ. ಪ್ರಕೃತಿಯ ಆರ್ಭಟದ ಎದುರು ಮನುಷ್ಯಜೀವ ಮತ್ತು ಮನುಷ್ಯನಿರ್ಮಿತ ಸ್ಥಾವರಗಳು ಎಷ್ಟು ಹಗುರ ಎನ್ನುವುದನ್ನು ನೇಪಾಳದಲ್ಲಿನ ದುರಂತ ಮತ್ತೊಮ್ಮೆ ಎತ್ತಿತೋರಿಸಿದೆ. ಪರ್ವತಗಳ ಕುಸಿತದಿಂದ ಉಂಟಾದ ಘರ್ಷಣೆಯಲ್ಲಿ ಭೂಮಿ ಕಂಪಿಸಿದೆ. ಆ ಕಂಪನದ ಸಂಕೇತಗಳು ವಿಶ್ವದ ಹಲವು ಭಾಗಗಳಲ್ಲಿ ದಾಖಲಾಗಿವೆ. ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ. ಸಮಯ ಕಳೆದಂತೆಲ್ಲ ಬದುಕುಳಿದವರು ಪತ್ತೆಯಾಗುವ ಸಾಧ್ಯತೆ ಕ್ಷೀಣಿಸುತ್ತಿದೆ. ಸಾವಿಗೀಡಾಗಿರುವ ಅನೇಕರು ಪ್ರವಾಹ ಸಾಗಿದ ದಾರಿಯಲ್ಲಿನ ಗ್ರಾಮಗಳ ನಿವಾಸಿಗಳಾಗಿದ್ದಾರೆ. ಯಾತ್ರಿಗಳು ಹಾಗೂ ಪ್ರವಾಸಿಗರೂ ಮೃತಪಟ್ಟಿದ್ದು, ಅವರಲ್ಲಿ ಅನೇಕರು ಭಾರತೀಯರಾಗಿದ್ದಾರೆ. ಮತ್ತಷ್ಟು ಪ್ರವಾಹಗಳು ಸಂಭವಿಸುವ ಆತಂಕವೂ ದಟ್ಟವಾಗಿದೆ.

