ಗದಗ: ಜಿಲ್ಲೆಯ 16 ಸರ್ಕಾರಿ ಶಾಲೆಗಳಲ್ಲಿ ಸೆರೆಂಟಿಕಾ ರೆನಿವೇಬಲ್ಸ್ ಸಂಸ್ಥೆಯ 'ಡಿಜಿಟಲ್ ಶಿಕ್ಷಣ ಬೆಂಬಲ' ಯೋಜನೆಯಡಿ ಡಿಜಿಟಲ್ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.
ಸೆಲ್ಕೋ ಸೋಲಾರ್, ಮೆಂಡಾ ಫೌಂಡೇಷನ್ ಸಹಯೋಗದೊಂದಿಗೆ ಸುಮಾರು 4,000 ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಕೊಠಡಿಗಳಲ್ಲಿ ಡಿಜಿಟಲ್ ಕಲಿಕಾ ಸಂಪನ್ಮೂಲ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಯೋಜನೆಯನ್ನು ಐದು ವರ್ಷಗಳವರೆಗೆ ಸಂಸ್ಥೆ ನಿರ್ವಹಿಸಲಿದೆ.
ಗದಗ ತಾಲ್ಲೂಕಿನ 11 ಮತ್ತು ಲಕ್ಷ್ಮೇಶ್ವರ ತಾಲ್ಲೂಕಿನ ಐದು ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ಆಧಾರಿತ ಕಲಿಕೆಯ ಉಪಕರಣಗಳು, ಇನ್ನಿತರ ಸಾಧನಗಳನ್ನು ಈಗಾಗಲೇ ಅಳವಡಿಸಲಾಗಿದ್ದು, ಶಾಲಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.
ಪ್ರತಿಯೊಂದು ಶಾಲೆಯಲ್ಲಿ 50 ಇಂಚಿನ ಎಲ್‌ಇಡಿ ಸ್ಕ್ರೀನ್, ಸೋಲಾರ್ ಶಕ್ತಿಯ ಆಫ್‌ಗ್ರಿಡ್ ಬ್ಯಾಕಪ್ ವ್ಯವಸ್ಥೆ ಮತ್ತು ಕರ್ನಾಟಕ ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾದ ಲೈಸನ್ಸ್ ಹೊಂದಿರುವ ಮಲ್ಟಿಮೀಡಿಯಾ ಶಿಕ್ಷಣ ಪಠ್ಯಗಳನ್ನು ಒದಗಿಸಲಾಗಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಶಿಕ್ಷಣ ದೊರೆಯಲಿದ್ದು, ಇವುಗಳನ್ನು ನಿರ್ವಹಿಸಲು ಶಾಲಾ ಸಿಬ್ಬಂದಿಗೆ ತಾಂತ್ರಿಕ ತರಬೇತಿ ಮತ್ತು ಪ್ರಾತ್ಯಕ್ಷಿಕೆಗಳನ್ನು ನೀಡಲಾಗಿದೆ.
ಕಲಿಕೆ ಪ್ರಕ್ರಿಯೆ ಸುಗಮವಾಗಿ ಸಾಗಲು ನಿರಂತರ ಟೋಲ್ ಫ್ರೀ ತಾಂತ್ರಿಕ ನೆರವು, ಆನ್‌ಲೈನ್ ಬಳಕೆಯ ಪರಿವೀಕ್ಷಣೆ, ವರ್ಷಕ್ಕೆರಡು ಬಾರಿ ನಿರ್ವಹಣೆ ನೆರವನ್ನೂ ಯೋಜನೆಯಡಿ ಒದಗಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
261104-23-91418999

