ಉದ್ಯೋಗದ ಸ್ಥಳಗಳಲ್ಲಿ ಜಾತೀಯತೆ ಪ್ರದರ್ಶನ ಹೊಸತಲ್ಲವಾದರೂ, ಜಾತಿಯ ಹೆಸರಿನಲ್ಲಿ ತಾರತಮ್ಯ ಎಸಗುವ ಘಟನೆಗಳು ಇತ್ತೀಚೆಗೆ ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗು ತ್ತಿವೆ. 'ಪರಿಶಿಷ್ಟ ಜಾತಿಗೆ ಸೇರಿದ್ದಾರೆ ಎಂಬ ಕಾರಣದಿಂದಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನನ್ನನ್ನು ಪರಿಗಣಿಸ ಲಿಲ್ಲ' ಎಂದು ರಾಜಸ್ಥಾನದ ಐಎಎಸ್ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿಕೊಂಡಿದ್ದುದು ಸುದ್ದಿಯಾಗಿತ್ತು.
ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಆಂಗ್ಲ ಪ್ರಾಧ್ಯಾಪಕ ರೊಬ್ಬರು, ದಲಿತ ಎನ್ನುವ ಕಾರಣಕ್ಕಾಗಿ ತಮಗೆ ಬಡ್ತಿಯನ್ನು ನಿರಾಕರಿಸಲಾಗಿದೆ ಎಂದು ದೂರಿದ್ದರು.
ಜಾತಿ ಕಾರಣಕ್ಕಾಗಿ ಸವಲತ್ತುಗಳನ್ನು ನೀಡಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಹಾಗೂ ಅಸಹಕಾರ ವ್ಯಕ್ತಪಡಿಸುವ ಘಟನೆಗಳು ವೃತ್ತಿಯ ಎಲ್ಲ ಹಂತ ಮತ್ತು ಹುದ್ದೆಗಳಲ್ಲಿ ನಡೆಯುತ್ತಿವೆ. ವೃತ್ತಿಯಿಂದ ವೈದ್ಯನಾಗಿರುವ ನಾನು ಕೂಡ ಇಂಥ ಕಹಿ ಪ್ರಸಂಗಗಳನ್ನು ಎದುರಿಸಿದ್ದೇನೆ. ವರ್ಗಾವಣೆ ಸಂದರ್ಭ ದಲ್ಲೊಮ್ಮೆ ಹೊಸ ಕಚೇರಿಗೆ ಹಾಜರಾದಾಗ ಅಲ್ಲಿರುವ ಎಲ್ಲ ಸಿಬ್ಬಂದಿ ಸಂತೋಷದಿಂದ ಸ್ವಾಗತಿಸಿದ್ದರು. ಸಮಯ ಸಿಕ್ಕಾಗ ಸಹೋದ್ಯೋಗಿಗಳೊಂದಿಗೆ ಜೊತೆಯಾಗಿ ಉಪಹಾರ, ಊಟಕ್ಕೆ ಹೋಗುತ್ತಿದ್ದೆ. ಆದರೆ, ಸ್ವಲ್ಪ ದಿನಗಳ ನಂತರ ಕೆಲವರು ನನ್ನನ್ನು ಬಿಟ್ಟು ಊಟ-ತಿಂಡಿಗೆ ಹೋಗಲು ಆರಂಭಿಸಿದರು. ಆ ಬಗ್ಗೆ ನಾನು ಪ್ರಶ್ನಿಸಿದಾಗ, 'ನೀವು ಕೆಲಸದಲ್ಲಿ ಬಿಜಿಯಾಗಿರ್ತೀರಿ, ಸುಮ್ಮನೆ ತೊಂದರೆ ಕೊಡುವುದು ಯಾಕೆ?' ಎಂದು ಜಾರಿಕೊಂಡರು. ಕಚೇರಿಯ ಮತ್ತೊಬ್ಬರು ಸಿಬ್ಬಂದಿ, 'ನಿಮ್ಮ ಜಾತಿ ಅವರಿಗೆ ಗೊತ್ತಾಗಿದೆ, ಅದಕ್ಕೆ ಹಾಗೆ ಮಾಡುತ್ತಿದ್ದಾರೆ' ಎಂದು ಸತ್ಯಸಂಗತಿ ತಿಳಿಸಿದಾಗ ಆಶ್ಚರ್ಯವಾಯ್ತು.
ಭಾರತದಲ್ಲಿ ಸುಮಾರು ಶೇ 18ರಷ್ಟು ಉದ್ಯೋಗಿಗಳು ಜಾತಿ ತಾರತಮ್ಯ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಯಾಕೆ ಹೀಗಾಗುತ್ತದೆ?