ನೇಪಾಳದಲ್ಲಿನ ದುರಂತಕ್ಕೆ ಸ್ಪಷ್ಟ ಕಾರಣಗಳನ್ನು ಕಂಡುಕೊಳ್ಳಲು ತಿಂಗಳುಗಳೇ ಬೇಕಾಗಬಹುದು. ಆದರೆ, ಈ ದುರಂತದ ಹಿಂದೆ ಹವಾಮಾನ ಬದಲಾವಣೆಯು ಪ್ರಕೃತಿಯ ಮೇಲೆ ಉಂಟುಮಾಡಿರುವ ತೀವ್ರ ಒತ್ತಡ ಸ್ಪಷ್ಟವಾಗಿದೆ. ಹೆಚ್ಚುತ್ತಿರುವ ತಾಪಮಾನದ ‍ಪರಿಣಾಮ ಪರ್ವತಗಳನ್ನು ಬಾಧಿಸಿದ್ದು, ಹಿಮನದಿಯ ಬೃಹತ್‌ ಭಾಗವೊಂದು ಕಳಚಿಕೊಂಡಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹಿಮಾಲಯವು ವಿಶ್ವದ ಅತ್ಯಂತ ಕಿರಿಯ ಮತ್ತು ಸಂವೇದನಾಶೀಲ ಪರ್ವತಶ್ರೇಣಿಯಾಗಿದ್ದು, ಅಲ್ಲಿನ ತಾಪಮಾನ ಜಾಗತಿಕ ಸರಾಸರಿಗಿಂತ ಹೆಚ್ಚಿನ ಪ್ರಮಾಣದಲ್ಲಿದೆ. ಕಳೆದ ಮೂರು ದಶಕಗಳಲ್ಲಿ ನೇಪಾಳ ತನ್ನ ಹಿಮ ಆವರಣದ ಮೂರನೇ ಒಂದು ಭಾಗವನ್ನು ಕಳೆದುಕೊಂಡಿದೆ ಎಂದು ಅಂದಾಜು ಮಾಡಲಾಗಿದೆ. ಈ ನಷ್ಟದ ಪ್ರಮಾಣ ಹೆಚ್ಚಾಗುತ್ತಿದ್ದು, ಇಳಿಜಾರುಗಳಿಂದ ಹಿಮವು ಬೇರೆಯಾಗುವ ಮೂಲಕ ಹಿಮಾಲಯದಾದ್ಯಂತ ಹಿಮನದಿಗಳ ಸಂರಚನೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. 2023ರಲ್ಲಿ ಸಿಕ್ಕಿಂನಲ್ಲಿ ಹಿಮನದಿ ಸರೋವರದ ಸ್ಫೋಟದಿಂದ ಹಾಗೂ 2024ರಲ್ಲಿ ಎವರೆಸ್ಟ್‌ ಸಮೀಪದ ಥಾಮೆಯಲ್ಲಿ ಸಂಭವಿಸಿದ ಪ್ರವಾಹ ಹಾಗೂ ಆ ಪ್ರದೇಶದಲ್ಲಿನ ಅನೇಕ ದಿಢೀರ್‌ ಪ್ರವಾಹಗಳು, ಇದೇ ಬಗೆಯ ಹಿಮನದಿ ಸಂಬಂಧಿತ ಅವಘಡಗಳಾಗಿವೆ. ಈ ಪರ್ವತ ಶ್ರೇಣಿಯಾದ್ಯಂತ ಪ್ರತಿ ದಿನವೂ ಅನೇಕ ಸಣ್ಣಪುಟ್ಟ ಪರಿಸರ ಅವಘಡಗಳು ಸಂಭವಿಸುತ್ತವೆ. ಹಿಮಾಲಯದಲ್ಲಿ ಸುಮಾರು 7,500 ಹಿಮನದಿ ಸರೋವರಗಳು ಮತ್ತು 15,000 ಹಿಮನದಿಗಳಿವೆ. ಅವುಗಳ ನಿಗಾ ವಹಿಸುವುದು ಸುಲಭವಲ್ಲ; ಬಾಹ್ಯಾಕಾಶದಿಂದ ಅವುಗಳ ಸ್ಥಿತಿಯನ್ನು ನಿರಂತರವಾಗಿ ಅಂದಾಜಿಸುವುದೂ ಕಷ್ಟಸಾಧ್ಯ. ಆದರೆ, ಕೋಟ್ಯಂತರ ಜನರ ಜೀವನೋಪಾಯ ಮತ್ತು ಕಲ್ಯಾಣದ ಉದ್ದೇಶದಿಂದ ಹಿಮಾಲಯದ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ.

ಈಗಿನ ಹಠಾತ್‌ ಪ್ರವಾಹಗಳು ಹಿಮಾಲಯ ಪರಿಸರದಲ್ಲಿ ಹವಾಮಾನ ವೈಪರೀತ್ಯದ ಅಪಾಯಗಳು ಹೆಚ್ಚುತ್ತಿರುವುದರ ಬಗೆಗಿನ ಮತ್ತೊಂದು ಎಚ್ಚರಿಕೆಯಾಗಿದೆ. ನಮ್ಮ ಹಿತಕ್ಕಾಗಿ ‍ಪರಿಸರವನ್ನು ಗೌರವಿಸುವ ಮತ್ತು ಸಂರಕ್ಷಿಸುವ ಅಗತ್ಯವನ್ನೂ ಪ್ರಸಕ್ತ ದುರಂತ ನೆನಪಿಸುತ್ತಿದೆ. ನೇಪಾಳದಲ್ಲಿನ ದುರಂತದ ಬಳಿಕ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾರತ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಸಮಾಧಾನದ ಸಂಗತಿ. ಪರ್ವತ ಶ್ರೇಣಿಯ ಸ್ಥಿತಿಗತಿಗಳ ಮೇಲ್ವಿಚಾರಣೆ ಮತ್ತು ಸಂರಕ್ಷಿಸುವ ಕಾರ್ಯದಲ್ಲಿ ಎಲ್ಲ 'ಹಿಮಾಲಯ ರಾಷ್ಟ್ರ'ಗಳ ನಡುವೆ ಇನ್ನಷ್ಟು ಸಹಕಾರ ಮತ್ತು ಸಮನ್ವಯ ಸಾಧ್ಯವಾಗಬೇಕು.

Dailyhunt
Disclaimer: This content has not been generated, created or edited by Dailyhunt. Publisher: Prajavani