Dailyhunt
ಸಂಘಟನೆಗಳಿಂದ ಪಂಜಿನ ಮೆರವಣಿಗೆ

ಸಂಘಟನೆಗಳಿಂದ ಪಂಜಿನ ಮೆರವಣಿಗೆ

ಬಾಗೇಪಲ್ಲಿ: ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಮರುನಾಮಕರಣ ಮಾಡುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಡಿ ಶುಕ್ರವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.

ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ವಿಧಾನಸೌಧ ಚಲೊ ಹಾಗೂ ಬಾಗೇಪಲ್ಲಿ ಬಂದ್‌ಗೆ ಕರೆ ನೀಡುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು. ಪಟ್ಟಣದ ಡಾ.ಎಚ್.ಎನ್. ವೃತ್ತದಿಂದ ಮುಖ್ಯರಸ್ತೆ ಮೂಲಕ ಬಸ್‌ನಿಲ್ದಾಣದವರಿಗೂ ಸಂಚರಿಸಿದ ಮುಖಂಡರು ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.

ಭಾಗ್ಯನಗರ ಹೋರಾಟ ಸಮಿತಿ ಅಧ್ಯಕ್ಷ ಎಸ್.ಎಸ್. ಶ್ರೀನಿವಾಸ್ ಮಾತನಾಡಿ, '1980ರಲ್ಲಿ ಬಾಗೇಪಲ್ಲಿಗೆ ನಟ ಉದಯ್ ಕುಮಾರ್ ಆಗಮಿಸಿದ್ದರು. ಬಾಗೇಪಲ್ಲಿಯನ್ನು ಭಾಗ್ಯನಗರ ಮಾಡಬೇಕೆಂದು ಒತ್ತಾಯಿಸಿ ಅಂದಿನ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಸರ್ಕಾರ ಭಾಗ್ಯನಗರ ಎಂದು ಮರುನಾಮಕರಣ ಮಾಡಿಲ್ಲ' ಎಂದು ದೂರಿದರು.

ಬಾಗೇಪಲ್ಲಿ ಎಂದಾಕ್ಷಣ ಪಲ್ಲಿ ಎಂದು ಸಾಮಾನ್ಯರಿಗೆ ತಿಳಿಯುತ್ತದೆ. ಕೆಲವರು ಆಂಧ್ರಪ್ರದೇಶವೇ ಎಂದು ಪ್ರಶ್ನಿಸುವಂತೆ ಆಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ಸಂಘಟನೆಗಳ ನೇತೃತ್ವದಡಿ ಬೃಹತ್ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಕರವೇ ತಾಲ್ಲೂಕು ಅಧ್ಯಕ್ಷ ಕೆ.ಎನ್. ಹರೀಶ್ ಮಾತನಾಡಿದರು. ಕರವೇ ಜಿಲ್ಲಾ ಅಧ್ಯಕ್ಷೆ ಸುಜಾತಮ್ಮ, ತಾಲ್ಲೂಕು ಅಧ್ಯಕ್ಷೆ ಶಾಂತಮ್ಮ, ಕರವೇ ಸ್ವಾಭಿಮಾನ ಬಣದ ತಾಲ್ಲೂಕು ಕಾರ್ಯದರ್ಶಿ ಜಬೀಉಲ್ಲಾ, ದಲಿತ ಸಂಘರ್ಷ ಸಮಿತಿಯ ಮುಖಂಡ ಜಯಂತ್, ಹಸಿರು ಸೇನೆಯ ರಾಜ್ಯ ಸಂಚಾಲಕ ಲಕ್ಷ್ಮಣ ರೆಡ್ಡಿ, ರೈತ ಸಂಘದ ತಾಲ್ಲೂಕು ಮುಖಂಡ ರಘುನಾಥ ರೆಡ್ಡಿ, ಟಿ.ಆರ್. ಪ್ರಮೀಳಾ ಪಾಲ್ಗೊಂಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani