Dailyhunt Logo
  • Light mode
    Follow system
    Dark mode
    • Play Story
    • App Story
ಸಂಪುಟ ವಿಸ್ತರಣೆ ಕಸರತ್ತು ದೆಹಲಿಗೆ ಸಿಎಂ ಡಿಕೆಶಿ

ಸಂಪುಟ ವಿಸ್ತರಣೆ ಕಸರತ್ತು ದೆಹಲಿಗೆ ಸಿಎಂ ಡಿಕೆಶಿ

ಬೆಂಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರ ಒತ್ತಡ ತೀವ್ರವಾಗುತ್ತಿದ್ದು, ಸಂಪುಟ ವಿಸ್ತರಣೆಯ ಕಸರತ್ತನ್ನು ಅಂತ್ಯಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ದೆಹಲಿಯತ್ತ ಪಯಣ ಬೆಳೆಸಲು ಸಿದ್ಧತೆ ನಡೆಸಿದ್ದಾರೆ.

ಪಕ್ಷದ ಹೈಕಮಾಂಡ್‌ ನಾಯಕರ ಭೇಟಿಗೆ ಸಮ್ಮತಿಯ ನಿರೀಕ್ಷೆಯಲ್ಲಿದ್ದು, ಎರಡು ದಿನಗಳಲ್ಲಿ ದೆಹಲಿಗೆ ತೆರಳಿ, ನೂತನ ಸಚಿವರ ಪಟ್ಟಿ ಅಂತಿಮಗೊಳಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ಹೇಳಿವೆ.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಒಂದು ತಿಂಗಳು ಕಳೆದರೂ ಸಂಪುಟ ವಿಸ್ತರಣೆ ಪೂರ್ಣಗೊಳಿಸಲು ಶಿವಕುಮಾರ್‌ ಅವರಿಗೆ ಸಾಧ್ಯವಾಗಿಲ್ಲ. ಹಿರಿಯ, ಕಿರಿಯ ಶಾಸಕರು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿ, ಈಗ ಅವಕಾಶ ಸಿಗದವರು ನಿರಂತರವಾಗಿ ಒತ್ತಡ ಹಾಕುತ್ತಿದ್ದು, ಕೆಲವರು ದೆಹಲಿಗೆ ತೆರಳಿ ಹೈಕಮಾಂಡ್‌ ನಾಯಕರ ಮೂಲಕ ಶಿಫಾರಸು ಮಾಡಿಸುತ್ತಿರುವುದು ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಮೂರು, ನಾಲ್ಕು ಬಾರಿ ಶಾಸಕರಾದವರು, ಪಕ್ಷಕ್ಕಾಗಿ ಹಿಂದಿನಿಂದಲೂ ದುಡಿದವರು, ಇದೇ ಮೊದಲ ಬಾರಿ ಆಯ್ಕೆಯಾದವರು, ವಿಧಾನ ಪರಿಷತ್‌ ಸದಸ್ಯರು, ಶಾಸಕಿಯರು ಜಿಲ್ಲಾವಾರು, ಜಾತಿವಾರು ಲೆಕ್ಕಾಚಾರದಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ. ನಾಯಕತ್ವ ಬದಲಾವಣೆಯ ಸನ್ನಿವೇಶದಲ್ಲಿ ತಮ್ಮ ಪರ ನಿಂತವರು, ಮುಖ್ಯಮಂತ್ರಿ ಸ್ಥಾನ ನೀಡುವಂತೆ ಬಹಿರಂಗವಾಗಿ ಹೇಳಿಕೆ ಕೊಟ್ಟವರು, ದೆಹಲಿಗೆ ತೆರಳಿ ತಮ್ಮ ಪರ ಹೈಕಮಾಂಡ್‌ ಮೇಲೆ ಒತ್ತಡ ಹಾಕಿದ ಕೆಲವರಿಗಾದರೂ ಸಂಪುಟದಲ್ಲಿ ಅವಕಾಶ ನೀಡಲು ಶಿವಕುಮಾರ್‌ ಕಸರತ್ತು ನಡೆಸಿದ್ದಾರೆ.

