ಆಧುನಿಕ ಜಗತ್ತು ಹವಾಮಾನ ಬದಲಾವಣೆಯ ಬಹುದೊಡ್ಡ ಸವಾಲು ಎದುರಿಸುತ್ತಿದೆ. ಈ ಬದಲಾವಣೆಗಳ ಹಿಂದಿರುವ ಪ್ರಭಾವಶಾಲಿ ನೈಸರ್ಗಿಕ ವಿದ್ಯಮಾನವನ್ನು 'ಎಲ್ ನಿನೊ' ಎನ್ನುತ್ತಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ಎಲ್ ನಿನೊ ಎಂದರೆ ಪುಟ್ಟ ಬಾಲಕ ಎಂದರ್ಥ. ಈ ಪುಟ್ಟ ಬಾಲಕನ ಕಿತಾಪತಿ ತ್ರಿವಿಕ್ರಮ ಸ್ವರೂಪದ್ದು.
ಪೆಸಿಫಿಕ್ ಮಹಾಸಾಗರದ ಆಳದಲ್ಲಿ ಹುಟ್ಟುವ ಈ ವಿದ್ಯಮಾನವು ಇಡೀ ಜಗತ್ತಿನ ಕೃಷಿ, ಅರ್ಥವ್ಯವಸ್ಥೆ ಮತ್ತು ಪರಿಸರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪೆಸಿಫಿಕ್ ಮಹಾಸಾಗರದ ಉಷ್ಣವಲಯದ ಭಾಗದಲ್ಲಿ ಸಮುದ್ರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವ ಒಂದು ಹವಾಮಾನ ಪ್ರಕ್ರಿಯೆಯೇ ಎಲ್ ನಿನೊ. ಇದು ಜಗತ್ತಿನಾದ್ಯಂತ ಮಳೆ ಮತ್ತು ತಾಪಮಾನದ ವಿನ್ಯಾಸವನ್ನು ಬದಲಿಸುತ್ತದೆ. ವೈಜ್ಞಾನಿಕವಾಗಿ ಇದು 'ಎಲ್ ನಿನೊ ಸದರನ್ ಆಸಿಲೇಶನ್' ಚಕ್ರದ ಒಂದು ಭಾಗವಾಗಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿ, ಪೆಸಿಫಿಕ್ ಮಹಾಸಾಗರದ ಮೇಲೆ ಪೂರ್ವದಿಂದ ಪಶ್ಚಿಮಕ್ಕೆ ಬಲವಾದ ಮಾರುತಗಳು ಬೀಸುತ್ತವೆ. ಇವು ಮೇಲ್ಮೈಯ ಬಿಸಿನೀರನ್ನು ಏಷ್ಯಾದತ್ತ ತಳ್ಳುತ್ತವೆ ಮತ್ತು ದಕ್ಷಿಣ ಅಮೆರಿಕದ ಕರಾವಳಿಯಲ್ಲಿ ತಳಭಾಗದ ತಣ್ಣನೆಯ ನೀರು ಮೇಲೆ ಬರಲು ಅವಕಾಶ ಮಾಡಿಕೊಡುತ್ತವೆ. ಆದರೆ, ಎಲ್ ನಿನೊ ಸಂಭವಿಸಿದಾಗ ಈ ಮಾರುತಗಳು ದುರ್ಬಲಗೊಳ್ಳುತ್ತವೆ ಅಥವಾ ದಿಕ್ಕು ಬದಲಿಸುತ್ತವೆ. ಇದರಿಂದಾಗಿ ಪಶ್ಚಿಮದಲ್ಲಿದ್ದ ಬಿಸಿನೀರು ಮರಳಿ ದಕ್ಷಿಣ ಅಮೆರಿಕದ ಪೆರು ಮತ್ತು ಈಕ್ವೆಡಾರ್ ಕರಾವಳಿಯತ್ತ ಹರಿಯಲು ಪ್ರಾರಂಭಿಸುತ್ತದೆ. ಇದರ ಪರಿಣಾಮವಾಗಿ ಸಮುದ್ರದ ಮೇಲ್ಮೈ ತಾಪಮಾನವು ವಾಡಿಕೆಗಿಂತ 0.5 ಡಿಗ್ರಿ ಸೆಲ್ಸಿಯಸ್‌ನಿಂದ 2 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿ, ಪೆಸಿಫಿಕ್ ಮಹಾಸಾಗರದ ಮೇಲೆ ಗಾಳಿಯನ್ನು ನಿರಂತರವಾಗಿ ಸುತ್ತಿಸುವ 'ವಾಕರ್ ಸರ್ಕ್ಯುಲೇಶನ್' ಏರುಪೇರಾಗುತ್ತದೆ. ಇದು ಸರಿಯಾಗಿದ್ದರೆ ಭಾರತಕ್ಕೆ ಸಕಾಲದಲ್ಲಿ ಮಳೆ ಬರುತ್ತದೆ, ವ್ಯತ್ಯಾಸವಾದಾಗ ಮಳೆಯಲ್ಲೂ ಸಮಸ್ಯೆಯಾಗುತ್ತದೆ.