ಎಸ್ಸಿ-ಎಸ್ಟಿ ಸಮುದಾಯದವರು ಕಡಿಮೆ ಅಂಕ ಪಡೆದಿದ್ದರೂ ಒಳ್ಳೆಯ ಕಾಲೇಜುಗಳಲ್ಲಿ ಪ್ರವೇಶ ಪಡೆದು, ನಮಗೆ ಸಮವಾಗಿ ಅಧ್ಯಯನ ಮಾಡುತ್ತಾರೆ, ಒಳ್ಳೆ ನೌಕರಿ ದೊರಕಿಸಿಕೊಳ್ಳುತ್ತಾರೆ ಎಂಬ ಭಾವನೆಯೇ ಉದ್ಯೋಗದ ಸ್ಥಳಗಳಲ್ಲಿ ಜಾತೀಯತೆ ಆಚರಣೆಗೆ ಮುಖ್ಯ ಕಾರಣ. ಮೀಸಲಾತಿಯ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ, ತಪ್ಪು ಮಾಹಿತಿಯನ್ನು ತಲೆಯಲ್ಲಿ ತುಂಬಿಕೊಂಡ ಸಮುದಾಯ ದವರು ಜಾತಿ ತಾರತಮ್ಯ ಎಸಗುತ್ತಾರೆ. ಅಪ್ಪ-ಅಮ್ಮ ಒಳ್ಳೆಯ ನೌಕರಿಯಲ್ಲಿದ್ದರೂ ಅವರ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಏಕೆ ಬೇಕು ಎಂಬುದು ಕೆಲವರ ವಾದ. ಇದೊಂದು ತಪ್ಪುಕಲ್ಪನೆ. ಏಕೆಂದರೆ, ಮೀಸಲಾತಿಯ ಉದ್ದೇಶ ಆರ್ಥಿಕ ಸಬಲತೆ ಮಾತ್ರ ಅಲ್ಲ. ಸಾಮಾಜಿಕ ಸಬಲತೆಗೂ ಮೀಸಲಾತಿಯು ಮುಖ್ಯ. ಶಿಕ್ಷಣ ಮತ್ತು ವೃತ್ತಿಯಲ್ಲಿ ಮೀಸಲಾತಿಯಿಂದ ಮಾತ್ರ ಸಾಮಾಜಿಕ ಸಬಲತೆ ಸಾಧ್ಯ.
ದಲಿತರು ಕಡಿಮೆ ಅಂಕ ಪಡೆದು ಶಿಕ್ಷಣ ಪಡೆಯುವುದ ರಿಂದ ಅವರು ವೃತ್ತಿಯಲ್ಲಿ ಉಳಿದವರಷ್ಟು ಸಮರ್ಥರಲ್ಲ ಎಂದೂ ಕೆಲವರು ಹೇಳುತ್ತಾರೆ. ಹೀಗೆ ಹೇಳುವವರು, ಅಂಕಗಳಲ್ಲಿ ರಿಯಾಯಿತಿ ಇರುವುದು ಶಾಲೆ-ಕಾಲೇಜು ಪ್ರವೇಶಕ್ಕಾಗಿ ಮಾತ್ರ ಎನ್ನುವುದನ್ನು ಗಮನಿಸಬೇಕು. ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ಕನಿಷ್ಠ ಅಂಕಗಳಲ್ಲಿ ಯಾವುದೇ ರಿಯಾಯಿತಿ ಇರುವುದಿಲ್ಲ. ಹೀಗಾಗಿ ದಲಿತರು ಅಸಮರ್ಥರು ಎಂಬ ವಾದ ನಿರಾಧಾರ. ಕನಿಷ್ಠ ಅರ್ಹತೆ ಇಲ್ಲದೆ, ಜಾತಿ ಕಾರಣದಿಂದಾಗಿ ಮಾತ್ರ ನೌಕರಿ ದೊರೆಯುವುದು ಸಾಧ್ಯವಿಲ್ಲ. ಅಲ್ಲದೆ ವ್ಯಕ್ತಿಯ ಅರ್ಹತೆಗೆ ಅಂಕಗಳು ಮಾತ್ರ ಮಾನದಂಡವಲ್ಲ; ವ್ಯಕ್ತಿತ್ವ ಹಾಗೂ ಸಾಮರ್ಥ್ಯವೂ ಮುಖ್ಯವಾಗುತ್ತದೆ.