ಅತ್ತ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ತಮ್ಮನ್ನು ಸಂಪುಟಕ್ಕೆ ತೆಗೆದಕೊಳ್ಳಲು ಶಿಫಾರಸು ಮಾಡುವಂತೆ ಅವರ ಮೇಲೆ ನಿರಂತರ ಒತ್ತಡ ಹಾಕುತ್ತಿದ್ದಾರೆ. ಅವರ ಸಂಪುಟದಲ್ಲಿ ಸಚಿವರಾಗಿದ್ದು, ಈಗ ಅವಕಾಶ ವಂಚಿತರಾದ ಮಾಜಿಗಳು, ಆಪ್ತ ಶಾಸಕರ ದಂಡು ನಿತ್ಯವೂ ಅವರನ್ನು ಭೇಟಿ ಮಾಡಿ, ಮನವಿ ಮಾಡುತ್ತಿದ್ದಾರೆ. ಅಂಥವರಿಗೆ ಸಂಪುಟದಲ್ಲಿ ಸ್ಥಾನ ಸಿಗುವಂತೆ ಮಾಡಲು ಸಿದ್ದರಾಮಯ್ಯ ಅವರೂ ಪ್ರಯತ್ನ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌, ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಈಗಾಗಲೇ ದೆಹಲಿಯಲ್ಲಿ ಒಂದು ಸುತ್ತು ಚರ್ಚೆ ನಡೆಸಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳ ಅರ್ಹತೆ, ಪಕ್ಷ ನಿಷ್ಠೆ, ಭವಿಷ್ಯದಲ್ಲಿ ಅವರಿಂದ ಸರ್ಕಾರ ಹಾಗೂ ಪಕ್ಷಕ್ಕೆ ಆಗುವ ಲಾಭ ಮತ್ತಿತರ ಅಂಶಗಳನ್ನು ಪರಿಶೀಲಿಸಿದ್ದಾರೆ. ಇನ್ನೊಂದು ಸುತ್ತಿನ ಸಭೆ ನಡೆಸಿದ ತಕ್ಷಣ ಶಿವಕುಮಾರ್‌ ಅವರಿಗೆ ದೆಹಲಿಗೆ ಬರಲು ಸೂಚಿಸಲಿದ್ದಾರೆ. ಎರಡು, ಮೂರು ದಿನಗಳ ಒಳಗೆ ಪಟ್ಟಿ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ಖಚಿತಪಡಿಸಿವೆ.

ಸಿದ್ದರಾಮಯ್ಯ ನಿವಾಸಕ್ಕೆ ಶಿವಕುಮಾರ್‌

ಉಪಾಹಾರದ ನೆಪದಲ್ಲಿ ಸಿದ್ದರಾಮಯ್ಯ ಅವರ ನಿವಾಸಕ್ಕೆ ಶುಕ್ರವಾರ ತೆರಳಿದ ಮುಖ್ಯಮಂತ್ರಿ ಶಿವಕುಮಾರ್‌ ಸಂಪುಟ ವಿಸ್ತರಣೆ ಕುರಿತು ಕೆಲ ಸಮಯ ಚರ್ಚೆ ನಡೆಸಿದ್ದಾರೆ. ಜಿಲ್ಲಾವಾರು ಪ್ರಾತಿನಿಧ್ಯ ಜಾತಿವಾರು ಶಾಸಕರು ಹಲವು ಬಾರಿ ಶಾಸಕರಾದರೂ ಒಮ್ಮೆಯೂ ಸಚಿವ ಸ್ಥಾನ ಸಿಗದ ಪಕ್ಷದ ನಿಷ್ಠಾವಂತರು ಒಬ್ಬಿಬ್ಬರು ಹೊಸ ಶಾಸಕರು ಹಾಗೂ ಶಾಸಕಿಯರ ಪಟ್ಟಿಯನ್ನು ಸಿದ್ದರಾಮಯ್ಯ ಅವರ ಮುಂದಿಟ್ಟು ಮಾತುಕತೆ ನಡೆಸಿದ್ದಾರೆ. 'ಈಗಾಗಲೇ ಸಾಕಷ್ಟು ವಿಳಂಬವಾಗಿದ್ದು ಮಳೆಗಾಲದ ಅಧಿವೇಶನ ಆರಂಭಿಸಬೇಕಿದೆ. ಅಷ್ಟರ ಒಳಗೆ ಸಂಪುಟ ವಿಸ್ತರಣೆಯಾಗಬೇಕು. ದೆಹಲಿ ನಾಯಕರ ಕರೆ ಬಂದ ತಕ್ಷಣ ತಾವೂ ಬರಬೇಕು. ಪಟ್ಟಿ ಅಂತಿಮಗೊಳಿಸಲು ಸಹಕಾರ ನೀಡಬೇಕು' ಎಂದು ಮನವಿ ಮಾಡಿದ್ದಾರೆ. ಶಿವಕುಮಾರ್‌ ಅವರ ಜತೆಗೆ ಪತ್ನಿ ಉಷಾ ಸಹೋದರ ಡಿ.ಕೆ.ಸುರೇಶ್ ಅವರು ಸಿದ್ದರಾಮಯ್ಯ ಅವರ ಜತೆ ಉಪಾಹಾರ ಕೂಟದಲ್ಲಿ ಭಾಗವಹಿಸಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani