ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ಬಳಸಿ ಮಾಡುವ ಪಾವತಿಗಳಿಗೆ ಶುಲ್ಕ ವಿಧಿಸಲು ಅವಕಾಶ ಕಲ್ಪಿಸುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ ಎಂಬ ಸುದ್ದಿಯು ಮಾಧ್ಯಮಗಳ ಮೂಲಕ ಬಿತ್ತರವಾದ ನಂತರದಲ್ಲಿ ಆರಂಭವಾದ ಚರ್ಚೆಯು ಹತ್ತು ಹಲವು ಅಂಶಗಳನ್ನು ಮುನ್ನೆಲೆಗೆ ತರುತ್ತಿದೆ.
ಆದರೆ, ಜನ ಅಷ್ಟೇನೂ ಗಮನ ನೀಡದ ಅಂಶವೊಂದು ಇಲ್ಲಿದೆ. ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಆಡಿದ್ದ ಮಾತೊಂದನ್ನು ನಾವು ಮರೆತಿದ್ದೇವೆ, ಆ ಮಾತನ್ನು ನೆನಪಿಸಿ ಕೊಳ್ಳಬೇಕಿದೆ.
'ಯುಪಿಐ ವ್ಯವಸ್ಥೆಯನ್ನು ಮುನ್ನಡೆಸುವುದಕ್ಕೆ ಖರ್ಚು ಗಳು ಇರುತ್ತವೆ, ಯಾರಾದರೂ ಒಬ್ಬರು ಆ ಖರ್ಚುಗಳನ್ನು ಹೊರಲೇಬೇಕಾಗುತ್ತದೆ' ಎಂದು ಮಲ್ಹೋತ್ರಾ ಅವರು ಹಿಂದೊಮ್ಮೆ ಹೇಳಿದ್ದರು. ಅಷ್ಟೇ ಅಲ್ಲದೆ, 'ಯುಪಿಐ ವ್ಯವಸ್ಥೆಯು ಈಗಲೂ ಉಚಿತವಾಗಿ ನಡೆಯುತ್ತಿಲ್ಲ. ಯಾರೋ ಒಬ್ಬರು ಅದರ ವೆಚ್ಚಗಳನ್ನು ಭರಿಸುತ್ತಿದ್ದಾರೆ, ಸರ್ಕಾರವು ಸಬ್ಸಿಡಿ ಒದಗಿಸುತ್ತಿದೆ' ಎಂದು ಅವರು ವಿವರಿಸಿದ್ದರು. ಇಲ್ಲಿ 'ಯಾರೋ ಒಬ್ಬರು' ಬೇರೆ ಇನ್ಯಾರೋ ಅಲ್ಲ, ಅದು ಸಾರ್ವಜನಿಕರೇ! ದೇಶದ ಸಮಸ್ತರು ಯುಪಿಐ ವ್ಯವಸ್ಥೆಯನ್ನು ಮುನ್ನಡೆಸುವುದಕ್ಕೆ ಬೇಕಿರುವ ಖರ್ಚುಗಳ ಹೊರೆ ಯನ್ನು ತೆರಿಗೆ ಪಾವತಿಗಳ ಮೂಲಕ ಈಗಾಗಲೇ ಹೊತ್ತುಕೊಂಡಿದ್ದಾರೆ.
