ಕಳೆದ ವಾರಾಂತ್ಯದಲ್ಲಿ ನಾವು ಪ್ರವಾಸದಲ್ಲಿದ್ದಾಗ ನಮ್ಮ ಇಂಟರ್ನೆಟ್ ಸರ್ವೀಸ್ ಪ್ರೊವೈಡರ್ ಕರೆ ಮಾಡಿ, ಇಂಟರ್ನೆಟ್ ಸಂಪರ್ಕದಲ್ಲಿ ಏನಾದರೂ ತೊಂದರೆಯಾಗಿದೆಯೇ ಎಂದು ವಿಚಾರಿಸಿದರು. ಮನೆಯ ಇಂಟರ್ನೆಟ್ ಸಂಪರ್ಕ ನಿಷ್ಕ್ರಿಯಗೊಂಡಿರುವುದನ್ನು ಅವರು ಗಮನಿಸಿದ್ದರಂತೆ.
ಅವರು ಒಳ್ಳೆಯ ಉದ್ದೇಶದಿಂದಲೇ ಕರೆ ಮಾಡಿದ್ದರೂ, ಆ ಘಟನೆ ನನ್ನಲ್ಲಿ ಒಂದು ರೀತಿಯ ಆತಂಕ ಮತ್ತು ಅಸಹಜ ಭಾವನೆಯನ್ನು ಮೂಡಿಸಿತು. ವೈ-ಫೈ ಸಂಪರ್ಕವನ್ನು ಸ್ಥಗಿತ
ಗೊಳಿಸುವಂತಹ ಸರಳ ಸಂಗತಿಯೂ ಯಾರದೋ ಗಮನವನ್ನು ಸೆಳೆಯುತ್ತದೆ ಎಂದಾದರೆ, ನಮ್ಮ ಬದುಕಿನ ಇನ್ನೆಷ್ಟು ಸಂಗತಿಗಳು ಹೀಗೆ ಇತರರ ನಿಯಂತ್ರಣದಲ್ಲಿರಬಹುದು?
ಇತ್ತೀಚೆಗೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ವೈಯಕ್ತಿಕ ಮಾಹಿತಿಯು ಡಾರ್ಕ್ ವೆಬ್‌ನಲ್ಲಿ ಸೋರಿಕೆಯಾಗಿರುವ ಶಂಕೆಯನ್ನು ವ್ಯಕ್ತಪಡಿಸಿತು. ಬ್ಯಾಂಕಿನ ಪ್ರಾಥಮಿಕ ತನಿಖೆಯಲ್ಲಿ ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡ 3,897 ದಾಖಲೆಗಳು ಪತ್ತೆಯಾಗಿದ್ದವು. ಗ್ರಾಹಕರ ಹಣ ಸುರಕ್ಷಿತವಾಗಿದೆ ಎಂದು ಬ್ಯಾಂಕ್ ಭರವಸೆ ನೀಡಿದ್ದರೂ, ಈ ಘಟನೆಯು ಜನರಲ್ಲಿ ಆತಂಕವನ್ನು ಹುಟ್ಟುಹಾಕಿರುವುದರಲ್ಲಿ ಸಂಶಯವಿಲ್ಲ. ನಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್‌ಗಳು ಸುರಕ್ಷಿತವಾಗಿಡುತ್ತವೆ ಎಂಬ ನಂಬಿಕೆಯಿಂದ ಅವುಗಳಿಗೆ ಒಪ್ಪಿಸುತ್ತೇವೆ. ಅಂತಹ ಬ್ಯಾಂಕುಗಳೇ ಇಂದು ಗ್ರಾಹಕರ ಮಾಹಿತಿಯನ್ನು ರಕ್ಷಿಸಿಕೊಳ್ಳಲು ಹೆಣಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಂತ್ರಜ್ಞಾನವು ನಮಗೆ ಹೆಚ್ಚಿನ ಸ್ವಾತಂತ್ರ್ಯ, ಸೌಕರ್ಯ ಮತ್ತು ಅನುಕೂಲಗಳನ್ನು ಒದಗಿಸುತ್ತದೆ ಎಂದು ನಂಬಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ವಿಪರ್ಯಾಸವೆಂದರೆ, ನಾವು ತಾಂತ್ರಿಕವಾಗಿ ಎಷ್ಟು ಮುಂದುವರಿಯುತ್ತಿದ್ದೇವೆಯೋ, ಅಷ್ಟೇ ಪ್ರಮಾಣ
ದಲ್ಲಿ ನಮ್ಮ ಖಾಸಗಿತನವನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಚಲನವಲನಗಳು, ಸಂಭಾಷಣೆಗಳು, ವೈಯಕ್ತಿಕ ಆದ್ಯತೆಗಳು, ಅಷ್ಟೇ ಏಕೆ, ನಮ್ಮ ಮೌನವೂ ಡಿಜಿ
ಟಲ್ ಜಗತ್ತಿನಲ್ಲಿ ಒಂದಲ್ಲ ಒಂದು ಕುರುಹನ್ನು ಉಳಿಸುತ್ತಿವೆ. ತಾಂತ್ರಿಕ ಪ್ರಗತಿಯ ಹೆಸರಿನಲ್ಲಿ ಸ್ವತಂತ್ರವಾಗಿ ಬದುಕುವ ಮೂಲಭೂತ ಸ್ವಾತಂತ್ರ್ಯವನ್ನೇ ನಾವು ಕ್ರಮೇಣ ಕಳೆದುಕೊಂಡಿದ್ದೇವೆ ಮತ್ತು ಬೆತ್ತಲಾಗಿದ್ದೇವೆ ಎಂಬುದು ಇಂದಿನ ಕಹಿಸತ್ಯ.
ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕೊಂಡ ಅವರ ಸುತ್ತ ಇತ್ತೀಚೆಗೆ ಉದ್ಭವಿಸಿದ ವಿವಾದವು, ಸಾಮಾಜಿಕ ಜಾಲತಾಣಗಳು ಜನರ ಖಾಸಗಿ ಬದುಕಿನಲ್ಲಿ ಹೇಗೆ ಹಸ್ತಕ್ಷೇಪ ಮಾಡುತ್ತಿವೆ ಎಂಬುದಕ್ಕೆ ಮತ್ತೊಂದು ಆತಂಕಕಾರಿ ಉದಾಹರಣೆಯಾಗಿದೆ. 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ತಮ್ಮ ಸಂಬಂಧ ಮತ್ತು ವಿವಾಹ ಕುರಿತು ಮಾತನಾಡಿದ ನಂತರ ಈ ಜೋಡಿ ಸಾಮಾಜಿಕ ಜಾಲತಾಣ
ಗಳಲ್ಲಿ ವ್ಯಾಪಕ ಟೀಕೆ ಮತ್ತು ಅಪಹಾಸ್ಯಕ್ಕೆ ಗುರಿಯಾಯಿತು. ಈ ವಿವಾದವು ಮುಂದುವರಿದು, ತಿರುಚಿದ ಮಾಹಿತಿಯ ಪ್ರಸಾರ ಮತ್ತು ಆನ್‌ಲೈನ್ ಕಿರುಕುಳದ ಆರೋಪಗಳ ಹಿನ್ನೆಲೆಯಲ್ಲಿ ಈ ಜೋಡಿಯ ಪ್ರತಿನಿಧಿಗಳು ಸೈಬರ್
ಅಪರಾಧ ವಿಭಾಗದ ಅಧಿಕಾರಿಗಳನ್ನು ಸಂಪರ್ಕಿಸುವ ಹಂತಕ್ಕೂ ತಲಪಿತು. ಆತಂಕ ಮೂಡಿಸುವ ಸಂಗತಿಯೆಂದರೆ, ಒಬ್ಬರ ವೈಯಕ್ತಿಕ ಆಯ್ಕೆಗಳನ್ನು ಮತ್ತು ಸಂಬಂಧಗಳನ್ನು ನಿರ್ಣಯಿಸುವ ಅಧಿಕಾರ ತಮಗಿದೆ ಎಂಬಂತೆ ಮೂರನೇ ವ್ಯಕ್ತಿಗಳು ವರ್ತಿಸುತ್ತಿರುವುದು.
ಸಾಮಾಜಿಕ ಜಾಲತಾಣಗಳು ಇಂದು ಸ್ವಯಂಘೋಷಿತ ನ್ಯಾಯಾಲಯಗಳಾಗಿ ಮಾರ್ಪಡುತ್ತಿವೆ. ಇಲ್ಲಿ ಪ್ರತಿಯೊಬ್ಬರೂ ನ್ಯಾಯಾಧೀಶರೇ! ಪ್ರತಿಯೊಬ್ಬರ ಅಭಿಪ್ರಾಯಗಳೂ ತೀರ್ಪುಗಳಾಗುತ್ತವೆ. ಈ ರೀತಿಯ ಧೋರಣೆಯ ಫಲವಾಗಿ ವ್ಯಕ್ತಿ
ಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಮೊದಲೇ ಅವರನ್ನು ಅಪರಾಧಿಗಳಂತೆ ಬಿಂಬಿಸಲಾಗುತ್ತದೆ.
