ನಿಮ್ಮ ಯಶಸ್ವಿ ಚಿತ್ರಗಳ ಪೈಕಿ 'ಅಯೋಗ್ಯ'ವೂ ಒಂದು. ಇದು ಸಿನಿಪಯಣಕ್ಕೆ ತಂದ ಬದಲಾವಣೆ ಏನು?
'ಅಯೋಗ್ಯ' ಸಿನಿಮಾದ ಯಶಸ್ಸು ಒಂದು ರೀತಿ ಮ್ಯಾಜಿಕ್‌ನಂತಿತ್ತು. ಜನ ಸಿನಿಮಾವನ್ನು ಬಹಳ ಇಷ್ಟಪಟ್ಟರು. ಈ ಯಶಸ್ಸು ಇನ್ನೊಂದಿಷ್ಟು ಸಿನಿಮಾವನ್ನು ಮಾಡಲು ಪ್ರೋತ್ಸಾಹದಂತೆ ಕೆಲಸ ಮಾಡಿತು. ಹಲವು ಹಿಟ್‌ಗಳಲ್ಲಿ 'ಅಯೋಗ್ಯ' ದೊಡ್ಡ ಸ್ಥಾನದಲ್ಲಿ ನಿಲ್ಲುತ್ತದೆ.
ಇಂತಹ ಯಶಸ್ಸು ಒಬ್ಬ ನಟನಿಗೆ ಹಲವು ಅವಕಾಶಗಳನ್ನು ತೆರೆಯುತ್ತದೆ. ನಮಗೋಸ್ಕರ ಕಥೆ ಮಾಡುವ ನಿರ್ದೇಶಕರು, ಬರಹಗಾರರು ಹೆಚ್ಚುತ್ತಾರೆ. ನಿರ್ಮಾಪಕರೂ ನನ್ನ ಜೊತೆ ಸಿನಿಮಾ ಮಾಡಲು ಮುಂದೆ ಬರುತ್ತಾರೆ. ಈ ಯಶಸ್ಸನ್ನು ಅಹಂನಿಂದ ತೆಗೆದುಕೊಂಡಿಲ್ಲ ಅಥವಾ ಗೆದ್ದುಬಿಟ್ಟೆ ಎನ್ನುವ ಅಹಂಕಾರವೂ ಇಲ್ಲ. ಇನ್ನಷ್ಟು ಕೆಲಸ ಮಾಡಲು ಇದು ಸ್ಫೂರ್ತಿ ನೀಡಿತು.
ಮೊದಲ ಭಾಗ ಆಗಿದ್ದು. 'ಅದ್ಧೂರಿ'ಯಾದ ಎರಡನೇ 'ಅಯೋಗ್ಯ'...
ನನಗೆ ಎರಡೂ ಸಿನಿಮಾಗಳೂ ಒಂದೇ. ಸರಳವಾದ ದೃಶ್ಯಗಳು ಇಲ್ಲೂ ಇದೆ. ಮೊದಲ ಭಾಗಕ್ಕೆ ಹೋಲಿಸಿದರೆ ಖಂಡಿತವಾಗಿಯೂ ಅದ್ಧೂರಿತನ ತೆರೆ ಮೇಲೆ ಎದ್ದು ಕಾಣುತ್ತದೆ. ಹಾಗೆಂದು ಎರಡೂ ಸಿನಿಮಾಗಳಿಗೆ ಹೋಲಿಸಲು ಸಾಧ್ಯವಿಲ್ಲ. ಮೊದಲ ಭಾಗ ಮಾಡಿದ್ದರಿಂದಲೇ ಎರಡನೇ ಭಾಗ ಆಗುತ್ತಿರುವುದಲ್ಲವೇ? ಎರಡನೇ ಭಾಗದಲ್ಲಿ ಸಿನಿಮಾದ ಕಥೆ ಕೇಳಿದ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ. ಅದ್ಧೂರಿತನ ತೋರಿಸಬೇಕು ಅಥವಾ ಮಾಡಬೇಕು ಎಂದು ಮಾಡಿರುವುದಲ್ಲ. ಇವತ್ತಿನ ಕಾಲಘಟ್ಟಕ್ಕೆ 'ಅಯೋಗ್ಯ' ಹೇಗಿರಬೇಕೋ ಹಾಗೆ ಸಿನಿಮಾವನ್ನು ಮಾಡಿದ್ದೇವೆ. ಈಗಿನ ತೆರೆ ಏನು ಕೇಳುತ್ತದೆಯೋ ಅದನ್ನು ನೀಡಿದ್ದೇವೆ.
ಟ್ರೇಲರ್ ಇಲ್ಲದೇ ಸಿನಿಮಾ ಬಂದಿದೆ...
ಈ ಸಿನಿಮಾಗೆ 'ಅಯೋಗ್ಯ' ಮೊದಲ ಭಾಗವೇ ಟ್ರೇಲರ್. ಬಹುತೇಕರು ಈ ಭಾಗವನ್ನು ನೋಡಿದ್ದಾರೆ. ಆ ಕಥೆಯ ಮುಂದುವರಿದ ಭಾಗವೇ 'ಅಯೋಗ್ಯ-2'. ಹೀಗಾಗಿ ಟ್ರೇಲರ್ ಅವಶ್ಯವಿಲ್ಲ. ಎರಡನೇ ಭಾಗ ಬಿಡುಗಡೆಯಾಗಿ ಹತ್ತು ದಿನದ ನಂತರ ಟ್ರೇಲರ್ ಬಿಡುಗಡೆಗೊಳಿಸಲಿದ್ದೇವೆ. ಮೊದಲ ಭಾಗಕ್ಕೂ ಹೀಗೆ ಮಾಡಿದ್ದೆವು. ಮೊದಲನೇ ಭಾಗ ನೋಡದೇ ಇದ್ದವರಿಗೂ ಕಥೆ ಕನೆಕ್ಟ್ ಆಗಲಿದೆ. ನೋಡಿದ್ದರೆ ಒಳ್ಳೆಯದು. ಮೊದಲನೇ ಭಾಗವನ್ನು ತಲೆಯಲ್ಲಿಟ್ಟುಕೊಂಡೇ ಎರಡನೇ ಭಾಗವನ್ನು ನೋಡಬೇಕೆಂದೇನಿಲ್ಲ. ಪಾತ್ರಗಳು ಅವೇ ಆದರೂ ಕಥೆ ಬದಲಾಗಿದೆ.