ವರ್ತಕರ ಬಳಿ ಖರೀದಿಸಿ ಅದರ ಮೌಲ್ಯವನ್ನು ಹಣದ ರೂಪದಲ್ಲಿ ನೀಡಿದಾಗ ಅದಕ್ಕೆ ಪ್ರತ್ಯೇಕವಾದ ಶುಲ್ಕ ವಿಧಿಸುವುದು ಅತಾರ್ಕಿಕ. ವರ್ತಕ ಹಾಗೂ ಗ್ರಾಹಕನ ನಡುವಿನ ಪಾವತಿಯ ವಿಚಾರದಲ್ಲಿ ಮೂರನೆಯ ವ್ಯಕ್ತಿಯು ತನಗೆ ಶುಲ್ಕ ಪಾವತಿಸಬೇಕು ಎಂಬುದೇ ಅಸಂಗತ. ಯುಪಿಐ ಕೂಡ ಒಂದು ಪಾವತಿ ವ್ಯವಸ್ಥೆ, ಗ್ರಾಹಕನು ವರ್ತಕನಿಗೆ ಹಣ ಪಾವತಿಸುವಾಗ ಅದಕ್ಕೆ ಪ್ರತ್ಯೇಕವಾದ ಶುಲ್ಕವನ್ನು ನಿಗದಿ ಮಾಡುವುದು ಮೇಲ್ನೋಟಕ್ಕೆ ಸರಿ ಕಾಣುವುದಿಲ್ಲ ಎಂಬ ವಾದ ಸರಿ. ಇಲ್ಲೊಂದು ಬೇರೆ ಆಯಾಮವೂ ಇದೆ. ಯುಪಿಐ ವ್ಯವಸ್ಥೆಯು ಇಂದು 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ದ ವ್ಯಾಪ್ತಿಯಲ್ಲಿ ಗುರ್ತಿಸಿಕೊಂಡಿದೆ. ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವ ಪೂರ್ತಿ ಹೊಣೆ ಸರ್ಕಾರದ್ದೇ ಆಗಿದೆ. ಹೀಗಾಗಿ, ಈಗಾಗಲೇ ತೆರಿಗೆಗಳನ್ನು ಪಾವತಿಸುತ್ತಿರುವ ಜನರಿಗೆ ಈ ಡಿಜಿಟಲ್ ಮೂಲ ಸೌಕರ್ಯದ ಬಳಕೆಗೆ ಪ್ರತ್ಯೇಕ ಶುಲ್ಕ ನಿಗದಿ ಮಾಡುವುದು ಸಮರ್ಥನೀಯ ನಡೆ ಆಗುವುದಿಲ್ಲ.
ಬಹುತೇಕ ಯುಪಿಐ ಪಾವತಿಗಳಿಗೆ ಶುಲ್ಕ ಇರುವುದಿಲ್ಲ, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಮಾತ್ರ 'ಎಂಡಿಆರ್' (ವರ್ತಕರಿಗೆ ಅನ್ವಯ) ಶುಲ್ಕ ವಿಧಿಸಬಹುದು ಎಂಬ ಸ್ಪಷ್ಟನೆಯನ್ನು ಸರ್ಕಾರ ಈಗ ನೀಡಿದೆ. ವ್ಯವಸ್ಥೆಯನ್ನು ನಿರಂತರ ವಾಗಿ ಮೇಲ್ದರ್ಜೆಗೆ ಏರಿಸಲು, ಅನುಕೂಲಗಳನ್ನು ಹೆಚ್ಚು ಮಾಡಲು ನಿರ್ದಿಷ್ಟವಾದ ಮೊತ್ತಕ್ಕಿಂತ ಹೆಚ್ಚಿನವುಗಳಿಗೆ ಮಾತ್ರ ಸೀಮಿತವಾಗಿ ವಿಧಿಸುವ ಶುಲ್ಕಕ್ಕೆ ಸಮರ್ಥನೆ ಸಿಗ ಬಹುದು. ಆದರೆ, ಅಂತಹ ಶುಲ್ಕಕ್ಕೆ ಪ್ರತಿಯಾಗಿ ಗ್ರಾಹಕರಿಗೆ ಮೂರ್ತ ರೂಪದ ಅನುಕೂಲಗಳು ನಿಜಕ್ಕೂ ಸಿಗುತ್ತವೆಯೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕು.
ಯುಪಿಐ ಶುಲ್ಕ ಕುರಿತ ಚರ್ಚೆಯನ್ನು ಆ ಸೇವೆ ಒದಗಿಸುವ ಕಂಪನಿಗಳ ಲಾಭದ ದೃಷ್ಟಿ ಯಿಂದಲೂ ಗಮನಿಸಬೇಕು. ಯುಪಿಐ ಮಾರುಕಟ್ಟೆಯಲ್ಲಿ ಈಗಲೂ ಅಮೆರಿಕ ಮೂಲದ 'ಗೂಗಲ್' ಮತ್ತು 'ಫೋನ್ಪೆ' ಪ್ರಾಬಲ್ಯ ಹೊಂದಿವೆ ಎಂದು ಹಲವು ವರದಿಗಳು ಹೇಳು ತ್ತವೆ. ಆದರೆ, ಈ ಪಾವತಿ ಸೇವೆಯನ್ನು ಗ್ರಾಹಕರಿಗೆ ಒದಗಿಸು ವುದರಿಂದ ಕಂಪನಿಗಳಿಗೆ ಸಿಗುವ ವರಮಾನ ತೀರಾ ನಗಣ್ಯ. ಹೀಗಾಗಿ ಯುಪಿಐ ಪಾವತಿ ಸೇವೆ ಒದಗಿಸುವ ಕಂಪನಿಗಳು ವರ್ತಕರಿಗೆ ಸೌಂಡ್ ಬಾಕ್ಸ್ ನೀಡಿ, ಅವುಗಳಿಗೆ ಸೇವಾಶುಲ್ಕ ವಿಧಿಸಿ ವರಮಾನ ಸಂಗ್ರಹಿಸುತ್ತಿವೆ. ಅದರ ಜೊತೆಯಲ್ಲೇ, ತಮ್ಮ ಯುಪಿಐ ಆಯಪ್ಗಳ ಮೂಲಕ ವಿಮೆ, ಮ್ಯೂಚುವಲ್ ಫಂಡ್, ಬಿಲ್ ಪಾವತಿಯಂತಹ ಯುಪಿಐ ಜೊತೆ ನೇರ ಸಂಬಂಧ ಇಲ್ಲದ ಇತರ ಹಲವು ಸೇವೆಗಳನ್ನು ಒದಗಿಸಿ ಅವು ವರಮಾನ ಗಳಿಸುತ್ತಿವೆ. ಹೀಗೆ ಯುಪಿಐ ಜೊತೆಯಲ್ಲಿ ಇನ್ನೂ ಹಲವು ಸೇವೆಗಳನ್ನು ಒದಗಿಸುವ ಮೂಲಕ ವರಮಾನ ಸಂಗ್ರಹಿಸುವ ಅವಕಾಶ ಚೆನ್ನಾಗಿದೆ ಎಂಬುದನ್ನು ಷೇರುಪೇಟೆ ನೋಂದಾಯಿತ ಹಾಗೂ ಪಾವತಿ ಸೇವೆಗಳಲ್ಲಿ ಇರುವ ಕಂಪನಿ ಗಳ ಈಚಿನ ಕೆಲವು ಆರ್ಥಿಕ ಫಲಿತಾಂಶಗಳು ತೋರಿಸುತ್ತಿವೆ.
ದೇಶದ ಬಹುತೇಕ ಬ್ಯಾಂಕುಗಳು ಇಂದು ಯುಪಿಐ ವ್ಯಾಪ್ತಿಗೆ ಬಂದಿವೆ. 40ಕ್ಕೂ ಹೆಚ್ಚು ಕಂಪನಿಗಳು ಆಯಪ್ ಮೂಲಕ ಪಾವತಿ ಸೇವೆ ಒದಗಿಸುತ್ತಿವೆ. ಯುಪಿಐ ಸೇವೆ ಯೊಂದರಿಂದಲೇ ಅವುಗಳಿಗೆ ಯಾವ ವರಮಾನವೂ ಇಲ್ಲ. ಹೀಗಾಗಿ, ಈ ಪಾವತಿ ಸೇವೆ ಒದಗಿಸುವ ಕಂಪನಿಗಳು, ಬ್ಯಾಂಕುಗಳಿಗೆ ಯುಪಿಐ ವಹಿವಾಟು ಸೇವೆಯ ಮೂಲಕವೂ ನಿಶ್ಚಿತ ವರಮಾನ ಮೂಲವೊಂದನ್ನು ಕಂಡುಕೊಳ್ಳಲು ಅವಕಾಶ ಇರಬೇಕು ಹಾಗೂ ಆ ವರಮಾನದಿಂದ ಅವು ತಮ್ಮ ಸೇವೆಗಳನ್ನು, ಯುಪಿಐ ವ್ಯವಸ್ಥೆಯ ಸುರಕ್ಷತೆಯನ್ನು ಕಾಲಕಾಲಕ್ಕೆ ಮೇಲ್ದರ್ಜೆಗೆ ಏರಿಸುತ್ತಾ ಇರಬೇಕು ಎಂಬ ವಾದ
ದಲ್ಲಿ ಹುರುಳಿದೆ. ಹಾಗಾಗಿ, ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಸಣ್ಣ ಪ್ರಮಾಣದ ಶುಲ್ಕ ವಿಧಿಸು ವುದು, ಆ ಶುಲ್ಕದಿಂದ ಸೇವೆಗಳ ಗುಣಮಟ್ಟ ಹಾಗೂ ಯುಪಿಐ ವ್ಯವಸ್ಥೆ ಇನ್ನಷ್ಟು ಉತ್ತಮವಾಗುತ್ತದೆ ಎಂದಾದರೆ, ಸರಿಯಾದ ಕ್ರಮ ಆಗುತ್ತದೆ.