ಹಣ, ಜನಪ್ರಿಯತೆ ಮತ್ತು ಪ್ರಭಾವವನ್ನು ಹೊಂದಿರುವ ಖ್ಯಾತನಾಮರೂ ಸಾರ್ವಜನಿಕ ಟೀಕೆ ಮತ್ತು ನಿಂದನೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಮಾಜದ ಪ್ರಭಾವಿ ಮತ್ತು ಪ್ರತಿಷ್ಠಿತ ವ್ಯಕ್ತಿಗಳೇ ಇಂತಹ ಹಸ್ತಕ್ಷೇಪಗಳಿಗೆ ಗುರಿಯಾಗುತ್ತಿರುವಾಗ, ಸಾಮಾನ್ಯ ಜನರ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟವೇನಲ್ಲ. ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ತಮಗಿದೆ ಎಂದು ಪ್ರತಿಪಾದಿಸುವ ಮತ್ತು ಇತರರು ತಮ್ಮ ಆಯ್ಕೆಯಂತೆ ಬದುಕುವ ಸ್ವಾತಂತ್ರ್ಯವನ್ನು ಗೌರವಿಸಲು ಸಿದ್ಧರಿಲ್ಲದ ಸಮಾಜವೊಂದನ್ನು ನಾವು ತಂತ್ರಜ್ಞಾನದ ಹೆಸರಿನಲ್ಲಿ ನಿರ್ಮಿಸಿಕೊಂಡಿರುವಂತೆ ಕಾಣುತ್ತಿದೆ.
ಒಂದು ಕಾಲದಲ್ಲಿ ಗೋಡೆಗಳಿಗೂ ಕಿವಿಗಳಿವೆ ಎಂದು ಭಯಪಡುತ್ತಿದ್ದೆವು. ಇಂದು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಸುತ್ತಲಿನ ಗಾಳಿಗೂ ಕಣ್ಣು ಮತ್ತು ಕಿವಿಗಳು ಬಂದಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಒಂದು ಸಾಮಾನ್ಯ ಸಂಭಾಷಣೆ, ನಿರುಪದ್ರವಿ ಮಾತು ಅಥವಾ ದೈನಂದಿನ ಬದುಕಿನ ಯಾವುದೋ ಒಂದು ಸಣ್ಣ ಘಟನೆ ಕ್ಷಣಾರ್ಧದಲ್ಲಿ ದಾಖಲಾಗಿ, ಎಲ್ಲೆಡೆ ಹರಡಿ, ವೈರಲ್ ಆಗಬ
ಹುದು. ಒಂದು ಕಾಲದಲ್ಲಿ ಖಾಸಗಿಯಾಗಿ ಉಳಿಯುತ್ತಿದ್ದ ಮಾತುಗಳು ಮತ್ತು ಘಟನೆಗಳು ಇಂದು ಇದ್ದಕ್ಕಿದ್ದಂತೆ ಸಾರ್ವಜನಿಕ ಚರ್ಚೆ, ಟೀಕೆ ಮತ್ತು ತೀರ್ಪುಗಳಿಗೆ ಒಳಗಾಗಬಹುದು.
ತಂತ್ರಜ್ಞಾನವು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಅದರಿಂದ ದೂರ ಉಳಿಯುವುದು ಸಾಧ್ಯವೂ ಇಲ್ಲ, ಅಪೇಕ್ಷಣೀಯವೂ ಅಲ್ಲ. ಆದ್ದರಿಂದ ನಮಗೆ ಅಗತ್ಯ ಇರುವುದು ತಂತ್ರಜ್ಞಾನದ ಪ್ರಯೋಜನಗಳ ಜೊತೆಗೆ ಅದರಿಂದ ಎದುರಾಗಬಹುದಾದ ಅಪಾಯಗಳ ಕುರಿತಾದ ಹೆಚ್ಚಿನ ಅರಿವು. ಜನರ ಖಾಸಗಿತನವನ್ನು ರಕ್ಷಿಸುವ ಮತ್ತು ವೈಯಕ್ತಿಕ ಮಾಹಿತಿಯ ದುರುಪಯೋಗವನ್ನು ತಡೆಯುವ ಜವಾಬ್ದಾರಿಯನ್ನು ತಂತ್ರಜ್ಞಾನ ಕಂಪನಿಗಳೂ ಹೊರಬೇಕಾಗಿದೆ. ಆದರೆ, ವ್ಯಕ್ತಿಗಳು ಪರಸ್ಪರರ ಖಾಸಗಿ ಬದುಕಿನ ಗಡಿಗಳನ್ನು ಗೌರವಿಸುವುದನ್ನು ಕಲಿಯದ ಹೊರತು ಕಾನೂನುಗಳು ಮತ್ತು ನಿಯಮಗಳಿಂದ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ.