ಪ್ರತಿ ಎರಡರಿಂದ ಏಳು ವರ್ಷಗಳಿಗೊಮ್ಮೆ ಸಂಭವಿಸುವ ಎಲ್ ನಿನೊ ವಿದ್ಯಮಾನವು ಇಪ್ಪತ್ತನೇ ಶತಮಾನದಲ್ಲಿ ಸುಮಾರು 25ರಿಂದ 30 ಬಾರಿ ಮರುಕಳಿಸಿತ್ತು. 1911-12, 1972-73, 1982-83 ಮತ್ತು ವಿಶೇಷವಾಗಿ 1997-98ರ ವರ್ಷಗಳು ಭೀಕರ ಎಲ್ ನಿನೊಗೆ ಸಾಕ್ಷಿಯಾಗಿದ್ದವು. 1997-
98ರ ಘಟನೆಯನ್ನು 'ಸೂಪರ್ ಎಲ್ ನಿನೊ' ಎಂದು ಕರೆಯಲಾಗಿದ್ದು, ಅದು ಅಂದಾಜು 35 ಬಿಲಿಯನ್ ಡಾಲರ್‌ನಷ್ಟು ಜಾಗತಿಕ ಆರ್ಥಿಕ ನಷ್ಟಕ್ಕೆ ಕಾರಣವಾಗಿತ್ತು.
ಭಾರತದ ದೃಷ್ಟಿಕೋನದಿಂದ ಎಲ್ ನಿನೊ ಅತ್ಯಂತ ಅಪಾಯಕಾರಿ. ಇದರ ಪರಿಣಾಮಗಳು ಬಹುಮುಖಿಯಾಗಿದ್ದು, ಮುಂಗಾರು ಮಾರುತಗಳು ದುರ್ಬಲಗೊಂಡು ಬರಗಾಲ ಮತ್ತು ತೀವ್ರ ಮಳೆ ಕೊರತೆ ಉಂಟಾಗುತ್ತದೆ. ಮುಂಗಾರು ಮಳೆಯ ಮೇಲೆ ಅವಲಂಬಿತವಾಗಿರುವ ದೇಶದ ಆಹಾರ ಭದ್ರತೆ ಮತ್ತು ಆರ್ಥಿಕತೆ ನೆಲಕಚ್ಚುತ್ತದೆ. ಕಳೆದ 140 ವರ್ಷಗಳಲ್ಲಿ ಭಾರತದಲ್ಲಿ ಸಂಭವಿಸಿದ ಬರಗಾಲಗಳಲ್ಲಿ ಶೇ 60ರಷ್ಟು ಎಲ್ ನಿನೊ ಪ್ರಭಾವವಿದೆ. ವಿಶೇಷವಾಗಿ 1951, 1965, 1972, 1982 ಮತ್ತು 2002ರ ವರ್ಷಗಳಲ್ಲಿ ಉಂಟಾದ ಎಲ್ ನಿನೊದಿಂದಾಗಿ ಭಾರತ ಭೀಕರ ಬರಗಾಲವನ್ನು ಎದುರಿಸಿತ್ತು. 2009ರಲ್ಲಿ ಸಂಭವಿಸಿದ ಎಲ್ ನಿನೊ ಕಳೆದ ಮೂರು ದಶಕಗಳಲ್ಲೇ ಅತ್ಯಂತ ಕಡಿಮೆ ಮಳೆಗೆ ಕಾರಣವಾಗಿತ್ತು.
