Dailyhunt
ಸೇಡಂ: ಶೀಲ ಶಂಕೆ: ಪತ್ನಿ, ಪುತ್ರಿಯ ಕೊಲೆ

ಸೇಡಂ: ಶೀಲ ಶಂಕೆ: ಪತ್ನಿ, ಪುತ್ರಿಯ ಕೊಲೆ

ಸೇಡಂ: ಇಲ್ಲಿಯ ವಿಶ್ವ ನಗರ ಬಡಾವಣೆಯಲ್ಲಿ ಬುಧವಾರ ರಾತ್ರಿ, ದಿಗಂಬರ ಹಣಮಂತಪ್ಪ ಗಾಂಜಲಿ (45) ಎಂಬ ವ್ಯಕ್ತಿ ತನ್ನ ಪತ್ನಿ ಹಾಗೂ ಪುತ್ರಿಯನ್ನು ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾರೆ.

'ಜಗದೀಶ್ವರಿ (37) ಹಾಗೂ ಅವರ ಪುತ್ರಿ ಪ್ರಿಯಾಂಕಾ (11) ಕೊಲೆಯಾ ದವರು.

ಇಬ್ಬರೂ ರಾತ್ರಿ ನಿದ್ದೆಯಲ್ಲಿದ್ದಾಗ ದಿಗಂಬರ ಕಟ್ಟಿಗೆಯಿಂದ ತಲೆ ಹಾಗೂ ಮುಖಕ್ಕೆ ಹೊಡೆದಿದ್ದು, ತೀವ್ರ ರಕ್ತಸ್ರಾವದಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ' ಎಂದು ಸೇಡಂ ಪೊಲೀಸರು ತಿಳಿಸಿದ್ದಾರೆ.

'ಆರೋಪಿ ಗುರುವಾರ ಬೆಳಿಗ್ಗೆ ಪೊಲೀಸರಿಗೆ ಶರಣಾಗಿದ್ದಾನೆ. ದಿಗಂಬರ ತಮ್ಮ ಕುಟುಂಬ ಸಮೇತ ಕಲಬುರ್ಗಿಯ ರಾಮ ಮಂದಿರ ಬಳಿ ವಾಸವಾಗಿದ್ದು, ಅಲ್ಲಿಯೇ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದ. ಕುಟುಂಬದಲ್ಲಿ ಕಲಹ ಮೂಡಿದ್ದರಿಂದ ಎರಡು ತಿಂಗಳ ಹಿಂದೆ, ‍ಪ‍ತ್ನಿಯ ತವರೂರು ಸೇಡಂನಲ್ಲಿ ಈ ಕುಟುಂಬ ನೆಲೆಸಿತ್ತು' ಎಂದು ಪೊಲೀಸರು ಹೇಳಿದ್ದಾರೆ.

ಜಗದೀಶ್ವರಿ ಅವರ ಸಹೋದರರೇ ದಿಗಂಬರನಿಗೆ ಸೇಡಂನಲ್ಲಿ ಕೆಲಸ ಕೊಡಿಸಲು ಮುಂದಾಗಿದ್ದರು. ತಮ್ಮ ಮನೆಯ ಎದುರುಗಡೆಯೇ ಅವರಿಗೆ ಬಾಡಿಗೆ ಮನೆ ಮಾಡಿ ಕೊಟ್ಟಿದ್ದರು. ತಡರಾತ್ರಿ ಎಲ್ಲರೂ ಮಲಗಿದ ಸಮಯ ಹೊಂಚುಹಾಕಿದ ಆರೋಪಿ ತನ್ನ ಕಾರ್ಯ ಸಾಧಿಸಿದ್ದಾನೆ. ಮಗಳು, ಮೊಮ್ಮಗಳನ್ನು ಕಳೆದುಕೊಂಡ ಜಗದೀಶ್ವರಿ ಅವರ ತಾಯಿ ತಾರಾಬಾಯಿ ಹಾಗೂ ಸಹೋದರರ ಆಕ್ರಂದನ ಹೇಳತೀರದಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿಮಿ ಮರಿಯಮ್ ಜಾರ್ಜ್‌, ಸಿಪಿಐ ರಾಜಶೇಖರ ಹಳಗೋದಿ ಮತ್ತು ಪಿಎಸ್‌ಐ ಸೋಮಲಿಂಗ ಒಡೆಯರ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Prajavani