Dailyhunt Logo
  • Light mode
    Follow system
    Dark mode
    • Play Story
    • App Story
ಸಂಗತ: ಮುಖವಾಡ ತೆರೆಯದೆ ಅರಿವಾಗದ ಸತ್ಯ!

ಸಂಗತ: ಮುಖವಾಡ ತೆರೆಯದೆ ಅರಿವಾಗದ ಸತ್ಯ!

ಪ್ಪತ್ತನೆಯ ಶತಮಾನದ ಆಲಿಸ್ ನೀಲ್ ಎಂಬ ಪ್ರಖ್ಯಾತ ಭಾವಚಿತ್ರ ಕಲಾವಿದೆಯು 1970ರಲ್ಲಿ ಆಂಡಿ ವಾರ್ಹೋಲ್ ಎಂಬ ಮತ್ತೊಬ್ಬ ನಿಷ್ಣಾತ ಚಿತ್ರ ಕಲಾವಿದನ ಭಾವಚಿತ್ರವನ್ನು ರಚಿಸುತ್ತಾಳೆ. ಆಂಡಿ ವಾರ್ಹೋಲ್ ತನ್ನ ಪಾಲುದಾರನೊಂದಿಗೆ ನಡೆದಿದ್ದ ಜಗಳದಿಂದಾಗಿ, ಅವನು ಹೊಡೆದ ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುತ್ತಾನೆ.

ಅವನ ಜೀವಕ್ಕೆ ಅಪಾಯವಾಗಿರದಿದ್ದರೂ, ಕೆಲಕಾಲ ಆಸ್ಪತ್ರೆಯಲ್ಲೇ ಇರಬೇಕಾಗುತ್ತದೆ. ಅದೇ ಸಮಯದಲ್ಲಿ ಆಲಿಸ್ ನೀಲ್ ಅವನ ಭಾವಚಿತ್ರವನ್ನು ರಚಿಸುತ್ತಾಳೆ.

ವಾರ್ಹೋಲನು ಒಬ್ಬ ಶೋಕಿ ಮನುಷ್ಯನಾಗಿದ್ದ. ಧರಿಸುತ್ತಿದ್ದ ಬೆಲೆಬಾಳುವ ಸೂಟುಗಳಿಗೆ ಹೊಂದುವಂತಹ ವಿಗ್‌ಗಳನ್ನು ತೊಡುತ್ತಿದ್ದ. ಮುಖದ ಕಳೆ ಹೆಚ್ಚಿಸಲು ಸ್ವಲ್ಪ ಮೇಕಪ್‌ ಮಾಡಿಕೊಳ್ಳುತ್ತಿದ್ದ. ಇವುಗಳಿಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಅವನು ಕಾಣಿಸಿಕೊಳ್ಳುತ್ತಲೇ ಇರಲಿಲ್ಲ. ನಡೆದ ಘಟನೆಯಿಂದ ಚೇತರಿಸಿಕೊಳ್ಳುತ್ತಿದ್ದ ಆತ, ಆಲಿಸ್‌ಳ ಕಲಾಕೃತಿಗೆ ತನ್ನ ದೌರ್ಬಲ್ಯವನ್ನು, ತನಗಾದ ಆಘಾತವನ್ನು, ಅದರಿಂದ ಅನುಭವಿಸುತ್ತಿದ್ದ ಒಂಟಿತನಗಳೆಲ್ಲವನ್ನೂ ಪ್ರದರ್ಶಿಸಲು ಒಪ್ಪಿಕೊಳ್ಳುತ್ತಾನೆ. ಅವಳೆದುರಿಗೆ ಮೂಳೆಚಕ್ಕಳವಾಗಿದ್ದ ತನ್ನ ಎದೆಯನ್ನು (ಬಿದ್ದ ಗುಂಡಿನಿಂದಾಗಿ ಅವನ ಶ್ವಾಸಕೋಶಕ್ಕೆ ಪೆಟ್ಟಾಗಿರುತ್ತದೆ) ತೋರಿಸಲು, ತೆರೆದೆದೆಯಲ್ಲಿ ಕೂಡಲು ಒಪ್ಪಿಕೊಳ್ಳುತ್ತಾನೆ. ಆ ಹಂತದಲ್ಲಿ ಅವನು ಬದುಕಿನ ನಶ್ವರತೆಯನ್ನು ಅರ್ಥಮಾಡಿಕೊಂಡಿದ್ದ, ತಾನು ತೋರಿಸುವ ಸತ್ಯದ ಬೆಳಕನ್ನು ಎದುರಿಸಲಾಗದೆ, ತನ್ನ ಭಾವಚಿತ್ರಕ್ಕೆ ಕಣ್ಣುಮುಚ್ಚಿಕೊಂಡು ಕೂಡುತ್ತಾನೆ. ಇಲ್ಲೊಂದು ಭವ್ಯವಾದ ಒಪ್ಪಿಕೊಳ್ಳುವಿಕೆಯಿದೆ. ಚಿತ್ರ ಕಲಾವಿದೆ ಮತ್ತು ರೂಪದರ್ಶಿ ಇಬ್ಬರಲ್ಲೂ ಸೌಂದರ್ಯಪ್ರಜ್ಞೆಯ ಕುರಿತಾದ ಒಂದು ಪ್ರಬುದ್ಧ ನೋಟವಿದೆ. ಆರೋಗ್ಯಪೂರ್ಣವಾದ ದೇಹದಲ್ಲಿ ಕಾಣುವ ವಿಸ್ಮಯವು ಕೃಶಗೊಂಡ ದೇಹದಲ್ಲೂ ಕಾಣುತ್ತೇವೆ ಎಂಬ ವಿನಯ ಅವರಿಬ್ಬರಲ್ಲೂ ಕಾಣುತ್ತದೆ.