ಜಾತಿ ತಾರತಮ್ಯದಿಂದ ತಪ್ಪಿಸಿಕೊಳ್ಳಲು ಕೆಲವರು ತಮ್ಮ ಜಾತಿಯನ್ನು ಮುಚ್ಚಿಡುವುದಿದೆ. ಅದು ಸರಿಯಲ್ಲ. ಜಾತಿಯ ಹೆಸರು ಹೇಳಿ, ಸವಲತ್ತುಗಳನ್ನು ಪಡೆದು ಎತ್ತರಕ್ಕೆ ಬಂದಿರು ವಾಗ, ಅದನ್ನು ಮುಚ್ಚಿಡುವ ಪ್ರಯತ್ನ ಬೇಡ. ಅವಕಾಶ ಸಿಕ್ಕಾಗ ಜಾತಿಯನ್ನು ಬಹಿರಂಗಪಡಿಸುವುದು ಒಳ್ಳೆಯದು. ಹೊಸ ಊರಿಗೆ ವರ್ಗವಾದ ಸಂದರ್ಭದಲ್ಲಿ, ಕಚೇರಿಯಲ್ಲಿ ಪರಿಚಯಿಸಿಕೊಳ್ಳುವಾಗ ನಾನು ಪರೋಕ್ಷವಾಗಿ ನನ್ನ ಜಾತಿಯ ಬಗ್ಗೆ ಹೇಳುತ್ತೇನೆ. ನಾನು ಕೆಲಸ ಮಾಡುವ ಇಲಾಖೆ ಅಥವಾ ಕಚೇರಿಯಲ್ಲಿನ ಸಿಬ್ಬಂದಿ ಇಲ್ಲವೇ ಆ ಊರಿನಲ್ಲಿನ ಖ್ಯಾತ ವ್ಯಕ್ತಿ ನನ್ನ ಸಂಬಂಧಿಯಾಗಿದ್ದರೆ ಅವರ ಹೆಸರನ್ನು ಹೇಳುತ್ತೇನೆ. ಹೀಗೆ ಮಾಡಿದಾಗ, 'ನೀವು ಬೇರೆ ಜಾತಿ ಅಂತ ತಿಳಿದಿದ್ದೆ ಅಥವಾ ನೀವು ದಲಿತರೆಂದು ಅನಿಸುವುದಿಲ್ಲ' ಎಂಬಂಥ ಮಾತುಗಳಿಗೆ ಅವಕಾಶ ಇರುವುದಿಲ್ಲ.
ನಾಗರಿಕ ಹಕ್ಕುಗಳ ಸಂರಕ್ಷಣಾ ಕಾಯ್ದೆ 1955ರ ಅಡಿಯಲ್ಲಿ, ಒಬ್ಬ ವ್ಯಕ್ತಿಯು ಪರಿಶಿಷ್ಟ ಜಾತಿಯ ವ್ಯಕ್ತಿಗೆ ಕಿರುಕುಳ ನೀಡಿದರೆ, ಗಾಯಗೊಳಿಸಿದರೆ, ಬಹಿಷ್ಕಾರ ಹಾಕಿದರೆ, ಅಡ್ಡಿಪಡಿಸಿದರೆ ಅಥವಾ ಅವಮಾನಿಸಿದರೆ ಅಥವಾ ಅಂತಹ ಕೃತ್ಯವನ್ನು ಮಾಡಲು ಪ್ರಯತ್ನಿಸಿದರೆ, ಆ ವ್ಯಕ್ತಿಗೆ ಜೈಲು ಶಿಕ್ಷೆ ಮತ್ತು ದಂಡವಿದೆ. ಇದಲ್ಲದೆ ಸಂವಿಧಾನದ 15ನೇ ವಿಧಿಯು ಧರ್ಮ, ಜನಾಂಗ, ಜಾತಿ, ಲಿಂಗದ ಆಧಾರದ ಮೇಲೆ ತಾರತಮ್ಯ ನಿಷೇಧಿಸುತ್ತದೆ. ಬಡ್ತಿ, ವರ್ಗಾವಣೆ, ಹಿಂಬಡ್ತಿ, ನೌಕರಿಯಿಂದ ತೆಗೆದು ಹಾಕುವ ಪ್ರಸಂಗಗಳಲ್ಲಿ ಬಾಧಿತ ವ್ಯಕ್ತಿಯು ರಾಜ್ಯದ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ಗೆ ದೂರು ಸಲ್ಲಿಸಬಹುದು.
ಉದ್ಯೋಗದ ಸ್ಥಳ ಸೇರಿದಂತೆ ನಮ್ಮೆಲ್ಲ ಚಟುವಟಿಕೆಗಳು ಸಂವಿಧಾನಕ್ಕೆ ಬದ್ಧವಾಗಿರುವುದು ಅಗತ್ಯ. ಶಾಲಾ-ಕಾಲೇಜು ಅಥವಾ ಉದ್ಯೋಗದ ಸ್ಥಳದಲ್ಲಿ ಜಾತೀಯತೆ ಆಚರಣೆ ಕಾನೂನು ವಿರುದ್ಧ ಮಾತ್ರವಲ್ಲ, ಮನುಷ್ಯತ್ವಕ್ಕೂ ವಿರುದ್ಧವಾದುದು.