2014-16ರ ಅವಧಿಯಲ್ಲಿ ಸತತ ಎರಡು ವರ್ಷಗಳ ಕಾಲ ಎಲ್ ನಿನೊ ಪ್ರಭಾವದಿಂದ, ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು.
ಈ ವರ್ಷದ ಮೇ-ಜುಲೈ ಅವಧಿಯಲ್ಲಿ ಪ್ರಬಲ ಎಲ್ ನಿನೊ ಸೃಷ್ಟಿಯಾಗುವ ಸಾಧ್ಯತೆಯಿದೆ. ಇದರ ಪರಿಣಾಮ, ಕೃಷಿ ಕ್ಷೇತ್ರದ ಮೇಲೆ ತೀವ್ರವಾಗಿ ಆಗಲಿದೆ. ಜಲಾಶಯಗಳಲ್ಲಿನ ನೀರಿನಮಟ್ಟ ಕುಸಿಯುವುದರಿಂದ, ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ಪಳೆಯುಳಿಕೆ ಇಂಧನದ ಅವಲಂಬನೆ ಹೆಚ್ಚುತ್ತದೆ.
ಎಲ್ ನಿನೊ ಬಿಸಿಯಾದ ಹಂತವಾದರೆ, ತಂಪಾದ ಹಂತವನ್ನು 'ಲಾನಿನಾ' ಎನ್ನುತ್ತಾರೆ. ಈ ಅವಧಿಯಲ್ಲಿ ಭಾರತದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತದೆ. ಇದು ನೈರುತ್ಯ ಮುಂಗಾರು ಮಾರುತಗಳನ್ನು ಬಲಪಡಿಸುತ್ತದೆ. ಈ ಎರಡು ವಿದ್ಯಮಾನಗಳ ನಡುವಿನ ಸಮತೋಲನವೇ ಭೂಮಿಯ ಹವಾಮಾನ ಸ್ಥಿರತೆಗೆ ಕಾರಣವಾಗುತ್ತದೆ.
ಪ್ರಸ್ತುತ ಜಾಗತಿಕ ತಾಪಮಾನ ಏರಿಕೆಯು ಎಲ್ ನಿನೊದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಆಧುನಿಕ ಉಪಗ್ರಹ ಆಧಾರಿತ ತಂತ್ರಜ್ಞಾನದ ಮೂಲಕ ಇಂದು 6ರಿಂದ 9 ತಿಂಗಳು ಮುಂಚಿತವಾಗಿಯೇ ಇದರ ಮುನ್ಸೂಚನೆ ಪಡೆಯಲು ಸಾಧ್ಯವಿದೆ.
ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ ರೈತರು ಕಡಿಮೆ ನೀರು ಬಳಸುವ ಬೆಳೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಮಳೆನೀರು ಸಂಗ್ರಹದಂತಹ ಸುಸ್ಥಿರ ಮಾರ್ಗಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಇದು ಆಗಾಗ ಸಂಭವಿಸುವ ಪ್ರಕೃತಿಯ ಸಹಜ ಪ್ರಕ್ರಿಯೆ ಆದರೂ, ಇದರ ವ್ಯಾಪ್ತಿ ಮಾತ್ರ ಜಗತ್ತನ್ನೇ ಒಳಗೊಂಡಿದೆ. ನಿರಂತರ ಸಂಶೋಧನೆ ಮತ್ತು ಹೊಂದಾಣಿಕೆಯೇ ಈ ಅಸ್ಥಿರ ಹವಾಮಾನದ ವಿರುದ್ಧದ ನಮ್ಮ ಅಸ್ತ್ರಗಳಾಗಬೇಕಿವೆ. ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ರೈತರು, ಸಾರ್ವಜನಿಕರ ಹಿತ ರಕ್ಷಿಸಬೇಕಾಗಿದೆ.