ನಮ್ಮ ದೇಶದಲ್ಲಿ ನಡೆದ ವಿದ್ಯಾರ್ಥಿ ಆಂದೋಲನವು ಬರೀ ಸರ್ಕಾರವನ್ನಷ್ಟೇ ಪ್ರಶ್ನಿಸದೆ, ಅವರನ್ನು ನಂಬಿದ ಜನಸಾಮಾನ್ಯರ ಪ್ರಜಾಪ್ರಭುತ್ವದ ಧೋರಣೆಯನ್ನೂ ಪ್ರಶ್ನಿಸಿದೆ. ಇದುವರೆಗೂ ಕೇಂದ್ರ ಸರ್ಕಾರವು ಆಂಡಿ ವಾರ್ಹೋಲಿನಂತೆ ನಿತ್ಯವೂ ಬಣ್ಣ ಹಚ್ಚಿಕೊಳ್ಳುತ್ತಿತ್ತು. ಪ್ರತಿಭಟನೆಯಿಂದಾಗಿ ಸರ್ಕಾರದ ಕೆನ್ನೆಗೆ ಹಚ್ಚಿದ ಬಣ್ಣ ಇದೀಗ ಮಾಸಿರಬಹುದು. ಸರ್ಕಾರದ ಸ್ವಾಭಿಮಾನಕ್ಕೆ ಪೆಟ್ಟುಬಿದ್ದಿದೆ. ವಿದ್ಯಾರ್ಥಿ ಆಂದೋಲನ ತೋರಿಸಿದ ಪ್ರಕೃತಿಯಷ್ಟೇ ನಿಚ್ಚಳವಾದ ಸತ್ಯವನ್ನು ಕೇಂದ್ರ ಸರ್ಕಾರ ವಿನಯದಿಂದ ಸ್ವೀಕರಿಸಿದೆಯೆ?

