ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕೆನ್ನುವ ಒತ್ತಡ ಹೆಚ್ಚಾಗುತ್ತಿದ್ದು, ಆ ಆಗ್ರಹ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಲೇ ಇದೆ. ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರ ಉಪವಾಸ ಸತ್ಯಾಗ್ರಹ ಹಾಗೂ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಬ್ಯಾನರ್ ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಜನರು ನಡೆಸುತ್ತಿರುವ ಪ್ರತಿಭಟನೆಗಳ ಮೂಲಕ ರಾಜೀನಾಮೆಯ ಬೇಡಿಕೆಯು ಆರಂಭಗೊಂಡಿತು.
ನಂತರದಲ್ಲಿ ಪರಿಸ್ಥಿತಿಯು ಕ್ಷಿಪ್ರ ಬದಲಾವಣೆಗಳನ್ನು ಕಂಡಿದೆ. ಪ್ರತಿಭಟನಾಕಾರರ ಬೇಡಿಕೆಯನ್ನು ತಿರಸ್ಕರಿಸಿರುವ ಸರ್ಕಾರ, ಜನರ ಭಾವನೆಯ ಶಕ್ತಿಯನ್ನು ಕಡಿಮೆ ಅಂದಾಜು ಮಾಡಿತು; ತನ್ನ ಅಧಿಕಾರದ ಅಹಂಕಾರದಲ್ಲಿ ಎಲ್ಲವೂ ಸುರಕ್ಷಿತವಾಗಿದೆ ಎಂದು ಭಾವಿಸಿದ್ದಲ್ಲದೆ, ವಿದ್ಯಾರ್ಥಿಗಳ ಮೇಲೆ ಹಿಂಸಾತ್ಮಕ ಕ್ರಮಗಳನ್ನೂ ಜರುಗಿಸಿತು. ಸರ್ಕಾರ ಹಟಮಾರಿಯಾದಷ್ಟೂ ಪ್ರತಿಭಟನಾಕಾರರ ದೃಢತೆ ಹೆಚ್ಚುತ್ತಲೇ ಇದೆ. ಹೋರಾಟವು ದೇಶದ ಇತರ ಭಾಗಗಳಿಗೂ ವಿಸ್ತರಿಸಿದೆ. ಪ್ರತಿಪಕ್ಷಗಳೂ ಈ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದರಿಂದ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಮಾಡಿದೆ. ಪ್ರಸ್ತುತ ಸರ್ಕಾರ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ವಿಚಾರಣೆಗೆ ತ್ವರಿತಗತಿ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರನ್ನು ಶಿಕ್ಷಿಸಲು ಹೊಸ ಮಸೂದೆ ಜಾರಿಗೊಳಿಸುವ ಭರವಸೆಯನ್ನೂ ನೀಡಿದೆ. ಇದರ ಜೊತೆಗೆ, ಉನ್ನತ ಶಿಕ್ಷಣ ಕಾರ್ಯದರ್ಶಿ ವಿನೀತ್ ಜೋಶಿ ಅವರನ್ನು ವರ್ಗಾಯಿಸಿದೆ.
ಪ್ರತಿಭಟನಾಕಾರರ ಬೇಡಿಕೆಗಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ, ಅವು ಸಮಸ್ಯೆಯ ಮೂಲಭೂತ ಸಂಗತಿಗಳನ್ನು ಸ್ಪರ್ಶಿಸುವಂತೆ ಇಲ್ಲ. ತ್ವರಿತ ನ್ಯಾಯಾಲಯಗಳು ಪ್ರಕರಣದಲ್ಲಿನ ಅಪರಾಧದ ಅಂಶವನ್ನು ಮಾತ್ರ ಪರಿಶೀಲಿಸುತ್ತವೆ. ಅಧಿಕಾರಿಗಳ ವರ್ಗಾವಣೆ ಆಡಳಿತಾತ್ಮಕ ಹೊಣೆಗಾರಿಕೆಗೆ ಸಂಬಂಧಿಸಿದ್ದಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಬಹಿರಂಗಗೊಂಡ ತಕ್ಷಣವೇ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್ ಅವರನ್ನು ವರ್ಗಾಯಿಸಲಾಗಿತ್ತು. ಈಗ ಉನ್ನತ ಶಿಕ್ಷಣ ಕಾರ್ಯದರ್ಶಿಯನ್ನೂ ವರ್ಗಾಯಿಸಲಾಗಿದೆ. ಈ ಅಧಿಕಾರಿಗಳನ್ನು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ನೇರ ಪಾತ್ರವಿರುವ ಕಾರಣಕ್ಕೆ ವರ್ಗ ಮಾಡಿಲ್ಲ. ಅಕ್ರಮಗಳನ್ನು ತಡೆಯಲು ವಿಫಲರಾದ ಹೊಣೆಗಾರಿಕೆಯನ್ನು ಅವರ ಮೇಲೆ ಹೊರಿಸಲಾಗಿದೆ. ಈ ಮೂಲಕ, ಅಧಿಕಾರಿಗಳ ಕರ್ತವ್ಯಲೋಪವನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಅಧಿಕಾರಿಗಳು ಅವರ ಕರ್ತವ್ಯಲೋಪಕ್ಕೆ ಹೊಣೆಗಾರರಾಗುವುದಾದರೆ, ಅದಕ್ಕಿಂತಲೂ ಹೆಚ್ಚಿನ ಉತ್ತರದಾಯಿತ್ವ ಆ ಸಚಿವಾಲಯದ ಮುಖ್ಯಸ್ಥರಾಗಿರುವ ಸಚಿವರದ್ದಾಗಿದೆ. ಅಧಿಕಾರಿಗಳಿಗೆ ಅನ್ವಯಿಸುವ ತತ್ತ್ವವು ಸಚಿವರಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣವಾಗಿ ಅನ್ವಯಿಸಬೇಕು; ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಬೇಕು.
ತಮ್ಮ ಸಚಿವಾಲಯದ ವೈಫಲ್ಯಕ್ಕೆ ನೈತಿಕ ಹೊಣೆಗಾರಿಕೆ ಹೊತ್ತು ಶಿಕ್ಷಣ ಸಚಿವರು ಹುದ್ದೆಯಿಂದ ಕೆಳಗಿಳಿಯಬೇಕು. ಅವರ ರಾಜೀನಾಮೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತರದಾಯಿತ್ವ ನಿರ್ವಹಣೆಯ ವಿಧಾನವೂ ಆಗಿದೆ. ರಾಜೀನಾಮೆಯು ದೌರ್ಬಲ್ಯ ಅಥವಾ ಸೋಲಿನ ಸಂಕೇತವಾಗಿರದೆ, ಜನರ ಬಗ್ಗೆ ಸರ್ಕಾರಕ್ಕೆ ಇರುವ ಉತ್ತರದಾಯಿತ್ವವನ್ನು ಬಲಪಡಿಸುವ ಪ್ರಕ್ರಿಯೆಯಾಗಿದೆ. ಜನರು ಅಧಿಕಾರ ಮತ್ತು ಹೊಣೆಗಾರಿಕೆಯನ್ನು ನೀಡಿರುವುದಕ್ಕೆ ತೆರಬೇಕಾದ ಬೆಲೆ ಅದು. ಉತ್ತರದಾಯಿತ್ವವು ಐದು ವರ್ಷಗಳಿಗೊಮ್ಮೆ ಬರುವ ಚುನಾವಣೆಯಲ್ಲಿ ಮಾತ್ರ ಪರೀಕ್ಷೆಗೆ ಒಳಪಡುವುದಿಲ್ಲ. ಅದು ಆಡಳಿತದ ಪ್ರತಿ ನಿರ್ಧಾರ ಹಾಗೂ ಸಾರ್ವಜನಿಕ ಹಿತಾಸಕ್ತಿಯ ಎಲ್ಲ ವಿಷಯಗಳಲ್ಲೂ ಪ್ರತಿ ದಿನವೂ ಪರೀಕ್ಷೆಗೆ ಒಳಪಡುತ್ತದೆ. ಚುನಾವಣೆಯಲ್ಲಿ ದೊರೆಯುವ ಬಹುಮತ, ಸರ್ಕಾರದ ಪ್ರತಿ ನಿರ್ಧಾರ ಮತ್ತು ಕ್ರಮವನ್ನು ಸಮರ್ಥಿಸುವ ಪರವಾನಗಿ ಅಲ್ಲ. ಆ ಬಹುಮತ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನಷ್ಟೇ ನೀಡುತ್ತದೆ; ವಿದ್ಯಾರ್ಥಿಗಳು, ಕಾರ್ಮಿಕರು, ರೈತರು ಸೇರಿದಂತೆ ಜನಸಮೂಹಕ್ಕೆ ಪ್ರತಿದಿನವೂ ಉತ್ತರದಾಯಿಯಾಗಿಸುತ್ತದೆ. ಈ ಹಿನ್ನೆಲೆಯಲ್ಲಿ ಧರ್ಮೇಂದ್ರ ಪ್ರಧಾನ್ ಅವರು ಮೇ ತಿಂಗಳಲ್ಲಿಯೇ ರಾಜೀನಾಮೆ ನೀಡಬೇಕಾಗಿತ್ತು. ಈಗಲೂ ವಿಳಂಬವಾಗಿಲ್ಲ. ತಾನು ತಪ್ಪೇ ಮಾಡುವುದಿಲ್ಲ ಎನ್ನುವ ಸರ್ಕಾರದ ಭ್ರಮೆ ಮತ್ತು ಅಹಂಕಾರ ಸಚಿವರಿಗೆ ರಕ್ಷಾಕವಚ ಆಗಬಾರದು.