'ರೈಸ್ ಆಫ್ ಅಶೋಕ'ದ ರಿಪೋರ್ಟ್ ಕಾರ್ಡ್...
ಒಂದು ಸಿನಿಮಾವನ್ನು ಯಶಸ್ಸು ಮತ್ತು ಸೋಲಿನ ಮೇಲೆ ಅಳೆಯುವುದು ಕಷ್ಟ. ನೋಡಿದವರು ಇಷ್ಟಪಟ್ಟರೇ? ನನಗೆ ಆ ಸಿನಿಮಾ ತೃಪ್ತಿ ಕೊಟ್ಟಿತೇ ಎನ್ನುವುದನ್ನು ನಾನು ಮುಖ್ಯವಾಗಿ ಗಮನಿಸುತ್ತೇನೆ. ಈ ನಿಟ್ಟಿನಲ್ಲಿ 'ರೈಸ್ ಆಫ್ ಅಶೋಕ' ಒಂದು ಮೈಲಿಗಲ್ಲು. ನಾನು ಸಿನಿಪಯಣದಲ್ಲಿ ಮಾಡಿದ ಪ್ರಯೋಗಗಳಲ್ಲಿ ಇದೂ ಒಂದು ಸಿನಿಮಾ. ನಿರ್ಮಾಪಕನಾಗಿಯೂ, ನಾಯಕನಾಗಿ ನಾನು ಗೆದ್ದಿರುವ ಹಾಗೂ ಸೋತಿರುವ ಸಿನಿಮಾಗಳನ್ನು ಬೇರೆ ಬೇರೆಯಾಗಿ ನೋಡುವುದಿಲ್ಲ. ಗೆದ್ದರೂ-ಸೋತರೂ ಎಲ್ಲಾ ಸಿನಿಮಾಗಳೂ ನನಗೆ ಒಂದೇ. ಪ್ರತೀ ಸಿನಿಮಾದಲ್ಲೂ ಕಲಿಯುವುದು, ಪಡೆಯುವುದು ಇದ್ದೇ ಇರುತ್ತದೆ. ಪ್ರತಿ ಸಿನಿಮಾದಲ್ಲೂ ಶ್ರಮ ಅಷ್ಟೇ ಇರುತ್ತದೆ. ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಇದರಲ್ಲಿ ಮಾಡಿದ್ದೇನೆ ಎನ್ನುವ ತೃಪ್ತಿ ಇದೆ.
ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಕಥೆ ಯಶಸ್ಸು ಕಂಡಿರುವುದಕ್ಕೆ ನೀವು ಕಂಡ ಕಾರಣಗಳು...
ಮುಂದಿನ ಸಿನಿಮಾಗಳು...
'ಅಯೋಗ್ಯ-2' ಬಿಡುಗಡೆಯಾದ ಬೆನ್ನಲ್ಲೇ ಮೂರು ಸಿನಿಮಾಗಳು ಘೋಷಣೆಯಾಗಲಿವೆ. ಇವುಗಳನ್ನು ಪೂರ್ಣಗೊಳಿಸುವತ್ತಲೇ ನನ್ನ ಚಿತ್ತ ಇರಲಿದೆ. ಈ ಹಿಂದೆ ಆ ಸಂದರ್ಭಕ್ಕೆ ಯಾವ ಸಿನಿಮಾಗಳನ್ನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ. ಅವುಗಳನ್ನು ಸರಿ-ತಪ್ಪುಗಳ ತಕ್ಕಡಿಯಲ್ಲಿ ಹಾಕುವುದಿಲ್ಲ. ಎಲ್ಲಾ ನಿರ್ದೇಶಕರೂ ನನಗೆ ಒಳ್ಳೆಯ ಸಿನಿಮಾ ಮಾಡಲೆಂದೇ ಬಂದಿರುತ್ತಾರೆ. ಕೆಲವೊಮ್ಮೆ ಇವು ಕೈಚೆಲ್ಲಿರಬಹುದು. ಯಾರೂ ಸತೀಶ್ ಅವರನ್ನು ಸೋಲಿಸಬೇಕು ಎಂದು ಬಂದು ಸಿನಿಮಾ ಮಾಡಿರುವುದಿಲ್ಲ. ನನ್ನನ್ನು ನಂಬಿ ಸಿನಿಮಾ ಮಾಡಿರುವ ನಿರ್ದೇಶಕರು, ನಿರ್ಮಾಪಕರ ಬಗ್ಗೆ ನನಗೆ ಗೌರವವಿದೆ. ಸೋಲು-ಗೆಲುವು ನಮ್ಮ ಕೈಯಲ್ಲಿಲ್ಲ. ಆದರೆ ಆಯ್ಕೆ ನಮ್ಮ ಕೈಯಲ್ಲಿದೆ. ಮುಂದಕ್ಕೆ ಇನ್ನಷ್ಟು ಅತ್ಯುತ್ತಮ ಕಥೆಗಳನ್ನು ಆಯ್ದುಕೊಳ್ಳುತ್ತೇನೆ.
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260807-51-1438310335