ಮಧ್ಯರಾತ್ರಿಯಲ್ಲಿ ಬಿಡುಗಡೆಗೊಂಡ ವಿಡಿಯೊದಲ್ಲಿ ಪ್ರಧಾನಿಯವರು 'ನನ್ನ ತಾಯಿಯ ಕುರಿತಾಗಿಯೂ ಅಪಶಬ್ದಗಳನ್ನು ಬಳಸಿರುವ ಮಕ್ಕಳನ್ನು ಕ್ಷಮಿಸುತ್ತೇನೆ' ಎಂದಿದ್ದಾರೆ. ಅದಾದ ನಂತರ ಒಬ್ಬ ಹುಡುಗಿಯು ಕಣ್ಣೀರು ಗರೆಯುತ್ತ 'ನಾನಿನ್ನೂ ಹದಿನೈದರ ಹುಡುಗಿ. ಓರಗೆಯವರಿಂದ ಪ್ರಭಾವಿತಗೊಂಡು ಪ್ರಧಾನಿ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದೇನೆ, ನನ್ನನ್ನು ಕ್ಷಮಿಸಿ' ಎಂದಿದ್ದಾಳೆ. ಪ್ರಧಾನಿ ವಿಡಿಯೊದಲ್ಲಿ ದೇಶದಾದ್ಯಂತ ಕಿಚ್ಚು ಸೃಷ್ಟಿಸಿದ್ದ ಪ್ರತಿಭಟನೆಯನ್ನು ಹುಡುಗರ ಭಾಷಾ ಬಳಕೆಗಷ್ಟೇ ಸೀಮಿತ ಗೊಳಿಸಿದ್ದು ಯಾತಕ್ಕಾಗಿ? ನಡೆದ ಯುವ ಕ್ರಾಂತಿಯನ್ನು ಅವಲೋಕಿಸಿದರೆ ಯಾರು ಯಾರನ್ನು ಕ್ಷಮಿಸಬೇಕು? ಎಂಬ ಮೂಲ ಪ್ರಶ್ನೆ ನಮ್ಮ ಮುಂದೆ ಬರುತ್ತದೆ.

ವಿದ್ಯಾರ್ಥಿ ಸಮುದಾಯವು ಬಂಡಾಯ ನಡೆಸಿದ್ದಾದರೂ ಏತಕ್ಕಾಗಿ ಎನ್ನುವ ಪ್ರಶ್ನೆಯನ್ನು ಪ್ರಧಾನಿಯವರು ಒಮ್ಮೆಯಾದರೂ ಕೇಳಿಕೊಂಡಿದ್ದಾರೆಯೆ? ಪ್ರಶ್ನೆಪತ್ರಿಕೆ ಸೋರಿಕೆಯ ಅವಾಂತರದಿಂದ ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿ ಕೊಂಡಿರುವುದಕ್ಕೆ ಅವರಿಗೆ ಖೇದವಾಗಿದೆಯೆ? ಅವರು ನಡೆಸಿದ ಪ್ರತಿಭಟನೆಯನ್ನು ವಿನಯದಿಂದ ಪರಿಷ್ಕರಿಸುವ ಮಾನಸಿಕ ಸ್ಥೈರ್ಯ ಹೊಂದಿದ್ದಾರೆಯೆ? 'ಸದೃಢ ಭಾರತವನ್ನು ಯುವಸಮುದಾಯದೊಂದಿಗೆ ಕಟ್ಟುವ ಉದ್ದೇಶವಿದೆ' ಎಂದು ವಿಡಿಯೊದಲ್ಲಿ ಹೇಳಿರುವ ಪ್ರಧಾನಿ, ಹೋರಾಟದ ಮೊದಲ ದಿನಗಳಲ್ಲೇ ನಿರಶನನಿರತ ವಿದ್ಯಾರ್ಥಿಗಳತ್ತ ಇದೇ ಸಾಂತ್ವನದ ದೃಷ್ಟಿಯನ್ನೇಕೆ ಬೀರಲಿಲ್ಲ?

