ಬೆಂಗಳೂರು: 'ಹಿಂದಿನ ಅಧಿಕಾರಿಗಳ ಪ್ರಯತ್ನದಿಂದ ಕರ್ನಾಟಕದಲ್ಲಿ ಅರಣ್ಯ ಸಂರಕ್ಷಣೆಯಾಗಿದ್ದು, ಹೊಸದಾಗಿ ಇಲಾಖೆಗೆ ಸೇರುವ ಅಧಿಕಾರಿಗಳು ಸವಾಲು ಎದುರಿಸಿ ಅರಣ್ಯ ರಕ್ಷಿಸಬೇಕು' ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥೆ ಮೀನಾಕ್ಷಿ ನೇಗಿ ಸಲಹೆ ನೀಡಿದರು.
ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರಿಗೆ ಇಂಡಿಯಾ ಫಾರ್ ಐಎಎಸ್ ಅಕಾಡೆಮಿಯಿಂದ ನಗರದ ಅರಣ್ಯಭವನದಲ್ಲಿ ಗುರುವಾರ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಕರ್ನಾಟಕದಲ್ಲಿ ಗೋಮಾಳ, ಹುಲ್ಲುಗಾವಲು ಸಹಿತ ಬಹುತೇಕ ಸರ್ಕಾರಿ ಭೂಮಿ ನಾಶವಾಗಿದೆ. ಆದರೆ, ಅರಣ್ಯ ಭೂಮಿ ಮಾತ್ರ ಉಳಿದುಕೊಂಡಿದೆ. ಅರಣ್ಯ ಸಂಪತ್ತು ಉಳಿಸಿದ ಶ್ರೇಯಸ್ಸು ಹಿಂದಿನ ಅಧಿಕಾರಿಗಳಿಗೆ ಸಲ್ಲುತ್ತದೆ. ಅರಣ್ಯ ಭೂಮಿಯನ್ನು ಉಳಿಸಲು ಸಂಘಟಿತ ಪ್ರಯತ್ನ ಆಗಬೇಕು' ಎಂದರು.
ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಅಧ್ಯಕ್ಷ ಸಿ.ಎಸ್. ಕೇದಾರ್ ಮಾತನಾಡಿ, 'ಅರಣ್ಯ ಸೇವೆಗೆ ಈ ಬಾರಿ ಕರ್ನಾಟಕದಿಂದ ಹೆಚ್ಚಿನ ಮಂದಿ ಆಯ್ಕೆಯಾಗಿರುವುದು ಸಂತಸದ ವಿಚಾರ. ನಮ್ಮ ಅಕಾಡೆಮಿಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಕರ್ನಾಟಕದಿಂದ ಹೆಚ್ಚಿನ ಮಂದಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಆಯ್ಕೆಯಾಗುವಂತಾಗಬೇಕು' ಎಂದರು.
ಐಎಫ್‌ಎಸ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಬೆಳಗಾವಿ ಜಿಲ್ಲೆಯ ಬಸವರಾಜ ಕೆಂಪವಾಡ ಮಾತನಾಡಿ, 'ಎರಡನೇ ಪ್ರಯತ್ನದಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು. ನಾಗರಿಕ ಸೇವೆಗೆ ಸೇರ್ಪಡೆಯಾಗಲು ತಾಳ್ಮೆ, ಪರಿಶ್ರಮದ ಜೊತೆಗೆ ತಪಸ್ಸಿನಂತೆ ತಯಾರಿ ಮಾಡಿಕೊಳ್ಳಬೇಕು' ಎಂದರು.
ಇಂಡಿಯಾ ಫಾರ್ ಐಎಎಸ್ ಅಕಾಡೆಮಿ ಉಪಾಧ್ಯಕ್ಷ ಗಾ.ನಂ.ಶ್ರೀಕಂಠಯ್ಯ, ಕಾರ್ಯದರ್ಶಿ ಶ್ರೀನಿವಾಸ್, ನಿವೃತ್ತ ಪಿಸಿಸಿಎಫ್ ಪುನಟಿ ಶ್ರೀಧರ್, ಕೆ.ಎನ್.ಮೂರ್ತಿ, ಪಿಸಿಸಿಎಫ್(ವನ್ಯಜೀವಿ) ಕುಮಾರ ಪುಷ್ಕರ್ ಮತ್ತಿತರರು ಉಪಸ್ಥಿತರಿದ್ದರು.

