ಮೈಸೂರು: ಬರ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕೇಂದ್ರದತ್ತ ಬೊಟ್ಟು ಮಾಡುವುದನ್ನು ಬಿಟ್ಟು, ಸ್ವಂತ ಸಂಪನ್ಮೂಲದಿಂದ ರೈತರಿಗೆ ಪರಿಹಾರ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಒತ್ತಾಯಿಸಿದರು.
ಇಲ್ಲಿನ ಕೆ.ಜೆ. ಕೊಪ್ಪಲಿನಲ್ಲಿ 'ಕನ್ನೇಗೌಡ ಟೈಗರ್ಸ್' ವತಿಯಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗೆ ಸೋಮವಾರ ಪೂಜೆ ಸಲ್ಲಿಸಿ, ಅನ್ನದಾನಕ್ಕೆ ಚಾಲನೆ ನೀಡಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.
'ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಬರ ಹಾಗೂ ನೆರೆ ಪರಿಹಾರವನ್ನು ರಾಜ್ಯದ ಸಂಪನ್ಮೂಲದಿಂದಲೇ ನೀಡಿದ್ದೆ. ಆ ಮಾದರಿಯನ್ನು ಈಗಿನವರೂ ಅನುಸರಿಸಲಿ. ನಾನಂತೂ ಸರ್ವಪಕ್ಷ ನಿಯೋಗವನ್ನು ಕರೆದುಕೊಂಡು ದೆಹಲಿಗೆ ಹೋಗಿರಲಿಲ್ಲ. ನಮ್ಮ ತೆರಿಗೆ ಹಣದಲ್ಲೇ ನಮ್ಮ ರೈತರು ಮತ್ತು ಜನರ ಸಮಸ್ಯೆ ಬಗೆಹರಿಸಿದ್ದೆ' ಎಂದರು.
'ಇವರು ಈಗ ಕೇಂದ್ರದ ಮುಂದೆ ಮನವಿ ಮಾಡುವ ನಾಟಕವೇಕೆ? ನಿಮಗೆ ಅಧಿಕಾರ ಕೊಟ್ಟಿರುವುದೇಕೆ? ನೀವು (ಡಿಕೆಶಿ) ಮುಖ್ಯಮಂತ್ರಿ ಆಗಿರುವುದೇಕೆ? ಇನ್ನೊಬ್ಬರ ಮುಂದೆ ಹೋಗಿ ನಿಂತ್ಕೊಳ್ಳಕ್ಕಾ ನಿಮಗೆ ಅಧಿಕಾರ ಕೊಟ್ಟಿರುವುದು? ರಾಜ್ಯ ಸರ್ಕಾರದ ಬೊಕ್ಕಸ ತುಂಬಿಸಿರುವವರು ನಮ್ಮ ಜನ. ಅವರು ಸಂಕಷ್ಟದಲ್ಲಿರುವಾಗ ಕೇಂದ್ರದತ್ತ ಕೈ ತೋರಿಸುತ್ತಿದ್ದೀರೇಕೆ? ನೀವು ಇಲ್ಲಿ ಏನು ಮಾಡಬೇಕೋ ಮೊದಲು ಮಾಡಿ. ಕೇಂದ್ರದ್ದು ಆಮೇಲೆ ನೋಡೋಣ' ಎಂದು ಸಲಹೆ ನೀಡಿದರು.
'ರೈತರಿಗೆ ಪ್ರೋತ್ಸಾಹಧನ ಹೆಚ್ಚಿಸಲಿ'
ಹಾಲು ನೀಡುವ ರೈತರಿಗೆ ಪ್ರೋತ್ಸಾಹಧನವನ್ನು ಐದು ರೂಪಾಯಿ ಇಲ್ಲದಿದ್ದರೆ ಹತ್ತು ರೂಪಾಯಿ ಜಾಸ್ತಿ ಕೊಡಿ. ಅದನ್ನು 6 ಅಥವಾ 7ನೇ ಗ್ಯಾರಂಟಿ ಎಂದು ಘೋಷಿಸಿ ದಿನಾಲೂ ಫೋಟೊ ಹಾಕ್ಕೊಳ್ಳಿ. ರೈತರಿಗೆ ಒಳ್ಳೆಯದು ಮಾಡಬೇಕೆಂದು ಹಾಲಿನ ದರ ಹೆಚ್ಚಿಸಿ ನಿತ್ಯವೂ ಹಾಲು ಬಳಸುವ ಬಡ ಕುಟುಂಬಗಳಿಗೆ ತೊಂದರೆ ಕೊಡುತ್ತೀರೇಕೆ? ಹಾಲಿನ ದರ ಏರಿಕೆ ಬದಲಿಗೆ ಸರ್ಕಾರವು ರೈತರಿಗೆ ಪ್ರೋತ್ಸಾಹಧನ ಹೆಚ್ಚಿಸಲಿ ಎಂದು ಒತ್ತಾಯಿಸಿದರು.
'ನಮ್ಮದು ಯಾವಾಗಲೂ ರೈತ ಪರವಾದ ನಿಲುವು. ಇದಕ್ಕಾಗಿ ಪಕ್ಷದಿಂದ ರೈತ ಯಾತ್ರೆ ಹಮ್ಮಿಕೊಳ್ಳಲಾಗಿದ್ದು ಮೊದಲ ಹಂತದಲ್ಲಿ 20 ಜಿಲ್ಲೆಗಳಲ್ಲಿ ನಡೆಯಲಿದೆ. ನೈಸ್ ಅಕ್ರಮ ಬಿಡದಿ ಟೌನ್‌ಶಿಪ್ ಮತ್ತು ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ನಾವು ಜನಪರವಾಗಿ ರೂಪಿಸಿದ್ದ ಆ ಯೋಜನೆಗಳು ಏನಿದ್ದವು ಇವರು (ರಾಜ್ಯ ಸರ್ಕಾರ) ಏನು ಮಾಡಲು ಹೊರಟಿದ್ದಾರೆ. ದುಡ್ಡು ಹೊಡೆಯುತ್ತಿರುವುದು ಹೇಗೆ ಎಂಬ ಬಗ್ಗೆ ದಾಖಲೆಗಳನ್ನು ಮಂಗಳವಾರ (ಸೆ.29) ಬೆಂಗಳೂರಿನಲ್ಲಿ ಬಿಡುಗಡೆ ಮಾಡುತ್ತೇನೆ' ಎಂದು ತಿಳಿಸಿದರು.