ವಿದ್ಯಾರ್ಥಿಗಳು ತಮ್ಮ ಮನಸ್ಸಿಗಾದ ಗಾಸಿಯನ್ನು ಯಥಾವತ್ ಹೊರಹಾಕಿದ್ದಾರೆ. ಅವರು ಆಂಡಿ ವಾರ್ಹೋಲಿನಂತೆ ಕಣ್ಣುಮುಚ್ಚಿ ಕೂಡಲಿಲ್ಲ. 'ಭಾಷೆಯ ಬಳಕೆಗಾಗಿ ನಾವು ಕ್ಷಮಾಪಣೆ ಕೇಳುವುದಿಲ್ಲ' ಎನ್ನುವ ನೇಹಾ ಬೋರಾ ಅವರ ಮಾತು ಗಮನಾರ್ಹ. ಯುವ ಸಮುದಾಯ ಸರ್ಕಾರವನ್ನು ಎದುರು ಹಾಕಿಕೊಂಡಿತು. ಸತ್ಯವನ್ನು ಹೇಳಿದ್ದೇವೆ ಎಂದು ಹೇಳಿದಾಗ ಅದು ಅವರ ನಡತೆಯಲ್ಲೂ ಕಾಣಿಸಿಕೊಂಡಿದೆ. 'ನಮ್ಮ ಪೀಳಿಗೆ ಇರುವುದೇ ಹೀಗೆ' ಎಂಬುದನ್ನು, ತಮಗಾದ 'ಅನ್ಯಾಯಕ್ಕೆ ನ್ಯಾಯ ದೊರಕಿಸಿಕೊಳ್ಳುವ ಮಾರ್ಗ ಇದುವೇ' ಎಂಬುದನ್ನು ಸಾಬೀತುಪಡಿಸಿದ್ದಾರೆ.

ಕೇಂದ್ರ ಸರ್ಕಾರದಲ್ಲಿ ಇರುವ ಯಾರೊಬ್ಬರೂ ಯುವ ಸಮುದಾಯದ 'ಇದ್ದದ್ದು ಇದ್ದ ಹಾಗೆ' ಹೇಳುವ ಧಾಟಿಯನ್ನು ಅರಿತಂತಿಲ್ಲ. ವಯಸ್ಕರು, ಕಿರಿಯರೊಂದಿಗೆ ಸಂವಹನ ನಡೆಸಲು ಅವರಷ್ಟೇ ಸರಳವಾಗಬೇಕು. ಆಗ, ಬಹುಶಃ ಅವರ ಭಾಷೆ, ವರ್ತನೆ, ನಡೆನುಡಿಗಳೆಲ್ಲವೂ ವೇದ್ಯವಾಗತೊಡ ಗುತ್ತವೆ. ಸರ್ಕಾರವು ಸೋಗು, ಅಹಂಕಾರ, ಅಧಿಕಾರದ ದರ್ಪದ ಮುಖವಾಡಗಳನ್ನು ಕಳಚಿಟ್ಟು, ಸರಳವಾಗಿ ಸಹಜವಾಗಿ ಅವರೊಂದಿಗೆ ಕಲೆಯಬೇಕು. ಡಿಜಿಟಲ್‌ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದನ್ನೇ ಯುವಜನರೊಂದಿಗಿನ ಸಂವಹನ ಎನ್ನುವ ಭ್ರಮೆಯಿಂದ ಹೊರಬಂದು, ನೇರವಾಗಿ ಅವರೊಂದಿಗೆ ಚರ್ಚಿಸಬೇಕು. ವಾಸ್ತವವನ್ನು ಗ್ರಹಿಸಿ, ಭಾವಚಿತ್ರಕ್ಕೆ ರೂಪದರ್ಶಿಯಾದ ಆಂಡಿ ವಾರ್ಹೋಲಿನಂಥ ಎದೆಗಾರಿಕೆಯುಳ್ಳವರು ನಮಗೀಗ ಬೇಕಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Prajavani